ಬೆಂಗಳೂರು; ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕಳಪೆ ಕಂಪ್ಯೂಟರ್, ಝೆರಾಕ್ಸ್, ಸಿ ಸಿ ಕ್ಯಾಮರಾ ಸೇರಿದಂತೆ ವಿದ್ಯುನ್ಮಾನಕ್ಕೆ ಸಂಬಂಧಿಸಿದ ಹಲವು ಉಪಕರಣಗಳಲ್ಲಿನ ಅಕ್ರಮ ಪ್ರಕರಣವನ್ನು ‘ದಿ ಫೈಲ್’ ಹೊರಗೆಡುವುತ್ತಿದ್ದಂತೆ ಇದೀಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಳ ಹಂತದ ಅಧಿಕಾರಿಗಳಿಗೆ ಆರೋಪ ಪಟ್ಟಿ ಜಾರಿ ಮಾಡಿದೆ.
ಕಳಪೆ ಕಂಪ್ಯೂಟರ್‌ಗಳನ್ನು ಖರೀದಿಸಿರುವ ಸಂಬಂಧ ಇಡೀ ರಾಜ್ಯಾದ್ಯಂತ ಸಮಗ್ರ ತನಿಖೆ ನಡೆಸಿ ವರದಿ ಪಡೆಯಬೇಕು ಎಂದು ಕರ್ನಾಟಕ ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು ಸಲ್ಲಿಸಿದ್ದ ವರದಿಯನ್ನೇ ಗ್ರಂಥಾಲಯ ಇಲಾಖೆಯ ಹಾಲಿ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಅವರು ಬದಿಗೆ ಸರಿಸಲು ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು.
ಈ ನಡುವೆಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಜಾರಿಗೊಳಿಸಿರುವ ಆರೋಪಗಳ ವಿವರಣಾ ಪಟ್ಟಿಯು ಮುನ್ನೆಲೆಗೆ ಬಂದಿದೆ.
ಬೆಂಗಳೂರು ನಗರ ಕೇಂದ್ರ ಉತ್ತರ ವಲಯದ ಗ್ರಂಥಾಲಯ ಉಪನಿರ್ದೇಶಕ ಕಚೇರಿಯಲ್ಲಿರುವ ವಿ ರಾಘವೇಂದ್ರ ಎಂಬುವರಿಗೆ ಆರೋಪಗಳ ವಿವರಣಾ ಪಟ್ಟಿ ಜಾರಿಯಾಗಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಆರೋಪಗಳ ವಿವರಣಾ ಪಟ್ಟಿಯಲ್ಲೇನಿದೆ?
ಅಕ್ನಾ ಟೆಕ್ನಾಲಜೀಸ್ ಕಂಪನಿಯಿಂದ ಜೆರಾಕ್ಸ್, ಯುಪಿಎಸ್, ಕಂಪ್ಯೂಟರ್, ಸರ್ವರ್, ಸ್ಕ್ಯಾನರ್, ಪ್ರಿಂಟರ್, ಬಯೋ ಮೆಟ್ರಿಕ್, ಸಿಸಿಟಿವಿ, ಕ್ಯಾಮರಾ ಮತ್ತಿತರೆ ಎಲೆಕ್ಟ್ರಾನಿಕ್ ಸಾಮಾಗ್ರಿಗಳ ಖರೀದಿ ಸಂಬಂಧ ಕೆಟಿಪಿಪಿ ನಿಯಮಗಳನ್ನು ಪಾಲಿಸಿಲ್ಲ. ಪರಿಶೀಲನೆಗೆ ಸಮಿತಿ ನೀಡಿದ್ದ ವರದಿ ನಂತರವೂ ಖರೀದಿ ಬಗ್ಗೆ ಕ್ರಮವಹಿಸಲು ಸೂಚಿಸಿದ್ದರೂ ಕ್ರಮವಹಿಸಿಲ್ಲ.
ಖರೀದಿ ಪೂರ್ವದಲ್ಲಿ ಪರಿಶೀಲನೆಗಾಗಿ ಪ್ರಸ್ತಾವನೆ ಕಳಿಸಬೇಕಿದ್ದರೂ ಆ ಕ್ರಮವನ್ನೂ ಅನುಸರಿಸಿಲ್ಲ. ಡಿಜಿಎಸ್ ಮತ್ತು ಡಿ ಮತ್ತು ಜೆಮ್ ದರ ಒಪ್ಪಂದದ ಸಂಸ್ಥೆಯೊಂದಿಗೆ ವ್ಯವಹರಿಸಿಲ್ಲ. ಆಥರೈಸೇಷನ್ ನೀಡಿರುವ ಬಗ್ಗೆ ನೈಜತೆ ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡಿಲ್ಲ. ಪರಿಶೀಲನೆ ಮಾಡದೆಯೇ ನೇರವಾಗಿ ಆಕ್ನಾ ಟೆಕ್ನಾಲಜಿ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ.
ಡಿಜಿಎಸ್‌ಡಿ ಮತ್ತು ಜೆಮ್ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿತ ಸಂಸ್ಥೆಗಳೊಂದಿಗೆ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡದೇ ನೇರವಾಗಿ ಆಫ್‌ಲೈನ್‌ನಲ್ಲಿ ಆಕ್ನಾ ಟೆಕ್ನಾಲಜೀಸ್‌ಗೆ ಕಾರ್ಯಾದೇಶ ನೀಡಿರುವುದು ಕಂಡು ಬಂದಿದೆ.
ದರಪಟ್ಟಿ ಆಹ್ವಾನಿಸದೆಯೇ ಕಾರ್ಯಾದೇಶ ನೀಡಲಾಗಿದೆ. ತಾಂತ್ರಿಕ ಪರಿಣಿತರಿಂದ ಉಪಕರಣಗಳ ನಿರ್ದಿಷ್ಟತೆಗಳ ಬಗ್ಗೆ ಅಭಿಪ್ರಾಯ ಅನುಮೋದನೆ ಪಡೆದಿಲ್ಲ. ಅದೇ ರೀತಿ ತಾಂತ್ರಿಕ ಸಾಮಗ್ರಿಗಳ ಸರಬರಾಜು ಅಳವಡಿಕೆಗೂ ಮುನ್ನ ತಾಂತ್ರಿಕ ಪರಿಣಿತರ ಅಭಿಪ್ರಾಯ ಪಡೆದಿಲ್ಲ. ಯಂತ್ರಗಳ ದುರಸ್ತಿಯಾಗಿರುವ ಬಗ್ಗೆ ಯಂತ್ರಗಳು ಕಾರ್ಯನಿರ್ವಹಿಸದೇ ಇರುವುದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಪರಿಣಿತರಿಂದ ಪರಿಶೀಲನೆ ನಡೆಸಿಲ್ಲ.
ಅನೇಕ ಎಲೆಕ್ಟ್ರಾನಿಕ್ ಸಾಮಗ್ರಿಗಳು ಮತ್ತು ಪರಿಕರಗಳನ್ನು ಖರೀದಿಸಿದ್ದರೂ ವಾರ್ಷಿಕ ನಿರ್ವಹಣೆ ಸೇವೆ ಪಡೆದುಕೊಂಡಿಲ್ಲ. ಇದನ್ನು ಪಡೆದಿದ್ದರೇ ದುರಸ್ತಿಗೆ ಅನಾವಶ್ಯಕವಾಗಿ ಹೆಚ್ಚುವರಿಯಾಗಿ ಸೇವಾ ಶುಲ್ಕ ನೀಡುವ ಸಂಭವ ಉದ್ಭವವಾಗುತ್ತಿರಲಿಲ್ಲ.
ಕೆಟಿಪಿಪಿ ನಿಯಮಾವಳಿಗಳ ಅನ್ವಯ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಕರೆದು ಖರೀದಿ ಪ್ರಕ್ರಿಯೆ ನಡೆಸಿದ್ದಲ್ಲಿ ಕಡಿಮೆ ಮೊತ್ತಕ್ಕೆ ಉತ್ತಮ ಸಾಮಾಗ್ರಿಗಳನ್ನು ಖರೀದಿಸಬಹುದಾಗಿತ್ತು. ಹಾಗೂ ಆರ್ಥಿಕವಾಗಿ ಸರ್ಕಾರಕ್ಕೆ ಹೆಚ್ಚಿನ ಉಳಿತಾಯವಾಗುತ್ತಿತ್ತು.
‘ಈ ಆರೋಪಗಳಲ್ಲಿ ನೀವು ಕಚೇರಿ ಮುಖ್ಯಸ್ಥರಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಚೇರಿಯ ಇತರೆ ಸಿಬ್ಬಂದಿಯೊಂದಿಗೆ ಸೇರಿ ಉದ್ದೇಶಪೂರ್ವಕವಾಗಿ ಅಕ್ನಾ ಟೆಕ್ನಾಲಜೀಸ್ ಕಂಪನಿಯಿಂದ ಉಪಕರಣಗಳನ್ನು ಖರೀದಿ ಮಾಡಿದ್ದೀರಿ. ಬೇಜವಾಬ್ದಾರಿಯಿಂದ ಸಾರ್ವಜನಿಕ ಹಣವನ್ನು ವೆಚ್ಚ ಮಾಡುವಲ್ಲಿ ಕರ್ತವ್ಯಲೋಪ ಎಸಗಿದ್ದೀರಿ.
ಇಲಾಖಾ ಮುಖ್ಯಸ್ಥರನ್ನೂ ತಪ್ಪುದಾರಿಗೆಳೆದು ಸ್ವ ಹಿತಾಸಕ್ತಿಗಾಗಿ ಅಧಿಕಾರವನ್ನು ಬಳಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಇದರಿಂದ ಸರ್ಕಾರ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡು ಅಧಿಕಾರ ದುರುಪಯೋಗಪಡಿಸಿಕಂಡು ಕರ್ತವ್ಯಲೋಪ ಎಸಗಿದ್ದೀರಿ,’ ಎಂದು ಆರೋಪ ನಿಗದಿಪಡಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ.
ಹೊಸಮನಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಕುರಿತಾಗಿ ‘ದಿ ಫೈಲ್’ ಬಹಿರಂಗಪಡಿಸಿದ್ದ ವರದಿಗಳು ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಕಂಪ್ಯೂಟರ್ ಹಗರಣದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.
ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಬೆಂಗಳೂರಿನ ಅಕ್ನಾ ಟೆಕ್ನಾಲಜಿ ಸಂಸ್ಥೆಯು ಕಳಪೆ ಕಂಪ್ಯೂಟರ್, ಝೆರಾಕ್ಸ್, ಸಿಸಿ ಕ್ಯಾಮರಾ ಸೇರಿದಂತೆ ಹಲವು ಸಾಮಗ್ರಿಗಳನ್ನು ಸರಬರಾಜು ಮಾಡಿತ್ತು. ಇದರಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕಳಪೆ ಸಾಮಗ್ರಿಗಳ ಕುರಿತು ಪ್ರಶ್ನಿಸಿದ್ದ ಗ್ರಂಥಾಲಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.
ಈ ಕುರಿತು ತನಿಖೆ ನಡೆಸಿ 15 ದಿನದೊಳಗೆ ವಿವರವಾದ ವರದಿ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (ಸ್ವೀಕೃತಿ ಸಂಖ್ಯೆ; 1664726/2020) ಅವರು ಸಚಿವರಿಗೆ ಪತ್ರವನ್ನು ಬರೆದಿದ್ದರು.
ಈ ಪತ್ರವನ್ನಾಧರಿಸಿ ಪ್ರಾಥಮಿಕ ತನಿಖೆ ನಡೆಸಲು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕ ಹೆಚ್ ಎನ್ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಿತ್ತು. ಈ ತಂಡವು 2020ರ ನವೆಂಬರ್ 20 ಮತ್ತು 21, 2021ರ ಫೆ.9ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ 2010-11ರಿಂದ 2019-20ರವರೆಗೂ ಕಡತಗಳ ತಪಾಸಣೆ ನಡೆಸಿತ್ತು ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.
ಕಂಪ್ಯೂಟರ್, ಯುಪಿಎಸ್, ಸರ್ವರ್, ಸ್ಕ್ಯಾನರ್, ಪ್ರಿಂಟರ್, ಬಯೋ ಮೆಟ್ರಿಕ್, ಸಿಸಿಟಿವಿ ಕ್ಯಾಮರಾ, ಜೆರಾಕ್ಸ್ ಯಂತ್ರ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಸಾಮಗ್ರಿಗಳು, ಸಂಬಂಧಪಟ್ಟ ಉಪಕರಣಗಳ ಪರಿಕರಗಳ ಖರೀದಿ ವಿವರ, ಖರೀದಿ ವಿಧಾನ, ಖರೀದಿ ಮೊಬಲು, ಖರೀದಿ ದಿನಾಂಕ, ಕಡತಗಳ ನಿರ್ವಹಣೆ, ದಾಸ್ತಾನು ವಹಿ ಇತ್ಯಾದಿಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿತ್ತು. ಈ ಸಂಬಂಧ 2021ರ ಅಕ್ಟೋಬರ್ 24ರಂದು ತನಿಖಾ ವರದಿ ಸಲ್ಲಿಸಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.
ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್, ಯುಪಿಎಸ್, ಝೆರಾಕ್ಸ್ ಉಪಕರಣ ಖರೀದಿ ಹಗರಣ; ತನಿಖಾ ವರದಿ
4.ಡಿಜಿಎಸ್ ಮತ್ತು ಡಿ ಮತ್ತು ಜೆಮ್ ದರದಲ್ಲಿ ಖರೀದಿಗೆ ಕ್ರಮ ವಹಿಸಿರುತ್ತಾರೆ. ಅದರಂತೆ ಡಿಜಿಎಸ್ ಮತ್ತು ಡಿ ಮತ್ತು ಜೆಮ್ ದರದ ಒಪ್ಪಂದದ ಸಂಸ್ಥೆಯೊಂದಿಗೆ ವ್ಯವಹರಿಸಿಲ್ಲ. ಆಥರೈಸೇಷನ್ ನೀಡಿರುವ ಬಗ್ಗೆ, ನೈಜತೆ ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡಿಲ್ಲ. ಪರಿಶೀಲಿಸದೆಯೇ ನೇರವಾಗಿ ಅಕ್ನಾ ಟೆಕ್ನಾಲಜಿ ಸಂಸ್ಥೆಗೆ ಕಾರ್ಯಾದೇಶ ನೀಡಿರುವುದು ಕಂಡು ಬರುತ್ತದೆ.
5. ಜೆಮ್ ವೆಬ್ ಪೋರ್ಟಲ್ ನಲ್ಲಿ ನೋಂದಾಯಿತ ಸಂಸ್ಥೆಗಳೊಂದಿಗೆ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಿಲ್ಲ. ನೇರವಾಗಿ ಆಫ್‌ಲೈನ್‌ನಲ್ಲಿ ಮೆ. ಅಕ್ನಾ ಟೆಕ್ನಾಲಾಜೀಸ್ ಸಂಸ್ಥೆಗೆ ಕಾರ್ಯಾದೇಶ ನೀಡಿರುವುದು ಕಂಡು ಬಂದಿದೆ.
ಕಂಪ್ಯೂಟರ್ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ
‘ಎಲ್ಲಾ ಎಲೆಕ್ಟ್ರಾನಿಕ್ ಸಾಮಗ್ರಿಗಳ ಯಂತ್ರಗಳ, ಪರಿಕರಗಳ ಖರೀದಿ ಸಮಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಅಕ್ನಾ ಟೆಕ್ನಾಲಾಜೀಸ್ ಸಂಸ್ಥೆಗೆ ಅನುಕೂಲಕರವಾಗಿ ವರ್ತಿಸಿರುವುದು ಕಂಡು ಬರುತ್ತದೆ. ಮತ್ತು ಕೆಎಫ್‌ಸಿ ನಿಯಮ 14 ಮತ್ತು 15ರ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ,’ ಎಂದು ಪ್ರಾಥಮಿಕ ತನಿಖಾ ವರದಿಯು ಅಭಿಪ್ರಾಯಪಟ್ಟಿರುವುದನ್ನು ಸ್ಮರಿಸಬಹುದು.