ಭದ್ರಾ ಸಕ್ಕರೆ ಕಾರ್ಖಾನೆ; ಕಾರ್ಮಿಕರ ಅರ್ಜಿಗೆ ಸ್ಪಂದಿಸದ ಸರ್ಕಾರ, ಸ್ಥಿರಾಸ್ತಿ ಹರಾಜು ಪ್ರಕ್ರಿಯೆ ಮುಂದುವರಿಕೆ?

ಬೆಂಗಳೂರು; ದಾವಣಗೆರೆಯ ದೊಡ್ಡಬಾತಿಯಲ್ಲಿರುವ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಅದರ ಆಸ್ತಿಯನ್ನು ಬಹಿರಂಗ ಹರಾಜು ರದ್ದುಪಡಿಸಬೇಕು ಎಂದು ಕಾರ್ಮಿಕರ ಮನವಿಗೆ ಈಗಿನ ಕಾಂಗ್ರೆಸ್‌ ಸರ್ಕಾರ ಓಗೊಟ್ಟಿಲ್ಲ.

 

ಕಾರ್ಖಾನೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ವರದಿ ಬರುವವರೆಗೂ ಮತ್ತು ಉಚ್ಛ ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಬಹಿರಂಗ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿಲುವು ತಳೆದಿದೆ.

 

ಈ ಸಂಬಂಧ 2024ರ ಜನವರಿ 1ರಂದೇ ಆದೇಶ (ಸರ್ಕಾರದ ಆದೇಶ ಸಂಖ್ಯೆ; ಸಿಒ 58 ಸಿಎಸ್‌ಆರ್‍‌ 2019) ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಒಡಿ ತನಿಖೆಯ ವರದಿ ಬರುವವರೆಗೂ ಹಾಗೂ ಉಚ್ಛ ನ್ಯಾಯಾಲಯದ ರಿಟ್‌ ಅರ್ಜಿ ಸಂಖ್ಯೆ 9000/2020 ಪ್ರಕರಣದ ಅಂತಿಮ ಆದೇಶ ಬರುವವರೆಗೂ ಟಿ ಆರ್‍‌ ದ್ವಾರಕನಾಥ್‌ ಅವರ ಮನವಿ ಪರಿಗಣಿಸಿ ಅವರ ಕೋರಿಕೆಯಂತೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ,’ ಎಂದು ಮನವಿಯನ್ನು ವಿಲೇಗೊಳಿಸಿ ಆದೇಶಿಸಿರುವುದು ಗೊತ್ತಾಗಿದೆ.

 

ಈ ಕುರಿತು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರೊಂದಿಗೆ ಚರ್ಚೆ ನಡೆಸಿದ  ನಂತರ ಈ ಆದೇಶ ಹೊರಬಿದ್ದಿದೆ ಎಂದು ತಿಳಿದು ಬಂದಿದೆ.

 

ದ್ವಾರಕನಾಥ್‌ ಮನವಿಯಲ್ಲೇನಿತ್ತು?

 

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ 2017ರ ಜನವರಿ 27ರಂದು ಬಹಿರಂಗವಾಗಿ ನಡೆಸಿದ್ದ ಹರಾಜು ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡು ಬಂದಿವೆ. ಈ ಹರಾಜನ್ನು ರದ್ದುಪಡಿಸಬೇಕು ಎಂದು (ಅರ್ಜಿ ಸಂಖ್ಯೆ; UPLOK/BD/HS52/2017/DRE-1) ಅಂದಿನ ಉಪ ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ 2018ರಲ್ಲೇ ಶಿಫಾರಸ್ಸು ಮಾಡಿದ್ದರು.

 

ಈ ಹರಾಜನ್ನು ರದ್ದುಪಡಿಸಿದ್ದಲ್ಲಿ ಕೆಐಎಡಿಬಿ ಅವರು ಕಾರ್ಖಾನೆಗೆ ಲೀಸ್‌ ಆಧಾರದ ಮೇಲೆ ಕೊಟ್ಟಿರುವ 131.02 ಎಕರೆ ಜಮೀನನ್ನು ರಕ್ಷಣೆ ಮಾಡಿದಂತಾಗುತ್ತದೆ. ಮತ್ತು 2004ರಿಂದ ವೇತನ ಬಾಕಿ ನಿರೀಕ್ಷೆಯಲ್ಲಿರುವ ಅಂದಾಜು 500 ಕಾರ್ಮಿಕರಿಗೆ ಸರ್ಕಾರದಿಂದ 50 ಕೋಟಿ ರು. ಆರ್ಥಿಕ ನೆರವು ಪಡೆಯಲು ಅನುಕೂಲವಾಗುತ್ತದೆ. ಆದ್ದರಿಂದ ಈ ಹರಾಜನ್ನು ಆದಷ್ಟು ಬೇಗನೇ ರದ್ದುಪಡಿಸಬೇಕು ಎಂದು ಕಾರ್ಮಿಕ ಟಿ ಆರ್‍‌ ದ್ವಾರಕಾನಾಥ್ ಅವರು 2024ರ ಆಗಸ್ಟ್‌ 24ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

 

50 ಕೋಟಿ ರು ಬಾಕಿ ಕೊಡಲು ಕಾರ್ಖಾನೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಹಿಂದೆ ಕೆಲವು ಸಕ್ಕರೆ ಕಾರ್ಖಾನೆಗಳ ಕಾರ್ಮಿಕರಿಗೆ ಸರ್ಕಾರವು ಆರ್ಥಿಕ ನೆರವು ನೀಡಿದಂತೆ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೂ ನೀಡಬೇಕು ಎಂದು ಕಾರ್ಮಿಕರು ಮನವಿ ಸಲ್ಲಿಸಿದ್ದರು. ಅಲ್ಲದೇ ಹಿಂದಿನ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‍‌ ಅವರಿಗೂ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಸಹಕಾರ ಇಲಾಖೆಯು 2 ವರ್ಷದಿಂದಲೂ ತನ್ನ ಬಳಿಯೇ ಇಟ್ಟುಕೊಂಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರವು 8 ತಿಂಗಳ ಅಧಿಕಾರ ಪೂರ್ಣಗೊಳಿಸಿರುವ ಬೆನ್ನಲ್ಲೇ ಮನವಿಯನ್ನು ವಿಲೇಗೊಳಿಸಿ ಆದೇಶಿಸಿರುವುದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.

 

ಸರ್ಕಾರದ ವಾದವೇನು?

 

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಹರಾಜು ಪ್ರಕ್ರಿಯೆ ಸಂಬಂಧ ಪುನರ್‍‌ ಪರಿಶೀಲನಾ ಅರ್ಜಿ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ದಾವಣಗೆರೆ ಜಿಲ್ಲಾ ಕಬ್ಬು ಬೆಳೆಗಾರರ ರೈತ ಸಂಘವನ್ನು ರಚಿಸಿರುವ ಬಗ್ಗೆ ಹಾಗೂ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸ್ಥಿರಾಸ್ತಿ ಮಾರಾಟದಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಲೋಕಾಯುಕ್ತರ ಶಿಫಾರಸ್ಸಿನಂತೆ ಸಿಐಡಿಗೆ ವಹಿಸಲಾಗಿದೆ.

 

ಸಿಐಡಿ ತನಿಖೆ ವರದಿ ಬರುವವರೆಗೂ ಪುನರ್‍‌ ಪರಿಶೀಲನಾ ಅರ್ಜಿ ವಿಚಾರಣೆಯನ್ನು ಮುಂದೂಡಿರುತ್ತದೆ. ಈ ಪ್ರಕರದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 12(1) ಅಡಿ ಲೋಕಾಯುಕ್ತರ ವರದಿಗೂ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ತೆರವುಗೊಂಡ ನಂತರ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಸಹಕಾರ ಸಂಘಗಳ ನಿಬಂಧಕರು ತಿಳಿಸಿದ್ದಾರೆ ಎಂದು ಆದೇಶದಲ್ಲಿ ಸಹಕಾರ ಇಲಾಖೆಯು ವಿವರಿಸಿದೆ.

 

 

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸೂಪರ್‌ಸೀಡ್‌ಗೊಳಿಸಿದ್ದನ್ನು ಪ್ರಶ್ನಿಸಿದ್ದ ಮಹಿಳಾ ನಿರ್ದೇಶಕಿ ಲೀಲಾ ಓಂಕಾರಪ್ಪ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಪರ್ ಸೀಡ್ ಆದೇಶವನ್ನು ರದ್ಧುಗೊಳಿಸಿದ್ದ ನ್ಯಾಯಾಲಯ ಹಿಂದಿನ ಆಡಳಿತ ಮಂಡಳಿಗೆ ಕಾರ್ಖಾನೆ ಹಸ್ತಾಂತರಿಸುವಂತೆ ಆದೇಶಿಸಿತ್ತು.

 

ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಆಗಿದ್ದ ಹಿಂದಿನ ಜಿಲ್ಲಾಧಿಕಾರಿ ಪಟ್ಟಣಶೆಟ್ಟಿ ಅವರು ದೊಡ್ಡಬಾತಿಯ ಭದ್ರಾ ಕಾರ್ಖಾನೆಯ ಸಭಾಂಗಣದಲ್ಲಿ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಶಿವಶಂಕರ್‌ಗೆ ಕಾರ್ಖಾನೆ ಆಡಳಿತ ಹಸ್ತಾಂತರಿಸಿದ್ದರು.

 

ಕಾರ್ಮಿಕರಿಗೆ ವೇತನ, ಪಿಎಫ್, ಭವಿಷ್ಯ ನಿಧಿ, ಗ್ರಾಚ್ಯುಟಿ, ಸ್ವಯಂ ನಿವೃತ್ತಿ ಸೇರಿದಂತೆ ಒಟ್ಟು 2368.28 ಲಕ್ಷ ಹಣ ನೀಡಬೇಕಿತ್ತು. ರೈತರಿಗೆ ನೀಡಬೇಕಿದ್ದ 1.04 ಕೋಟಿ ಹಣವನ್ನು ಗ್ಯಾನೋಬ ಸಂಸ್ಥೆ ಕಾರ್ಖಾನೆಯಲ್ಲಿ ಉತ್ಪಾದಿಸಿದ್ದ 20 ಸಾವಿರ ಚೀಲ ಸಕ್ಕರೆ ಮಾರಿ ನೀಡಲಾಗಿತ್ತು. ಭೂಮಿ, ಕಟ್ಟಡ, ಎ, ಬಿ, ಸಿ ಶ್ರೇಣಿಯ ವಸತಿಗೃಹ, ಯಂತ್ರೋಪಕರಣ, ವಾಹನ ಸೇರಿದಂತೆ ಇತರೆ ಎಲ್ಲಾ ಸ್ಥಿರ ಮತ್ತು ಚರಾಸ್ಥಿ ಸೇರಿದಂತೆ 577.36 ಲಕ್ಷ ಮೌಲ್ಯದ ಆಸ್ತಿ ಕಾರ್ಖಾನೆ ಹೊಂದಿದೆ ಎಂದು ಗೊತ್ತಾಗಿದೆ.

 

ಕಾರ್ಖಾನೆ ಮಾರಾಟದಲ್ಲಿ ಅಕ್ರಮ ಆರೋಪ

 

ಸಾರ್ವಜನಿಕ ವಲಯದ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಅಂದಿನ ಉಪಲೋಕಾಯುಕ್ತ ಸುಭಾಷ್ ಬಿ ಆಡಿ ಆರೋಪಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಅವರು ಕಾರ್ಖಾನೆಯ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ರಾಜ್ಯಸರ್ಕಾರ ಸಿಐಡಿಯಿಂದ ತನಿಖೆ ನಡೆಸಬೇಕೆಂದು ವರದಿ ನೀಡಿದ್ದರು.

 

ಹರಾಜಿಗೆ ಸರ್ಕಾರ 150 ಕೋಟಿ ರೂ ಬಿಡ್ ಘೋಷಿಸಿತ್ತು. 54 ಕೋಟಿ ರೂ. ಗೆ ಹರಾಜು ಹಾಕಲಾಗಿತ್ತು. ಇದರ ಮಾರುಕಟ್ಟೆ ಮೌಲ್ಯ 400 ಕೋಟಿ ರೂ ಆಗಿದೆ ಎಂದು ಅವರು ಹೇಳಿದ್ದರು.

 

ಈ ಮಧ್ಯೆ ದಾವಣಗೆರೆ ಕಬ್ಬು ಬೆಳಗಾರರ ರೈತರ ಸಂಘ ಹರಾಜು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಕಾರ್ಖಾನೆಯ ಕಟ್ಟಡ ಸೇರಿದಂತೆ ಸ್ಥಿರಾ ಮತ್ತು ಚರಾಸ್ಥಿ ಮೌಲ್ಯ 188.58 ಕೋಟಿ ರೂ. ಆಗಿತ್ತು. ಆದರೆ, ರೈತರ ಸಂಘ ಬಿಡ್ ನಲ್ಲಿ ಭಾಗಿಯಾಗುವ ಮೂಲಕ ಕಾನೂನುಬಾಹಿರವಾಗಿ ಕಾರ್ಖಾನೆಯನ್ನು ಪಡೆದುಕೊಂಡಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

 

ಮಾರುಕಟ್ಟೆ ಬೆಲೆಗಿಂತ 150 ಕೋಟಿ ರೂ ಗೆ ಬಿಡ್ ನ್ನು ರಾಜ್ಯಸರ್ಕಾರ ನಿಗದಿಪಡಿಸಿತ್ತು. ಸಹಕಾರ ಸಂಘದ ಸಹಾಯಕ ನೋಂದಣಿಕಾರಿ, ದಾವಣಗೆರೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬಿಡ್‌ದಾರರೊಂದಿಗೆ ಕೈ ಜೋಡಿಸಿದ್ದು, ಕಪ್ಪು ಹಣ ಹೊಂದಿರುವವರು ಈ ಹರಾಜು ಪಡೆದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

 

ದಾವಣಗೆರೆ ಕಬ್ಬು ಬೆಳೆಗಾರರ ರೈತರ ಸಂಘದಲ್ಲಿ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ಬಯಲಾಗಿತ್ತು. ಇದರಲ್ಲಿ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ 8 ಕೋಟಿ ರೂ ಸಾಲ ಪಡೆದುಕೊಂಡು ಮತ್ತೆ ಪಾವತಿಸಿರುವ ಬಗ್ಗೆಯೂ ಸಾಕ್ಷ್ಯಧಾರಗಳು ಸಿಕ್ಕಿದ್ದವು ಎಂದು ಹೇಳಲಾಗಿತ್ತು.

 

2011ರಲ್ಲಿದ್ದ ಬಿಜೆಪಿ ಸರ್ಕಾರವು ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿಕೊಂಡು ನಂತರ ಮಾರಾಟ ಮಾಡಲು ನಿರ್ಧರಿಸಿತ್ತು. ಕಾರ್ಖಾನೆಯ ಒಟ್ಟು ಆಸ್ತಿ ಮೌಲ್ಯ ನಿರ್ಧರಿಸುವಂತೆ ಖಾಸಗಿ ಇಂಜಿನಿಯರ್‍‌ ತಂಡಕ್ಕೆ ಸೂಚಿಸಿತ್ತು. ವರದಿ ನಂತರ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಿತ್ತು.

 

2010ರಲ್ಲಿ ಕಾರ್ಖಾನೆ 35 ಲಕ್ಷ ಟನ್‌ ಸಕ್ಕರೆ ಉತ್ಪಾದಿಸಿತ್ತು. ಅದರಲ್ಲಿ 10 ಲಕ್ಷ ಟನ್‌ ಸಕ್ಕರೆ ಮಾರಾಟವಾಗಿತ್ತು. ಇನ್ನುಳಿದಂತೆ ಅಂದು 20 ಲಕ್ಷ ಟನ್‌ ಸಕ್ಕರೆ ದಾಸ್ತಾನು ಇತ್ತು. ಕಾರ್ಖಾನೆ ಪುನರಾರಂಭಕ್ಕೆ 7ಕ್ಕೂ ಹೆಚ್ಚು ಬಾರಿ ಟೆಂಡರ್‍‌ ಕರೆಯಲಾಗಿತ್ತು. ಖಾಸಗಿ ಕಂಪನಿಗಳು ಹೈ ಟೆಂಡರ್‍‌ಗೆ ಆಸಕ್ತಿ ತೋರಿರಲಿಲ್ಲ.

 

ಆದರೆ ಬ್ಯಾಂಕ್‌, ಸಾಲ ಸೇರಿದಂತೆ ಕಾರ್ಖಾನೆ 75ಕ್ಕೂ ಹೆಚ್ಚು ಕೋಟಿ ರು. ಸಾಲದಲ್ಲಿ ಮುಳುಗಿತ್ತು. ಹೀಗಾಗಿ ಸರ್ಕಾರವು ಮಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ ಎಂದು ಅಂದಿನ ಸಹಕಾರ ಸಚಿವ ಎಸ್‌ ಎ ರವೀಂದರನಾಥ್‌ ಅವರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts