ಉಚಿತ ವಿದ್ಯುತ್‌; 6,242.53 ಕೋಟಿ ರು ಕೊರತೆ, ಸಹಾಯಧನ ಸೀಮಿತಗೊಳಿಸಲು ಚಿಂತನೆ?

ಬೆಂಗಳೂರು; ಮುಂಗಾರು ಮಳೆ ಕೊರತೆಯಿಂದಾಗಿ ಹೆಚ್ಚುವರಿ ವಿದ್ಯುತ್‌ ಬಳಕೆಯ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ  ಅಧಿಕ ಸಹಾಯಧನಕ್ಕಾಗಿ ಸರ್ಕಾರದ ಮೆಟ್ಟಿಲು ಹತ್ತಿರುವ ವಿದ್ಯುತ್‌ ಸರಬರಾಜು ಕಂಪನಿಗಳೀಗ ಇದರ ಬೇಡಿಕೆಗೆ ಅನುಗುಣವಾಗಿ 6,242.53 ಕೋಟಿ ರು. ಅಧಿಕ ಸಹಾಯ ಧನ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಇದನ್ನು ಪರಿಶೀಲಿಸಿರುವ ಹಣಕಾಸು ಇಲಾಖೆಯು  ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್‌ ಸಹಾಯಧನ ಸೀಮಿತಗೊಳಿಸಬೇಕು ಎಂದು ನಿಲುವು ತಳೆದಿರುವುದು ಇದೀಗ ಬಹಿರಂಗವಾಗಿದೆ.

 

ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು 10 ಹೆಚ್‌ ಪಿ ವರೆಗಿನ ನೀರಾವರಿ ಪಂಪ್‌ ಸೆಟ್‌ಗಳ ಉಚಿತ ವಿದ್ಯುತ್‌ ಸರಬರಾಜು ಸಂಬಂಧಿಸಿದಂತೆ ವಿದ್ಯುತ್‌ ಸರಬರಾಜು  ಕಂಪನಿಗಳು ಸಲ್ಲಿಸಿರುವ ಅಧಿಕ ಸಹಾಯಧನ ಬಿಡುಗಡೆಯ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಇದೀಗ ತಲೆ ಮೇಲೆ ಕೈ ಹೊತ್ತು ಕುಳಿತಿದೆ.

 

ಬೊಕ್ಕಸಕ್ಕೆ ಹೊರೆಯಾದರೂ  ಗೃಹ ಜ್ಯೋತಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್‌ ಅವರು ವಿಧಾನಸಭೆ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿರುವ ಬೆನ್ನಲ್ಲೇ ಇದೀಗ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, 10 ಹೆಚ್‌ಪಿವರೆಗಿನ ಉಚಿತ ವಿದ್ಯುತ್‌ ಸರಬರಾಜು ಯೋಜನೆಗೆ 6,242.53 ಕೋಟಿ ರು. ಅಧಿಕ ಸಹಾಯಧನಕ್ಕಾಗಿ ಸಲ್ಲಿಸಿರುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲ ( FD/423/EXP1/2023) ದಾಖಲೆಗಳು ಲಭ್ಯವಾಗಿವೆ.

 

ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್‌ ಸಹಾಯಧನ ಸೀಮಿತಗೊಳಿಸಬೇಕು ಎಂದು ಆರ್ಥಿಕ ಇಲಾಖೆಯು ತಳೆದಿರುವ ನಿಲುವು ಇದೀಗ ಸರ್ಕಾರವನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಗಳಿವೆ.

 

‘ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್‌ ಸಹಾಯಧನವನ್ನು ಸೀಮಿತಗೊಳಿಸಬೇಕು ಎನ್ನುವುದು ಆರ್ಥಿಕ ಇಲಾಖೆಯ ನಿಲುವಾಗಿದ್ದು ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಸರಬರಾಜು ಮಾಡಿ ಈಗ ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಕೋರಲಾಗುತ್ತಿದೆ,’ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

2023-24ನೇ ಸಾಲಿನ ಆಯವ್ಯಯದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, 10 ಹೆಚ್‌ಪಿವರೆಗಿನ ನೀರಾವರಿ ವಿದ್ಯುತ್‌ ಪಂಪ್‌ಸೆಟ್‌ಗಳ ಉಚಿತ ವಿದ್ಯುತ್‌ ಸರಬರಾಜಿಗಾಗಿ 13,143 ಕೋಟಿ ರು.ಗಳ ಸಹಾಯಧನವನ್ನು ಹಂಚಿಕೆ ಮಾಡಿ ಒದಗಿಸಿದೆ. ಇದೇ ಆರ್ಥಿಕ ಸಾಲಿನ 2023ರ ಏಪ್ರಿಲ್‌ನಿಂದ ನವೆಂಬರ್‌ ಮಾಹೆಯಲ್ಲಿ ಈ ಯೋಜನೆಗಳಡಿ ಉಚಿತ ವಿದ್ಯುತ್‌ ಸರಬರಾಜುವಿಗಾಗಿ 14,803.53 ಕೋಟಿ ರು. ವಾಸ್ತವಿಕ ವಿದ್ಯುತ್‌ ಬೇಡಿಕೆ ಇದೆ ಎಂಬುದು ತಿಳಿದು ಬಂದಿದೆ.

 

ಏಪ್ರಿಲ್‌ನಲ್ಲಿ 2,549.65 ಕೋಟಿ ರು. ಬೇಡಿಕೆ ಪೈಕಿ 1,500.00 ಕೋಟಿ ರು. ಬಿಡುಗಡೆ ಮಾಡಿತ್ತು. ಬಾಕಿ 1,049.65 ಕೋಟಿ ರು. ಇತ್ತು. ಮೇ ತಿಂಗಳಿನಲ್ಲಿ 2,620.31 ಕೋಟಿ ರು. ಬೇಡಿಕೆ ಪೈಕಿ 1,500 ಕೋಟಿ ರು. ಬಿಡುಗಡೆ ಮಾಡಿತ್ತು. ಬಾಕಿ 1,120.31 ಕೋಟಿ ರು. ಕೊರತೆ ಕಂಡುಬಂದಿತ್ತು. 10,561 ಕೋಟಿ ರು  ಸಹಾಯಧನದ ಪೈಕಿ  ಬಿಡುಗಡೆಗೆ 2,582 ಕೋಟಿ ರು. ಬಾಕಿ ಇತ್ತು.

 

ಜೂನ್‌ನಲ್ಲಿ 1,466.23 ಕೋಟಿ ರು. ಬೇಡಿಕೆ ಪೈಕಿ 690.50 ಕೋಟಿ ರು. ಬಿಡುಗಡೆ ಮಾಡಿದ್ದ ಇಲಾಖೆಯು 775.73 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಜುಲೈನಲ್ಲಿ 1,833.38 ಕೋಟಿ ರು. ಬೇಡಿಕೆ ಇತ್ತಾದರೂ ಇದರಲ್ಲಿ 690.50 ಕೋಟಿಯನ್ನಷ್ಟೇ ಬಿಡುಗಡೆ ಮಾಡಿತ್ತು. ಹೀಗಾಗಿ 1,142.88 ಕೋಟಿ ರು ಕೊರತೆ ಕಂಡುಬಂದಿತ್ತು ಎಂಬುದು ಗೊತ್ತಾಗಿದೆ. ಸ

 

ಆಗಸ್ಟ್‌ನಲ್ಲಿ 1,122.09 ಕೋಟಿ ರು ಬೇಡಿಕೆ ಪೈಕಿ 1.045.00 ಕೋಟಿ ರು. ಬೇಡಿಕೆ ಪೈಕಿ 77.09 ಕೋಟಿ ರು. ಬಿಡುಗಡೆ ಮಾಡಿತ್ತು. ಸೆಪ್ಟಂಬರ್‌ನಲ್ಲಿ 1,962.29 ಕೋಟಿ ರು. ಬೇಡಿಕೆಯಲ್ಲಿ 1,045.00 ಕೋಟಿ ರು. ಬಿಡುಗಡೆ ಮಾಡಿದ್ದ ಇಲಾಖೆಯು 917.29 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಅಕ್ಟೋಬರ್‌ನಲ್ಲಿ 1,644.80 ಕೋಟಿ ರು. ಬೇಡಿಕೆ ಇತ್ತಾದರೂ ಇದರಲ್ಲಿ 1,045.00 ಕೋಟಿ ರು. ಬಿಡುಗಡೆಗೊಳಿಸಿ ಇನ್ನೂ 559.59 ಕೋಟಿ ರು. ಬಾಕಿ ಇರಿಸಿಕೊಂಡಿತ್ತು ಎಂಬುದು ತಿಳಿದು ಬಂದಿದೆ.

 

ಇದಲ್ಲದೇ ಹೆಚ್ಚುವರಿ ವಿದ್ಯುತ್‌ ಬಳಕೆಯಿಂದ ಬೇಡಿಕೆ ಹೆಚ್ಚಾಗಿರುವ ಕಾರಣ ಅಧಿಕ ಸಹಾಯಧನದ ರೂಪದಲ್ಲಿ  4,0479.68 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ್ದ ಅರ್ಥಿಕ ಇಲಾಖೆಯು 2,000 ಕೋಟಿ ರು.ಗಳನ್ನು ಮುಂಗಡ ಸಹಾಯಧನಕ್ಕೆ ಸಮ್ಮತಿ ವ್ಯಕ್ತಪಡಿಸಿ ಬಿಡುಗಡೆ ಮಾಡಿತ್ತು. ಈ ಮೊತ್ತವೂ ಸೇರಿದಂತೆ ಇದುವರೆಗೆ 10,561 ಕೋಟಿ ರು.ಗಳನ್ನು ಸಹಮತಿಸಿ ಬಿಡುಗಡೆ ಮಾಡಿದೆ.

 

ಆದರೆ 2023ರ ಏಪ್ರಿಲ್‌ರಿಂದ 2023ರ ನವೆಂಬರ್‌ವರೆಗೆ ಮುಂಗಾರು ಮಳೆ ಕೊರತೆ ಪರಿಣಾಮ  ಹೆಚ್ಚುವರಿ ವಿದ್ಯುತ್‌ ಬಳಕೆಯಿಂದಾಗಿ ಬೇಡಿಕೆಯು ಹೆಚ್ಚಾಗಿದೆ. ಹೀಗಾಗಿ ಒಟ್ಟಾರೆ 14,803.53 ಕೋಟಿ ರು. ವಾಸ್ತವಿಕ ಬೇಡಿಕೆ ಇರಿಸಿತ್ತು. ಇದೇ ಅವಧಿಯಲ್ಲಿ 8,561.00 ಕೋಟಿ ರು. (2,000 ಕೋಟಿ ಮುಂಗಡ ಸಹಾಯಧನ ಹೊರತುಪಡಿಸಿ), ಸಹಾಯಧನ, ಇದಲ್ಲದೇ ಹೆಚ್ಚುವರಿ ವಿದ್ಯುತ್‌ ಬಳಕೆಯಿಂದ ಹೆಚ್ಚಾಗಿರುವ ಬೇಡಿಕೆಗೆ ಅನುಗುಣವಾಗಿ 6,242 ಕೋಟಿ ರು ಕೋರಿದೆ. ಅಲ್ಲದೇ ಡಿಸೆಂಬರ್‌ ತಿಂಗಳಿನಿಂದ 2024 ಮಾರ್ಚ್‌ವರೆಗೂ ವಾಸ್ತವಿಕ ಬೇಡಿಕೆ ಹೆಚ್ಚಳವಾಗುವ ಸಂಭವವಿರುವುದು ಗೊತ್ತಾಗಿದೆ.

 

ಹೀಗಾಗಿ 2,582 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಇಂಧನ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ವಿದ್ಯುತ್‌ ಸಹಾಯಧನವನ್ನು ಸೀಮಿತಗೊಳಿಸಬೇಕು ಎನ್ನುವುದು ಆರ್ಥಿಕ ಇಲಾಖೆಯ ನಿಲುವಾಗಿದ್ದು ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಸರಬರಾಜು ಮಾಡಿ ಈಗ ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಕೋರುತ್ತಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದೆ.

 

ಈ ಪ್ರಸ್ತಾವನೆಯ ಕುರಿತು ಆದೇಶಕ್ಕಾಗಿ ಕಡತವನ್ನು ಮಂಡಿಸಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts