ಬೆಂಗಳೂರು; ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಯೋಜನೆಗೆ ಟೆಂಡರ್ ಆಹ್ವಾನ ಸಮಿತಿಯಲ್ಲಿದ್ದ ಸದಸ್ಯರೇ ಟೆಂಡರ್ ಅಂಗೀಕಾರ ಸಮಿತಿಯಲ್ಲಿಯೂ ಇದ್ದರು ಎಂಬ ಅಂಶ ಇದೀಗ ಬಹಿರಂಗವಾಗಿದೆ.
ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಲು ಆಂತರಿಕ ಸಮಿತಿ ರಚಿಸಿರುವ ಹೊತ್ತಿನಲ್ಲಿಯೇ ಟೆಂಡರ್ ಆಹ್ವಾನಿಸುವ ಸಮಿತಿ ಮತ್ತು ಟೆಂಡರ್ ಅಂಗೀಕಾರ ಸಮಿತಿಗಳ ವಿಶ್ವಾಸಾರ್ಹತೆ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
ಅಂತರಿಕ ತನಿಖೆ ನಡೆಸಲು ಸಮಿತಿ ರಚಿಸಿ ಹೊರಡಿಸಿರುವ ಆದೇಶದ ದಿನದಂದೇ ಟೆಂಡರ್ ಅಂಗೀಕಾರ ಸಮಿತಿಯನ್ನು ಪುನರ್ ರಚಿಸಿ ಆದೇಶ ಹೊರಡಿಸಿದೆ. 2024ರ ಜನವರಿ 19ರಂದು ಈ ಆದೇಶ ಹೊರಬಿದ್ದಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವ ಯೋಜನೆ ರೂಪುರೇಷೆ ಮತ್ತು ಅನುಷ್ಠಾನಗೊಳಿಸುವ ಕಾರ್ಯವಿಧಾನ ಸಿದ್ಧಪಡಿಸಲು 2022ರ ಮೇ 25ರಂದು ಅಧಿಕಾರಿಗಳ ಸಮಿತಿ ರಚಿಸಿತ್ತು.
ಹಾಗೆಯೇ ಹಿಂದಿನ ಸರ್ಕಾರದ ಅವಧಿಯಲ್ಲಿಯೇ 2022ರ ನವೆಂಬರ್ 25ರಂದು ಟೆಂಡರ್ ಆಹ್ವಾನಿಸುವ ಸಮಿತಿ ಮತ್ತು ಟೆಂಡರ್ ಅಂಗೀಕಾರ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿತ್ತು. ಟೆಂಡರ್ ಆಹ್ವಾನಿಸುವ ಸಮಿತಿಗೆ ಹೆಚ್ಚುವರಿ ಸಾರಿಗೆ ಆಯುಕ್ತ (ಆಡಳಿತ) ಅಧ್ಯಕ್ಷರಾಗಿದ್ದರೇ ಮತ್ತೊಬ್ಬ ಹೆಚ್ಚುವರಿ ಸಾರಿಗೆ ಆಯುಕ್ತ (ಪ್ರವರ್ತನ- ದಕ್ಷಿಣ), ಜಂಟಿ ಸಾರಿಗೆ ಆಯುಕ್ತ (ಬೆಂಗಳೂರು ಗ್ರಾಮಾಂತರ),ಕಾನೂನು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿಯ ಮುಖ್ಯ ಸಿಸ್ಟಂ ಮ್ಯಾನೇಜರ್, ಕೆ ಆರ್ ಪುರಂನ ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಾರಿಗೆ ಆಯುಕ್ತರ ಕಚೇರಿಯ ಆರ್ಥಿಕ ಸಲಹೆಗಾರರು ಈ ಸಮಿತಿಯ ಇತರೆ ಸದಸ್ಯರಾಗಿದ್ದರು.
ಟೆಂಡರ್ ಆಹ್ವಾನಿಸುವ ಸಮಿತಿಯ ಜತೆಯಲ್ಲಿಯೇ ಟೆಂಡರ್ ಅಂಗೀಕಾರ ಸಮಿತಿಯೂ ರಚನೆಯಾಗಿತ್ತು. ಈ ಸಮಿತಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಅಧ್ಯಕ್ಷರಾಗಿದ್ದರು. ಹೆಚ್ಚುವರಿ ಸಾರಿಗೆ ಆಯುಕ್ತ (ಪ್ರವರ್ತನ- ದಕ್ಷಿಣ), ಕಾನೂನು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ, ಎಸ್‌ಆರ್‌ಟಿಸಿಯ ಮುಖ್ಯ ಸಿಸ್ಟಂ ಮ್ಯಾನೇಜರ್, ಮತ್ತೊಬ್ಬ ಹೆಚ್ಚುವರಿ ಸಾರಿಗೆ ಆಯುಕ್ತ (ಆಡಳಿತ)ರು ಸದಸ್ಯರಿದ್ದರು.
ಟೆಂಡರ್ ಆಹ್ವಾನಿಸುವ ಸಮಿತಿಯಲ್ಲಿದ್ದ 7 ಮಂದಿ ಸದಸ್ಯರ ಪೈಕಿ ನಾಲ್ವರು ಸದಸ್ಯರನ್ನು ಟೆಂಡರ್ ಅಂಗೀಕಾರ ಸಮಿತಿಗೂ ನೇಮಿಸಲಾಗಿತ್ತು. ಎರಡೂ ಸಮಿತಿಗಳಲ್ಲಿಯೂ ನಾಲ್ವರು ಸದಸ್ಯರೇ ಇದ್ದದ್ದು ಸಮಂಜಸವಾಗಿರಲಿಲ್ಲ. ಆದರೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏಕಕಾಲಕ್ಕೆ ನಾಲ್ವರನ್ನೂ ಎರಡೂ ಸಮಿತಿಗಳಿಗೂ ನೇಮಿಸಿದ್ದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು.
‘ಟೆಂಡರ್ ಆಹ್ವಾನಿಸುವ ಸಮಿತಿಯ ಸದಸ್ಯರುಗಳು ಸಹ ಟೆಂಡರ್ ಅಂಗೀಕಾರ ಸಮಿತಿಯಲ್ಲಿಯೂ ಇರುವುದರಿಂದ ಟೆಂಡರ್ ಅಂಗೀಕಾರ ಕುರಿತು ತೀರ್ಮಾನ ಕೈಗೊಳ್ಳುವುದು ಸಮಂಜಸವಾಗಿರುವುದಿಲ್ಲ,’ ಎಂದು ಸಾರಿಗೆ ಇಲಾಖೆಯ ಆಯುಕ್ತರು 2024ರ ಜನವರಿ 2 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಹೀಗಾಗಿ ಟೆಂಡರ್ ಅಂಗೀಕಾರ ಸಮಿತಿಗೆ ಕೇವಲ ಇಬ್ಬರನ್ನು ಮಾತ್ರ ಸದಸ್ಯರನ್ನಾಗಿ ನೇಮಿಸಿ 2024ರ ಜನವರಿ 19ರಂದು ಆದೇಶ ಹೊರಡಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಐವರು ಸದಸ್ಯರ ಬದಲಿಗೆ ಈಗ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು, ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ಹೆಚ್ಚುವರಿ ಸಾರಿಗೆ ಆಯುಕ್ತರನ್ನು ನೇಮಿಸಿದೆ. ಇದಕ್ಕೆ ಸಾರಿಗೆ ರಸ್ತೆ ಸುರಕ್ಷತೆ ಆಯುಕ್ತರು ಅಧ್ಯಕ್ಷರಾಗಿದ್ದರೇ, ಅಪರ ಸಾರಿಗೆ ಆಯುಕ್ತರು ಸಮಿತಿಯ ಸಂಚಾಲಕರನ್ನಾಗಿ ನೇಮಿಸಿದೆ.
ಈ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ 1,200 ಕೋಟಿ ರು. ಮೊತ್ತದ ಹಗರಣವನ್ನು ‘ದಿ ಫೈಲ್’ ಹೊರೆಗಡುವುತ್ತಿದ್ದಂತೆ ಈ ಕುರಿತು ತನಿಖೆ ನಡೆಸಲು ಮುಂದಾಗಿದೆ.
ಹಗರಣದ ಕುರಿತು ಪ್ರಾಥಮಿಕ ತನಿಖೆ ನಡೆಸದೆಯೇ ಹೊಸದಾಗಿ ಅಲ್ಪಾವಧಿ ಟೆಂಡರ್ ಕರೆಯಲು ಮುಂದಾಗಿದ್ದ ಸಾರಿಗೆ ಇಲಾಖೆಯು ‘ದಿ ಫೈಲ್’ ವರದಿ ಬೆನ್ನಲ್ಲೇ ಸಾರಿಗೆ ಆಯುಕ್ತರ ನೇತೃತ್ವದಲ್ಲಿ ಆಂತರಿಕ ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಲೋಪಗಳಿಗೆ ಕಾರಣರಾಗಿರುವ ಅಧಿಕಾರಿ, ಸಿಬ್ಬಂದಿಯನ್ನು ಗುರುತಿಸಿ ವರದಿ ನೀಡಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರು ಆಯುಕ್ತರಿಗೆ ಸೂಚಿಸಿದ್ದರು.
ಟೆಂಡರ್ ಪ್ರಕ್ರಿಯೆಯಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಟೋರಿಕ್ಷಾ ಚಾಲಕರ ಯೂನಿಯನ್ ಸಂಘಟನೆಯೊಂದು ಪ್ರಾಥಮಿಕ ಸಾಕ್ಷ್ಯದ ಮೂಲಕ ದೂರು ನೀಡಿತ್ತು. ಈ ಕುರಿತು ಪ್ರಾಥಮಿಕ ವಿಚಾರಣೆಯನ್ನು ನಡೆಸಿರಲಿಲ್ಲ. ಟೆಂಡರ್‍ನಲ್ಲಿ ನಡೆದಿದೆ ಎನ್ನಲಾಗಿರುವ ಲೋಪ ಮತ್ತು ಅಕ್ರಮಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರವು ಅನುಮೋದನೆ ನೀಡಿರಲಿಲ್ಲ.
ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿದ ನಂತರ ಗಂಭೀರವಾಗಿ ಪರಿಗಣಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸರ್ಕಾರದ ಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರು ಆಂತರಿಕವಾಗಿ ತನಿಖೆ ನಡೆಸಲು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಹಾಗೆಯೇ ಈ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವೆಸಗಿದೆ ಎಂದು ಹೇಳಲಾಗಿರುವ ಡಿಐಎಂಟಿಎಸ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಚಿಂತಿಸಿದೆ ಎಂದು ತಿಳಿದು ಬಂದಿದೆ.
‘ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವೆಸಗಿದೆ ಎಂದು ವಿವರಿಸಲಾದ ಡಿಐಎಂಟಿಎಸ್ ಸಂಸ್ಥೆಯನ್ನು ಏಕೆ ಕಪ್ಪು ಪಟ್ಟಿಯಲ್ಲಿ ಸೇರಿಸಬಾರದು ಎಂಬ ಬಗ್ಗೆ ಸದರಿ ಸಂಸ್ಥೆಯಿಂದ ವಿವರಣೆ ಪಡೆದು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಈ ಕುರಿತು ಸಾರಿಗೆ ಆಯುಕ್ತರು ಅಂತರಿಕವಾಗಿ ವಿಚಾರಣೆಯನ್ನು ನಡೆಸಿ ಲೋಪಕ್ಕೆ ಕಾರಣವಾದ ಅಧಿಕಾರಿ, ಸಿಬ್ಬಂದಿಯನ್ನು ಗುರುತಿಸಿ ವರದಿ ನೀಡಬೇಕು,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರು ನಿರ್ದೇಶನ ನೀಡಿರುವುದು ಗೊತ್ತಾಗಿದೆ.
ಪ್ಯಾನಿಕ್ ಬಟನ್ ಖರೀದಿ; ದೆಹಲಿ ಬಸ್ ಖರೀದಿ ಅಕ್ರಮದಲ್ಲಿ ತಳಕು ಹಾಕಿಕೊಂಡಿದ್ದ ಕಂಪನಿಯಿಂದಲೇ ಸೇವೆ
ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಸಾಧನ ಅಳವಡಿಕೆ ಸಂಬಂಧ ನಡೆದಿದ್ದ ಟೆಂಡರ್ ಪ್ರಕ್ರಿಯೆ ಮತ್ತು ಟೆಂಡರ್ ಪರಿಶೀಲನಾ ಸಮಿತಿಯ ನಡವಳಿಯನ್ನೂ ಸಚಿವ ರಾಮಲಿಂಗಾರೆಡ್ಡಿ ಮತ್ತು ಕಾರ್ಯದರ್ಶಿ ಎನ್ ವಿ ಪ್ರಸಾದ್ ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಹಲವು ಅಂಶಗಳು ಪತ್ತೆಯಾಗಿದ್ದವು.
ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಮೊದಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅನುಮೋದಿಸಿರಲಿಲ್ಲ. ಬದಲಿಗೆ ಹೊಸದಾಗಿ ಅಲ್ಪಾವಧಿ ಟೆಂಡರ್ ಕರೆಯಲು ಸೂಚಿಸಿದ್ದರು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಪ್ಯಾನಿಕ್ ಬಟನ್ ಟೆಂಡರ್ ಅಕ್ರಮ; ಪ್ರಾಥಮಿಕ ತನಿಖೆ, ಶಿಸ್ತು ಕ್ರಮವಿಲ್ಲದೆಯೇ ಹೊಸ ಟೆಂಡರ್‍ಗೆ ಅನುಮೋದನೆ
ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಸಾಧನಕ್ಕೆ ಜಿಎಸ್‌ಟಿ ಹೊರತುಪಡಿಸಿ 8,000 ರು ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಸಗಟು ಮೂಲಕ ಖರೀದಿಸಿದರೆ ತಲಾ ಉಪಕರಣವು 4,000 ರು ದರದಲ್ಲಿ ಸಿಗಲಿದೆ. ಆದರೂ 8,000 ರು ದರ ನಿಗದಿಯಾಗಿದೆ. ಈ ದರವನ್ನು ಸರ್ಕಾರವು ನಿರ್ಧರಿಸಿಲ್ಲ. ಬದಲಿಗೆ ದೇಶದ ವಿವಿಧ ರಾಜ್ಯಗಳಲ್ಲಿರುವ ಕಂಪನಿಗಳು ನಿಗದಿಪಡಿಸಿ ನೀಡಿದ್ದ ದರವನ್ನೇ ಸರ್ಕಾರವು ಅನುಮೋದಿಸಿತ್ತು. ಎಲ್ಲಿಯೂ ಕಂಪನಿಗಳೊಂದಿಗೆ ದರ ಸಂಧಾನ ನಡೆಸಿರಲಿಲ್ಲ ಎಂಬುದು ಗೊತ್ತಾಗಿದೆ.
ವಿಎಲ್‌ಟಿ, ಪ್ಯಾನಿಕ್ ಬಟನ್ ಅಳವಡಿಕೆ ಹಿಂದಿದೆ 1,200 ಕೋಟಿ ಹಗರಣ!; ರಾಜ್ಯದಲ್ಲೂ ದೆಹಲಿ ಮಾದರಿ ಅಕ್ರಮ?
ಆದರೆ 13 ಕಂಪನಿಗಳು ನಿಗದಿಪಡಿಸಿದ್ದ ದರವನ್ನೇ ಸರ್ಕಾರವು ಅನುಮೋದಿಸಿರುವುದರಿಂದ ರಾಜ್ಯದಲ್ಲಿರುವ ಅಂದಾಜು 30 ಲಕ್ಷ ವಾಹನಗಳ ಮಾಲೀಕರು ಹೆಚ್ಚುವರಿಯಾಗಿ 4,000 ರು. ತೆತ್ತಂತಾಗುತ್ತದೆ. ಇದರಿಂದ ಈ 13 ಕಂಪನಿಗಳಿಗೆ ಹೆಚ್ಚುವರಿಯಾಗಿ ಒಟ್ಟಾರೆಯಾಗಿ 1,200 ಕೋಟಿ ರು. ಆರ್ಥಿಕ ಲಾಭವಾಗಲಿದೆ ಎಂಬ ಆರೋಪವೂ ಕೇಳಿ ಬಂದಿತ್ತು.