ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಬೆಂಗಳೂರು; ಐದು ಗ್ಯಾರಂಟಿಗಳ ಸಮೀಕ್ಷೆಗೆ ಮಾಧ್ಯಮ ಸಂಸ್ಥೆ ಎಂ2ಎಂ ಮೀಡಿಯಾ ನೆಟ್‌ವರ್ಕ್‌ಗೆ  ಕೋಟಿ ರುಪಾಯಿ,  ರಾಜ್ಯ, ಜಿಲ್ಲಾ ಮತ್ತು ವಿಧಾನಸಭಾ ಮಟ್ಟದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನೊಳಗೊಂಡ ಅನುಷ್ಠಾನ ಸಮಿತಿಗೂ  ಕೋಟ್ಯಂತರ ವೆಚ್ಚ ಮಾಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಸಾರ್ವಜನಿಕ ವಲಯದಲ್ಲಿ ಈಗಾಗಲೇ  ಟೀಕೆಗೆ ಗುರಿಯಾಗಿದೆ.

 

ಈ ಎಲ್ಲಾ ಟೀಕೆಗಳಿಗೂ ಕ್ಯಾರೇ ಎನ್ನದ ಕಾಂಗ್ರೆಸ್‌ ಸರ್ಕಾರವು ಇದೀಗ ಇವೇ 5 ಗ್ಯಾರಂಟಿ ಯೋಜನೆಗಳನ್ನು ಮುಂಬೈ ಮೂಲದ ಎಕ್ಸ್‌ ಕೆಡಿಆರ್‌ ಖಾಸಗಿ ಸಂಸ್ಥೆ ಮೂಲಕ ಅಧ್ಯಯನ ನಡೆಸಲು ಹೊರಟಿದೆ. ಇದಕ್ಕಾಗಿ ರಾಜ್ಯ ಬೊಕ್ಕಸದಿಂದ 1.03 ಕೋಟಿ ರು. ಖರ್ಚು ಮಾಡಲಿದೆ.

 

ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ, ಆರ್ಥಿಕ ಹೊಣೆಗಾರಿಕೆ, ಸರ್ಕಾರಿ ಯೋಜನೆಗಳ ಕುರಿತು ಸಂಶೋಧನೆ ನಡೆಸುವ ಕರ್ನಾಟಕ ಸರ್ಕಾರದ್ದೇ ವಿತ್ತೀಯ ಕಾರ್ಯನೀತಿ ಸಂಸ್ಥೆ ಇದ್ದರೂ ಮುಂಬೈ ಮೂಲದ ಖಾಸಗಿ ಸಂಸ್ಥೆ ಎಕ್ಸ್‌ ಕೆಡಿಆರ್‌ ಸಂಸ್ಥೆ ಮೂಲಕ ಅಧ್ಯಯನಕ್ಕೆ 4(ಜಿ) ವಿನಾಯಿತಿ ನೀಡಿದೆ. ಸರ್ಕಾರದ ಈ ನಡೆಯು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ  ರಾಜ್ಯಮಟ್ಟದಲ್ಲಿ ಸಂಪುಟ ದರ್ಜೆ ಸ್ಥಾನಮಾನದ ಒಬ್ಬರು ಅಧ್ಯಕ್ಷರು ಹಾಗೂ ರಾಜ್ಯ ಸಚಿವ ಸ್ಥಾನ ಹೊಂದಿರುವ ಐದು ಜನ ಉಪಾಧ್ಯಕ್ಷರನ್ನು ನೇಮಿಸಿದೆ. ಅಲ್ಲದೇ 31 ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 21 ಮಂದಿ ಸದಸ್ಯರಿಗೆ ಕಚೇರಿ ವ್ಯವಸ್ಥೆ ಹಾಗೂ ಪ್ರತಿ ತಿಂಗಳೂ 50 ಸಾವಿರ,  ವಿಧಾನಸಭಾ ಮಟ್ಟದ ಸಮಿತಿ, ಇದರ ಅಧ್ಯಕ್ಷರಿಗೆ 20-25 ಸಾವಿರ ರು. ಗೌರವ ಧನ ನೀಡಲಿದೆ.  ಸಮಿತಿಗಳ ಸದಸ್ಯರಿಗೆ ಸಭೆ ಹಾಜರಾತಿ ಭತ್ಯೆಯನ್ನು ರಾಜ್ಯ ಸರ್ಕಾರದ ಖಜಾನೆಯಿಂದ ನೀಡಲು ಅಧಿಸೂಚನೆ ಹೊರಡಿಸಿದೆ.

 

ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಮತ್ತು ಅನುಷ್ಠಾನ ಪರಿಶೀಲನೆಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿರುವ ಹೊತ್ತಿನಲ್ಲೇ ಮುಂಬೈ ಮೂಲದ ಎಕ್ಸ್ ಕೆಡಿಆರ್‌ (XKDR) ಸಂಸ್ಥೆ ಮೂಲಕ ಗ್ಯಾರಂಟಿ ಯೋಜನೆಗಳ ಅಧ್ಯಯನಕ್ಕೆ ಒಂದು ವರ್ಷದ ಅವಧಿಗೆ ಕೋಟಿ ರುಪಾಯಿ ವೆಚ್ಚ ಮಾಡಲಿರುವುದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಟೀಕೆಗೆ ಗುರಿಯಾಗಲಿದೆ.

 

ಕರ್ನಾಟಕ ಸರ್ಕಾರವು 2023-24ನೇ ಸಾಲಿನಲ್ಲಿ ಘೋಷಿಸಿರುವ ಐದು ಖಾತರಿ ಯೋಜನೆಗಳಾದ ಗೃಹ ಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ ಮತ್ತು ಯುವ ನಿಧಿ ಯೋಜನೆಗಳ ಕುರಿತು ಅಧ್ಯಯನ ನಡೆಸಲು ಮುಂಬೈ ಮೂಲದ ಎಕ್ಸ್‌ ಕೆಡಿಆರ್‌ ಸಂಸ್ಥೆ ಸೇವೆ ಪಡೆಯಲು 1.03 ಕೋಟಿ ರು. ವೆಚ್ಚದಲ್ಲಿ ಒಂದು ವರ್ಷದ ಅವಧಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಕಲಂ 4(ಜಿ) ಅಡಿಯಲ್ಲಿ ವಿತ್ತೀಯ ಕಾರ್ಯನೀತಿ ಸಂಸ್ಥೆಗೆ ವಿನಾಯಿತಿ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯು 2024ರ ಜನವರಿ 30ರಂದು ಅಧಿಸೂಚನೆ ಹೊರಡಿಸಿದೆ.

 

ಎಕ್ಸ್‌ ಕೆಡಿಆರ್‌ ಸಂಸ್ಥೆಯು 2021ರ ಮಾರ್ಚ್‌ 31ರಲ್ಲಿ ನೋಂದಾಯಿತವಾಗಿದೆ. ಈ ಸಂಸ್ಥೆಯು 5,000,000 ರು ಷೇರು ಬಂಡವಾಳ ಹೊಂದಿದೆ. 5,000,000 ರು ಮೊತ್ತದ ದುಡಿಯುವ ಬಂಡವಾಳ ಹೊಂದಿದೆ. ಈ ಸಂಸ್ಥೆಯು ಸಾಮಾಜಿಕ ಮತ್ತು ಮಾನವಿಕ ವಿಷಯಗಳಲ್ಲಿ ಸಂಶೋಧನೆ ನಡೆಸುತ್ತಿದೆ. ಈ ಸಂಸ್ಥೆಯನ್ನು ಸಂಶೋಧಕ ಅಜಯ್‌ ಶಾ ಮತ್ತು ಸುಸಾನ್‌ ಥಾಮಸ್‌ ಎಂಬುವರು ಮುನ್ನೆಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ವಿಶೇಷವೆಂದರೇ ಇಲಾಖಾವಾರು ಫಲಾನುಭವಿ ಆಧರಿತ ಸರ್ಕಾರಿ ಯೋಜನೆಗಳ ಮೌಲ್ಯಮಾಪನ ನಡೆಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಸ್ಥಾಪಿಸಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವನ್ನು ಬದಿಗೊತ್ತಿ ಮಾಧ್ಯಮ ಸಂಸ್ಥೆ ಮೂಲಕ ಸಮೀಕ್ಷೆ ನಡೆಸುತ್ತಿದೆ.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

ಹಾಗೆಯೇ ‘ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ, ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ, ಯೋಜನಾ ನಿರ್ವಹಣೆ, ಸಾರ್ವಜನಿಕ ವೆಚ್ಚ ನಿರ್ವಹಣೆ, ಯೋಜನೆ, ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ತ್ರ, ದತ್ತಾಂಶ ಕೋಶ ನಿರ್ವಹಣೆ ಮಾಡುವ ಪರಿಣಿತಿ ಹೊಂದಿದೆ. ಅಲ್ಲದೇ ಕುಶಲತೆ, ಅನುಭವಿ ಮತ್ತು ಪರಿಣಿತ ಸಂಶೋಧಕರನ್ನೂ ಒಳಗೊಂಡಿರುವ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಪರಿಗಣಿಸಬೇಕು. ಆದರೆ ನಮ್ಮದೇ ಸಂಸ್ಥೆಯನ್ನು ಬದಿಗೊತ್ತಿ  ಮುಂಬೈ ಮೂಲದ ಖಾಸಗಿ ಸಂಸ್ಥೆ ಮೂಲಕ ಅಧ್ಯಯನ ನಡೆಸುತ್ತಿರುವುದು ಸರಿಯಲ್ಲ,  ಇದು ಮತ್ತಷ್ಟು ಟೀಕೆಗೆ ಗುರಿಯಾಗಲಿದೆ,’ ಎನ್ನುತ್ತಾರೆ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು.

 

ವಿತ್ತೀಯ ಕಾರ್ಯನೀತಿ ಸಂಸ್ಥೆಯು ಬೇಡಿಕೆಗೆ ಅನುಗುಣವಾಗಿ, ಮತ್ತು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸಂಬಂಧಿಸಿದ ಜರೂರಾದ ಮತ್ತು ದೀರ್ಘಕಾಲ ಪ್ರಸ್ತುತವಾದ ವಿಶೇಷ ಸಂಶೋಧನೆ ಮತ್ತು ಅಧ್ಯಯನವನ್ನು ನಡೆಸುತ್ತಿದೆ.

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

ಸರ್ಕಾರದ ಕಾರ್ಯಚರಣೆಗಳಲ್ಲಿ ಉತ್ತಮ ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದ ಅತ್ಯುತ್ತಮ ಆಚರಣೆಗಳನ್ನು ಗ್ರಹಿಸಿ, ದಾಖಲಿಸಿ ಪ್ರಚುರ ಪಡಿಸುತ್ತಿದೆ. ಮತ್ತು ವೆಚ್ಚ ಮಾಡಿದ ಹಣದ ಮೌಲ್ಯವನ್ನು ಖಾತ್ರಿಪಡಿಸಲು ಇಲಾಖೆಗೆ ನೆರವಾಗುತ್ತಿದೆ. ತರಬೇತಿ ಮತ್ತು ಸಂಶೋಧನೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಭೌತಿಕ ಮೂಲಸೌಕರ್ಯಗಳು ಮತ್ತು ನಿರ್ವಹಣಾ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸಿ ನಿರ್ವಹಿಸುತ್ತಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts