ಅಮೇರಿಕ ಪ್ರವಾಸಕ್ಕೆ 2.15 ಕೋಟಿ ಖರ್ಚು; ಒಂದೇ ಒಂದು ಕಂಪನಿಯೊಂದಿಗೂ ಒಡಂಬಡಿಕೆಯಿಲ್ಲ

ಬೆಂಗಳೂರು; ಬಂಡವಾಳ ಸೆಳೆಯುವ ನಿಟ್ಟಿನಲ್ಲಿ ಸಚಿವ ಎಂ ಬಿ ಪಾಟೀಲ್‌ ಅಧ್ಯಕ್ಷತೆಯಲ್ಲಿ ಅಮೇರಿಕಾಕ್ಕೆ ತೆರಳಿದ್ದ ನಿಯೋಗವು ಇದಕ್ಕಾಗಿ 2.15 ಕೋಟಿ ರು. ವೆಚ್ಚ ಮಾಡಿತ್ತು. ಆದರೆ ಇದುವರೆಗೂ ಯಾವ ಕಂಪನಿಯೊಂದಿಗೂ ಒಡಂಬಡಿಕೆಯನ್ನೇ ಮಾಡಿಕೊಂಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ವಿಧಾನಪರಿಷತ್‌ನಲ್ಲಿ ಸದಸ್ಯ ಟಿ ಎ ಶರವಣ ಅವರು ಕೇಳಿದ್ದ ಪ್ರಶ್ನೆಗೆ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರು ಒದಗಿಸಿರುವ ಉತ್ತರದಲ್ಲಿ ಈ ವಿವರಗಳಿವೆ.

 

ಅಮೇರಿಕಾ ಪ್ರವಾಸದಿಂದ 25,000 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳ ನಿರೀಕ್ಷೆ ಹೊಂದಿತ್ತಾದರೂ ಇದುವರೆಗೂ ಅಮೇರಿಕಾದ ಯಾವುದೇ ಕಂಪನಿಯೊಂದಿಗೂ ಒಂದೇ ಒಂದು ಒಡಂಬಡಿಕೆಯನ್ನೂ ಮಾಡಿಕೊಂಡಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.

 

ರಾಜ್ಯದಲ್ಲಿ ಬೃಹತ್‌ ಕೈಗಾರಿಕೆಗಳೀಗೆ ಬಂಡವಾಳ ಸೆಳೆಯುವ ನಿಟ್ಟಿನಲ್ಲಿ 2023ರ ಸೆಪ್ಟಂಬರ್‌ 2023ರಿಂದ ಅಕ್ಟೋಬರ್‌ 6ರವೆಗೆ ಸಚಿವ ಎಂ ಬಿ ಪಾಟೀಲ್‌ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ನಿಯೋಗವು ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕ ಪ್ರವಾಸ ಕೈಗೊಂಡಿತ್ತು.

 

 

ಈ ಪ್ರವಾಸದ ವೇಳೆ ಒಟ್ಟು 36 ಕಂಪನಿಗಳೊಂದಿಗೆ ಸಭೆ ನಡೆಸಲಾಗಿತ್ತು. 27 ಕಂಪನಿಗಳ ಮುಖ್ಯಸ್ಥರೊಂದಿಗೆ ಪ್ರತ್ಯೇಕ ಸಭೆ ಹಾಗೂ 9 ಸಂವಾದ ಸಭೆ ಏರ್ಪಡಿಸಲಾಗಿತ್ತು. ಈಗಾಗಲೇ ರಾಜ್ಯದಲ್ಲಿ ಬಂಡವಾಳ ಹೂಡಿರುವ ಸಂಸ್ಥೆಗಳನ್ನು ಇನ್ನು ಹೆಚ್ಚಿನ ಬಂಡವಾಳವನ್ನು ರಾಜ್ಯದಲ್ಲಿ ಹೂಡಲು ನಿಯೋಗವು ಕೋರಿತ್ತು.

 

ಹಾಗೂ ಹೊಸ ಕಂಪನಿಗಳ ಂಉಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಿ ಅವರನ್ನು ರಾಜ್ಯದಲ್ಲಿ ಬಂಡವಾಳ ಹೂಡಲು ಆಹ್ವಾನಿಸಲಾಗಿತ್ತು. ಇದರಿಂದ ಅಂದಾಜು 25,000 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳ ನಿರೀಕ್ಷೆ ಹೊಂದಿದೆ ಎಂದು ಸಚಿವ ಎಂ ಬಿ ಪಾಟೀಲ್‌ ಅವರು ಉತ್ತರದಲ್ಲಿ ಮಾಹಿತಿ ಒದಗಿಸಿದ್ದಾರೆ.

 

‘ಈ ಪ್ರವಾಸದ ನಂತರ ಇಲ್ಲಿಯವರೆಗೆ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಯಾವುದೇ ಒಡಬಂಡಿಕೆ ಮಾಡಿಕೊಂಡಿರುವುದಿಲ್ಲ,’ ಎಂದು ಉತ್ತರಿಸಿದ್ದಾರೆ.

 

 

ಯುಎಸ್‌ಎ ಪ್ರವಾಸದ ವೆಚ್ಚದ ವಿವರ

 

ವಿಮಾನ ದರ, ವೀಸಾ ಮತ್ತು ಸಾಗರೋತ್ತರ ವಿಮಾ ಶುಲ್ಕಗಳಿಗಾಗಿ 89,50,614 ರು. , ವಾಸ್ತವ್ಯ ಮತ್ತು ಅಧಿಕೃತ ಸಭೆಗಳಿಗಾಗಿ 59,09,973 ರು., ಸ್ಥಳೀಯ ಸಾರಿಗೆ ವ್ಯವಸ್ಥೆ (ಯು ಎಸ್‌ ಎ) 54,86,435 ರು., ಕೋರಿಯರ್‌ ಸ್ಮರಣಿಕೆ, ಮುದ್ರಣ ಮತ್ತು ಲೇಖನ ಸಾಮಗ್ರಿಗಳಿಗಾಗಿ 5,28,581 ರು., ತುಟ್ಟಿ ಭತ್ಯೆ 7,05,500 ರು ಸೇರಿದಂತೆ ಒಟ್ಟು 2,15,81,103 ರು. ಖರ್ಚಾಗಿದೆ ಎಂಬ ವಿವರವನ್ನು ಒದಗಿಸಿದ್ದಾರೆ.

 

 

ಅಮೆರಿಕ ಪ್ರವಾಸ ಕೈಗೊಂಡಿದ್ದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ನೇತೃತ್ವದ ನಿಯೋಗವು ಮಂಗಳವಾರ ಐಎಂಎಫ್(ಅಂತರರಾಷ್ಟ್ರೀಯ ಹಣಕಾಸು ನಿಧಿ) ಜೊತೆ ಮಹತ್ವದ ಮಾತುಕತೆ ನಡೆಸಿತ್ತು. ಜಾಗತಿಕ ಕಂಪನಿಗಳು ಅನುಸರಿಸುತ್ತಿರುವ “ಚೀನಾ + ಒನ್” ಕಾರ್ಯಾಚರಣೆ ತಂತ್ರದ ಸದುಪಯೋಗ ಪಡೆಯಲು ಕರ್ನಾಟಕಕ್ಕೆ ಇರುವ ಅನುಕೂಲತೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಿತ್ತು.

 

ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಮತ್ತಿತರರು ಪಾಲ್ಗೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ಬೆಳವಣಿಗೆ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಯನ್ನೂ ನಡೆಸಿತ್ತು.

 

ಮುಂಚೂಣಿ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಜೊತೆ ನಡೆದ ಸಭೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳ ಬಳಿ ಲಾಜಿಸ್ಟಿಕ್ ಕೇಂದ್ರಗಳ ಸ್ಥಾಪನೆ, ಪೈಲಟ್ ಹಾಗೂ ವಿಮಾನ ಸಿಬ್ಬಂದಿ ತರಬೇತಿ ಕ್ಷೇತ್ರದಲ್ಲಿ ಇರುವ ಹೂಡಿಕೆ ಅವಕಾಶಗಳ ಬಗ್ಗೆ ಗಮನ ಸೆಳೆದಿದ್ದರು.

 

ಯುಎಸ್ಐಎಸ್ ಪಿಎಫ್ (ಯುಎಸ್- ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ) ಜೊತೆ ನಡೆದ ಸಭೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ನಿರ್ಮಾಣವಾಗಲಿರುವ ಆರೋಗ್ಯ ತಂತ್ರಜ್ಞಾನ ಪಾರ್ಕ್ ನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಅವಲೋಕಿಸಿದ್ದರು.

 

ಇ-ಆಡಳಿತ ಮತ್ತು ಸ್ಥಳೀಯ ಸಂಸ್ಥೆ ಗಳ ಮುಂದಿರುವ ಕೆಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನದ ನೆರವು ಪಡೆಯಲು ಸಮರ್ಥ ಪಾಲುದಾರಿಕೆಗಾಗಿ ಶೋಧನೆ ನಡೆಸಲಾಗುವುದು ಎಂದು ವಿವರಿಸಿದ್ದರು.

SUPPORT THE FILE

Latest News

Related Posts