ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮುಖ್ಯ ವರದಿಯಲ್ಲಿ ಸಹಿ; ಸದಸ್ಯ ಕಾರ್ಯದರ್ಶಿ ವಿವರಣೆ ಮಾಹಿತಿ ‘ಗೌಪ್ಯ’

ಬೆಂಗಳೂರು; ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಹೆಚ್‌ ಕೆ ಕಾಂತರಾಜ ಅವರು ಸಲ್ಲಿಸಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಮುಖ್ಯ ವರದಿಗೆ ಅಂದಿನ ಸದಸ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿ ಡಾ ಎನ್‌ ವಿ ಪ್ರಸಾದ್‌ ಅವರು ಸಹಿ ಮಾಡಿದ್ದಾರೆಯೇ, ವರದಿಗೆ ಸಹಮತಿ ವ್ಯಕ್ತಪಡಿಸಿದ್ದಾರೆಯೇ, ಇಲ್ಲವೇ ಎಂಬ ಮಾಹಿತಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಗೌಪ್ಯವಾಗಿರಿಸಿದೆ.

 

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತಾದ ಮೂಲ ವರದಿಯೇ ನಾಪತ್ತೆಯಾಗಿದೆ ಎಂದು ಖುದ್ದು ಆಯೋಗವೇ ಬರೆದಿದ್ದ ಪತ್ರವು 2023ರ ನವೆಂಬರ್‍‌ನಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಇದರ ಬೆನ್ನಲ್ಲೇ ಆಯೋಗದ ಹಿಂದಿನ ಕಾರ್ಯದರ್ಶಿ ವಿವರಣೆ ಕುರಿತಾದ ಮಾಹಿತಿಯನ್ನೇ ಗೌಪ್ಯವಾಗಿರಿಸಿರುವುದು ಮುನ್ನೆಲೆಗೆ ಬಂದಿದೆ.

 

ಆಯೋಗವು ಸಿದ್ಧಪಡಿಸಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015ರ ಮುಖ್ಯ ವರದಿಯ ಮೂಲ ಪ್ರತಿಯ ವಿವರದ ಕುರಿತು ಆಯೋಗವು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಎನ್‌ ವಿ ಪ್ರಸಾದ್‌ ಅವರ ವಿವರಣೆ ಕೋರಿ 2022ರ ಆಗಸ್ಟ್‌ 12ರಂದು ಪತ್ರ ಬರೆದಿತ್ತು.

 

ಈ ಪತ್ರ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್‌ ವಿ ಪ್ರಸಾದ್‌ ಅವರ ಕಚೇರಿಗೆ ‘ದಿ ಫೈಲ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ವರ್ಗಾಯಿಸಿತ್ತು.

 

ಆದರೀಗ ಈ ಮಾಹಿತಿಯು ಗೌಪ್ಯ ಸ್ವರೂಪದ್ದು ಎಂದು ತೀರ್ಮಾನಿಸಿರುವ ಆಯೋಗವು 2023ರ ನವಂಬರ್‍‌ 28ರಂದು ಹಿಂಬರಹ ನೀಡಿದೆ.

 

ಹಿಂಬರಹದಲ್ಲೇನಿದೆ?

 

ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ ತಾವು ಕೋರಿರುವ ಮಾಹಿತಿಯು ಗೌಪ್ಯ ಸ್ವರೂಪದ್ದಾಗಿದೆ. ಕಾರಣ, ಆಯೋಗದ ಸಭೆಯ ನಿರ್ಣಯದಂತೆ ಕ್ರಮ ವಹಿಸಲಾಗುವುದು. ಮುಂದುವರೆದು ಆಯೋಗದ ಸಭೆಯು ಈವರೆವಿಗೂ ಜರುಗಿರುವುದಿಲ್ಲ ಎಂದು ಮಾಹಿತಿ ಒದಗಿಸಿದೆ.

 

ಹೀಗಾಗಿ ಡಾ ಎನ್‌ ವಿ ಪ್ರಸಾದ್‌ ಅವರು ಆಯೋಗಕ್ಕೆ ವಿವರಣೆ ನೀಡಿದ್ದಾರೆಯೇ, ಒಂದೊಮ್ಮೆ ನೀಡಿದ್ದರೇ ವಿವರಣೆಯಲ್ಲೇನಿದೆ, ಮುಖ್ಯ ವರದಿಗೆ ಸಹಮತಿ ವ್ಯಕ್ತಪಡಿಸಿದ್ದಾರೆಯೇ, ಇಲ್ಲವೇ ಎಂಬ ಯಾವ ಮಾಹಿತಿಯೂ ಸದ್ಯಕ್ಕೆ ಲಭ್ಯವಿಲ್ಲದಂತಾಗಿದೆ.

 

ಆಯೋಗದ ಕಾರ್ಯದರ್ಶಿ ಪತ್ರದಲ್ಲೇನಿತ್ತು?

 

2014-15ನೇ ಸಾಲಿನಲ್ಲಿ ನೀಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ. ಈ ಆಯೋಗವು ಸಿದ್ಧಪಡಿಸಿದ ಅಂಕಿ ಅಂಶಗಳ ವಿವರ ಹಾಗೂ ಮುಖ್ಯ ವರದಿ ಒಳಗೊಂಡಂತೆ ಸೀಲ್ಡ್‌ ಬಾಕ್ಸ್‌ನಲ್ಲಿ ಇರಿಸಿ ಆಯೋಗಕ್ಕೆ ನೀಡಿದ್ದು ಈ ಬಾಕ್ಸ್‌ಗಳನ್ನು ಕಛೇರಿಯ ಕೊಠಡಿಯಲ್ಲಿ ಇಟ್ಟು ಸೀಲು ಮಾಡಲಾಗಿರುತ್ತದೆ.

 

ಆಯೋಗದ 214ನೇ ವಿಶೇಷ ಸಭೆಯ ತೀರ್ಮಾನದಂತೆ 20214 ಆಗಸ್ಟ್‌ 26ರಂದು ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳ ಸಮಕ್ಷಮದಲ್ಲಿ ಆಯೋಗದ ಕಛೇರಿಯಲ್ಲಿ ಭದ್ರವಾಗಿ ಇರಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರಲ್ಲಿ ಸಂಗ್ರಹಿಸಿ ಅಂಕಿ ಅಂಶಗಳು ಹಾಗೂ ಇತರೆ ವಿವರಗಳನ್ನೊಳಗೊಂಡ 04 ಸೀಲ್ಡ್‌ ಮಾಡಲ್ಪಟ್ಟಿದ್ದ ಪೆಟ್ಟಿಗೆಗಳನ್ನು ತೆರೆಯಲಾಗಿರುತ್ತದೆ.

 

ಈ ಪೆಟ್ಟಿಗೆಗಳಲ್ಲಿ ಇರಿಸಿದ್ದ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಗಳ ವಿವರಗಳಿದ್ದವು. ಅಂಕಿ ಅಂಶಗಳನ್ನೊಳಗೊಂಡ ಮುದ್ರಿತ ಪುಸ್ತಕಗಳು, ಮುಖ್ಯ ವರದಿ, 02 ಸಿಡಿ ಇದ್ದವು.

 

ಮುದ್ರಿತಗೊಂಡಿರುವ ಮುಖ್ಯ ವರದಿಯನ್ನು ಆಯೋಗವು ಗಮನಿಸಿದಾಗ ಮುಖ್ಯ ವರದಿಯ ಮೂಲ/ಹಸ್ತ ಪ್ರತಿ ಸೀಲ್ಡ್‌ ಬಾಕ್ಸ್‌ನಲ್ಲಿ ಲಭ್ಯವಿಲ್ಲದೇ ಈ ಮುದ್ರಿತ ಮುಖ್ಯ ವರದಿಯಲ್ಲಿ ಸಹಿ ಹಾಕಿರುವ ಪುಟದಲ್ಲಿ ಹಿಂದಿನ ಅಧ್ಯಕ್ಷರಾದ ಹೆಚ್‌ ಕಾಂತರಾಜ ಹಾಗೂ ಎಲ್ಲಾ ಸದಸ್ಯರುಗಳ ಸ್ಕ್ಯಾನ್‌ ಸಹಿ ಇರುತ್ತದೆ. ಆದರೆ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೇ ಇದ್ದು (Bracket)ನಲ್ಲಿ ಡಾ ಎನ್‌ ವಿ ಪ್ರಸಾದ್‌ ಭಾ ಆ ಸೇ ಎಂದು ನಮೂದಿಸಲಾಗಿರುತ್ತದೆ.

 

ಆಯೋಗದ 217ನೇ ಸಭೆಯಲ್ಲಿ ತೀರ್ಮಾನಿಸಿದಂತೆ ಮುಖ್ಯ ವರದಿಯ ಮೂಲ/ಹಸ್ತ ಪ್ರತಿ ಇಲ್ಲದೇ ಇದ್ದು ಹಾಗೂ ಹಾಲಿ ಲಭ್ಯವಿದ್ದ ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಹೆಸರು ಇದ್ದು ಸಹಿ ಇಲ್ಲದೇ ಇರುವ ಬಗ್ಗೆ ಅಂದಿನ ಸದಸ್ಯ ಕಾರ್ಯದರ್ಶಿರವರಾದ ಡಾ ಎನ್‌ ವಿ ಪ್ರಸಾದ್‌ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ನಿರ್ಣಯಿಸಲಾಗಿರುತ್ತದೆ.

 

ಮುಖ್ಯ ವರದಿಯ ಮೂಲ/ಹಸ್ತ ಪ್ರತಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ ಹಾಗೂ ಹಾಲಿ ಲಭ್ಯವಿದ್ದ ಮುದ್ರಿತ ಪ್ರತಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೇ ಇದ್ದು ಇದನ್ನು ಮುದ್ರಿಸಿರುವುದರ ಬಗ್ಗೆ ಕಚೇರಿಯಿಂದ ಯಾವುದೇ ಪತ್ರ ವ್ಯವಹಾರವಾಗಲೀ ಅಥವಾ ಹಣ ಪಾವತಿಯಾಗಲಿ ಮಾಡಲಾಗಿರುವುದಿಲ್ಲ. ಹಾಗಾಗಿ ಈ ವಿಷಯಕ್ಕೆ ಸಂಬಂಧಪಟ್ಟ ಹೆಚ್ಚಿನ ವಿವರಗಳನ್ನು ಒಳಗೊಂಡಂತೆ ತಮ್ಮ ಅಭಿಪ್ರಾಯಗಳನ್ನು ಆಯೋಗಕ್ಕೆ ನೀಡಲು 2022ರ ಮಾರ್ಚ್‌ 5ರ ಪತ್ರದಲ್ಲಿ ಕೋರಲಾಗಿತ್ತು. ಆದರೆ ಈವರೆವಿಗೂ ತಮ್ಮಿಂದ ಅಭಿಪ್ರಾಯ ಆಯೋಗದಲ್ಲಿ ಸ್ವೀಕೃತವಾಗಿರುವುದಿಲ್ಲ ಎಂದು ಆಯೋಗವು ಪತ್ರದಲ್ಲಿ ಗಮನಕ್ಕೆ ತಂದಿತ್ತು.

 

ಒಂದು ವಾರದಲ್ಲಿ ತಮ್ಮ ಅಭಿಪ್ರಾಯ ನೀಡದಿದ್ದಲ್ಲಿ ಆಯೋಗದ ಮುಖ್ಯ ವರದಿಯ ತಯಾರಿಕೆಯ ವಿವರ ಹಾಗೂ ಮುದ್ರಿತ ಮುಖ್ಯ ವರದಿಗೆ ಸಹಿ ಇಲ್ಲದೇ ಇರುವುದು ತಮ್ಮ ಗಮನಕ್ಕೆ ಬಂದಿರುತ್ತದೆ. ಆದಾಗ್ಯೂ ತಮ್ಮ ಸಹಮತವಿಲ್ಲದೇ ಸಹಿ ಮಾಡಿರುವುದಿಲ್ಲ ಎಂದ ಪರಿಗಣಿಸಲಾಗುವುದು ಎಂಬುದಾಗಿ ತಿಳಿಸಲು ಆಯೋಗದ ಅಧ್ಯಕ್ಷರಿಂದ ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಅವರು ಎನ್‌ ವಿ ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದರು.

SUPPORT THE FILE

Latest News

Related Posts