1,200 ಕೋಟಿ ಮೊತ್ತದ ಬಾಂಡ್‌ ಖರೀದಿಸಿದ್ದ ಮೇಘಾಗೂ ರಾಜ್ಯ ಅನಿಲ ನೀತಿಯಿಂದ 1,787 ಕೋಟಿ ಲಾಭ!

ಬೆಂಗಳೂರು;  ಚುನಾವಣಾ ಬಾಂಡ್‌ಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವ  ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿ(ಎಂಇಐಎಲ್) ಕರ್ನಾಟಕದ ಸರ್ಕಾರವು ನೂತನವಾಗಿ  ಜಾರಿಗೊಳಿಸಿರುವ ರಾಜ್ಯ ಅನಿಲ ನೀತಿಯಲ್ಲಿ ಅತೀ ದೊಡ್ಡ ಫಲಾನುಭವಿಯಾಗಿದೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ನಗರ ಅನಿಲ ವಿತರಣಾ ಜಾಲದ ಅಭಿವೃದ್ದಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ನೀತಿಯಿಂದಾಗಿ ಅನಿಲ ಆಧಾರಿತ ಕಂಪನಿಗಳಿಗೆ ಅಂದಾಜು 3,289.20 ಕೋಟಿ ರು. ಆರ್ಥಿಕ ಲಾಭದ ಪೈಕಿ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿಗೆ 1,787 ಕೋಟಿ ರು.ನಷ್ಟು ಆರ್ಥಿಕ  ಲಾಭವಾಗಲಿದೆ.

 

1,200 ಕೋಟಿ ರು. ಮೊತ್ತದ ಚುನಾವಣಾ ಬಾಂಡ್‌ ಖರೀದಿಸಿದ್ದ ಈ ಕಂಪನಿಗೆ ಕರ್ನಾಟಕ ರಾಜ್ಯವೊಂದರಲ್ಲೇ 1,787 ಕೋಟಿ ರು. ಲಾಭ ಆಗಲಿರುವುದು ವಿಶೇ‍ಷ.

 

ಚುನಾವಣಾ ಬಾಂಡ್‌ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಬಾಂಡ್ ಹಗರಣದ ಬಗ್ಗೆಯಾದರೂ ಉತ್ತರಿಸಿ ಎಂದು ಪ್ರಧಾನಿ ಮೋದಿಗೆ ಬಹಿರಂಗವಾಗಿ ಕೇಳಿದ್ದಾರೆ. ಆದರೆ ಅವರ ನೇತೃತ್ವದ ಸರ್ಕಾರವು  ರೂಪಿಸಿರುವ ನೂತನ ನೀತಿಯಿಂದಾಗಿಯೇ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿಗೇ ಅತೀ ಹೆಚ್ಚಿನ ಲಾಭ ಆಗಿರುವುದು ಮುನ್ನೆಲೆಗೆ ಬಂದಿದೆ.

 

ಈ ನೀತಿಯನ್ನು ಜಾರಿಗೊಳಿಸಲು ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನೂ ಹೊತ್ತಿರುವ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರು ಹೆಚ್ಚು ಆಸಕ್ತಿ ವಹಿಸಿದ್ದರು. ಅಲ್ಲದೇ ಈ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

 

ವಿಶೇ‍ಷವೆಂದರೇ  ಅದಾನಿ ಕಂಪನಿಗೆ  ಅಂದಾಜು 387 ಕೋಟಿ ರು.ಗೂ ಅಧಿಕ ಮೊತ್ತದ ಲಾಭವಾಗಲಿದ್ದರೇ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿಗೆ 1,787 ಕೋಟಿ ರು.ನಷ್ಟು ಲಾಭ ಆಗಿದೆ. ಮತ್ತೊಂದು ವಿಶೇಷವೆಂದರೇ ಈ ಕಂಪನಿಗೆ 2015ರಲ್ಲಿ (ಅಂದೂ ಸಹ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು ) ಯೂ ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸುವ ಯೋಜನೆಯನ್ನು ನೀಡಿತ್ತು.

 

ಸರ್ಕಾರವು ರೂಪಿಸಿದ್ದ ನೀತಿಯಲ್ಲೇನಿದೆ?

 

ಗ್ಯಾಸ್‌ ಪೈಪ್‌ಲೈನ್‌ ಹಾಕಲು ಅನುಮತಿಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಅಗತ್ಯವಿದೆ. ರಸ್ತೆಗಳ ಉದ್ದಕ್ಕೂ ಗ್ಯಾಸ್‌ ಪೈಪ್‌ಲೈನ್‌ ಹಾಕಲು ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಪ್ರತಿ ಕಿ ಮೀ ಗೆ 1,000 ಆಗಿರಬೇಕು.

 

ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಲೋಕೋಪಯೋಗಿ ಇಲಾಖೆ ಪ್ರದೇಶಗಳು, ಮಹಾನಗರಪಾಲಿಕೆ ಪ್ರದೇಶಗಳು, ನಗರ ಮುನ್ಸಿಪಲ್‌ ಕಾರ್ಪೋರೇಷನ್‌ ಪ್ರದೇಶಗಳು, ನಗರಾಭಿವೃದ್ದಿ ಪ್ರಾಧಿಕಾರ ಪ್ರದೇಶಗಳು, ಪಮಚಾಯತ್‌ ಪ್ರದೇಶಗಳು, ಜಲಸಂಪನ್ಮೂಲ ಇಲಾಖೆ ಪ್ರದೇಶ (ಜಲಮೂಲ ಕ್ರಾಸಿಂಗ್‌ ಸೇರಿದಂತೆ), ಕೆಎಐಡಿಬಿ ಮತ್ತಿತರೆ ಕೈಗಾರಿಕೆ ಪ್ರದೇಶಗಳು ಇತ್ಯಾದಿ ವ್ಯಾಪ್ತಿಯ ಎಲ್ಲಾ ರಸ್ತೆಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ ಎಂದು ರಾಜ್ಯದಾದ್ಯಂತ ಅನುಮತಿ ಶುಲ್ಕಗಳನ್ನು ನಿಗದಿಗೊಳಿಸಿದೆ.

 

ಮೀಟರ್‌ ಶುಲ್ಕದಲ್ಲಿ ಕಡಿಮೆಗೊಳಿಸಿದ್ದೇಕೆ?

 

ನೈಸರ್ಗಿಕ ಅನಿಲ ಸರಬರಾಜು ಮಾಡಲು ಪೈಪ್ ಅಳವಡಿಕೆಗೆ ಈ ಮೊದಲು ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿ ಮೀಟರ್‌ಗೆ 1,900 ರು ಶುಲ್ಕವಿತ್ತು. ಮತ್ತು ರಾಜ್ಯದ ಇತರೆ ಭಾಗಗಳಲ್ಲಿ 1,857 ರು. ಇತ್ತು. ಆದರೀಗ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ನೀತಿಯು ಅದನ್ನು ಮೀಟರ್‌ಗೆ 1 ರುಪಾಯಿ ಕಡಿಮೆಗೊಳಿಸಿದೆ. ಅಂದರೆ ಪ್ರತಿ ಕಿ ಮೀಗೆ 18.57 ಲಕ್ಷ ರು.ಗಳಿಂದ ಕೇವಲ 1,000 ರೂಪಾಯಿ ಆಗಲಿದೆ. ಇದರ ಪ್ರಕಾರ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿಗೆ 1,787  ಕೋಟಿ ರು.ನಷ್ಟು ಆರ್ಥಿಕ ಲಾಭವನ್ನು ಹರಿವಾಣದಲ್ಲಿಟ್ಟು ಕೊಟ್ಟಿದೆ.

3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್‌ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?

ಎಂಇಸಿಐಎಲ್‌ಗೆ ಅತೀ ಹೆಚ್ಚು ಆರ್ಥಿಕ ಲಾಭ

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 195 ಕೋಟಿ ರು., ಲಾಭವಾಗಲಿದೆ. ಈ ಸಂಬಂಧ 2022ರ ಮಾರ್ಚ್‌ 15ರಲ್ಲೇ ಭಾರತ ಸರ್ಕಾರವು ಮಂಜೂರಾತಿ ನೀಡಿತ್ತು. ಈ ಜಿಲ್ಲೆಯಲ್ಲಿ 3,82,000 ಸಂಖ್ಯೆಯಲ್ಲಿನ ಮನೆಗಳಿಗೆ ಅನಿಲ ಸಂಪರ್ಕ ಕಲ್ಪಿಸಿದೆ.

 

ತುಮಕೂರು (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) ಜಿಲ್ಲೆಯಲ್ಲಿ 10618 ಚದುರ  ಕಿ ಮೀ ಗೆ 352 ಕೋಟಿ ರು.,ಗೂ ಅಧಿಕ ಲಾಭವಾಗಲಿದೆ ಎಂದು ಹೇಳಲಾಗಿದೆ.

 

ತುಮಕೂರಿನಲ್ಲಿ 32,004 ಸಂಖ್ಯೆಯಲ್ಲಿನ ಮನೆಗಳಿಗೆ  ಅನಿಲ  ಸಂಪರ್ಕಗಳನ್ನು ಕಲ್ಪಿಸಿದೆ.

 

ಬೆಳಗಾವಿ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 1,800 ಕಿ ಮೀ ಗೆ 352  ಕೋಟಿ ರು ಆರ್ಥಿಕ ಲಾಭವಾಗಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ 2015ರಲ್ಲಿಯೇ ಭಾರತ ಸರ್ಕಾರವು ಮಂಜೂರಾತಿ ಪತ್ರ ನೀಡಿತ್ತು. ಈ ಜಿಲ್ಲೆಯಲ್ಲಿ 49,193 ಸಂಖ್ಯೆಯ ಮನೆಗಳಿಗೆ ಅನಿಲ  ಸಂಪರ್ಕಗಳನ್ನು ಕಲ್ಪಿಸಿದೆ.

 

ಅಲ್ಲದೇ ಯಾದಗಿರಿ ಜಿಲ್ಲೆಯನ್ನೂ ಒಳಗೊಂಡಂತೆ ತೆಲಂಗಾಣ ಸುತ್ತಮುತ್ತ 889 ಕೋಟಿ ರು.ನಷ್ಟು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿಗೆ ಲಾಭವಾಗಲಿದೆ ಎಂದು ಗೊತ್ತಾಗಿದೆ.

 

ಚುನಾವಣಾ ಬಾಂಡ್‌ ರೂಪದಲ್ಲಿ 100 ಕೋಟಿ ರೂ. ದೇಣಿಗೆ ಕೊಟ್ಟ ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್ ಕಂಪನಿ(ಎಂಇಐಎಲ್) 14,400 ಕೋಟಿ ರೂ.ಗಳ ಗುತ್ತಿಗೆ ಪಡೆದಿದೆ. ಹೈದರಾಬಾದ್‌ ಮೂಲದ ಎಂಇಐಎಲ್ ಕಂಪನಿ ಎಲ್‌ ಅಂಡ್‌ ಟಿ ಬಿಡ್‌ ಮಾಡಿದ 6,625 ಕೋಟಿ ರೂ. ಹೆಚ್ಚು ಬಿಡ್‌ ಮಾಡಿ 14,400 ಕೋಟಿ ರೂ. ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತ್ತು. ಪಿ ಪಿ ರೆಡ್ಡಿ ಎಂಇಐಎಲ್‌ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದು, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ.

 

 

‘ಸರ್ಕಾರ ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಕನಿಷ್ಟ 1.5 ರಿಂದ 3 ಕೋಟಿ ವ್ಯಯಿಸುತ್ತಿದೆ. ಅಂದರೆ ಪ್ರತಿ ಮೀಟರಿಗೆ ರಸ್ತೆ ನಿರ್ಮಾಣಕ್ಕೆ 15,000 ದಿಂದ 30,000 ರೂಪಾಯಿ ವೆಚ್ಚವಾಗುತ್ತದೆ. ಆದರೆ ಅದರ ಕೆಳಗೆ ಪೈಪ್ ಅಳವಡಿಸಲು ಮೀಟರಿಗೆ ಕೇವಲ ಒಂದು ರೂಪಾಯಿ. ಬಿಬಿಎಂಪಿಯ ಸ್ಥಳ ಗುತ್ತಿಗೆ ಪಡೆಯಲು ಮಾರ್ಗದರ್ಶಿ ದರದ ಶೇ 10ರಷ್ಟು ಪ್ರತಿ ವರ್ಷ ನೀಡಬೇಕು. ಹೀಗಿರುವಾಗ ಒಂದು ರೂಪಾಯಿ ಶುಲ್ಕ ಇಡುವ ಅಗತ್ಯ ಏನಿತ್ತು? ನಿಶುಲ್ಕ ಮಾಡಬಹುದಿತ್ತಲ್ಲ,’ ಎನ್ನುತ್ತಾರೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಯಾವುದೇ ಸರ್ಕಾರಿ ನೀತಿಯನ್ನು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ ಮೇಲೆ ಅವರ ಹೂಡಿಕೆಯಲ್ಲಿ ಉಳಿತಾಯವಾಗಿ ಅವರಿಗೆ ಆರ್ಥಿಕ ಅನುಕೂಲವಾಗುವಂತೆ ಪರಿಷ್ಕರಿಸುವುದಿಲ್ಲ. ಅದು ಕಾನೂನು ಬಾಹಿರ. ಗುತ್ತಿಗೆದಾರರು ಯೋಜನೆಯ ಒಟ್ಟೂ ಮೊತ್ತವನ್ನು ಎಲ್ಲಾ ಖರ್ಚುಗಳನ್ನು ಪರಿಗಣಿಸಿಯೇ ಮಾಡಿದ್ದಾರೆ. ಸಾರ್ವಜನಿಕರಿಗೆ ಅನಿಲ ಸರಬರಾಜು ದರ ಕೂಡ ಈ ಮೊತ್ತದ ಮೇಲೆಯ ಆಧಾರಿತವಾಗಿರುತ್ತದೆ.

 

ಪೈಪ್ಡ್ ಗ್ಯಾಸ್ ಸರಬರಾಜು ಯೋಜನೆಯನ್ನು ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ನೀತಿಯ ಅವಶ್ಯಕತೆಯಿದೆ. ನೀತಿಯು ಸಾರಿಗೆ ವಾಹನಗಳಲ್ಲಿ ಶುದ್ಧ ಇಂಧನ ಮತ್ತು ಸಿಎನ್‌ಜಿ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತೇಜಿಸುತ್ತದೆ ಎಂದು ಸರ್ಕಾರವು ಇದನ್ನು ಸಮರ್ಥಿಸಿಕೊಂಡಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts