ವಿಶ್ರಾಂತ ಕುಲಪತಿ ವಾಲೀಕಾರ್‍‌ ವಿರುದ್ಧ ಕ್ರಿಮಿನಲ್‌, ಸಿವಿಲ್‌ ಮೊಕದ್ದಮೆ; ವರದಿ ಸಲ್ಲಿಸಲು ರಾಜ್ಯಪಾಲರ ಸೂಚನೆ

ಬೆಂಗಳೂರು; ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್‌ ಬಿ ವಾಲಿಕಾರ್‍‌, ಪರೀಕ್ಷಾಂಗ ಕುಲ ಸಚಿವ ಹೆಚ್‌ ಟಿ ಪೋತೆ ಸೇರಿದಂತೆ ಇನ್ನಿತರರ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಹಾಗೂ ಸಿವಿಲ್‌ ಮೊಕದ್ದಮೆ ಸಂಬಂಧದ ಕಾರ್ಯನಿರ್ವಹಣಾ ವರದಿ ಸಲ್ಲಿಸಬೇಕು ಎಂದು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದು ಇದೀಗ ಬಹಿರಂಗವಾಗಿದೆ.

 

ನೇಮಕಾತಿ, ಅಂಕಪಟ್ಟಿ, ಕಾಮಗಾರಿ ಮತ್ತು ಇತರೆ ಭ್ರಷ್ಟಾಚಾರ ಸೇರಿದಂತೆ ಮತ್ತಿತರೆ ಗಂಭೀರ ಆರೋಪಗಳಿಗೆ ಗುರಿಯಾಗಿದ್ದ ಡಾ.ವಾಲೀಕಾರ್ ಸೇರಿದಂತೆ ವಿವಿಯ ಒಟ್ಟು ನಾಲ್ಕು ಮಂದಿ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು 2014ರ ಅಕ್ಟೋಬರ್‍‌ನಲ್ಲೇ ಬಂಧಿಸಿದ್ದರು. ಲೋಕಾಯುಕ್ತ ಅಂದಿನ ಎಸ್.ಪಿ.ಪರಶುರಾಮ್ ಅವರ ನೇತೃತ್ವದಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕಚೇರಿ ಆವರಣದಲ್ಲೇ ವಾಲೀಕಾರ್ ಅವರನ್ನು ಬಂಧಿಸಿದ್ದರು.

 

ಅಲ್ಲದೇ ವಾಲೀಕಾರ್ ಅವರು ಸೇರಿದಂತೆ ವಿವಿಯ ಹಣಕಾಸು ವಿಭಾಗದ ಅಧಿಕಾರಿ ರಾಜಶ್ರೀ, ಕುಲಪತಿಗಳ ಆಪ್ತ ಕಾರ್ಯದರ್ಶಿ ಎಸ್.ಎಲ್.ಬೀಳಗಿ, ವಿವಿ ಪರೀಕ್ಷಾ ವಿಭಾಗದ ಕುಲಸಚಿವ ಹೆಚ್.ಡಿ.ಪೋತೆ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

 

ಈಗಾಗಲೇ ವಾಲೀಕಾರ್‍‌ ಅವರು ನಿವೃತ್ತರಾಗಿಯೂ ಹಲವು ವರ್ಷಗಳಾಗಿವೆ. ಇದೀಗ ರಾಜ್ಯಪಾಲರು ಅವರ ವಿರುದ್ಧ ಕ್ರಿಮಿನಲ್‌ ಮತ್ತು ಸಿವಿಲ್‌ ಮೊಕದ್ದಮೆ ಸಂಬಂಧದ ಕಾರ್ಯನಿರ್ವಹಣಾ ವರದಿ ಸಲ್ಲಿಸಬೇಕು ಎಂದು ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳು ಸಚಿವ  ಸುಧಾಕರ್‍‌ ಅವರ ಬಳಿ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರೆ ವಿಶ್ವವಿದ್ಯಾಲಯಗಳಲ್ಲಿನ ವಿವಿಧ ಸ್ವರೂಪದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಕುಲಪತಿಗಳ ವಿರುದ್ಧ ನ್ಯಾಯಾಂಗ ತನಿಖಾ ಸಮಿತಿಗಳು ವರದಿ ನೀಡಿವೆ. ಆದರೆ ಈ ಯಾವ ಪ್ರಕರಣಗಳ ಬಗೆಗಿನ ಕಾರ್ಯನಿರ್ವಹಣಾ ವರದಿ ಕೇಳದ ರಾಜ್ಯಪಾಲರು ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಹೆಚ್‌ ಬಿ ವಾಲೀಕಾರ್‍‌, ಪ್ರೊ ಹೆಚ್ ಟಿ ಪೋತೆ ಮತ್ತಿತರರ ವಿರುದ್ಧದ ಪ್ರಕರಣದಲ್ಲಿ ಕಾರ್ಯನಿರ್ವಹಣಾ ವರದಿ ಸಲ್ಲಿಸಲು ಸೂಚಿಸುತ್ತಿರುವುದು ಸಹ ಗಂಭೀರ ಚರ್ಚೆಗೆ ಗ್ರಾಸವಾಗಿದೆ.

 

ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಕರ್‍‌ ಅವರಿಗೆ  ರಾಜ್ಯಪಾಲರು 2024ರ ಜನವರಿ 3ರಂದೇ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ಹಿನ್ನೆಲೆ

 

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇಲ್ಲಿ ನಡೆದಿದೆ ಎನ್ನಲಾಗಿರುವ ‌ ನೇಮಕಾತಿ, ಅಂಕಪಟ್ಟಿ ಹಗರಣ, ಕಾಮಗಾರಿ ಮತ್ತು ಖರೀದಿ ಹಗರಣಗಳ ಬಗ್ಗೆ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ ಪದ್ಮರಾಜ್‌ ಅವರ ನೇತೃತ್ವದ ತನಿಖಾ ಆಯೋಗ ರಚಿಸಿತ್ತು.

 

ಈ ಆಯೋಗದ ವರದಿಯನ್ವಯ ರಾಜ್ಯಪಾಲರು ಹಾಗೂ ಕುಲಾಧಿಪತಿಗಳ ಆದೇಶದಂತೆ ಧಾರವಾಡದ ಲೋಕಾಯುಕ್ತ ಠಾಣೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಅಂದಿನ ಕುಲಪತಿ ಪ್ರೊ. ಹೆಚ್‌ ಬಿ .ವಾಲಿಕರ್ ಮತ್ತಿತರ ವಿರುದ್ಧ 2014ರ ಅಕ್ಟೋಬರ್‍‌ 7ರಂದು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಮತ್ತು ಐಪಿಸಿ ಯಡಿಯಲ್ಲಿ ಎಫ್‌ ಐ ಆರ್‍ (Cr.11/2014) ‌ ದಾಖಲಾಗಿತ್ತು.

 

ವಿಶೇಷವೆಂದರೇ ಕುಲಪತಿ ಪ್ರೊ ಹೆಚ್‌ ಬಿ ವಾಲಿಕರ್ ತಮ್ಮ ಆಡಳಿತಾವಧಿಯ ಕೆಲವೇ ದಿನಗಳು ಬಾಕಿಯಾಗಿದ್ದಾಗ ಲೋಕಾಯುಕ್ತ ಪೋಲಿಸರಿಂದ ಬಂಧಿಸಲ್ಪಟ್ಟಿದ್ದರು. ನಂತರದ ದಿನಗಳಲ್ಲಿ ಕುಲಪತಿ ಹುದ್ದೆಯಿಂದ ಅಮಾನತ್ತುಗೊಂಡಿದ್ದರು.

 

ತಮ್ಮ ವಿರುದ್ಧದ ಕ್ರಮವನ್ನು ಪ್ರೊ ಹೆಚ್‌ ಬಿ ವಾಲೀಕಾರ್‍‌ ಅವರು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯ ಮತ್ತು ತನಿಖಾ ವರದಿ ಅನ್ವಯ ಸರ್ಕಾರ ಕ್ರಮ ವಹಿಸಬೇಕಿತ್ತು. ಆದರೆ ನೇರವಾಗಿ ಕುಲಾಧಿಪತಿಗಳೇ ಕ್ರಮಕ್ಕೆ ಆದೇಶ ಹೊರಡಿಸಿದ್ದರು. ಇದು ತಾಂತ್ರಿಕವಾಗಿ ಸಿಂಧುವಲ್ಲ ಎಂಬ ಕಾರಣಕ್ಕೆ ಕುಲಾಧಿಪತಿಗಳ ಆದೇಶ ಮತ್ತು ಎಫ್‌ಐಆರ್‍‌ನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

 

ಆದರೆ ಹಗರಣಗಳ ಬಗ್ಗೆ ನಿಯಮಾನುಸಾರ ಪ್ರಕ್ರಿಯೆ ಅನುಸರಿಸಿ ಕಾನೂನುಕ್ರಮ ಜರುಗಿಸಬಹುದು ಎಂದೂ ತೀರ್ಪಿನಲ್ಲಿ ಹೇಳಿತ್ತು.

 

ಉಚ್ಛ ನ್ಯಾಯಾಲಯದ ಆದೇಶವನ್ನು ಅಂದಿನ ಕುಲಾಧಿಪತಿಗಳು ಪ್ರಶ್ನಿಸಿದ್ದರು. ನಂತರ ಈ ಪ್ರಕರಣವು ಸರ್ವೋಚ್ಛ ನ್ಯಾಯಾಲಯದ (SLP) ಸಂ:4324-4338/2016) ಮೆಟ್ಟಿಲೇರಿತ್ತು. ಪ್ರೊ ಹೆಚ್‌ ಬಿ ವಾಲೀಕಾರ್‍‌ ಮತ್ತಿತರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾವುದೇ ಅಡೆತಡೆ ಇಲ್ಲ ಎಂದು 2019ರ ಸೆ.4ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎನ್‌ ವಿ ರಮಣ, ಮೋಹನ ಶಾಂತನಗೌಡರ, ಅಜಯ್‌ ರಸ್ತೋಗಿ ನೇತೃತ್ವದ ತ್ರಿ ಸದಸ್ಯ ಪೀಠವು ಆದೇಶ ನೀಡಿತ್ತು.

 

ವಿಶೇಷವೆಂದರೇ ಇದೇ ಕಾಲಘಟ್ಟದಲ್ಲಿಯೇ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿದ್ದ 14 ಗಂಭೀರ ಹಗರಣಗಳ ಕುರಿತು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಕೆ ಭಕ್ತವತ್ಸಲ ಅವರ ನೇತೃತ್ವದ ವರದಿ ಸಲ್ಲಿಸಿತ್ತು. ಈ ವರದಿ ಕುರಿತು ಕುಲಾಧಿಪತಿಗಳು ಯಾವುದೇ ಕಾರ್ಯನಿರ್ವಹಣಾ ವರದಿಯನ್ನೂ ಕೇಳಿಲ್ಲ.

 

ಭಕ್ತವತ್ಸಲ ನೇತೃತ್ವದ ತನಿಖಾ ಆಯೋಗದ ವರದಿಗಳು ಧೂಳು ಹಿಡಿಯುತ್ತಿವೆ ಎಂದು ಹಲವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರೂ ಸಹ ರಾಜಭವನ ತಟಸ್ಥ ನಿಲುವು ತೋರಿದೆ. ರಾಜ್ಯ ಸರ್ಕಾರವೂ ಸಹ ಈ ಬಗ್ಗೆ ಮೌನ ವಹಿಸಿರುವುದು ಸಹ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

SUPPORT THE FILE

Latest News

Related Posts