ಕೃಷ್ಣದೇವರಾಯ ವಿವಿಯಲ್ಲಿ ಕುಲಪತಿ ಕಾರುಬಾರು; ತಾಳಕ್ಕೆ ಕುಣಿಯದ ರಿಜಿಸ್ಟ್ರಾರ್‌ ಬದಲಿಗೆ ಪತ್ರ

ಬೆಂಗಳೂರು; ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಅನಂತ ಝಂಡೇಕರ್ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ವಿಎಸ್‌ಕೆಯು ಕ್ಯಾಂಪಸ್‌ನ ವಾತಾವರಣ ಹಾಳಾಗುತ್ತಿದೆ ಎಂಬ ಆಪಾದನೆ ವಿವಿ ವಲಯದಲ್ಲಿ ಕೇಳಿಬರುತ್ತಿದೆ.

 

 

ಸಂಡೂರಿನ ನಂದಿಹಳ್ಳಿ ಕ್ಯಾಂಪಸ್‌ನ ಇತಿಹಾಸ ಹಾಗೂ ಪುರಾತತ್ವ ಇಲಾಖೆಯ ಅಧ್ಯಯನ ವಿಭಾಗಕ್ಕೆ ದಿವ್ಯಾ ಎಂಬುವರನ್ನು ಅತಿಥಿ ಉಪನ್ಯಾಕರಾಗಿ ನೇಮಿಸಲು  ಕೆಎಎಸ್ ಅಧಿಕಾರಿಯೂ ಆಗಿರುವ ಆಡಳಿತ ವಿಭಾಗದ ಕುಲಸಚಿವ ಎಸ್.ಎನ್. ರುದ್ರೇಶ್ ಅವರು ಒಪ್ಪಿರಲಿಲ್ಲ.  ಇದರ ಬೆನ್ನಲ್ಲೇ ಕುಲಸಚಿವರನ್ನು  ವರ್ಗಾವಣೆ ಮಾಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶ್ರೀಕರ್ ಎಂ.ಎಸ್. ಅವರಿಗೆ ಫೆ. 3ರಂದು ಝಂಡೇಕರ್ ಅವರು ಬರೆದಿರುವ ಪತ್ರ ಬಹಿರಂಗವಾಗಿದೆ.  ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

‘ದಿವ್ಯಾ ಅವರ ನೇಮಕಾತಿ ಆದೇಶಕ್ಕೆ ಸಹಿ ಹಾಕಲು ಸಾಧ್ಯವಿಲ್ಲ. ನಿಯಮದ ಪ್ರಕಾರ ಅವರನ್ನು ನೇಮಿಸಲು ಬರುವುದಿಲ್ಲ’ ಎಂದು ಕುಲಸಚಿವ ರುದ್ರೇಶ್ ಖಡಾಖಂಡಿತವಾಗಿ ಹೇಳಿದ್ದರು. ಹೀಗಾಗಿ ಅವರ ವರ್ಗಾವಣೆಗೆ ಒತ್ತಡ ಹೇರಿದ್ದಾರೆ ಎಂದು ವಿವಿ ಮೂಲಗಳು ಖಚಿತಪಡಿಸಿವೆ.

 

ಕುಲಪತಿಗಳ ಪತ್ರದಲ್ಲೇನಿದೆ?

 

‘ರುದ್ರೇಶ್ ಜನವರಿ 26 ರಂದು ವಿಶ್ವವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಭಾಗವಹಿಸದೆ 26ರಿಂದ 28ರವರೆಗೆ ರಜೆ ಹಾಕಿ ಹೋಗಿದ್ದಾರೆ. ಆಡಳಿತ ವಿಭಾಗದ ಕಾರ್ಯಭಾರವನ್ನು ಮೌಲ್ಯಮಾಪನ ಕುಲಸಚಿವ ರಮೇಶ್ ಓಲೇಕಾರ ನಿರ್ವಹಿಸಿದ್ದಾರೆ. ಈ ಬಗ್ಗೆ ವಿವರವಾಗಿ ವಿಚಾರಿಸಿದಾಗ ಅವಾಚ್ಯ ಶಬ್ದಗಳನ್ನು (ಬೋಳಿ ಮಗ, ಸೂಳೆ ಮಗ) ಕುಲಪತಿಗಳ ಸಮ್ಮುಖದಲ್ಲಿ ಉಪಯೋಗಿಸಿದ್ದಾರೆ. ವಿಶ್ವವಿದ್ಯಾಲಯದ ಮಾನ, ಮರ‍್ಯಾದೆ ಹಾಗೂ ಘನತೆ ಕಾಯ್ದುಕೊಳ್ಳಲು ಅವರನ್ನು ಶೀಘ್ರವಾಗಿ ವರ್ಗಾವಣೆ ಮಾಡಬೇಕು” ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

 

 

ಇದಕ್ಕೂ ಮೊದಲು ಆಡಳಿತ ವಿಭಾಗದ ಕುಲಸಚಿವ ಎಸ್ ಎನ್‌ ರುದ್ರೇಶ್ ಅವರಿಗೆ ಜನವರಿ 30ರಂದು ಟಿಪ್ಪಣಿ ಬರೆದಿದ್ದ ಪ್ರಭಾರ ಕುಲಪತಿ, ‘2023-24ನೇ ಸಾಲಿನ ಅತಿಥಿ ಉಪನ್ಯಾಸಕರಾಗಿ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗಕ್ಕೆ ವಿರೂಪಾಕ್ಷಪ್ಪ ಎಂ  ಅವರನ್ನು ನೇಮಿಸಲಾಗಿತ್ತು. ಕೊಪ್ಪಳದಲ್ಲಿ ಯಾರೂ ಇಲ್ಲದ ಕಾರಣ ಸದರಿ ಕೇಂದ್ರಕ್ಕೆ ಅವರನ್ನು ವರ್ಗಾಯಿಸಿ, ನಂದಿಹಳ್ಳಿ ಕೇಂದ್ರಕ್ಕೆ ದಿವ್ಯಾ ಅವರನ್ನು ಅತಿಥಿ ಉಪನ್ಯಾಸಕರಾಗಿ ನೇಮಿಸಬೇಕು’ ಎಂದು ಸೂಚಿಸಿದ್ದರು.

 

 

ಕುಲಪತಿಗಳ ಮೌಖಿಕ ಆದೇಶದಂತೆ, ಮೆರಿಟ್ ಹಾಗೂ ಮೌಖಿಕ ಸಂದರ್ಶನದಂತೆ ವಿಭಾಗದ ಮುಖ್ಯಸ್ಥರ ಶಿಫಾರಸಿನ ಮೇರೆಗೆ ಇವರನ್ನು ನೇಮಕ ಮಾಡಿಕೊಂಡು ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗಿದೆ,’ ಎಂದು ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಕ್ಷರೂ ಆಗಿರುವ ಝಂಡೇಕರ್ ಸಹಿ ಹಾಕಿದ್ದಾರೆ.

 

 

‘2023ರ ನವೆಂಬರ್ 25ರಿಂದ ಅನ್ವಯವಾಗುವಂತೆ ಸೂಚಿಸಿದೆ’ ಎಂದೂ ಪತ್ರದಲ್ಲಿ ಒಕ್ಕಣೆ ಹಾಕಿದ್ದಾರೆ. ವಿಶೇಷವೆಂದರೇ  ದಿವ್ಯಾ ಅವರನ್ನು ನೇಮಕ ಮಾಡಿಕೊಳ್ಳುವಂತೆ ಅನಂತ ಝಂಡೇಕರ್ ಆದೇಶಿಸಿರುವುದು ಜನವರಿ 30ರಂದು. ಆದರೆ, ಹಿಂದಿನ ವರ್ಷದ ನವೆಂಬರ್ 25ರಿಂದ ಅನ್ವಯಿಸುವಂತೆ ಸೂಚಿಸಿದ್ದಾರೆ. ದಿವ್ಯಾ,  ಮೌಖಿಕ ಸಂದರ್ಶನ  ಸಮಿತಿ ಮುಂದೆ ಹಾಜರಾಗಿದ್ದರೆ, ಸಂದರ್ಶನ ಯಾವಾಗ ನಡೆಯಿತು, ಎಲ್ಲಿ ನಡೆಯಿತು’ ಎಂಬ ಕುತೂಹಲದ ಪ್ರಶ್ನೆಗಳು ವಿಎಸ್‌ಕೆಯು ಕ್ಯಾಂಪಸ್‌ನಲ್ಲಿ ಕೇಳಿಬರುತ್ತಿದೆ.

 

 

ರುದ್ರೇಶ್ ಅವರನ್ನು ವರ್ಗಾಯಿಸುವಂತೆ ಅನಂತ ಝಂಡೇಕರ್ ಈ ಹಿಂದೆಯೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಯುಜಿಸಿ ಹಾಗೂ ಎಐಸಿಟಿಇ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪೂರೈಸದ (ಸ್ವತಃ ಅವರ ಬಡ್ತಿಯೂ ಸೇರಿ) ಕೆಲವು ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಕೊಡುವ ಪ್ರಸ್ತಾವನೆಗೆ ರುದ್ರೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

 

 

ಆ ಸಮಯದಲ್ಲಿ ಕುಲಪತಿ ಹಾಗೂ ಕುಲಸಚಿವರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆನಂತರ ರುದ್ರೇಶ್ ಅವರನ್ನು ಬದಲಾಯಿಸುವಂತೆ ಪತ್ರ ರವಾನಿಸಿದ್ದರು. ಇದರ ಬೆನ್ನ ಹಿಂದೆಯೇ ಕುಲಪತಿಗಳ ನಡವಳಿಕೆ ಕುರಿತು ರುದ್ರೇಶ್ ಅವರೂ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

 

ಈ ಬೆಳವಣಿಗೆಯ ಬಳಿಕ ಕುಲಾಧಿಪತಿಗಳೂ ಆದ, ರಾಜ್ಯಪಾಲರ ಸಚಿವಾಲಯದಿಂದ ಕುಲಪತಿಗೆ ಸಂದೇಶ ರವಾನಿಸಲಾಯಿತು. ಪೂರ್ಣಾವಧಿಗೆ ಕುಲಪತಿ ನೇಮಕ ಆಗುವವರೆಗೆ ಬಡ್ತಿ, ನೇಮಕಾತಿ ಮತ್ತಿತರ ಪ್ರಮುಖ ವಿಷಯಗಳ ಸಂಬಂಧ ತೀರ್ಮಾನ ಕೈಗೊಳ್ಳದಂತೆ ಖಡಕ್ ಸೂಚನೆ ನೀಡಲಾಗಿತ್ತುಎಂದು ಗೊತ್ತಾಗಿದೆ.

 

 

ಈ ಬೆಳವಣಿಗೆ ನಡುವೆಯೇ ಮೌಲ್ಯಮಾಪನ ಕುಲಸಚಿವ ರಮೇಶ್ ಓಲೇಕಾರ ಅವರನ್ನು ಬದಲಾಯಿಸಿ ಅವರ ಸ್ಥಾನಕ್ಕೆ ಗೌರಿ ಮಾಣಿಕ್‌  ಮಾನಸ ಅವರನ್ನು ನೇಮಿಸುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ  ಕುಲಪತಿ ಇತ್ತೀಚೆಗೆ    ಬರೆದಿದ್ದ ಪತ್ರ ವಿವಾದಕ್ಕೆ ಕಾರಣವಾಗಿತ್ತು.

 

 

‘ವಿಎಸ್‌ಕೆಯು ಪ್ರಭಾರ ಕುಲಪತಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಗಣರಾಜ್ಯೋತ್ಸವದ ದಿನ (ಜ. 26) ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳೀಗೆ ದೂರವಾಣಿಯಲ್ಲಿ ಮಾತನಾಡಿ ದೂರಿದ್ದಾರೆ. ಇಷ್ಟಾದರೂ ಪ್ರಭಾರ ಕುಲಪತಿಗಳಿಗೆ ಲಗಾಮು ಹಾಕಲು ಸಾಧ್ಯವಾಗಿಲ್ಲ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರು.

SUPPORT THE FILE

Latest News

Related Posts