ರಾಮಮಂದಿರ ಜೀರ್ಣೋದ್ಧಾರ, ಅಯೋಧ್ಯೆಯಲ್ಲಿ ವಸತಿ ಗೃಹ; ಬಜೆಟ್‌ನಲ್ಲಿ ಪ್ರಸ್ತಾವಿಸದ ಸರ್ಕಾರ

ಬೆಂಗಳೂರು; ರಾಜ್ಯದಲ್ಲಿರುವ ಪುರಾತನ ರಾಮಮಂದಿರಗಳ ಜೀರ್ಣೋದ್ಧಾರ ಮತ್ತು  ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಒಟ್ಟಾರೆ 200 ಕೋಟಿ ರು ಅಂದಾಜು ವೆಚ್ಚದಲ್ಲಿ ಸಲ್ಲಿಸಿದ್ದ ಹೊಸ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ  ಕಾಂಗ್ರೆಸ್‌ ಸರ್ಕಾರವು ಹಿಂದೆ ಸರಿದಿದೆ.

 

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು 2024-25ನೇ ಸಾಲಿನ ಆಯವ್ಯಯದಲ್ಲಿ ಈ ಎರಡೂ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿತ್ತು. ಆದರೆ ಆಯವ್ಯಯದಲ್ಲಿ ಇದರ ಬಗ್ಗೆ ಯಾವುದೇ ಪ್ರಸ್ತಾವಿಸಿಲ್ಲ. ಹೀಗಾಗಿ ರಾಮಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣ ಮಾಡುವ ಹೊಸ ಯೋಜನೆಯನ್ನು ಕೈ ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

‘ರಾಜ್ಯದಲ್ಲಿ 100 ಪುರಾತನ ರಾಮ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ತಲಾ 1.00 ಕೋಟಿ ರು.ಗಳ ವೆಚ್ಚದಲ್ಲಿ ಒಟ್ಟು 100.00 ಕೋಟಿ ರು.ಗಳನ್ನು ಒದಗಿಸಲು ಉದ್ದೇಶಿಸಿದೆ. ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನಿವೇಶನ ಹಂಚಿಕೆ ಮಾಡಿದರೆ ರಾಜ್ಯ ಸರ್ಕಾರವು 100. 00 ಕೋಟಿ ರು. ವೆಚ್ಚದಲ್ಲಿ ವಸತಿ ಗೃಹವನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ. ಈ ಎರಡೂ ಯೋಜನೆಗಳಿಗೆ ನಿಗದಿಗೊಳಿಸಿರುವ ಮೊತ್ತವು ಆರ್ಥಿಕ ಇಲಾಖೆಯ ಸೂಚಿಸಿರುವ ಮೊತ್ತದೊಳಗೇ ಇದೆ,’ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಹೊಸ ಯೋಜನೆಗಳನ್ನು ರೂಪಿಸಿತ್ತು.

 

ಅಲ್ಲದೇ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ನಿವೇಶನ ಹಂಚಿಕೆ ಮಾಡಿದರೆ 100 ಕೋಟಿ ರು ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಲಿದೆ. ರಾಜ್ಯದ ವಿವಿಧ ಮಠಗಳಿಗೆ ಸಹಾಯಧನ ರೂಪದಲ್ಲಿ 210.00 ಕೋಟಿ ರು. ಸೇರಿ ಇಲಾಖೆಯ ಇನ್ನಿತರೆ ಯೋಜನೆಗಳಿಗೆ ಒಟ್ಟಾರೆ 690.28 ಕೋಟಿ ರು.ಗಳನ್ನು ಅಂದಾಜಿಸಿತ್ತು.  2024-25ನೇ ಸಾಲಿನ ಆಯವ್ಯಯದಲ್ಲಿ ಪುರಾತನ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ಬೃಹತ್‌ ವಸತಿ ಗೃಹ ನಿರ್ಮಾಣ ಮಾಡುವ ಹೊಸ ಯೋಜನೆಯನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು.

 

ರಾಮಮಂದಿರ ಜೀರ್ಣೋದ್ದಾರ, ಅಯೋಧ್ಯೆಯಲ್ಲಿ ವಸತಿಗೃಹ ನಿರ್ಮಾಣ; 200 ಕೋಟಿ ರು ಅನುದಾನಕ್ಕೆ ಪ್ರಸ್ತಾವ

ಅಲ್ಲದೇ ಈ ಎರಡೂ ಹೊಸ ಯೋಜನೆಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯೂ ಸಹ ಸಮರ್ಥಿಸಿಕೊಂಡಿತ್ತು.

 

ಸರ್ಕಾರದ ‘200 ಕೋಟಿ’ ರಾಮಭಕ್ತಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್‌

 

ಆದರೆ ಈ ಎರಡೂ ಹೊಸ ಯೋಜನೆಗಳ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವಿಸಿಲ್ಲ.

 

ಹೊರ ರಾಜ್ಯಗಳಲ್ಲಿನ ತಿರುಮಲ, ಶ್ರೀ ಶೈಲ, ವಾರಣಾಸಿ, ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕ ಭಕ್ತಾದಿಗಳ ಅನುಕೂಲಕ್ಕಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಬಗ್ಗೆ ಆಯವ್ಯಯದಲ್ಲಿ ಪ್ರಸ್ತಾವಿಸಲಾಗಿದೆ. ತಿರುಮಲದಲ್ಲಿ 200 ಕೋಟಿ ರು.ಗಳ ಕಾಮಗಾರಿ ಅಂತಿಮ ಹಂತದಲ್ಲಿರುವುದು, ಶ್ರೀ ಶೈಲದಲ್ಲಿ 85 ಕೋಟಿ ರು. ವೆಚ್ಚದಲ್ಲಿನ ಕಾಮಗಾರಿ, ಗುಡ್ಡಾಪುರದಲ್ಲಿನ 11 ಕೋಟಿ ವೆಚ್ಚದ ಕಾಮಗಾರಿಗಳ ಬಗ್ಗೆ ಹೇಳಲಾಗಿದೆ. ಪ್ರಸಕ್ತ ಸಾಲಿನಲ್ಲಿಯೇ ವಾರಣಾಸಿಯಲ್ಲಿ 5 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಿದ್ದಾರೆ.

 

ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್‌-ಕಂ-ಬ್ಯಾರೇಜ್‌ನ್ನು ಲೋಕೋಪಯೋಗಿ ಇಲಾಖೆಯಿಂದ 158 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ, ಯಾವುದೇ ಆದಾಯವಿಲ್ಲದ 34,165 ‘ಸಿ’ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ವಿಷನ್‌ ಗ್ರೂಪ್‌ ರಚಿಸಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಿದ್ದಾರೆ.

 

ಇನಾಂ/ಇನಾಂಯೇತರ ಜಮೀನು ಕಳೆದುಕೊಂಡ 29,523 ‘ಸಿ’ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್‌ ಮೊತ್ತವನ್ನು ಅರ್ಚಕರುಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

 

ಉಳಿದಂತೆ ಮಾನಸ ಸರೋವರ ಭಕ್ತಾದಿಗಳಿಗೆ ನೆರವು ನೀಡಲು 2024-25ನೇ ಸಾಲಿನಲ್ಲಿ 3.00 ಕೋಟಿ ರು., ಚಾರ್‍‌ ಧಾಮ್‌ ಯಾತ್ರೆಗೆ 7.00 ಕೋಟಿ ರು., ಭಾರತ್‌ ಗೌರವ್‌ ಯೋಜನೆಯಡಿಯಲ್ಲಿ ಪ್ರಸಿದ್ಧ ಸ್ಥಳಗಳಿಗೆ ರೈಲು ಮೂಲಕ ಪ್ರವಾಸಕ್ಕೆ 13.31 ಕೋಟಿ ರು., ಕಾಶಿ ಯಾತ್ರಾರ್ಥಿಗಳಿಗೆ 15.00 ಕೋಟಿ ರು., ಸೇರಿ ಒಟ್ಟಾರೆ 38.31 ಕೋಟಿ ರು., ಬೇಕಾಗಬಹುದು ಎಂದು ಇಲಾಖೆಯು ಅಂದಾಜಿಸಿತ್ತು. ಆದರೆ ಇದರ ಬಗ್ಗೆ ಆಯವ್ಯಯದಲ್ಲಿ ಯಾವುದೇ ಪ್ರಸ್ತಾಪವಿಲ್ಲ.

 

 

ಆರಾಧನಾ ಯೋಜನೆಗೆ 22.40 ಕೋಟಿ ರು., ರು., ಪರಿಶಿಷ್ಟ ಜಾತಿ ಉಪ ಯೋಜನೆಗೆ 22.40 ಕೋಟಿ, ಗಿರಿಜನ ಉಪ ಯೋಜನೆಗೆ 22.40 ಕೋಟಿ ರು., ಯಡಿಯೂರು ಅಭಿವೃದ್ಧಿಗೆ 20.00 ಲಕ್ಷ ರು., ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಹಾಗೂ ವಸತಿ ಸೌಕರ್ಯಗಳಿಗೆ 100.00 ಕೋಟಿ ರು.,

 

ರಾಜ್ಯದಲ್ಲಿನ ವಿವಿಧ ಮಠಗಳಿಗೆ 210.00 ಕೋಟಿ ರು., ಅಧಿಸೂಚಿತ ಸಂಸ್ಥೆಗಳ ನಿರ್ವಹಣೆಗೆ 20.00 ಕೋಟಿ ರು., ಸಹಾಯನುದಾನಕ್ಕೆ 250.00 ಕೋಟಿ ರು., ಪ್ರಾಕೃತ ಅಧ್ಯಯನ ಮತ್ತು ಸಂಶೋಧನೆ ಸಂಸ್ಥೆಗೆ 1.05 ಕೋಟಿ ರು., ನ್ಯಾಸ ಮತ್ತು ಉಂಬಳಿಗಳ ಮೇಲಿನ ಬಡ್ಡಿ 70.20 ಲಕ್ಷ ರು., ನಗದು ಧನ ಸಹಾಯ/ಪರಿಹಾರಕ್ಕೆ 81.75 ಲಕ್ಷ ರು., ಕರ್ನಾಟಕ ರಾಜ್ಯ ಛತ್ರ ತಿರುಮಲ, ತಿರುಪತಿ ನಿರ್ವಹಣೆಗೆ 2.00 ಕೋಟಿ ರು. ಸೇರಿ ಒಟ್ಟಾರೆ 690.28 ಕೋಟಿ ರು. ಅಂದಾಜಿಸಿತ್ತು.

 

ಹೊಸ ಯೋಜನೆಗಳ ಪಟ್ಟಿಯಲ್ಲಿ ಇಲಾಖೆಯಲ್ಲಿ ಕೇಂದ್ರೀಕೃತ ಕಾಲ್‌ ಸೆಂಟರ್‍‌ ಅಭಿವೃದ್ಧಿ ಮತ್ತು ನಿಯೋಜನೆ ಕುರಿತು ಪ್ರಸ್ತಾವಿಸಿತ್ತು. . ಇದಕ್ಕಾಗಿ 5.95 ಕೋಟಿ ರು. ಅಂದಾಜಿಸಿದೆ. ದೇವಾಲಯಗಳು ಮತ್ತು ಅವುಗಳ ಸಂಬಂಧಿತ ಸರ್ಕಾರಿ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಸಂಭಾವ್ಯ ಮಾಹಿತಿ ಪ್ರಸಾರ ಮಾಡುವುದು ಇದರ ಉದ್ದೇಶವಾಗಿದೆ ಎಂದು ಇಲಾಖೆಯು ವಿವರಿಸಿತ್ತು. ಆದರೆ ಇದರ ಬಗ್ಗೆ ಆಯವ್ಯಯದಲ್ಲಿ ಪ್ರಸ್ತಾಪಿಸಿಲ್ಲ.

 

ಹೆಚ್ಚುವರಿ ಬೇಡಿಕೆ

 

ದೇವಾಲಯಗಳು ಮತ್ತು ಸಂಸ್ಥೆಗಳಿಗೆ ಬಾಕಿ ಉಳಿಕೆ ಮೊತ್ತವನ್ನು ಹಂಚಿಕೆ ಮಾಡಲು 275.14. ಕೋಟಿ ರು. ಬೇಕು ಎಂದು ಹೆಚ್ಚುವರಿ ಬೇಡಿಕೆ ಪಟ್ಟಿಯಲ್ಲಿ ಸೇರಿಸಿದೆ. ಮಠಗಳು ಮತ್ತು ದೇವಾಲಯಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿದೆಯಾದರೂ ಹೆಚ್ಚಿನ ಅನುದಾನ ಬೇಡಿಕೆ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿರುವ ಕಾರಣ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಇಲಾಖೆ ಕೋರಿತ್ತು.

 

ಹಿಂದಿನ ಬಿಜೆಪಿ ಸರ್ಕಾರವು ದೇವಾಲಯಗಳು ಮತ್ತು ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಆದೇಶಗಳನ್ನು ಹೊರಡಿಸಿತ್ತು. ಆದರೆ ಈ ಆದೇಶಗಳಿಗೆ ಆಡಳಿತಾತ್ಮಕ ಅನುಮೋದನೆ ಇರಲಿಲ್ಲ ಹಾಗೂ ಲೆಕ್ಕ ಶೀರ್ಷಿಕೆಯೂ ಇರಲಿಲ್ಲ. ಹೀಗಾಗಿ ಯಾವುದೇ ಅನುದಾನ ಬಿಡುಗಡೆ ಮಾಡದೇ ಇರುವ ದೇವಾಲಯಗಳು, ಸಂಸ್ಥೆಗಳಿಗೆ 140.45 ಕೋಟಿ ರು. ಹೆಚ್ಚುವರಿಯಾಗಿ ಬೇಕು ಎಂದು ಅಂದಾಜಿಸಿತ್ತು. ಈ ಬಗ್ಗೆಯೂ ಆಯವ್ಯಯದಲ್ಲಿ ಪ್ರಸ್ತಾವಿಸಿಲ್ಲ.

 

ಯಾವುದೇ ಆದಾಯವಿಲ್ಲದ ಸಿ ವರ್ಗದ ಒಟ್ಟು 121 ಮುಜುರಾಯಿ ದೇವಸ್ಥಾನಗಳ ಮಿತಿಗೊಳಪಟ್ಟು ಸಮಾನವಾಗಿ 15,000 ರು.ಗಳ ಸಹಾಯ ಅನುದಾನ ನೀಡುವ ಯೋಜನೆಗೆ 2024-25ನೇ ಸಾಲಿಗೆ 18.15 ಲಕ್ಷ ರು. ಬೇಕಿದೆ. ಹಾಗೆಯೇ ರಾಜ್ಯಾದ್ಯಂತ ಒಟ್ಟಾರೆ 545 ಸಂಸ್ಥೆಗಳಿವೆ. ಪ್ರಸ್ತುತ 121 ಮುಜರಾಯಿ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ 424 ಸಂಸ್ಥೆಗಳಿಗೆ 15,000 ರು.ನಂತೆ 63.60 ಲಕ್ಷ ರು. ಅಗತ್ಯವಿದೆ. ಒಟ್ಟಾರೆ 81.75 ಲಕ್ಷ ರು. ಹೆಚ್ಚುವರಿ ಅನುದಾನ ಬೇಕಿದೆ ಎಂದು ಇಲಾಖೆಯು ಪ್ರಸ್ತಾವಿಸಿತ್ತು.

 

ಇನಾಂ ಜಮೀನುಗಳಿಗೆ ಪರಿಹಾರ ಧನವಾಗಿ ಒಟ್ಟು 26,000 ಸಂಸ್ಥೆಗಳಿಗೆ ತಸ್ತೀಕ್‌ ಅನುದಾನ ನೀಡಲು 156.91 ಕೋಟಿ ರು. ಅನುದಾನ ಬೇಕಿದೆ. ಹಿಂದಿನ ಸಾಲಿನಲ್ಲಿ ಕೋವಿಡ್‌ ಪರಿಹಾರ ಧನ ಪ್ಯಾಕೇಜ್‌ ಮೊತ್ತಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ 05 ಜಿಲ್ಲೆಗಳಿಗೆ ಬಾಕಿ ಪಾವತಿಗಾಗಿ 5.61 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಹೇಳಿತ್ತು.

 

ಇನಾಂಯೇತರ ಜಮೀನುಗಳಿಗೆ ಪರಿಹಾರ ಧನವಾಗಿ ಒಟ್ಟು 3,749 ಸಂಸ್ಥೆಗಳಿಗೆ ವರ್ಷಾಸನ ಅನುದಾನಕ್ಕಾಗಿ 22.67 ಕೋಟಿ ರು. ಬೇಕಿದೆ. ಹಿಂದಿನ ಸಾಲಿನಲ್ಲಿ ಈ ಸಂಬಂಧ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಬಾಕಿ ಪಾವತಿಗಾಗಿ 13.79 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಪ್ರಸ್ತಾವಿಸಿತ್ತು. ಇಲಾಖೆಯು ಮಂಡಿಸಿದ್ದ ಹೆಚ್ಚುವರಿ ಬೇಡಿಕೆಗಳ ಬಗ್ಗೆಯೂ ಆಯವ್ಯಯದಲ್ಲಿ ಪ್ರಸ್ತಾವಿಸಿಲ್ಲ.

Your generous support will help us remain independent and work without fear.

Latest News

Related Posts