ರಸ್ತೆ ನಿಯಂತ್ರಣ, ಅಭಿವೃದ್ಧಿ ಪ್ರಾಧಿಕಾರ ರಚನೆ; ಸಚಿವರ ಅಸಮ್ಮತಿ ಟಿಪ್ಪಣಿ ಬಹಿರಂಗ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಧ್ಯೆ ಒಮ್ಮತವಿರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಅನುಷ್ಟಾನಗೊಳಿಸಲು  ಸತೀಶ್‌ ಜಾರಕಿಹೊಳಿ ಅವರು ಆರಂಭದಲ್ಲೇ  ಅಸಮ್ಮತಿ ವ್ಯಕ್ತಪಡಿಸಿದ್ದರು ಎಂಬುದು ಇದೀಗ ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆಯೇ ನಿಗಮದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಡಾ ಕೆ ಎಸ್‌ ಕೃಷ್ಣಾರೆಡ್ಡಿ ಅವರನ್ನೇ ನೇಮಕ ಮಾಡಿದ್ದು ಇಲಾಖೆಯೊಳಗೇ ಚರ್ಚೆಗೆ ಕಾರಣವಾಗಿತ್ತು. ಇದರ  ಬೆನ್ನಲ್ಲೇ  ನಿಗಮ ರಚಿಸಲು ಸ್ವತಃ ಸತೀಶ್‌ ಜಾರಕಿಹೊಳಿ ಅವರು ಒಪ್ಪಿರಲಿಲ್ಲ ಎಂಬ ವಿಚಾರವು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

ನಿಗಮ ರಚನೆಯನ್ನು ಹಿಂದಿನ ಬಿಜೆಪಿ ಸರ್ಕಾರವು ಕೈಗೊಂಡಿದ್ದರಿಂದಾಗಿ ನಿರ್ಣಯವನ್ನು ಅನುಷ್ಠಾನಗೊಳಿಸುವ ಅವಶ್ಯಕತೆ ಇಲ್ಲ ಎಂದು ಸತೀಶ್‌ ಜಾರಕಿಹೊಳಿ ಅವರು ಟಿಪ್ಪಣಿಯಲ್ಲಿ ದಾಖಲಿಸಿದ್ದರು.

 

‘ಮಂಡಿಸಲಾದ ನಿರ್ಣಯವನ್ನು ಪರಿಶೀಲಿಸಲಾಯಿತು. ಸದರಿ ನಿರ್ಣಯವು ಈ ಹಿಂದಿನ ಸರ್ಕಾರದ ನಿರ್ಣಯವಾಗಿರುತ್ತದೆ. ಈ ಸಂದರ್ಭದಲ್ಲಿ ಈ ನಿರ್ಣಯವನ್ನು ಅನುಷ್ಠಾನಗೊಳಿಸುವ ಅವಶ್ಯಕತೆ ಸದ್ಯಕ್ಕೆ ಕಂಡುಬರುವುದಿಲ್ಲ. ಕಡತವನ್ನು ಮುಕ್ತಾಯಗೊಳಿಸಲು ಅನುಮೋದಿಸಿದೆ,’ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಟಿಪ್ಪಣಿ ಹಾಳೆಯಲ್ಲಿ ಷರಾ ಬರೆದಿದ್ದರು.

 

ಆದರೂ ಅಧಿಕಾರಿಗಳು ಕಡತವನ್ನು ಜುಲೈ 2023ರಲ್ಲಿ ಮರು  ಮಂಡಿಸಿದ್ದರು. ಇದಕ್ಕೆ ಸಚಿವ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿ ಅವರ ಸೂಚನೆಯಂತೆ ಮಂಡಿಸಿದ್ದ ಕಡತಕ್ಕೆ ಸಚಿವರು ಅನುಮೋದಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಸಚಿವ ಸಂಪುಟ ಪ್ರಸ್ತಾವನೆಯಲ್ಲೇನಿತ್ತು?

 

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ರಾಜ್ಯಗಳ ಹೆದ್ದಾರಿ ಅಭಿವೃದ್ಧಿ ಕುರಿತು ಕಾರ್ಯಕ್ಷಮತೆ ಕುರಿತು ಭಾರತದ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ಲೆಕ್ಕ ಪರಿಶೋಧನಾ ವರದಿಯಲ್ಲಿ ಹೇಳಲಾಗಿತ್ತು. ಅದರಂತೆ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯು ನೀಡಿದ್ದ ಅಭಿಪ್ರಾಯ ಆಧರಿಸಿ ಕರ್ನಾಟಕ ರಸ್ತೆ ನಿಯಂತ್ರಣ ಪ್ರಾಧಿಕಾರ ರಚಿಸಲು ಶಿಫಾರಸ್ಸು ಮಾಡಿತ್ತು.  ಲೋಕೋಪಯೋಗಿ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿತ್ತು.

 

ಅಲ್ಲದೇ ವೆಚ್ಚ ನಿಯಂತ್ರಣ ಆಯೋಗವು ಜುಲೈ 2011ರಲ್ಲಿ ನೀಡಿದ್ದ ಸಂಕ್ಷಿಪ್ತ ಶಿಫಾರಸ್ಸನ್ನೂ ಸಹ ಕಡತದಲ್ಲಿ ಉಲ್ಲೇಖಿಸಿತ್ತು. ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರವನ್ನು ಪಿಪಿಪಿ ರಸ್ತೆಗಳ ಅಭಿವೃದ್ಧಿ ನೀತಿ ನಿರೂಪಣೆ ಬಗ್ಗೆ ಸಲಹಾ ಸಂಸ್ಥೆಯನ್ನಾಗಿ ಸೃಜಿಸಲು ನಿರ್ಧರಿಸಿತ್ತು.

 

ಇಲಾಖೆಯ ಸಮರ್ಥನೆಯೇನು?

 

ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ವಲಯಗಳು (ರಾಜ್ಯ ಸರ್ಕಾರದ ಅನುದಾನ) ಕೆಶಿಪ್‌ (ವಿಶ್ವ ಬ್ಯಾಂಕ್‌ ಮತ್ತು ಎಡಿಬಿ ಯೋಜನೆಗಳು) ಕೆಆರ್‌ಡಿಸಿಎಲ್‌ (ವಿಶೇಷ ಉದ್ದೇಶಿತ ವಾಹನ) ಎಸ್‌ಹೆಚ್‌ಡಿಪಿ (ರಾಜ್ಯ ಸರ್ಕಾರದ ಅನುದಾನಿತ ಯೋಜನೆ) ಮತ್ತು ರಸ್ತೆ ಯೋಜನೆ, ಆಸ್ತಿ ನಿರ್ವಹಣೆ, ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿ ಕೈಗೊಳ್ಳುತ್ತಿವೆ. ಆದರೆ ಈ ನಿಗಮ, ವಲಯ, ಘಟಕಗಳು ಸಮರ್ಪಕವಾದ ಮಾಸ್ಟರ್‌ ಪ್ಲಾನ್‌ ಇಲ್ಲದೆಯೇ ಪ್ರತ್ಯೇಕವಾಗಿ ಯೋಜನೆಗಳ ಅನುಷ್ಠಾನ ಕೈಗೊಳ್ಳಲಾಗುತ್ತಿದೆ ಎಂದು ಸಂಪುಟದ ಟಿಪ್ಪಣಿಯಲ್ಲಿ ಹೇಳಲಾಗಿದೆ.

 

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಜಾಲಗಳನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಮಾದರಿಯಡಿ ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ಅವಶ್ಯಕತೆ ಇದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಹೈ ನೆಟ್‌ವರ್ತ್‌ ಪ್ರಾಜೆಕ್ಟ್ಸ್‌ ಅನುಷ್ಠಾನಗೊಳಿಸಲು ಅನುದಾನ ಕೊರತೆ ಇದೆ. ಇದರಿಂದ ಉತ್ತಮ ಕಾರಿಡಾರ್‌ ಮಾದರಿ ರಸ್ತೆ ಅಭಿವೃದ್ಧಿಪಡಿಸಲು ಖಾಸಗಿ ವಲಯದ ಬಂಡವಾಳ ಆಕರ್ಷಿಸಲು ಉತ್ತಮ ನೀತಿ ಬೇಕಿದೆ ಎಂದು ಪ್ರಸ್ತಾವಿಸಿತ್ತು.

 

ಅಲ್ಲದೇ ಕಾಮಗಾರಿಗಳ ಪ್ರಗತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಅಡೆತಡೆಯಿಂದ ಯೋಜನಾ ವೆಚ್ಚದಲ್ಲಿ ಏರಿಕೆಯಾಗುತ್ತಿದೆ. ಈ ತೊಂದರೆಗಳನ್ನು ನಿವಾರಿಸಲು ರಸ್ತೆ ನಿರ್ಮಾಣಗಳನ್ನು ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನ ಹಾಗೂ ಮಾರುಕಟ್ಟೆಯಿಂದ ಖಾಸಗಿ ಬಂಡವಾಳ ಹೂಡಿಕೆ ಆಕರ್ಷಿಸಲು ಸಮರ್ಥವಾದ ಪ್ರಾಧಿಕಾರ ರಚನೆ ಅಗತ್ಯವಾಗಿದೆ ಎಂದು ಇಲಾಖೆಯು ಸಮರ್ಥಿಸಿಕೊಂಡಿತ್ತು.

 

ಪ್ರಾಧಿಕಾರಕ್ಕೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ ಕೆ ಎಸ್‌ ಕೃಷ್ಣಾರೆಡ್ಡಿ ಅವರನ್ನು ನೇಮಕ ಮಾಡಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿರುವ ಬೆನ್ನ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ರಸ್ತೆ ನಿಯಂತ್ರಣ, ಅಭಿವೃದ್ಧಿ ಪ್ರಾಧಿಕಾರಕ್ಕೆ ಕೃಷ್ಣಾರೆಡ್ಡಿ ನೇಮಕದ ಹಿಂದಿತ್ತು, ಸಿಎಂ ಸೂಚನೆ; ಟಿಪ್ಪಣಿ ಬಹಿರಂಗ

ಕರ್ನಾಟಕ ರಾಜ್ಯದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು, ಸಾವು ನೋವುಗಳನ್ನು ನಿಯಂತ್ರಿಸಿ, ಅವುಗಳಿಂದುಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಸುಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು  ಸ್ಥಾಪಿತವಾಗಿದೆ.

 

ಈ ಪ್ರಾಧಿಕಾರವು ರಸ್ತೆ ಸುರಕ್ಷತಾ ಕ್ರಮಗಳನ್ನು ನಿರಂತರವಾಗಿ ವಿವಿಧ ಆಯಾಮಗಳಲ್ಲಿ ಅಂದರೆ ವಾಹನ ಮತ್ತು ರಸ್ತೆ ಇಂಜಿನಿಯರಿಂಗ್‌, ಅಪರಾಧ ಉಲ್ಲಂಘನಾ ಪ್ರಕರಣಗಳ ವಿರುದ್ಧ ಪ್ರವರ್ತನ ಚಟುವಟಿಕೆಗಳು, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮತ್ತು ಶಿಕ್ಷಣ, ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಲಭ್ಯತೆ & ನಿರ್ವಹಣೆ ಇತ್ಯಾದಿ ಆಯಾಮಗಳಲ್ಲಿ ವೈಜ್ಞಾನಿಕ ತಳಹದಿಯಲ್ಲಿ ವ್ಯವಸ್ಥಿತ ರೂಪದಲ್ಲಿ ಅನುಷ್ಠಾನಗೊಳಿಸುತ್ತದೆ.

 

ಪೊಲೀಸ್‌, ಸಾರಿಗೆ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಪಂಚಾಯತ್‌ ರಾಜ್‌, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಪಾಲುದಾರಿಕೆ ಇಲಾಖೆಗಳೊಂದಿಗೆ ನಿರಂತರವಾಗಿ ಸಮನ್ವಯವನ್ನು ಸಾಧಿಸಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ದೇಶದ ಹಾಗೂ ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಸುಭದ್ರತೆಯನ್ನು ಕಾಪಾಡುವ ಗುರುತರ ಜವಾಬ್ದಾರಿಯನ್ನು ಈ ಪ್ರಾಧಿಕಾರವು ಹೊಂದಿದೆ ಎಂದು ಹೇಳಲಾಗಿದೆ.

SUPPORT THE FILE

Latest News

Related Posts