ನಿರಂತರ ಏರಿಕೆ; ಎಂಟೇ ತಿಂಗಳಲ್ಲಿ 32,289.99 ಕೋಟಿ ರು. ಸಾರ್ವಜನಿಕ ಸಾಲ

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವ ಮುನ್ನ ಇದ್ದ 262 ಕೋಟಿ ರು ಸಾರ್ವಜನಿಕ ಸಾಲವು ಈಗ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ 32,289.99 ಕೋಟಿ  ರೂ.ಗಳಿಗೆ ತಲುಪಿದೆ.

 

ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ, ವೆಚ್ಚವನ್ನು ತಗ್ಗಿಸಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಸಾರ್ವಜನಿಕ ಸಾಲದ ಪ್ರಮಾಣವು ನಿರಂತರವಾಗಿ ಏರಿಕೆ ಕಾಣುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

 

2023ರ ಫೆಬ್ರುವರಿಯ ಅಂತ್ಯಕ್ಕೆ ರಾಜ್ಯ ಸರ್ಕಾರದ ಸಾಲವು 262 ಕೋಟಿ ರು. ಇತ್ತು. 2024ರ ಡಿಸೆಂಬರ್‍‌ ಅಂತ್ಯಕ್ಕೆ 32,289.99 ರೂ.ಗಳಿಗೆ ಮುಟ್ಟಿದೆ. ಈ 8 ತಿಂಗಳಲ್ಲಿ 32,027.99 ಕೋಟಿ ರು. ಸಾಲ ಪಡೆದುಕೊಂಡಿದೆ. ಬಸವರಾಜ ಬೊಮ್ಮಾಯಿ ಅವರ ಅಧಿಕಾರವಾಧಿ ನಂತರದ ತಿಂಗಳುಗಳಲ್ಲಿ ಸಾರ್ವಜನಿಕ  ಸಾಲ ನಿರಂತರವಾಗಿ ಏರಿಕೆ ಕಾಣುತ್ತಿರುವುದು ಆರ್ಥಿಕ ಇಲಾಖೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

 

ಮೇ ತಿಂಗಳಲ್ಲಿ 443.82 ಕೋಟಿಗೆ ಏರಿಕೆ ಕಂಡಿದ್ದ ಸಾರ್ವಜನಿಕ ಸಾಲವು  ಜೂನ್‌ ತಿಂಗಳಲ್ಲಿ 602.29 ಕೋಟಿ ರೂ.ಗಳಿಗೆ ಹೆಚ್ಚಳವಾಗಿತ್ತು. ಮುಂದುವರೆದ ಈ ಏರಿಕೆ ಜುಲೈ ಮಾಹೆಯಲ್ಲಿ 643.02 ಕೋಟಿಗೆ ತಲುಪಿತ್ತು. ಆಗಸ್ಟ್‌ ತಿಂಗಳಲ್ಲಿ 871.01 ಕೋಟಿ ರೂ.ಗಳಿಗೆ ಮುಟ್ಟಿತ್ತು. ಸೆಪ್ಟೆಂಬರ್‍‌ ತಿಂಗಳಲ್ಲಿ ಹೆಚ್ಚಿನ ಏರಿಕೆ ಕಂಡಿದ್ದು 1,191.10 ಕೋಟಿ ರೂಗಳಿಗೆ.  ಅಕ್ಟೋಬರ್‍‌ನಲ್ಲಿ ಗಣನೀಯ ಏರಿಕೆ ಕಂಡಿದ್ದ ಸಾರ್ವಜನಿಕ ಸಾಲವು  7,399.60 ಕೋಟಿ ರೂಗಳಿಗೆ ತಲುಪಿತ್ತು.

 

ಇದೇ ಪ್ರವೃತ್ತಿಯು ನವೆಂಬರ್‍‌ನಲ್ಲಿಯೂ ಮುಂದುವರೆದಿತ್ತಲ್ಲದೇ ಸಾರ್ವಜನಿಕ ಸಾಲದ ಪ್ರಮಾಣದಲ್ಲಿ  ಭಾರಿ ಏರಿಕೆ ಕಂಡು 16,711.19 ಕೋಟಿ ರೂ.ಗಳಿಗೆ ತಲುಪಿತ್ತು. ಒಂದೇ ತಿಂಗಳಲ್ಲೇ ಅಂದರೆ  ಡಿಸೆಂಬರ್‍‌ ಅಂತ್ಯಕ್ಕೆ ಇದರ ಪ್ರಮಾಣವು  15,578.8 ಕೋಟಿ ರು.ಗೆ ಏರಿಕೆ ಕಂಡಿತ್ತು. ಹೀಗೆ ಪ್ರತಿ ತಿಂಗಳೂ ಸಾಲದ ಪ್ರಮಾಣವು ಏರುತ್ತಾ ಸಾಗಿರುವುದು ಕಂಡು ಬಂದಿದೆ.

 

2022-23ರಲ್ಲಿ ಹಿಂದಿನ ಬಿಜೆಪಿ ಸರ್ಕಾರವು 72,000.46 ಕೋಟಿ ರು. ಸಾರ್ವಜನಿಕ ಸಾಲ ಪಡೆಯುವುದಾಗಿ ಬಜೆಟ್‌ನಲ್ಲಿ ಘೋಷಿಸಿತ್ತು. 2022ರ ಏಪ್ರಿಲ್‌ನಿಂದ 2022ರ ಡಿಸೆಂಬರ್‍‌ ಅಂತ್ಯಕ್ಕೆ 37,601.49 ಕೋಟಿ ರು. ಸಾಲ ಪಡೆದಿತ್ತು. 2023-24ನೇ ಆರ್ಥಿಕ ಸಾಲಿಗೆ ಕಾಂಗ್ರೆಸ್‌ ಸರ್ಕಾರವು 85,811.00 ಕೋಟಿ ರು. ಸಾರ್ವಜನಿಕ ಸಾಲ ಪಡೆಯುವುದಾಗಿ ಘೋಷಿಸಿದೆ. 2023ರ ಏಪ್ರಿಲ್‌ನಿಂದ ಡಿಸೆಂಬರ್‍‌ ಅಂತ್ಯಕ್ಕೆ 32,289.99 ಕೋಟಿ ರು. ಸಾಲ ಪಡೆದಿರುವುದು ಆರ್ಥಿಕ ಇಲಾಖೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ರಾಜ್ಯ ಸರ್ಕಾರದ ಸಾಲ ದಿನೇ ದಿನೇ ಏರತೊಡಗಿದೆ. ವಿವಿಧ ಗ್ಯಾರಂಟಿಗಳಿಂದಾಗಿ ಸರ್ಕಾರವು  ಈಗಾಗಲೆ ಹೆಣಗಾಡುತ್ತಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇತ್ತೀಚೆಗೆ ನವದೆಹಲಿಯ ಜಂತರ್‍‌ಮಂತರ್‍‌ನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನೂ ಮಾಡಿತ್ತು.

 

ಸಿದ್ದರಾಮಯ್ಯ ಮುಂದಿರುವ ಅತ್ಯಂತ ದುಬಾರಿ ವೆಚ್ಚ ಎಂದರೆ ಗ್ಯಾರಂಟಿಗಳಿಗೆ 60,000 ಕೋಟಿಯನ್ನು ಹೊಂದಿಸುವುದು. ಇದು ಸಣ್ಣ ಮೊತ್ತವಲ್ಲ. ಇದು ಭಾರಿ ಮೊತ್ತವಾಗಿದ್ದು ಬಜೆಟ್‌ ಮೇಲೆ ಹೆಚ್ಚಿನ ಹೊರೆಯಾಗಿದೆ. ರಾಜ್ಯದ ಮೇಲೆ ಭೀಕರ ಬರ ಬಂದೆರಗಿದೆ. 223 ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿದೆ. ಇದರ ಜೊತೆಗೆ ಎನ್‌ಡಿಆರ್‍‌ಎಫ್‌ ( ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ಮೂಲಕ ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಮಾಡದಿರುವುದು ಚಿಂತೆಗೆ ಕಾರಣವಾಗಿದೆ. ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆ ಸಿದ್ದರಾಮಯ್ಯ ಅವರು  ಈ ಬಜೆಟ್‌ ಮಂಡಿಸಬೇಕಾಗಿದೆ.

ಮೊದಲ ತ್ರೈಮಾಸಿಕದ ಹಣಕಾಸು ಪರಿಸ್ಥಿತಿ;18,952 ಕೋಟಿ ರು. ರಾಜಸ್ವ ಕೊರತೆ, 7,270.69 ಕೋಟಿ ರು. ವ್ಯತ್ಯಾಸ

ಗ್ಯಾರಂಟಿಗಳನ್ನು ಈಗಾಗಲೆ ಘೋಷಿಸಿ ಅನುಷ್ಠಾನಕ್ಕೆ ತಂದಿರುವುದರಿಂದ ಹೊಸದಾಗಿ ಯಾವುದೇ ಜನಪ್ರಿಯ  ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿರುವುದಿಲ್ಲ. ಆದರೂ ಅತ್ಯಂತ ಪ್ರಮುಖವಾಗಿ ನೀರಾವರಿ, ವಿದ್ಯುತ್‌, ಮೂಲಸೌಕರ್ಯದಂತಹ ಪ್ರಮುಖ ಕ್ಷೇತ್ರಗಳನ್ನು ಕಡೆಗಣಿಸುವಂತಿಲ್ಲ. ಇದರಿಂದ ಒಂದು ಕಡೆ ಸಾಲ ಮತ್ತೊಂದು ಕಡೆ ಬಂಡವಾಳ ಕೊರತೆ ಮುಖ್ಯಮಂತ್ರಿಗಳ ನಿದ್ದೆಗೆಡಿಸಿದೆ. ಒಂದು ಕಡೆ ಬೃಹದಾಕಾರವಾಗಿ ಬೆಳೆಯುತ್ತಿರುವ ಸಾಲ, ಮತ್ತೊಂದು ಕಡೆ ಕೇಂದ್ರ ಸರ್ಕಾರದ ಅಸಹಕಾರ ರಾಜ್ಯದ ಬಜೆಟ್‌ಗೆ ಭಾರಿ ಹೊಡೆತ ನೀಡಿದೆ.

ಸಂಪನ್ಮೂಲ ಸಂಗ್ರಹಣೆ ಸರಳವಲ್ಲ, ಮಿತಿಮೀರಿದೆ ಸಾಲ, ಎದೆ ನಡುಗಿಸಿದೆ ಕೊರತೆ ಮೊತ್ತ, ಖಜಾನೆಯಲ್ಲೆಲ್ಲಿದೆ ಹಣ?

ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮುಂದಿರುವ ದಾರಿ ಎಂದರೆ ಆರ್ಥಿಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವುದು. ಇದರ ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸುವುದು. ರಾಜ್ಯದಲ್ಲಿ ಹಣಕಾಸು ಶಿಸ್ತು ಹದಗೆಟ್ಟಿದೆ. ಅಂಕಿಅಂಶಗಳೇ ಇದನ್ನು ನಿರೂಪಿಸುತ್ತಿವೆ.

 

2017-18ರಲ್ಲಿ  ರಾಜಸ್ವ  ಕೊರತೆ ರೂ.4,518 ಕೋಟಿ  ಇದ್ದದ್ದು 2020-21ಕ್ಕೆ ರೂ.19,338 ಕೋಟಿಗೆ ಹೆಚ್ಚಿದೆ. ಅದೇ ರೀತಿ 2021-22ರಲ್ಲಿ 23,666 ಕೋಟಿ ಇದ್ದದು 2023-24ಕ್ಕೆ  12,522 ಕೋಟಿ ರು.ಗೆ ಇಳಿದಿದೆ.  ಇದೇ ರೀತಿ ಪ್ರತಿ ವರ್ಷ ಮಾಡುವ ಸಾಲದ ಪ್ರಮಾಣವೂ ನಿರಂತರವಾಗಿ ಏರಿಕೆ ಕಂಡಿದೆ.

 

ಹೀಗಾಗಿ ಸಿದ್ದರಾಮಯ್ಯನವರ ಮುಂದಿನ ಹಾದಿ ಸುಲಭವಾಗಿಲ್ಲ. ರಾಜ್ಯದ ವಿತ್ತೀಯ ಕೊರತೆಯ ಹಣಕಾಸು ಜವಾಬ್ದಾರಿ ಮತ್ತು ಬಜೆಟ್‌ ನಿರ್ವಹಣೆ (ಎಫ್‌ಆರ್‍‌ಬಿಎಂ) ವ್ಯಾಪ್ತಿಯಲ್ಲೇ ಇದೆ. ಆದರೆ ಕೊರತೆಯ ಮೊತ್ತ ಸಿದ್ದರಾಮಯ್ಯ ಅವರು ನಡುಗುವಂತೆ ಮಾಡಿದೆ.

 

ಹೀಗಾಗಿ ಸಿದ್ದರಾಮಯ್ಯ ಅವರು ಮಂಡಿಸಲು 2024-25ನೇ ಸಾಲಿನ ಬಜೆಟ್‌ ಸವಾಲಿನದಾಗಿದೆ. ಅತಿ ಮುಖ್ಯವಾಗಿ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಣೆ ಮಾಡುವುದಿಲ್ಲ ಮತ್ತು ಬಜೆಟ್‌ ತುಂಬಲು ಹೊಸ ತೆರಿಗೆಗಳನ್ನು ಹಾಕುವ ನಿರೀಕ್ಷೆಗಳಿವೆ ಎನ್ನಲಾಗಿದೆ.

SUPPORT THE FILE

Latest News

Related Posts