ಮೈಷುಗರ್ಸ್‌; ಸರ್ಕಾರ, ಸಚಿವರನ್ನೇ ಕತ್ತಲಲ್ಲಿಟ್ಟು ಪರವಾನಗಿ ನವೀಕರಣ, ನಿಯಮ ಗಾಳಿಗೆ ತೂರಿದ ಆಯುಕ್ತ

ಬೆಂಗಳೂರು;  ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಂಪನಿಗೆ ಕಬ್ಬು ನುರಿಸುವ ಪರವಾನಗಿ ವಿಚಾರದಲ್ಲಿ  ಸರ್ಕಾರ ಮತ್ತು  ಸಚಿವ  ಶಿವಾನಂದ ಪಾಟೀಲ್‌ ಅವರನ್ನೇ   ಕತ್ತಲಲ್ಲಿಟ್ಟು  ನವೀಕರಿಸಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಎಂ ಆರ್‍‌ ರವಿಕುಮಾರ್‍‌ ಅವರು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆಯೇ ನಿಯಮಬಾಹಿರವಾಗಿ ತಮ್ಮ ಹಂತದಲ್ಲಿಯೇ ಅದೂ ಹಂಗಾಮಿಗೂ ಮುನ್ನವೇ ಪರವಾನಗಿ ನವೀಕರಿಸಿದ್ದಾರೆ. ಅಲ್ಲದೇ ಪರವಾನಗಿಗೆ ಮಂಜೂರಾತಿ ನೀಡಬೇಕು ಎಂದು ಸರ್ಕಾರಕ್ಕೆ ಕಡತ ಸಲ್ಲಿಸಿರುವುದು ದಾಖಲೆಗಳಿಂದ ಗೊತ್ತಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಮೈಸೂರು ಸಕ್ಕರೆ ಕಂಪನಿಯನ್ನು ಪುನಶ್ಚೇತನಗೊಳಿಸುವುದರ ಬದಲಿಗೆ ಹೊಸದಾಗಿ ಕಂಪನಿಯನ್ನೇ ಆರಂಭಿಸಬೇಕು ಎಂದು ಮಂಡ್ಯ ಜಿಲ್ಲೆಯ ಹಲವು ಶಾಸಕರು ಸರ್ಕಾರಕ್ಕೆ ಪತ್ರ ಬರೆದಿರುವುದರ  ಬೆನ್ನಲ್ಲೇ ಇದೇ ಕಂಪನಿಗೆ ನಿಯಮಬಾಹಿರವಾಗಿ ಪರವಾನಗಿಯನ್ನು ನವೀಕರಿಸಿರುವ ಪ್ರಕರಣವು ಮುನ್ನಲೆಗೆ ಬಂದಿದೆ.

 

ವಿಶೇಷವೆಂದರೇ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಮೊದಲು ಸಕ್ಕರೆ ಸಚಿವರೊಂದಿಗೆ ಸಮಾಲೋಚನೆ ನಡೆಸಬೇಕು. ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ನವೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಂಜೂರಾತಿಗಾಗಿ ಕಡತ ಸಲ್ಲಿಸಬೇಕು. ಆದರೆ ಈ ಪ್ರಕರಣದಲ್ಲಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಎಂ ಆರ್‍‌ ರವಿಕುಮಾರ್‍‌ ಈ ಯಾವ ಪ್ರಕ್ರಿಯೆಗಳನ್ನು ನಡೆಸಿಲ್ಲ. ನೇರವಾಗಿ ತಮ್ಮ ಹಂತದಲ್ಲಿಯೇ ನಿರ್ಧಾರ ಕೈಗೊಂಡು ಪರವಾನಗಿ ನವೀಕರಿಸಿದ್ದಾರೆ. ಇದು ನಿಯಮಬಾಹಿರವಾದ ಕ್ರಮ ಎಂದು ಗೊತ್ತಾಗಿದೆ.

 

ವ್ಯವಸ್ಥಾಪಕ ನಿರ್ದೇಶಕ ಎಂ ಆರ್‍‌ ರವಿಕುಮಾರ್‍‌ ಅವರು ಮೈಸೂರು ಸಕ್ಕರೆ ಕಂಪನಿಯ 2024-25ನೇ ಸಾಲಿನ ಕಬ್ಬು ನುರಿಸುವ ಪರವಾನಗಿ ನವೀಕರಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಅಲ್ಲದೇ ಅವಧಿಗೂ ಮುನ್ನವೇ ಪರವಾನಗಿ ನವೀಕರಿಸಿ ನಿಯಮ ಮೀರಿ ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಮೈಸೂರು ಸಕ್ಕರೆ ಕಂಪನಿಗೆ 2024-25ನೇ ಹಂಗಾಮಿಗೆ 5000 ಟಿಸಿಡಿ ಸಾಮರ್ಥ್ಯಕ್ಕೆ ಕಬ್ಬು ನುರಿಸಲು 2023ರ ನವೆಂಬರ್‍‌ 4ರಂದು ಪರವಾನಗಿಯನ್ನು ನವೀಕರಿಸಿ ಪತ್ರ ಹೊರಡಿಸಿರುವುದು ಗೊತ್ತಾಗಿದೆ.

 

ಈ ಪರವಾನಗಿಗೆ ಸಂಬಂಧಿಸಿದ ಫಾರಂ ನಂ 2ನ್ನು 2021ನೇ ಸಾಲಿಗೆ ಸಂಬಂಧಿಸಿದ ಸರ್ಕಾರದ ಕಡತ ಸಂಖ್ಯೆ ಸಿಐ 98 ಎಸ್‌ಜಿಎಫ್‌ 2021ನ್ನು ಬಳಸಿಕೊಂಡಿದ್ದಾರೆ. 2021ರ ಫೆ.9ರಂದು ಹೊರಡಿಸಿದಂತೆ ತಾವು ಸಹಿ ಮಾಡಿರುವ ಪತ್ರಗಳ ಪ್ರತಿಗಳನ್ನು ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕ ಎಂ ಆರ್‍‌ ರವಿಕುಮಾರ್‍‌ ಅವರು ಸರ್ಕಾರದ ಮಾಹಿತಿಗಾಗಿ ಹಾಗೂ ದೃಢೀಕರಣಕ್ಕಾಗಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಕರ್ನಾಟಕ ಸಕ್ಕರೆ (ಉತ್ಪಾದನೆ ನಿಯಂತ್ರಣ) ಆದೇಶ 2022ರ ಉಪ ಖಂಡ (14) ಅನ್ವಯ ಪರವಾನಗಿ ನವೀಕರಿಸುವ ಪ್ರಸ್ತಾವನೆಯನ್ನು ಸಕ್ಕರೆ ಕಾರ್ಖಾನೆಗಳು ನಿರ್ದಿಷ್ಟ ದಾಖಲೆಗಳನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಸರ್ಕಾರಕ್ಕೆ ನಿಗದಿ ಅವಧಿಯಲ್ಲಿ ಸಲ್ಲಿಸಬೇಕು. ಈ ಮಾಹಿತಿ, ದಾಖಲೆಗಳನ್ನು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯವು ಪರಿಶೀಲಿಸುವ ಅಧಿಕಾರವಷ್ಟೇ ಹೊಂದಿದೆ.

 

ಈ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಪರವಾನಗಿಯನ್ನು ನೀಡುವ ಅಥವಾ ನವೀಕರಿಸುವ ಸಕ್ಷಮ ಪ್ರಾಧಿಕಾರವು ರಾಜ್ಯ ಸರ್ಕಾರವಾಗಿರುತ್ತದೆ. ಆದರೂ ಕಬ್ಬು ಅಭಿವೃದ್ಧಿ ಆಯುಕ್ತರು ಪರವಾನಗಿಯನ್ನು ನಿಯಮಬಾಹಿರವಾಗಿದೆ ನವೀಕರಿಸಿರುವುದು ಸರ್ಕಾರದ ಮಟ್ಟದಲ್ಲ ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ರಾಜ್ಯ ಸರ್ಕಾರದಲ್ಲಿ ಪ್ರಸ್ತಾವನೆ ಸ್ವೀಕೃತವಾದ ನಂತರ ಇಲಾಖೆಯ ಸಚಿವರ ಅನುಮೋದನೆಯನ್ನು ಪಡೆಯಬೇಕು. ಆ ನಂತರ ಪರವಾನಗಿಯನ್ನು ನೀಡುವುದು, ಪರವಾನಗಿ ನವೀಕರಿಸುವುದು ನಿಯಮಬದ್ಧವಾದ ಕ್ರಮವಾಗಿರುತ್ತದೆ.

 

ಪರವಾನಗಿ ನವೀಕರಿಸಲು ಕರ್ನಾಟಕ ಸಕ್ಕರೆ (ಉತ್ಪಾದನೆಯ ನಿಯಂತ್ರಣ)ಆದೇಶ 2022ರೊಂದಿಗಿನ ಫಾರಂ ನಂ 1ನ್ನು ಭರ್ತಿ ಮಾಡಬೇಕು. ಪರವಾನಗಿ ಶುಲ್ಕ ಹಾಗೂ ಕಾರ್ಖಾನೆಯವರು ಹಿಂದಿನ ಹಂಗಾಮಿನಲ್ಲಿ ನುರಿಸಿರುವ ಪ್ರತಿ ಟನ್‌ ಕಬ್ಬಿಗೆ 1 ರು. ವಂತಿಗೆಯನ್ನು ಎಸ್‌ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಪಾವತಿಸಬೇಕಾಗಿರುತ್ತದೆ. ಹಿಂದಿನ ಸಾಲಿನ ಕಬ್ಬು ಬಿಲ್‌ನ್ನು ಸಂಪೂರ್ಣವಾಗಿ ಪಾವತಿಸಬೇಕಾಗಿರುತ್ತದೆ.

 

ನಿಯಮಗಳಲ್ಲೇನಿದೆ?

 

ಕರ್ನಾಟಕ ಸಕ್ಕರೆ (ಉತ್ಪಾದನೆಯ ನಿಯಂತ್ರಣ )ಆದೇಶ 2022ರ ಉಪಖಂಡ (4)(3)ರ ಪ್ರಕಾರ ಅರ್ಜಿಯನ್ನು ಸ್ವೀಕರಿಸಿದ ಮೇಲೆ ರಾಜ್ಯ ಸರ್ಕಾರವು ಅದು ಅಗತ್ಯವೆಂದು ಭಾವಿಸುವಂತ ವಿಚಾರಣೆ ತರುವಾಯ, ಪರವಾನಗಿಯನ್ನು ಮಂಜೂರು ಮಾಡಬಹುದು.  ಅಥವಾ ಸಂದರ್ಭಾನುಸಾರವಾಗಿ ನವೀಕರಿಸಬಹುದೆಂದು ಮನಗಂಡಲ್ಲಿ ಕಬ್ಬು ಅರೆಯುವ ಹಂಗಾಮಿನ ಆರಂಭಕ್ಕೆ ಮೊದಲು ನಮೂನೆ 2ರಲ್ಲಿ ಪರವಾನಗಿಯನ್ನು ಮಂಜೂರು ಮಾಡಬಹುದು.  ಅಥವಾ ನವೀಕರಿಸಬಹುದು ಮತ್ತು ಹೊರಡಿಸುವ ದಿನಾಂಕವನ್ನು ಅನುಸರಿಸಿ ಹಾಗೂ ರಾಜ್ಯ ಸರ್ಕಾರವು ಕಾಲಕಾಲಕ್ಕೆ ವಿಧಿಸಬಹುದಾದಂತಹ ಷರತ್ತುಗಳಿಗೆ ಒಳಪಟ್ಟು ಪರವಾನಗಿಯು ಆ ವರ್ಷದ ಜೂನ್‌ 30ರವರೆಗೆ ಸಿಂಧುವಾಗಿರತಕ್ಕದ್ದು ಎಂದು ಹೇಳಿದೆ.

 

ಅಲ್ಲದೇ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು, ಕಾರ್ಖಾನೆಯವರು ಸಲ್ಲಿಸಿರುವ ದಾಖಲೆ, ಮಾಹಿತಿಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಪ್ರಾಧಿಕಾರ ಮಾತ್ರವಾಗಿದ್ದಾರೆ. ಈ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಇಲಾಖೆಯ ಸಚಿವರ ಅನುಮೋದನೆಯನ್ನು ಪಡೆದು ಪರವಾನಗಿಯನ್ನು ನೀಡುವ ಅಥವಾ ನವೀಕರಿಸುವ ಸಕ್ಷಮ ಪ್ರಾಧಿಕಾರ ರಾಜ್ಯ ಸರ್ಕಾರವಾಗಿದೆ.

 

ಆದರೂ ‘ಪ್ರಸ್ತುತ 2023-24ನೇ ಸಾಲಿನ ಹಂಗಾಮು 2023ರ ಜುಲೈ 31ರಿಂದ ಪ್ರಾರಂಭವಾಗಿದೆ. ಈ ಹಂಗಾಮು ಮುಕ್ತಾಯಕ್ಕೂ ಮುನ್ನವೇ ಕಬ್ಬು ಅಭಿವೃದ್ಧಿ ಆಯುಕ್ತರು ಮೈಸೂರು ಸಕ್ಕರೆ ಕಂಪನಿಯ 2024-25ನೇ ಸಾಲಿನ ಪರವಾನಗಿಯನ್ನು ನವೀಕರಿಸಿರುತ್ತಾರೆ. ಈ ಪರವಾನಗಿಯನ್ನು ನವೀಕರಿಸಲು ಸರ್ಕಾರದ 2021ನೇ ಸಾಲಿನಕಡತ ಸಂಖ್ಯೆಯನ್ನು ಸರ್ಕಾರದ ಅನುಮತಿ ಪಡೆಯದೇ ಅಥವಾ ಸರ್ಕಾರದ ಗಮನಕ್ಕೂ ಸಲ್ಲಿಸದೇ ನೀಡಿರುವುದು ನಿಯಮಬಾಹಿರವಾಗಿರುತ್ತದೆ,’ ಎಂದು ಸಕ್ಕರೆ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಈ ಹಿನ್ನಲೆಯಲ್ಲಿ ಮೈಸೂರು ಸಕ್ಕರೆ ಕಂಪನಿಯ 2024-25ನೇ ಸಾಲಿನ ಪರವಾನಗಿ ನವೀಕರಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸದೇ ಅವಧಿಗೂ ಮುನ್ನವೇ ನವೀಕರಿಸಿ ಘಟನೋತ್ತರ ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಕಬ್ಬು ಅಭಿವೃದ್ಧಿ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts