ಬೆಂಗಳೂರು; ರೈತರ ಆತ್ಮಹತ್ಯೆ, ಬರ, ರೈತರ ಸಾಲಮನ್ನಾ ಕುರಿತಾದ ವಿಷಯಗಳು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ರಾಜ್ಯದ ಸಹಕಾರ ಸಂಘಗಳಲ್ಲಿ ಕೃಷಿ ಸಾಲ ಪಡೆದಿದ್ದ 31.65 ಲಕ್ಷ ರೈತರು 25,547.02 ಕೋಟಿ ರು. ಸಾಲ ಹೊರಬಾಕಿ ಹೊಂದಿದ್ದಾರೆ ಎಂಬ ಅಂಕಿ ಅಂಶಗಳು ಇದೀಗ ಮುನ್ನೆಲೆಗೆ ಬಂದಿವೆ.
ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲಿ ಈಗಾಗಲೇ ರಾಜ್ಯ ಸರ್ಕಾರವು ಸ್ಪಷ್ಟಪಡಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರು. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿತ್ತು.
2023ರ ನವೆಂಬರ್ 20ರ ಅಂತ್ಯಕ್ಕೆ ಸಹಕಾರ ಸಂಘಗಳಲ್ಲಿ 29.75 ಲಕ್ಷ ರು. ರೈತರು 21,912.14 ಕೋಟಿ ರು.ಗಳ ಅಲ್ಪಾವಧಿ ಸಾಲ ಮತ್ತು 1.91 ಲಕ್ಷ ರೈತರು 3,634.88 ಕೋಟಿ ರು.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಹೀಗೆ ಒಟ್ಟು 31.65 ಲಕ್ಷ ರು. ರೈತರು 25,547.02 ಕೋಟಿ ರ.ಗಳ ಕೃಷಿ ಸಾಲದ ಹೊರಬಾಕಿ ಹೊಂದಿರುತ್ತಾರೆ ಎಂಬ ಅಂಕಿ ಅಂಶಗಳನ್ನು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಸದನಕ್ಕೆ ಒದಗಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅಂದರೆ 2023ರ ಮೇ 20ರಿಂದ 2023ರ ನವೆಂಬರ್ 1ರವರೆಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಹಾಗೂ ಶೇ. 3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಿತ್ತು. ಈ ಪೈಕಿ 5.00 ಲಕ್ಷ ರು.ವರೆಗಿನ ಅಲ್ಪಾವಧಿ ಕೃಷಿ ಸಾಲವನ್ನು 2,372 ರೈತರಿಗೆ ವಿತರಿಸಿತ್ತು ಎಂದು ಮಾಹಿತಿ ಒದಗಿಸಿದ್ದರು.
ಅಲ್ಪಾವಧಿ ಕೃಷಿ ಸಾಲ 1038085.94 ಲಕ್ಷ ರು., ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ 38160.32 ಲಕ್ಷ ರು., ಸೇರಿ ಒಟ್ಟು ಕೃಷಿ ಸಾಲ1076246.00 ಲಕ್ಷ ರು. ಸಾಲ ವಿತರಿಸಿದೆ.
ರೈತರು ಪಡೆದಿರುವ 50 ಸಾವಿರ ಮತ್ತು 1 ಲಕ್ಷ ರು. ಸಾಲವನ್ನು ಮನ್ನಾ ಮಾಡುವ ಸಂಬಂಧ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ರೈತರಿಗೆ ಸಂಬಂಧಿಸಿದಂತೆ ನೀಡಿರುವ ಹಸಿರು ಪಟ್ಟಿಗೆ ಆರ್ಥಿಕ ಇಲಾಖೆಯು ಕೊಕ್ಕೆ ಹಾಕಿದೆ. ಅಲ್ಲದೆ ಒಂದು ಲಕ್ಷ ರು. ಸಾಲ ಮನ್ನಾ ಯೋಜನೆ ಮುಂದುವರಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೆಚ್ಚುವರಿ ಅನುದಾನ ಕೋರಿಕೆಯ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ಆರ್ಥಿಕ ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2021ರ ಮಾರ್ಚ್ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ಥಿಕ ಇಲಾಖೆಯು ಪುನರುಚ್ಛರಿಸಿತ್ತು.
ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಆರ್ಥಿಕ ಇಲಾಖೆಯು 2021ರ ಆಗಸ್ಟ್‌ನಿಂದ ನವೆಂಬರ್ 29ರವರೆಗೆ ನಡೆಸಿರುವ ಪತ್ರ ವ್ಯವಹಾರ ಮತ್ತು ಟಿಪ್ಪಣಿ ಹಾಳೆ, ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರು 2021ರ ನವೆಂಬರ್ 8ರಂದು ಬರೆದಿದ್ದರು.
1.00 ಲಕ್ಷ ರು. ಸಾಲ ಮನ್ನಾ ಯೋಜನೆಯನ್ನು 2021ರ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಆರ್ಥಿಕ ಇಲಾಖೆ ಹೇಳಿತ್ತು. ಆದರೆ ಸಹಕಾರ ಸಂಘಗಳ ನಿಬಂಧಕರು 2021-22ನೇ ಆರ್ಥಿಕ ವರ್ಷದಲ್ಲಿಯೂ ಇದೇ ಯೋಜನೆಯಡಿಯಲ್ಲಿ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅನುದಾನ ಒದಗಿಸಿದ್ದೇ ಆದಲ್ಲಿ ಮುಂದಿನ ವರ್ಷಗಳಲ್ಲೂ ಅನುದಾನ ಒದಗಿಸಬೇಕಾದ ಅನಿವಾರ್ಯತೆ ಬರಲಿದೆ. ಹೀಗಾಗಿ 2021ರ ಮಾರ್ಚ್ 6ರಂದು ತಳೆದಿರುವ ನಿಲುವನ್ನೇ ಮುಂದುವರೆಸಬೇಕು ಎಂದು ಆರ್ಥಿಕ ಇಲಾಖೆಯು ಲೆಕ್ಕಾಚಾರವನ್ನು ಮುಂದಿಟ್ಟಿತ್ತು.
ಮಾರ್ಚ್ 6ರ ಟಿಪ್ಪಣಿಯಲ್ಲೇನಿತ್ತು?
ಸಹಕಾರ ಸಂಘಗಳ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. 2020-21ನೇ ಸಾಲಿನ ಆಯವ್ಯಯದ ( ಲೆಕ್ಕ ಶೀರ್ಷಿಕೆ 2425-00-107-2-56 ರಡಿ)ಲ್ಲಿ 278.40 ಕೋಟಿ ಹಾಗೂ ಅಪೆಕ್ಸ್ ಬ್ಯಾಂಕ್‌ನಲ್ಲಿ 34.73 ಕೋಟಿ ಸೇರಿ ಸಾಲಮನ್ನಾ ಯೋಜನೆಯ ಹಸಿರು ಪಟ್ಟಿ ರೈತರ ಬಾಕಿ ಇರುವ 57,229 ರೈತರಿಗೆ ಸಾಲ ಮನ್ನಾ ಯೋಜನೆಗಾಗಿ 295.14 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿತ್ತು. ಅಲ್ಲದೆ 1.00 ಲಕ್ಷ ಸಾಲ ಮನ್ನಾ ಯೋಜನೆಯನ್ನು ಇದೇ ಅರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿತ್ತು.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ 9,146 ರೈತರಿಗೆ ಸಂಬಂಧಿಸಿದಂತೆ 4707.42 ಲಕ್ಷ ರು.ಗಳ ಸಾಲ ಮನ್ನಾ ಮಾಡಲು ಹಸಿರು ಪಟ್ಟಿ ನೀಡಿ ವರದಿ ಸಲ್ಲಿಸಿದೆ. 1.00 ಲಕ್ಷ ರು.ಗಳ ಸಾಲ ಮನ್ನಾ ಮತ್ತು 50,000 ರು. ಸಾಲ ಮನ್ನಾ ಯೋಜನೆಗೆ ಸೇರಿ ಒಟ್ಟು 361.67 ಕೋಟಿ ರು. ಗಳನ್ನು ಪೂರಕ ಅಂದಾಜಿನಲ್ಲಿ ಒದಗಿಸಲು ಸಹಕಾರ ಇಲಾಖೆಯು 2021ರ ಮಾರ್ಚ್ 6ರಂದು ಕೋರಿದ್ದ ಪ್ರಸ್ತಾವನೆಯನ್ನು ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ತಿರಸ್ಕರಿಸಿದ್ದ ಆರ್ಥಿಕ ಇಲಾಖೆಗೆ ಸಹಕಾರ ಸಂಘಗಳ ನಿಬಂಧಕರು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದನ್ನು ಒಪ್ಪಬೇಕೇ ಬೇಡವೇ ಎಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ಥಿಕ ಇಲಾಖೆಯು ಚರ್ಚಿಸಿತ್ತು.
ಒಂದು ಲಕ್ಷ ರು. ಸಾಲಮನ್ನಾ ಯೋಜನೆಗೆ ಕೊಕ್ಕೆ; ಅನುದಾನ ಕೋರಿಕೆ ಪ್ರಸ್ತಾವನೆ ನೆನೆಗುದಿಗೆ
‘ಅಲ್ಲದೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದಲೂ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿವೆ. ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರು ಹಸಿರು ಪಟ್ಟಿಗೆ ಸೇರುವುದರಿಂದ ಈ ಒಂದು ಪ್ರಕರಣದಲ್ಲಿ ಅನುದಾನ ಒದಗಿಸಿದ ಪಕ್ಷದಲ್ಲಿ ಬಹಳ ವರ್ಷಗಳವರೆಗೂ ಅನುದಾನ ಒದಗಿಸುತ್ತ ಇರಬೇಕಾಗುವುದು ಆದ್ದರಿಂದ 2021ರ ಮಾರ್ಚ್ 6ರಂದು ತಳೆದಿದ್ದ ನಿಲುವಿಗೇ ಬದ್ಧವಾಗಿರಬೇಕು,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು.
ಸಹಕಾರ ಇಲಾಖೆಯು ಒಟ್ಟಾರೆ ಹಸಿರು ಪಟ್ಟಿ ರೈತರನ್ನು ಗುರುತಿಸುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ಅಂತಿಮ ಪಟ್ಟಿ ತಯಾರಿಸಿದ ನಂತರ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸುವವರೆಗೂ ಪ್ರಸ್ತಾವನೆಯನ್ನು ವಿಲೇ ಇಡಬೇಕು ಎಂದು 2021ರ ಅಕ್ಟೋಬರ್‌ನಲ್ಲಿ ಹೇಳಿತ್ತು.
1.00 ಲಕ್ಷ ರು.ಗಳ ಸಾಲ ಮನ್ನಾ ಯೋಜನೆಯಡಿಯಲ್ಲಿ 232.00 ಕೋಟಿ ಹಾಗೂ 50,000 ರು.ಗಳ ಸಾಲ ಮನ್ನಾ ಯೋಜನೆಗೆ 129.67 ಕೋಟಿ ಸೇರಿ ಒಟ್ಟು 361.67 ಕೋಟಿ ಅನುದಾನವನ್ನು ಆಯವ್ಯಯ ಪೂರಕ ಅಂದಾಜಿನಲ್ಲಿ ಅವಕಾಶ ಕಲ್ಪಿಸಬೇಕು ಎಂದು 2021ರ ನವೆಂಬರ್ 25ರಂದು ಮತ್ತೊಮ್ಮೆ ಕೋರಿತ್ತು.
ಸದ್ಯಕ್ಕೆ 1.00 ಲಕ್ಷ ರು. ಸಾಲ ಮನ್ನಾ ಯೋಜನೆಗೆ 120. 43 ಕೋಟಿ, 47. 07 ಕೋಟಿ ಸೇರಿ ಒಟ್ಟು 167.50 ಕೋಟಿ ಬಿಡುಗಡೆ ಮಾಡಲು ಸಹಮತಿ ನೀಡಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾವನೆ ಸಲ್ಲಿಸಿದ್ದರು.
2021-22ನೇ ಸಾಲಿನಲ್ಲಿಯೂ 21,857 ರೈತರಿಗೆ ಈಗಾಗಲೇ ಹಸಿರು ಪಟ್ಟಿ ನೀಡಲಾಗಿತ್ತು. ಇದಕ್ಕಾಗಿ 120.43 ಕೋಟಿ ರು. ಅನುದಾನ ಒದಗಿಸಬೇಕು ಎಂದು ಕೋರಿತ್ತು. ಅದೇ ರೀತಿ ಮುಂಬರುವ ದಿನಗಳಲ್ಲಿ 18,965 ಸಂಖ್ಯೆಯ ರೈತರಿಗೆ ಹಸಿರು ಪಟ್ಟಿ ದೊರೆಯಲಿದ್ದು, ಇದಕ್ಕಾಗಿ 111.57 ಕೋಟಿ ರು. ಅನುದಾನ ಒದಗಿಸಬೇಕು ಎಂದು ಅಂದಾಜಿಸಿತ್ತು. ಆದರೆ 2021-22ನೇ ಸಾಲಿನ ಆಯವ್ಯಯದಲ್ಲಿ (ಲೆಕ್ಕ ಶೀರ್ಷಿಕೆ 2425-00-107-2-56 ರಡಿ) ಯಾವುದೇ ಅನುದಾನ ಒದಗಿಸಿರಲಿಲ್ಲ.
ಡಿಸಿಸಿ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಹಗರಣ: ರೈತರ ಸಾಲ ವಿತರಣೆಗಿಲ್ಲ ಹಣ!
ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ಪೈಪ್‌ಲೈನ್ ಪ್ರಕರಣಗಳನ್ನು ತೆರವುಗೊಳಿಸಿ ಈ ಯೋಜನೆಯನ್ನು ಮುಕ್ತಾಯಗೊಳಿಸಲು ನಿರ್ದೇಶಿಸಲಾಗಿತ್ತು. ಅಲ್ಲದೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗಿತ್ತು. ಹೀಗಾಗಿ ಈ ಯೋಜನೆಯನ್ನು ಪುನರ್ ತೆರೆಯುವ ಹಾಗೂ ಈ ಪ್ರಕರಣಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಪ್ರಮೇಯವೇ ಇಲ್ಲ ಎಂದು ಆರ್ಥಿಕ ಇಲಾಖೆಯು 2021ರ ಮಾರ್ಚ್ 6ರಂದು ಹಿಂಬರಹ ನೀಡಿತ್ತು.
ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ 2021ರ ಜೂನ್ 25ರಂದು ಸಭೆ ನಡೆದಿತ್ತು. ಈ ಅವಧಿಯವರೆಗೆ 17,06, 049 ರೈತರಿಗೆ ಹಸಿರು ಪಟ್ಟಿ ನೀಡಲಾಗಿತ್ತು. 59,618 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ 21,035 ರೈತರು ಅದೇ ದಿನಾಂಕದಂದು ಅರ್ಹತೆ ಹೊಂದಿದ್ದರು. ಈ ಪೈಕಿ ಒಂದು ಕುಟುಂಬಕ್ಕೆ 1 ಲಕ್ಷ ಹೊರತುಪಡಿಸಿ 10,000 ರೈತರು ಸಾಲ ಮನ್ನಾಗೆ ಅರ್ಹತೆ ಹೊಂದಿದ್ದರು.
ಸಾಲ ವಿತರಣೆಯಲ್ಲಿ ಕೋಟ್ಯಂತರ ರು. ಅಕ್ರಮ; ಕಲಬುರಗಿ ಡಿಸಿಸಿ ಬ್ಯಾಂಕ್ ಸೂಪರ್‌ಸೀಡ್?
2021ರ ಸೆ.7ರ ಹೊತ್ತಿಗೆ 20,697 ರೈತರ ಅರ್ಹತೆ ಗುರುತಿಸಲು ಬಾಕಿ ಇತ್ತು. ಇದರಲ್ಲಿ ಪ್ರಮುಖವಾಗಿ 12,237 ರೈತರ ಪಡಿತರ ಚೀಟಿಗಳು ರೈತರು ದಾಖಲೆ ಸಲ್ಲಿಸುವಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದತ್ತಾಂಶಕ್ಕೆ ತಾಳೆ ಇತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಶವು ಈ ಪಡಿತರ ಚೀಟಿಗಳನ್ನು ತಂತ್ರಾಂಶದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸರಿ ಇದೆ ಎಂದು ದೃಢೀಕರಿಸಿರಲಿಲ್ಲ.
ರೈತರು ಸಲ್ಲಿಸಿದ ಆಧಾರ್, ಪಡಿತರ ಚೀಟಿ ಮತ್ತು ಆರ್‌ಟಿಸಿಗಳು ತಂತ್ರಾಂಶದಲ್ಲಿನ ಕೆಲವು ನ್ಯೂನತೆಗಳಿಂದ ಸಂಬಂಧಿಸಿದ ಇಲಾಖೆಗಳ ದತ್ತಾಂಶದೊಂದಿಗೆ ತಾಳೆಯಾಗದ ಕಾರಣ ಸ್ವಯಂ ದೃಢೀಕರಿಸಿ ಇಂತಹ ಪ್ರಕರಣಗಳನ್ನು ಸರಿಪಡಿಸಲಾಗಿತ್ತು.