ಬೆಂಗಳೂರು; ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಪರಿಹಾರ ವಿತರಿಸಲು ಅನುದಾನ ಕೊರತೆಯಾಗಿದೆ ಎಂಬ ಸಂಗತಿಯನ್ನು ‘ದಿ ಫೈಲ್’ ಬಹಿರಂಗಪಡಿಸುತ್ತಿದ್ದಂತೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ‘ದಿ ಫೈಲ್’ ವರದಿಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಬೆಲ್ಲದ್ ಅವರು ಮೃತ ಕುಕಟುಂಬಕ್ಕೆ ಪರಿಹಾರ ಕೊಡಲು ಈ ನರಸತ್ತ ಸರ್ಕಾರದಲ್ಲಿ ಹಣವಿಲ್ಲ, ಅವೈಜ್ಞಾನಿಕ ಗ್ಯಾರಂಟಿಗಳ ಹೆಸರಲ್ಲಿ ಲೂಟಿ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ ಸರ್ಕಾರವು ರಾಜೀವ್ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಸಾಮಾನ್ಯ ಜನರೆಂದರೇ ತಾತ್ಸಾರ, ದಾಷ್ಟ್ಯತನ ತೋರುತ್ತಿದೆ. ಜನರು ದಂಗೆ ಏಳುವ ದಿನ ದೂರವಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಅವಾಸ್ತವಿಕ ಗ್ಯಾರಂಟಿಗಳ ನೆಪದಲ್ಲಿ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ. ಕೋವಿಡ್‌ನಿಂದ ಮೃತ ಪಟ್ಟ ಕುಟುಂಬಕ್ಕೆ ಪರಿಹಾರ ನೀಡಲೂ ಈ ಸರ್ಕಾರದ ಬಳಿ ಹಣವಿಲ್ಲ. 850 ಕೋವಿಡ್ ಪ್ರಕರಣಗಳು ಇನ್ನೂ ಅನುದಾನಕ್ಕಾಗಿ ಕಾಯುತ್ತಿವೆ. ಸತ್ತರ ಜತೆ ಬದುಕಿರುವ ಕುಟುಂಬವನ್ನೂ ಸಾಯಿಸಲು ಹೊರಟಿರುವ ನಿಮಗೆ ನೊಂದವರ ಶಾಪ ತಟ್ಟದೇ ಬಿಡುತ್ತೇ ಎಂದು ಕಟಕಿಯಾಡಿದ್ದಾರೆ.
ಸರ್ಕಾರಕ್ಕೆ ಜನಜೀವನದ ಮೇಲೆ ಕಾಳಜಿ ಇಲ್ಲ. ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್‌ನಿಂದ ಅನೇಕರು ಸಾಯುತ್ತಿದ್ದಾರೆ. ಇದ್ಯಾವುದಕ್ಕೂ ಸ್ಪಂದಿಸದೇ ಕಾಂಗ್ರೆಸ್ ಮರಣ ಶಾಸನ ಬರೆಯುತ್ತಿದೆ ಎಂದು ಟೀಕಿಸಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಪರಿಹಾರ ವಿತರಿಸಲು ಅನುದಾನ ಕೊರತೆಯಾಗಿದೆ. ಜನವರಿ ಮೊದಲನೇ ವಾರದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠಗಳು ಆದೇಶ ಹೊರಡಿಸಿವೆ. ಆದರೆ 850 ಪ್ರಕರಣಗಳಲ್ಲಿ ಪರಿಹಾರ ವಿತರಿಸಲು ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲ. ನಿಗದಿತ ಅವಧಿಯಲ್ಲಿ ಪರಿಹಾರ ವಿತರಿಸಲು ಸಾಧ್ಯವಾಗದೇ ಹೋದಲ್ಲಿ ನ್ಯಾಯಾಂಗ ನಿಂದನೆ ಭೀತಿಯನ್ನು ಎದುರಿಸುವಂತಾಗಿತ್ತು.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ 50,000 ರು. ಪರಿಹಾರ ನೀಡಲೂ ರಾಜ್ಯ ಸರ್ಕಾರದ ಬಳಿ ಅನುದಾನ ಲಭ್ಯವಿಲ್ಲ. ಅನುದಾನ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಸರ್ಕಾರಕ್ಕೆ 2024ರ ಜನವರಿ 24ರಂದು ಪತ್ರ ಬರೆದಿತ್ತು. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆಗಿರುವ ಪಟ್ಟಿಗಳನ್ನು ನಿರ್ದೇಶನಾಲಯಕ್ಕೆ ಕಳಿಸಿದ್ದಾರೆ. ಆದರೆ ಪರಿಹಾರ ವಿತರಿಸಲು ಅನುದಾನ ಲಭ್ಯವಿಲ್ಲದ ಕಾರಣ ನಿರ್ದೇಶನಾಲಯವು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿತ್ತು.
2023-24ನೇ ಸಾಲಿನಲ್ಲಿ (ಲೆಕ್ಕ ಶೀರ್ಷಿಕೆ; 2235-60-001-0-01-100)10 ಕೋಟಿ ರು ಅನುದಾನ ಒದಗಿಸಿತ್ತು. ಕೋವಿಡ್‌ನಿಂದ ಮೃತ ಪಟ್ಟ ಎಲ್ಲಾ ಪ್ರಕರಣಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ 50,000 ರು. ಪರಿಹಾರ ಪಾವತಿಸಲು ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ ಅನುದಾನ ಭರಿಸಲು ತಿಳಿಸಿತ್ತು. ಅದರಂತೆ ನಿರ್ದೇಶನಾಲಯವು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.
ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ತಲಾ 50 ಸಾವಿರ ರು.ನಂತೆ ಬಾಕಿ ಪ್ರಕರಣಗಳಲ್ಲಿ ಪರಿಹಾರ ಪಾವತಿಸಲು 10.61 ಕೋಟಿ ರು. ರಾಜ್ಯ ವಿಪತ್ತ ಪರಿಹಾರ ನಿಧಿ (ಲೆಕ್ಕ ಶೀರ್ಷಿಕೆ; 2245-80-102-0-01-059) ಅಡಿ ಲಭ್ಯವಿರು ಅನುದಾನದಿಂದ ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆಯು ( ಟಿಪ್ಪಣಿ ಸಂಖ್ಯೆ; ಆಇ 565 ವೆಚ್ಚ/7/ ದಿನಾಂಕ 04.07.2023) ಸೂಚಿಸಿತ್ತು. ಆದರೆ ಈ ಹಣವು ಇನ್ನೂ ಬಿಡುಗಡೆಯಾಗಿಲ್ಲ. ಈ ಕುರಿತು ‘ದಿ ಫೈಲ್’ 2024ರ ಜನವರಿ 30ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕೋವಿಡ್ ಸಾವು; ವಾರಸುದಾರರಿಗೆ ತಲಾ 50 ಸಾವಿರ ಪರಿಹಾರ ವಿತರಣೆಗೂ ಅನುದಾನವಿಲ್ಲ, ಪತ್ರ ಬಹಿರಂಗ
‘ಪ್ರಸ್ತುತ ಕೋವಿಡ್ ಪರಿಹಾರ ಅಂಕಿ ಅಂಶಗಳಂತೆ 850 ಪ್ರಕರಣಗಳಲ್ಲಿ ಏಪ್ರಿಲ್ 2023ರ ನಂತರ ಎಪಿಸಿಐ ಮ್ಯಾಪಿಂಗ್ ಆಗಿದ್ದು ಅನುದಾನ ಲಭ್ಯವಿಲ್ಲದೇ ಪರಿಹಾರ ಪಾವತಿಗೆ ಬಾಕಿ ಇದೆ. ಇಂತಹ ಪ್ರಕರಣಗಳಲ್ಲಿ ಅರ್ಜಿದಾರರು ಪರಿಹಾರ ಪಾವತಿ ಕೋರಿ ಪದೇಪದೇ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಅಧಿಕಾರಿಗಳೂ ಸಹ ನಿರ್ದೇಶನಾಲಯಕ್ಕೆ ಭೇಟಿ ನೀಡಿ ಪರಿಹಾರ ಪಾವತಿಗಾಗಿ ಕೋರುತ್ತಿರುತ್ತಾರೆ. ಹಾಗೂ ಈ ಕುರಿತು ತಾಲೂಕು ಮತ್ತು ಜಿಲ್ಲಾಧಿಕಾರಿಗಳಿಂದ ಸಹ ಪತ್ರಗಳು ಸ್ವೀಕೃತವಾಗಿರುತ್ತವೆ,’ ಎಂದು ನಿರ್ದೇಶನಾಲಯವು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದನ್ನು ಸ್ಮರಿಸಬಹುದು.