ಕೊಡೆಗಳ ಮೇಲೆ ‘ಪಂಚ ಗ್ಯಾರಂಟಿ’ ಜಾಹೀರಾತು; ಜಾಲತಾಣ, ಪತ್ರಿಕೆಗಳಿಗೆ ವೆಚ್ಚ ಬೇಡವೆಂದ ಸಿಎಸ್‌ಡಿ

ಬೆಂಗಳೂರು; ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ಮತ್ತು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

 

ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ಸಮಿತಿ ವಿಭಾಗದ ಅಧ್ಯಕ್ಷ ಡಾ ಸಿ ಎಸ್‌ ದ್ವಾರಕಾನಾಥ್‌ ಅವರು ಗ್ಯಾರಂಟಿ ಯೋಜನೆಗಳ ಕುರಿತಾದ ಜಾಹೀರಾತನ್ನು ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳ ಜಾಹೀರಾತು ನೀಡುವ ಬದಲಿಗೆ ಗ್ಯಾರಂಟಿ ಯೋಜನೆಗಳ ಕುರಿತಾದ ಜಾಹೀರಾತನ್ನು ಕೊಡೆಗಳಲ್ಲಿ ಮುದ್ರಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ವಿತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

 

ವಿಳಾಸವೇ ಇಲ್ಲದ ದ ಪಾಲಿಸಿ ಫ್ರಂಟ್‌ ತಿಂಗಳಿಗೆ 60 ಲಕ್ಷ ರು. ನೀಡಿ ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನೀಡುತ್ತಿರುವುದು ಮತ್ತು ಇವೇ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಹೆಸರಿನಲ್ಲಿ ಎಂ2ಎಂ ಮೀಡಿಯಾ ನೆಟ್‌ವರ್ಕ್‌ಗೆ ಕೋಟಿ ರು. ನೀಡಿರುವುದು ಟೀಕೆಗೆ ಗುರಿಯಾಗಿದೆ.

 

ಇದರ ಬೆನ್ನಲ್ಲೇ ಕೆಪಿಸಿಸಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಡಾ ಸಿ ಎಸ್‌ ದ್ವಾರಕಾನಾಥ್‌ ಅವರು ಮುಖ್ಯಮಂತ್ರಿಗೆ ನೀಡಿರುವ ಸಲಹೆಯು ಮುನ್ನೆಲೆಗೆ ಬಂದಿದೆ. ಈ ಕುರಿತು 2024ರ ಜನವರಿ 16ರಂದು ದ್ವಾರಕನಾಥ್‌ ಅವರು ಮುಖ್ಯಮಂತ್ರಿಗೆ ಪತ್ರವೊಂದನ್ನು ಬರೆದಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವ ನಿಧಿ ಯೋಜನೆ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಈ ಕಾರ್ಯಕ್ರಮಗಳು ಈಗಾಗಲೇ ಜನಜನಿತವಾಗಿವೆ.

 

ಇದರ ಕುರಿತು ದಿನನಿತ್ಯ ಕನ್ನಡ, ಇಂಗ್ಲೀಷ್‌ ಪತ್ರಿಕೆಗಳಿಗೆ ಕೋಟ್ಯಂತರ ರುಪಾಯಿ ಮೊತ್ತದಲ್ಲಿ ವರ್ಣಮಯವಾದ ಪೂರ್ಣ ಪುಟದ ಜಾಹೀರಾತುಗಳನ್ನು ನೀಡುತ್ತಿದ್ದೀರಿ. ಇದರೊಂದಿಗೆ ಸರ್ಕಾರದ ಕಾರ್ಯಕ್ರಮಗಳಿಗೆ ಪ್ರಚಾರ ನೀಡಲು ಸಾಮಾಜಿಕ ಜಾಲತಾಣವೂ ಸೇರಿದಂತೆ ಅನೇಕ ಮಾಧ್ಯಮಗಳಿಗೆ ಕೋಟ್ಯಂತರ ರುಪಾಯಿ ಸರ್ಕಾರದ ಹಣ ಬಳಕೆಯಾಗುತ್ತಿದೆ.

 

ಈ ರಾಜ್ಯದ ನಗರ, ಪಟ್ಟಣ, ಮಹಾನಗರಗಳಲ್ಲಿ ದಿನನಿತ್ಯ ಬೀದಿ ಬದಿ ಪುಟ್‌ಪಾತ್‌ಗಳಲ್ಲಿ ತರಕಾರಿ, ಸೊಪ್ಪು, ಹಣ್ಣು, ಹೂವು ಮುಂತಾದ ದಿನೋಪಯೋಗಿ ವಸ್ತುಗಳನ್ನು ಮಾರುವರು ಸಹಜವಾಗಿ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರೇ ಮುಂತಾದ ತಳಸಮದಾಯಗಳಿಗೆ ಸೇರಿದವರು. ಇವರು ಸದಾ ರಣ ಬಿಸಿಲು, ಗಾಳಿ, ಚಳಿ, ಭೀಕರ ಮಳೆಯಲ್ಲಿ ನಿಂತು ತಮ್ಮ ಕಾಯಕ ಮಾಡುತ್ತಿರುವವರನ್ನು ತಾವು ಗಮನಿಸಿರುತ್ತೀರಿ.

 

ಈ ಸಣ್ಣ ಮತ್ತು ಬಡ ವ್ಯಾಪಾರಿ ಸಮುದಾಯದವರಿಗೆ ತಲೆಯ ಮೇಲೆ ಒಂದು ಸೂರಿನ ತುರ್ತು ಅವಶ್ಯಕತೆ ಇದೆ. ಇವರಿಗೊಂದು ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಕೊಡೆ ಕೊಟ್ಟರೇ ತಮ್ಮನ್ನು ತಾವು ಬಿಸಿಲು, ಮಳೆ, ಗಾಳಿ ಚಳಿಗಳಿಂದ ರಕ್ಷಿಸಿಕೊಳ್ಳುತ್ತಾ ತಮ್ಮ ಸಣ್ಣ ವ್ಯಾಪಾರ ವಹಿವಾಟು ನಡೆಸುತ್ಥಾ ಜೀವ ಸವೆಸಬಲ್ಲರು. ಅಂತೆಯೇ ನೀವು ನೀಡುವ ಕೊಡೆಯನ್ನು ಜೋಪಾನವಾಗಿ ಇಟ್ಟುಕೊಳ್ಳಬಲ್ಲರು ಎಂದು ಪತ್ರದಲ್ಲಿ ಹೇಳಿದ್ದಾರೆ.

 

ಇದೀಗ ತಾವು ತಮ್ಮ ಪಂಚ ಗ್ಯಾರಂಟಿಗಳ ಬಗ್ಗೆ ದಿನನಿತ್ಯದ ಪೂರ್ಣಪುಟದ ಜಾಹೀರಾತುನ್ನು ಪತ್ರಿಕೆಗಳಿಗೆ ಮತ್ತು ಸಾಮಾಜಿಕ ಜಾಲತಾಣವೇ ಮುಂತಾದ ಮಾಧ್ಯಮಗಳಿಗೆ ನೀಡುವ ಬದಲು ಅದೇ ಜಾಹೀರಾತನ್ನು ಉತ್ತಮ ಗುಣಮಟ್ಟದ ದೊಡ್ಡ ಕೊಡೆಗಳ ಮೇಲೆ ಮುದ್ರಿಸಿ ಬೀದಿ ಬದಿಯ ಈ ವ್ಯಾಪಾರಿಗಳಿಗೆ ಹಂಚಿದರೆ ಅವರಿಗೆ ಸೂರು ಆಗುತ್ತದೆ.

 

ನಿಮ್ಮ ಸಕಾfರದ ಅಭಿವೃದ್ಧಿ ಕಾರ್ಯಕ್ರಮಗಳ ಜಾಹೀರಾತು ಬೀದಿಬದಿಯಲ್ಲಿ ನಳನಳಿಸುತ್ತಿರುತ್ತೆ. ಅಂತೆಯೇ ಬೀದಿಬದಿ ವ್ಯಾಪಾರಿಗಳು ಮಳೆ, ಗಾಳಿ, ಚಳಿ, ಬಿಸಿಲುಗಳಿಂದ ರಕ್ಷಣೆ ನೀಡುವ ಅಮೂಲ್ಯ ಕೊಡೆಯನ್ನು ಭದ್ರವಾಗಿ ಕಾಪಾಡಿಕೊಂಡು ದಿನನಿತ್ಯ ಬಳಸುತ್ತಾರೆ ಎಂದು ಗಮನ ಸೆಳೆದಿದ್ದಾರೆ.

 

ಆದ್ದರಿಂದ ನಿಮ್ಮ ಪಂಚ ಗ್ಯಾರಂಟಿಗಳನ್ನು ಕೊಡೆಗಳ ಮೇಲೆ ವರ್ಣರಂಜಿತವಾಗಿ ಮುದ್ರಿಸಿ ಬೀದಿ ಬದಿಯ ವ್ಯಾಪಾರಿಗಳಿಗೆ ಹಂಚಿದರೆ ನಿಮ್ಮ ಜಾಹೀರಾತಿನ ಉದ್ದೇಶವೂ ಈಡೇರುತ್ತೆ. ಕೊಡೆ ಪಡೆದ ಬಡ ವ್ಯಾಪಾರಸ್ಥರು ನಿಮ್ಮ ಪಕ್ಷ ಮತ್ತು ಸಕಾfರದ ಬಗ್ಗೆ ಪ್ರೀತಿಯನ್ನೂ ಹೊಂದಿರುತ್ತಾರೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳಿಗೆ ಉತ್ತಮ ಗುಣಮಟ್ಟದ ಪಂಚ ಗ್ಯಾರಂಟಿಗಳ ಕೊಡೆಗಳನ್ನು ಸರ್ಕಾರದಿಂದಲೇ ಹಂಚಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

the fil favicon

SUPPORT THE FILE

Latest News

Related Posts