ಕಲ್ಲಿದ್ದಲು ಸಾಗಾಣಿಕೆಯಲ್ಲಿ ಅಕ್ರಮ ಆರೋಪ; ಟ್ರಕ್‌ಗಳ ಹೊಂದಿರದ ಬಿಡ್ಡರ್‍‌ಗೇ ಟೆಂಡರ್‍‌!

ಬೆಂಗಳೂರು: ಟ್ರಕ್‌ ಮತ್ತು ಫ್ಲೀಟ್‌ಗಳನ್ನು ಹೊಂದಿರದ ಬಿಡ್ಡರ್‍‌ಗಳಿಗೆ ಕಲ್ಲಿದ್ದಲು ಸಾಗಾಣಿಕೆ ಟೆಂಡರ್‍‌ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 

ಕಲ್ಲಿದ್ದಲು ಸಾಗಾಣಿಕೆ ಮಾಡಲು ಆಹ್ವಾನಿಸಿದ್ದ ಟೆಂಡರ್‍‌ನಲ್ಲಿ ಯಶಸ್ವಿ ಬಿಡ್‌ದಾರರ ಬಳಿ ಟ್ರಕ್‌ಗಳಾಗಲೀ, ಫ್ಲೀಟ್‌ಗಳಾಗಲಿ ಇಲ್ಲ ಎಂದು ಮಹಾರಾಷ್ಟ್ರ ಮೂಲದ ಸುಧೀರ್‍‌ ತೆಹರೆ ಎಂಬುವರು ಸರ್ಕಾರಕ್ಕೆ ಸಲ್ಲಿಸಿದ್ದ ದೂರು ಇದೀಗ ಬಹಿರಂಗವಾಗಿದೆ.

 

ಅಪಾರ ಪ್ರಮಾಣದ ಕಲ್ಲಿದ್ದಲನ್ನು ರೈಲ್ವೇ ವ್ಯಾಗನ್‌ಗಳಲ್ಲಿ ಸಾಗಿಸಲಾಗುತ್ತಿದೆ. ಆದರೆ ಯಶಸ್ವಿ ಬಿಡ್‌ದಾರರ ಬಳಿ ಟ್ರಕ್‌ಗಳಾಗಲೀ, ಫ್ಲೀಟ್‌ಗಳಾಗಲೀ ಇಲ್ಲ ಎಂದು ಸುಧೀರ್‍‌ ತೆಹರೆ ಎಂಬುವರು ದೂರಿನಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆದರೆ ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‍‌ ಪಾಂಡೆ ಅವರು ಈ ದೂರು ಆಧಾರರಹಿತವಾದದು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2023ರ ಜುಲೈ 11ರಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಟೆಂಡರ್‍‌ನ ಅನುಸಾರ ಡಬ್ಲ್ಯೂಸಿಎಲ್‌ ಗಣಿಗಳಿಂದ ಕಲ್ಲಿದ್ದಲನ್ನು ಸಾಗಿಸಲಾಗುತ್ತಿದೆ. ಅಪಾರ ಪ್ರಮಾಣದಲ್ಲಿ ಕಲ್ಲಿದ್ದಲನ್ನು ನೀಡಲಾಗಿದೆ. ಇದನ್ನು ವ್ಯಾಗನ್‌ಗಳಲ್ಲಿ ಸಾಗಿಸಲಾಗುತ್ತಿದೆ. ಆಸಕ್ತಿಕರ ವಿಷಯ ಎಂದರೆ ಯಶಸ್ವಿ ಬಿಡ್ಡರ್‍‌ ಬಳಿ ಟ್ರಕ್‌ಗಳಾಗಲಿ, ಫ್ಲೀಟ್‌ಗಳಾಗಲಿ ಇಲ್ಲ,’ ಎಂದು ಸುಧೀರ್‍‌ ತೆಹರೆ ಅವರು ಸರ್ಕಾರದ ಗಮನಕ್ಕೆ ತಂದಿರುವುದು ದೂರಿನಿಂದ ಗೊತ್ತಾಗಿದೆ.

 

ಈ ದೂರಿನ ಕುರಿತು ಸಚಿವ ಕೆ ಜೆ ಜಾರ್ಜ್‌ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. 2023ರ ಜುಲೈ 26ರಂದು ಆರ್ಥಿಕ ಇಲಾಖೆಯಲ್ಲಿ ಈ ಸಂಬಂಧ ಕಡತ ತೆರೆದಿತ್ತು. 2023ರ ಸೆ.22ರಂದು ಕಡತವನ್ನು ಮುಕ್ತಾಯಗೊಳಿಸಿರುವುದು ಗೊತ್ತಾಗಿದೆ. ಆದರೆ ಈ ಬಗ್ಗೆ  ಕೈಗೊಂಡಿರುವ ಕ್ರಮದ ಬಗ್ಗೆ ತಿಳಿದು ಬಂದಿಲ್ಲ.

 

 

ಟ್ರಕ್‌ಗಳನ್ನು ಬಾಡಿಗೆಗೆ ತೆಗೆದುಕೊಂಡಿರುವ ಯಶಸ್ವಿ ಬಿಡ್‌ದಾರರು ಪ್ರತಿ ಮೆಟ್ರಿಕ್‌ ಟನ್‌ ಸಾಗಣೆಗೆ ರೂ.560 ಮತ್ತು ರೂ.600 ರೂ.ನಂತೆ ಸಾಗಿಸುತ್ತಿದ್ದಾರೆ. ಅಲ್ಲಿ ನಿಯೋಜಿಸಿರುವ ಟ್ರಕ್‌ಗಳ ಮಾಹಿತಿ ಕೆಪಿಸಿಎಲ್‌ ಬಳಿ ಲಭ್ಯವಿದೆ. ಇದಕ್ಕೆ ಪ್ರತಿಯಾಗಿ ಎಲ್‌ 1 ಬಿಡ್ಡರ್‍‌ ನಮೂದಿಸಿರುವ ದರಗಳು ತುಂಬಾ ಕಡಿಮೆ ಇವೆ. ಪ್ರತಿ ಮೆಟ್ರಿಕ್‌ ಟನ್‌ 60 ರು ದರದಲ್ಲಿ ಕಲ್ಲಿದ್ದಲನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಇಲ್ಲಿ ಕಂಡು ಬರುವುದೇನೆಂದರೆ ಕೆಪಿಸಿಎಲ್‌ ಹಂಚಿಕೆ ಮಾಡಿರುವ ಕಲ್ಲಿದ್ದಲನ್ನು ಮುಕ್ತ ಮಾರುಕಟ್ಟೆಗೆ ವರ್ಗಾಯಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೃಹತ್‌ ಲಾಭವನ್ನು ಗಳಿಸುವುದಕ್ಕಾಗಿಯೇ ಸರ್ಕಾರಕ್ಕೆ ನಷ್ಟ ತಂದೊಡ್ಡುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ರಾಜ್ಯದ ಜೆಂಕೋಸ್‌ (ಎಂಪಿಪಿಜಿಸಿಎಲ್‌+ಮಹಾಜಂಕೋ) ಈಗಾಗಲೇ ಆರ್‍‌ಸಿಆರ್‍‌ ನಿಯಮಾನುಸಾರ ಡಬ್ಲ್ಯೂಸಿಎಲ್‌ ಗಣಿಗಳಿಗೆ ನಿಲ್ಲಿಸಿವೆ. ಟೆಂಡರ್‍‌ಗಳನ್ನು ಸಲ್ಲಿಸುವುದನ್ನು ನಿಲ್ಲಿಸಿವೆ,’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಆಶ್ಚರ್ಯಕರ ಮತ್ತು ಆಸಕ್ತಿದಾಯಕ ವಿಷಯ ಎಂದರೆ ಕೆಪಿಸಿಎಲ್‌ ಆಯ್ಕೆ ಮಾಡಿರುವ ಈಗಿನ ಬಿಡ್ಡರ್‍‌ಗೆ 2022ರಲ್ಲಿ ಇದೇ ಆರ್‍‌ಸಿಆರ್‍‌ ನಿಯಮಗಳ ಅನುಸಾರ ಟೆಂಡರ್‍‌ ನೀಡಲಾಗಿತ್ತು. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು. ಆಗಿನ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಜಾರಿಗೆ ತಂದಿದ್ದರು. ಸಾಗಣೆಕೆ ಮತ್ತು ಲೋಡಿಂಗ್‌ನ ಸಂಪೂರ್ಣ ಜವಾಬ್ದಾರಿ ಡಬ್ಲ್ಯೂಸಿಎಲ್‌ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿತ್ತು ಎಂಬ ಅಂಶವನ್ನು ದೂರಿನಲ್ಲಿ ವಿವರಿಸಲಾಗಿದೆ.

 

‘ಕೆಪಿಸಿಎಲ್‌ ಕೇವಲ ಗುಣಮಟ್ಟದಿಂದ ಮಾತ್ರ ಗಳಿಸುತ್ತಿರಲಿಲ್ಲ, ತುಂಬಾ ಮುಖ್ಯವಾದದ್ದು ಎಂದರೆ ಇಡೀ ಚಟುವಟಿಕೆಗಳು ಡಬ್ಲ್ಯೂಸಿಎಲ್‌ನ ನಿಯಂತ್ರಣದಲ್ಲಿತ್ತು. ಅಲ್ಲಿ ಕಳವು ಮತ್ತು ಭ್ರಷ್ಟಾಚಾರ ಇರಲಿಲ್ಲ. ಎನ್‌ಟಿಪಿಸಿನೇ ಕಲ್ಲಿದ್ದಲನ್ನು ಸಾಗಣೆ ಮಾಡಿದರೂ ಅಲ್ಲಿ ಕಳವಿನ ಪ್ರಶ್ನೆ ಇರಲಿಲ್ಲ,’ ಎಂದು ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಸುಧೀರ್‍‌ ತೆಹರೆ ಅವರು ದೂರಿನಲ್ಲಿ ವಿವರಿಸಿರುವ ಅಂಶಗಳನ್ನು ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‍‌ ಪಾಂಡೆ ಅವರು ತಳ್ಳಿ ಹಾಕಿದ್ದಾರೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎರಡು ಪುಟದ ಪತ್ರ ಬರೆದಿದ್ದಾರೆ.

 

ಇಲ್ಲಿ ಬಿಡ್ಡರ್‍‌ಗಳು ಕಡಿಮೆ ದರವನ್ನು ನಮೂದಿಸಿದ್ದರು. ಇಲ್ಲಿ ಎಲ್‌1 ಬಿಡ್ಡರ್‍‌ ಆಯ್ಕೆಯಾಗಿದ್ದು ಅವರು ಡಬ್ಲ್ಯೂಸಿಎಲ್‌ ಮೈನಿಂಗ್‌ನಲ್ಲಿ ಕಲ್ಲಿದ್ದಲು ದರವನ್ನು ಉಳಿತಾಯ ಮಾಡಲು ಆರ್‍‌ಸಿಆರ್‍‌ಗೆ ಬದಲಾಗಿ ಎಆರ್‍‌ಆರ್‍‌ ಮಾದರಿಯಲ್ಲಿ ಕಲ್ಲಿದ್ದಲನ್ನು ಸಾಗಣೆ ಮಾಡಿದ್ದಾರೆ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿರುವುದು ತಿಳಿದು ಬಂದಿದೆ.

 

‘ಟೆಂಡರ್‍‌ ಪ್ರಕ್ರಿಯೆ ಸಂದರ್ಭದಲ್ಲಿ ಕೆಪಿಸಿಎಲ್‌ ಇಂತದೇ ದೂರನ್ನು ಸ್ವೀಕರಿಸಿತ್ತು. ಅದೇ ಪ್ರಕಾರ ಕೆಪಿಸಿಎಲ್‌ನ ಪರಿಶೀಲನೆ ಸಮಿತಿಯು ದಸ್ತಾವೇಜು ಪರಿಶೀಲನೆಯನ್ನು ಮಾಡಿತ್ತು. ದರಗಳು ತೀರಾ ಕಡಿಮೆ ಇದ್ದಿದ್ದರಿಂದ ಟೆಂಡರ್‍‌ನ್ನು ರದ್ದು ಮಾಡಿತ್ತು,’ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಕೆಪಿಸಿಎಲ್‌ ಸಹ ಲಭ್ಯವಿರುವ ಕಲ್ಲಿದ್ದಲು ವಿವರಣೆ ನೀಡುವಂತೆ ಡಬ್ಲ್ಯೂಸಿಎಲ್‌ನ ವಿವರಣೆ ಕೇಳಿತ್ತು. ಆರ್‍‌ಸಿ‌ಆರ್‍‌ ಮಾದರಿಯಲ್ಲಿ ಲೋಡಿಂಗ್‌ ಮಾಡುವ ಉದ್ದೇಶದಿಂದ ಈ ವಿವರಣೆ ಕೇಳಿತ್ತು. ಇದಕ್ಕೆ ವಿವರಣೆ ನೀಡಿದ್ದ ಡಬ್ಲ್ಯೂಸಿಎಲ್‌, ಒಸಿಎಂನ ಯೋಕೋನಾದಿಂದ ಕಲ್ಲಿದ್ದಲನ್ನು ಸಾಗಣೆ ಮಾಡಬಹುದು ಆದರೆ ಆರ್‍‌ಸಿಆರ್‍‌ ಮಾದರಿಯಲ್ಲಿ ಮಾಡಬೇಕು ಎಂದು ವಿವರಣೆ ನೀಡಿತ್ತು ಎಂದು ಹೇಳಿರುವುದು ತಿಳಿದು ಬಂದಿದೆ.

 

ಕಲ್ಲಿದ್ದಲು ಗಣಿಗಾರಿಕೆ ಆರಂಭಿಸಿದ ನಂತರವೇ ಕಲ್ಲಿದ್ದಲನ್ನು ಡಬ್ಲ್ಯೂಸಿಎಲ್‌ ಸೈಡಿಂಗ್‌ಗೆ ಸಾಗಿಸುವ ಸಾಧ್ಯತೆಗಳ ತಿಳಿಯಲಿದೆ. ಕೆಪಿಸಿಎಲ್‌ ಉಳಿವಿಗಾಗಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿತ್ತು. ಸೈಡಿಂಗ್‌ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೆಪಿಸಿಎಲ್‌ ಡಬ್ಲ್ಯೂಸಿಎಲ್‌ನ್ನು ಮನವಿ ಮಾಡಿತ್ತು. ಆದರೆ ಯಕೋನಾ ಮತ್ತು ಗೌರಿ ಎಕ್‌ಫಾನ್ಷನ್‌ ಮೈನ್‌ಗಳಲ್ಲಿ ಸೈಡಿಂಗ್ಸ್‌ಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವ ಪರಿಸ್ಥಿತಿಯಲ್ಲಿ ಡಬ್ಲ್ಯೂಸಿಎಲ್‌ ಇರಲಿಲ್ಲ ಎಂಬುದು ಪಂಕಜ್‌ಕುಮಾರ್‍‌ ಪಾಂಡೆ ಅವರು ಪತ್ರದಲ್ಲಿ ವಿವರಿಸಿದ್ದಾರೆ.

 

‘ಹೀಗಾಗಿ ಕೆಪಿಸಿಎಲ್‌ ಹೊಸ ಟೆಂಡರ್‍‌ ಕರೆಯಿತು. ಬಿಡ್ಡರ್‍‌ಗಳು ಕೋಟ್‌ ಮಾಡಿದ ದರಗಳು ಈ ಹಿಂದೆ ರದ್ದುಪಡಿಸಿದ ಟೆಂಡರ್‍‌ಗಳ ಮಟ್ಟದಲ್ಲಿಯೇ ಇತ್ತು. ನಂತರ ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯ ಡಬ್ಲ್ಯೂಸಿಎಲ್‌ ನಿಕ್ಷೇಪದಿಂದ ಕಲ್ಲಿದ್ದಲು ಸಾಗಣೆ ರೈಲು ಅಥವಾ ರಸ್ತೆ ಮೂಲಕವೇ ಎಂಬುದನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸಿತು. ಹಲವಾರು ಉಪ ಸಮಿತಿಗಳನ್ನು ರಚಿಸಿತು. ಆದರೆ ಕೆಪಿಸಿಎಲ್‌ ಮಾತ್ರ ಟೆಂಡರ್‍‌ ಪ್ರಕ್ರಿಯೆಯನ್ನು ಮುಂದುವರೆಸಿತು,’ ಎಂದು ಸಮರ್ಥಿಸಿಕೊಂಡಿದ್ದಾರೆ.

SUPPORT THE FILE

Latest News

Related Posts