ಬೆಂಗಳೂರು; ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಬಟ್ಟೆ ಕೊರತೆ ತೀವ್ರವಾಗಿ ಕಾಡುತ್ತಿದ್ದರೂ ಸಹ ಈ ಸಂಬಂಧ ಕರೆದಿದ್ದ 9 ಕೋಟಿ ರು. ಮೊತ್ತದ ಟೆಂಡರ್‌ನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಬ್ಯಾಂಡೇಜ್ ಬಟ್ಟೆ ಸಕಾಲಕ್ಕೆ ದೊರೆಯದ ಕಾರಣ ಅಪಘಾತ ಸಂದರ್ಭ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಅಡ್ಡಿಯಾಗಿರುವ ಸಂಗತಿಯು ಇದೀಗ ಬಹಿರಂಗವಾಗಿದೆ.
ಔಷಧ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿ ಸಂಬಂಧ ಟೆಂಡರ್ ಪ್ರಕ್ರಿಯೆಗಳಲ್ಲಿಯೇ ಅಕ್ರಮ ನಡೆಸಿದೆ ಎಂಬ ಆರೋಪಗಳಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಗುರಿಯಾಗಿದೆ. ಇದೀಗ ಶಸ್ತ್ರ ಚಿಕಿತ್ಸೆಗಳಿಗೆ ಬಳಸುವ ಬ್ಯಾಂಡೇಜ್ ಬಟ್ಟೆ ಖರೀದಿಗೆ ಕರೆದಿದ್ದ ಟೆಂಡರ್‍ನ್ನು ಇನ್ನೂ ಅಂತಿಮಗೊಳಿಸದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಮೂಲ ಟೆಂಡರ್‍ನಲ್ಲಿ ನಿಗದಿಪಡಿಸಿದ್ದ ಪ್ರಮಾಣಕ್ಕಿಂತಲೂ ಮರು ಟೆಂಡರ್‍ನಲ್ಲಿ ಪರಿಕರಗಳ ಪ್ರಮಾಣ ಹೆಚ್ಚಳ ಮಾಡ ಲಾಗಿದೆ. ಪರಿಕರಗಳ ಮಾದರಿ ಸಲ್ಲಿಸುವ ಷರತ್ತನ್ನು ತೆಗೆದು ಹಾಕಲಾಗಿದೆ. ಬಿಡ್‌ದಾರರ ಬ್ಯಾಂಕ್ ಗ್ಯಾರಂಟಿಯನ್ನೂ ಸಹ ಕಿತ್ತು ಹಾಕಿದೆ. ಟೆಂಡರ್‌ನಲ್ಲಿ ಇರಬೇಕಾಗಿದ್ದ ಈ ಎಲ್ಲಾ ಷರತ್ತುಗಳನ್ನೂ ಏಕಾಏಕೀ ತೆಗೆದುಹಾಕಿರುವುದು ಸಹ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಸದಾಶಿವ ವಟಾರೆ ಅವರು ಈ ಐಟಂಗೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರ ಅನುಮೋದನೆಯಿಲ್ಲದೆ ಟೆಂಡರ್ ಷರತ್ತುಗಳನ್ನು ಹಠಾತ್ತನೆ ಬದಲಾಯಿಸಿದ್ದಾರೆ. ಇದರ ಹಿಂದೆ ಕಮಿಷನ್ ವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೇ ನಿರ್ದಿಷ್ಟ ಬಿಡ್‌ದಾರರ ಲಾಬಿಗೆ ಮಣಿದು ಟೆಂಡರ್ ಪ್ರಮಾಣವನ್ನೂ ಹೆಚ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಬ್ಯಾಂಡೇಜ್ ಬಟ್ಟೆ ಖರೀದಿ ಸಂಬಂಧ ಕರೆದಿರುವ ಟೆಂಡರ್‌ನಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗಿದ್ದರೂ ಸಹ ಸಚಿವ ದಿನೇಶ್ ಗುಂಡೂರಾವ್ ಅವರ ಮೌನ ವಹಿಸಿರುವುದು ಸಹ ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ಟೆಂಡರ್ ಸಂಖ್ಯೆ 1062ರಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಒಟ್ಟು 147 ವಸ್ತುಗಳ ಖರೀದಿಗೆ ಟೆಂಡರ್ ಆಹ್ವಾನಿಸಿತ್ತು. ಇವುಗಳಲ್ಲಿ ಕೆಲವು ಐಟಂಗಳನ್ನು ಅಂತಿಮಗೊಳಿಸಿದೆ. ಬ್ಯಾಂಡೇಜ್ ಕ್ಲಾತ್ ಸೇರಿ ಹಲವು ಐಟಂಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಒಂದೊಮ್ಮೆ ಐಟಂ ಅಂತಿಮಗೊಳ್ಳದಿದ್ದರೇ ಅಂತಹ ಬಾಕಿ ಐಟಂಗಳನ್ನು ಅಂತಿಮಗೊಳಿಸದ ವಸ್ತುಗಳೊಂದಿಗೆ ಮರು ಟೆಂಡರ್ ಆಹ್ವಾನಿಸುತ್ತದೆ.
‘ಅಂತಿಮಗೊಳಿಸದ ಇತರ ವಸ್ತುಗಳನ್ನು ಸಹ ಅದೇ ಟೆಂಡರ್ ನಲ್ಲಿ ಕರೆಯಬೇಕಾಗಿತ್ತು. ಇದರಿಂದ ಟೆಂಡರ್ ಆಹ್ವಾನಿಸುವ ಪ್ರಾಧಿಕಾರದ (ಟಿಐಐ) ಸಮಯವನ್ನು ಉಳಿಸಬಹುದಿತ್ತು ಮತ್ತು ಉಳಿದ ಅಂತಿಮಗೊಳಿಸದ ವಸ್ತುಗಳನ್ನು ಸಹ ಕರೆಯಬಹುದಿತ್ತು. ಅಲ್ಲದೇ ಅಂತಹ ವಸ್ತುಗಳು ರೋಗಿಗಳಿಗೆ ಬೇಗನೇ ಲಭ್ಯವಾಗುತ್ತಿದ್ದವು. ಆದರೆ ನಿಗಮವು ಈ ಪ್ರಕ್ರಿಯೆಯನ್ನು ನಡೆಸದಿರುವುದೇ ಅವ್ಯವಹಾರಗಳು ನಡೆದಿವೆಯೇ ಎಂಬ ಮಾತುಗಳಿಗೆ ಪುಷ್ಠಿ ನೀಡುತ್ತವೆ,’ ಎನ್ನುತ್ತಾರೆ ನಿಗಮದ ಹಿರಿಯ ಅಧಿಕಾರಿಯೊಬ್ಬರು.
ಪ್ರಮಾಣ ಹೆಚ್ಚಳ
ಮೂಲ ಟೆಂಡರ್‍ನಲ್ಲಿ ಬ್ಯಾಂಡೇಜ್ ಬಟ್ಟೆಗೆ ಅಗತ್ಯವಿರುವ ಪ್ರಮಾಣ 173,768 ಯುನಿಟ್ ಗಳಾಗಿತ್ತು. ಮರು ಟೆಂಡರ್ ನಲ್ಲಿ ಪ್ರಮಾಣವನ್ನು 2,31,691 ಯುನಿಟ್ ಎಂದು ಪ್ರಕಟಿಸಿದೆ. ಮೂಲ ಟೆಂಡರ್ ಶೀರ್ಷಿಕೆ ವಾರ್ಷಿಕ ಇಂಡೆಂಟ್ 2022-23ರಡಿಯಲ್ಲಿ ಕರ್ನಾಟಕದಾದ್ಯಂತ ವಿವಿಧ ಆರೋಗ್ಯ ಸಂಸ್ಥೆಗಳು ಶಸ್ತ್ರಚಿಕಿತ್ಸೆಗೆ ಬಳಸುವ ಹೊಲಿಗೆ ಮತ್ತು ಇತರ ಔಷಧಗಳನ್ನು ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಿತ್ತು. ಮರು ಟೆಂಡರ್‍ನಲ್ಲಿಯೂ ವಾರ್ಷಿಕ ಇಂಡೆಂಟ್ 2022-23ರ ಅಡಿಯಲ್ಲಿ ಕರ್ನಾಟಕದಾದ್ಯಂತ ವಿವಿಧ ಆರೋಗ್ಯ ಸಂಸ್ಥೆಗಳಿಗೆ ಬ್ಯಾಂಡೇಜ್ ಬಟ್ಟೆ ಸರಬರಾಜು ಮಾಡಲು ಮರು ಟೆಂಡರ್ ಕರೆದಿದೆ.
ಐಟಂ ಒಂದೇ ಆಗಿದ್ದರೆ ಮತ್ತು ವಾರ್ಷಿಕ ಇಂಡೆಂಟ್ ವರ್ಷ ಒಂದೇ ಆಗಿದ್ದ ಸಂದರ್ಭದಲ್ಲಿ 2022-23 ವಾರ್ಷಿಕ ಇಂಡೆಂಟ್, ಮರು ಟೆಂಡರ್‍ನಲ್ಲಿ ಪ್ರಮಾಣವು ಹೇಗೆ ಬದಲಾಗುತ್ತದೆ ಎಂಬ ಪ್ರಶ್ನೆಯೂ ಎದುರಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಮಣಿದಿರುವುದು ಇದರಿಂದಲೇ ವ್ಯಕ್ತವಾಗುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಮರು ಟೆಂಡರ್ ಸಂದರ್ಭಗಳಲ್ಲಿ ತಾಂತ್ರಿಕ ವಿಶೇಷಣ, ಟೆಂಡರ್ ಷರತ್ತುಗಳು, ಪ್ರಮಾಣ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. ಮೂಲ ಟೆಂಡರ್‍ನಿಂದ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಮೂಲ ಟೆಂಡರ್ ಮತ್ತು ಮರು-ಟೆಂಡರ್ ನ ಪ್ರಮುಖ ಬದಲಾವಣೆಗಳು
ಬ್ಯಾಂಡೇಜ್ ಬಟ್ಟೆ ಖರೀದಿಗೆ ಸಂಬಂಧಿಸಿದಂತೆ ಮೂಲ ಟೆಂಡರ್ 173,768 ಯೂನಿಟ್‌ಗಳಿದ್ದರೇ ಮರು ಟೆಂಡರ್‍ನಲ್ಲಿ 2,31,691 ಯೂನಿಟ್‌ಗಳಿಗೆ ಹೆಚ್ಚಿಗೆಯಾಗಿದ್ದವು. ಅದೇ ರೀತಿ ಮೂಲ ಟೆಂಡರ್‍ಗೆ ಬಿಡ್‌ದಾರರು ಉಲ್ಲೇಖಿಸಿರುವ ವಸ್ತುವಿನ ಮಾದರಿಗಳನ್ನು ಕೆಎಸ್‌ಎಂಎಸ್‌ಸಿಎಲ್ ಕಚೇರಿಗೆ ಸಲ್ಲಿಸಬೇಕು. ಆದರೆ ಮರು ಟೆಂಡರ್ ಕರೆದಿರುವ ನಿಗಮವು ಇಂತಹ ಯಾವುದೇ ಮಾದರಿ ಸಲ್ಲಿಸುವ ಅಗತ್ಯವಿಲ್ಲ. ಬದಲಿಗೆ ಮಾದರಿ ಲೇಬಲ್‌ನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು ಎಂದು ಹೇಳಿದೆ ಎಂದು ಗೊತ್ತಾಗಿದೆ.
ಬಿಡ್‌ದಾರನಿಗೆ ಮಾದರಿಯನ್ನು ಸಹ ತಯಾರಿಸಲು ಸಾಧ್ಯವಾಗದಿದ್ದರೆ, ಬಿಡ್ಡರ್ ಇಷ್ಟು ದೊಡ್ಡ ಪ್ರಮಾಣವನ್ನು ಹೇಗೆ ತಯಾರಿಸುತ್ತಾನೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.
ಟೆಂಡರ್ ಷೆಡ್ಯೂಲ್ ಎಫ್ II ತೆಗೆದು ಹಾಕಿದ್ದೇಕೆ?
ಮೂಲ ಟೆಂಡರ್ 1062ರಲ್ಲಿ ಐಟಂ ಬ್ಯಾಂಡೇಜ್ ಕ್ಲಾತ್ 1×20 ಮೀಟರ್ ಶೆಡ್ಯೂಲ್ ಎಫ್ -2 ಗಾಗಿ ಕರೆಯಲಾಗಿತ್ತು. ಆದರೆ ಮರು ಟೆಂಡರ್‍ನಲ್ಲಿ ಶೆಡ್ಯೂಲ್ ಎಫ್ -2 ಅನ್ನು ತೆಗೆದುಹಾಕಲಾಗಿದೆ. ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಗಳು 1945ರ ಅಡಿಯಲ್ಲಿ ಶೆಡ್ಯೂಲ್ ಎಫ್-2 ಸರ್ಜಿಕಲ್ ಕುರಿತು ಹಲವು ಮಾನದಂಡಗಳಿವೆ.
ಇದರಲ್ಲಿ ಫ್ಲೋರೆನ್ಸ್, ಪ್ಯಾಕಿಂಗ್, ಲೇಬಲಿಂಗ್ ಮತ್ತು ಸಂಗ್ರಹಣೆ, ವಿವರಣೆ, ಪರೀಕ್ಷಾ ಮಾನದಂಡಗಳ ವಿಧಾನಗಳನ್ನು ಉಲ್ಲೇಖಿಸಿದೆ. ಆದರೆ ಶೆಡ್ಯೂಲ್ ಎಫ್ -2 ಅನ್ನು ತೆಗೆದುಹಾಕುವ ಮೂಲಕ, ಔಷಧಗಳು ಮತ್ತು ಸೌಂದರ್ಯವರ್ಧಕ ನಿಯಮಗಳು 1945 ರ ಅಡಿಯಲ್ಲಿ ಶಸ್ತ್ರಚಿಕಿತ್ಸೆಯ ಡ್ರೆಸ್ಸಿಂಗ್ ಮಾನದಂಡಗಳನ್ನು ಅನುಸರಿಸಲಾಗುವುದಿಲ್ಲ.
ಮರು ಟೆಂಡರ್ ಪ್ರಕಾರ ಬ್ಯಾಂಡೇಜ್ ಬಟ್ಟೆಯು ಮೂಲ ಟೆಂಡರ್‍ನಲ್ಲಿ ಕೇಳದ ಐಎಸ್ 883 ಮಾನದಂಡಗಳಿಗೆ ಅನುಗುಣವಾಗಿರಬೇಕು. ಅಲ್ಲದೇ ಇತರೆ ರಾಜ್ಯ ಸರ್ಕಾರಗಳು ಕರೆಯುವ ಟೆಂಡರ್‍ನಲ್ಲಿ ಶೆಡ್ಯೂಲ್ ಎಫ್-2ನ್ನು ಉಲ್ಲೇಖಿಸುತ್ತವೆಯಾದರೂ ಎಲ್ಲಿಯೂ ಐಎಸ್ 883ನ್ನು ಉಲ್ಲೇಖಿಸುವುದಿಲ್ಲ.
ಐಎಸ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಭಾರತೀಯ ಮಾನದಂಡಗಳನ್ನು ಸೂಚಿಸುತ್ತದೆ. ಐಎಸ್ ಸಂಖ್ಯೆಯನ್ನು ಸಾಮಾನ್ಯವಾಗಿ ವರ್ಷದ ನಂತರದ ಪ್ರಮಾಣಿತ ಸಂಖ್ಯೆಯಾಗಿ ಉಲ್ಲೇಖಿಸುತ್ತದೆ.
ಬ್ಯಾಂಕ್ ಗ್ಯಾರಂಟಿ ಕಿತ್ತು ಹಾಕಿದ್ದೇಕೆ?
ಮೂಲ ಟೆಂಡರ್ 1062ರಲ್ಲಿ ಇಂಎಂಡಿಯನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು ಮತ್ತು ಅದನ್ನು ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಪಾವತಿಸಬೇಕಿತ್ತು.
ಆದರೆ ಮರು ಟೆಂಡರ್‍ನಲ್ಲಿ ನಿಗಮವು ಬ್ಯಾಂಕ್ ಗ್ಯಾರಂಟಿ ಆಯ್ಕೆಯನ್ನೇ ಕಿತ್ತು ಹಾಕಿದೆ.
ನಿರೀಕ್ಷಿತ ಬಿಡ್‌ದಾರರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಬ್ಯಾಂಕ್ ಗ್ಯಾರಂಟಿಯನ್ನು ಕಿತ್ತು ಹಾಕಲು ಮೂಲ ಕಾರಣ ಎಂದು ಗೊತ್ತಾಗಿದೆ. ಅಲ್ಲದೇ ಕೆಎಸ್‌ಎಂಎಸ್‌ಸಿಎಲ್‌ನ ಪ್ರಮುಖ ಪೂರೈಕೆದಾರರನ್ನು ಬಿಡ್‌ನಲ್ಲಿ ಪ್ರವೇಶಿಸದಂತೆ ತಡೆಯುವ ತಂತ್ರಗಾರಿಕೆಯೂ ಇದರಲ್ಲಿ ಇದೆ ಎಂದು ಹೇಳಲಾಗುತ್ತಿದೆ.
‘ಬ್ಯಾಂಕ್ ಗ್ಯಾರಂಟಿ ಅಥವಾ ಆನ್‌ಲೈನ್ ಪಾವತಿ ರೂಪದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇಲಾಖೆಯು ಇಎಂಡಿ ಮೇಲೆ ಯಾವುದೇ ಬಡ್ಡಿಯನ್ನೂ ಇಲಾಖೆಯು ಗಳಿಸುವುದಿಲ್ಲ. ಹಾಗಾದರೇ ಬ್ಯಾಂಕ್ ಗ್ಯಾರಂಟಿಯನ್ನು ಕಿತ್ತು ಹಾಕುವ ಉದ್ದೇಶವಾದರೂ ಏನು? ಎಂದು ಪ್ರಶ್ನಿಸುತ್ತಾರೆ ನಿಗಮದ ಮತ್ತೊಬ್ಬ ಹಿರಿಯ ಅಧಿಕಾರಿ.
ಮರು ಟೆಂಡರ್‍ನಲ್ಲಿ ವಿಧಿಸಿರುವ ಇಎಂಡಿ ಷರತ್ತು ಬದಲಾವಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಯುಕ್ತರ ಅನುಮೋದನೆಯನ್ನೇ ಪಡೆದಿಲ್ಲ ಎಂದು ಗೊತ್ತಾಗಿದೆ. ಮರು ಟೆಂಡರ್ ಷರತ್ತುಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲದಿದ್ದರೂ ಸಹ ಬದಲಾಯಿಸಿರುವ ನಿಗಮವು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ನು ನೇರವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮತ್ತೊಂದು ಸಂಗತಿ ಎಂದರೇ ಎಂಎಸ್‌ಎಂಇ ಸಚಿವಾಲಯ ಆದೇಶದ ಪ್ರಕಾರ ಮಿರ್ಕೋ ಮತ್ತು ಸಣ್ಣ ಉದ್ಯಮಗಳಿಂದ 358 ವಸ್ತುಗಳನ್ನು ಪ್ರತ್ಯೇಕವಾಗಿ ಖರೀದಿಸಲು (ಭಾರತ ಸರ್ಕಾರದ ಆದೇಶ ಆದೇಶ ಎಸ್.ಒ. 582 ಮತ್ತು ಅಧಿಸೂಚನೆ ಸಂಖ್ಯೆಯ ಪ್ರಕಾರ. ಎಫ್ಡಿ 130 ಎಕ್ಸ್ಪ್-12/2015 ) ಕಾಯ್ದಿರಿಸಿದೆ. ಅದರಂತೆ ಬ್ಯಾಂಡೇಜ್ ಬಟ್ಟೆಯನ್ನು ರಾಜ್ಯದ ಎಂಎಸ್ಇಗಳಿಂದಲೇ ಖರೀದಿಸಲು ಕಾಯ್ದಿರಿಸಲಾಗಿತ್ತು. ಆದರೆ ಮರು ಟೆಂಡರ್‍ನಲ್ಲಿ ಈ ಮೀಸಲಾತಿಯನ್ನೂ ತೆಗೆದುಹಾಕಿದೆ.
ಮುಕ್ತ ಟೆಂಡರ್ ಏಕೆ ಕರೆದಿಲ್ಲ?
ಕೆಎಸ್‌ಎಂಎಸ್‌ಸಿಎಲ್ ಹಿಂದಿನಿಂದಲೂ ಮುಕ್ತ ಟೆಂಡರ್‍ಗಳನ್ನೇ ಆಹ್ವಾನಿಸುತ್ತಿತ್ತು. ಟೆಂಡರ್‍ನಲ್ಲಿ ಭಾಗವಹಿಸುವ ಪ್ರತಿ ಬಿಡ್‌ದಾರನೂ ಇತರೆ ಬಿಡ್‌ದಾರನ ಟೆಂಡರ್ ದಾಖಲೆಯನ್ನು ವೀಕ್ಷಿಸಲು ಅವಕಾಶವಿತ್ತು. ಈ ಮೂಲಕ ಟೆಂಡರ್ ಮೌಲ್ಯಮಾಪನವೂ ಪಾರದರ್ಶಕವಾಗಿತ್ತು. ಟೆಂಡರ್ ಸಂಖ್ಯೆ 1035ರವರೆಗೆ ಎಲ್ಲವೂ ಮುಕ್ತವಾಗಿಯೇ ಪ್ರಕ್ರಿಯೆಗಳು ನಡೆದಿದ್ದವು.
ಆದರೆ ಚಿದಾನಂದ ಸದಾಶಿವ ವಟಾರೆ ಅವರು ಕೆಎಸ್‌ಎಂಎಸ್‌ಸಿಎಲ್‌ಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ನಂತರ ಮುಕ್ತ ಟೆಂಡರ್‍ಗಳನ್ನು ಮುಚ್ಚಿದ ಟೆಂಡರ್‍ಗಳನ್ನಾಗಿ ಬದಲಾಯಿಸಿದ್ದಾರೆ. ಹೀಗಾಗಿ ನಿಕಟಪೂರ್ವ ಟೆಂಡರ್ ಸೇರಿದಂತೆ ಬಿಡ್‌ದಾರರು ಪರಸ್ಪರ ದಾಖಲೆಗಳನ್ನು ವೀಕ್ಷಿಸಲು ಸಾಧ್ಯವಿಲ್ಲದಂತಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.