ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆ ಹೆಸರು ಬದಲಾಯಿಸಲು ಪ್ರಸ್ತಾವ; ವರದಿಗೆ ನಿರ್ದೇಶನ

ಬೆಂಗಳೂರು;  ರಾಜ್ಯದ ಜಿಲ್ಲೆಗಳ ಹೆಸರುಗಳನ್ನೂ ಬದಲಾಯಿಸಿ ಮರು ನಾಮಕರಣಗೊಳಿಸುವ ಸಂಬಂಧ ಕಂದಾಯ ಇಲಾಖೆಯು ತುರ್ತಾಗಿ ವರದಿ, ಪ್ರಸ್ತಾವನೆಯನ್ನು ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯದ   ನಾಲ್ಕು ವಿಮಾನ ನಿಲ್ದಾಣಗಳ ಹೆಸರನ್ನು ಬದಲಾಯಿಸುವ ನಿರ್ಣಯವು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಿರುವ ಬೆನ್ನಲ್ಲೇ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹೆಸರುಗಳನ್ನು ಬದಲಾಯಿಸಿ ಮರು ನಾಮಕರಣಗೊಳಿಸುವ ಸಂಬಂಧ ಕಂದಾಯ ಇಲಾಖೆಯಲ್ಲಿ ಕಡತ ತೆರೆದಿರುವುದು ಗೊತ್ತಾಗಿದೆ.

 

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ಸಂಬಂಧಿಸಿದ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಕೆಂಪೇಗೌಡ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಕುರಿತು ಕಂದಾಯ ಇಲಾಖೆಯು 2023ರ ಜೂನ್‌ 8ರಂದೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

 

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಶ್ರೀ ಕೆಂಪೇಗೌಡ ಜಿಲ್ಲೆ ಎಂದು ನಾಮಕರಣ ಆಡುವ ಕುರಿತು ಸಾಧಕ, ಬಾಧಕಗಳನ್ನೊಳಗೊಂಡ ಅಭಿಪ್ರಾಯದೊಂದಿಗೆ ವಿವರವಾದ ವರದಿ/ಪ್ರಸ್ತಾವನೆಯನ್ನು ಸಲ್ಲಿಸುವಂತೆ ಕೋರಲಾಗಿತ್ತು. ಈ ಕುರಿತು ತಮ್ಮಿಂದ ಇದುವರೆಗೂ ವರದಿ ಸಲ್ಲಿಸಿರುವುದಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಶ್ರೀ ಕೆಂಪೇಗೌಡ ಜಿಲ್ಲೆ ಎಂದು ನಾಮಕರಣ ಮಾಡುವ ಬಗ್ಗೆ ಅಗತ್ಯ ಕ್ರಮ ವಹಿಸಬೇಕಾಗಿರುವುದರಿಂದ ನಿಯಮಾನುಸಾರ ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ತುರ್ತಾಗಿ ವರದಿ, ಪ್ರಸ್ತಾವನೆ ಸಲ್ಲಿಸಬೇಕು,’  ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಲಾಗಿದೆ.

 

ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಭಾರತ ರತ್ನ ಸರ್‍‌ ಎಂ ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಕುರಿತೂ 2023ರ ಜೂನ್‌ 8ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

 

‘ಚಿಕ್ಕಬಳ್ಳಾಪುರ ಜಿಲ್ಲೆಗೆ ಭಾರತ ರತ್ನ ಸರ್‍‌ ಎಂ ವಿಶ್ವೇಶ್ವರಯ್ಯ ಜಿಲ್ಲೆ ಎಂದು ಬದಲಾಯಿಸುವ ಕುರಿತು ನಿಯಮಾನುಸಾರ ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ತುರ್ತಾಗಿ ವರದಿ, ಪ್ರಸ್ತಾವನೆ ಸಲ್ಲಿಸಬೇಕು ಎಂದು ಕೋರಲಾಗಿತ್ತು. ಆದರೆ ಇದುವರೆಗೂ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ. ಆದ್ದರಿಂದ ಕೋರಿರುವ ಮಾಹಿತಿಯನ್ನು ಈ ಕೂಡಲೇ ಮರು ಟಪಾಲಿನಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬದಲಿಸುವ ಕುರಿತು ಚಿಂತನೆಗಳು 2018ರಲ್ಲೇ ಆರಂಭವಾಗಿತ್ತು. ಜಿಲ್ಲೆಯ ಹೆಸರಿನಲ್ಲಿ ಬೆಂಗಳೂರು ಎಂದು ತಳುಕು ಹಾಕಿಕೊಂಡಿರುವುದರಿಂದ ಬಹುತೇಕ ಮಂದಿಗೆ ಗ್ರಾಮಾಂತರ ಜಿಲ್ಲೆ ಬೆಂಗಳೂರಿನಲ್ಲೇ ಸೇರಿದೆ ಎಂಬ ಭಾವನೆ ಈಗಲೂ ಇದೆ. ಹೀಗಾಗಿ ಈ ಭಾವನೆಯನ್ನು ಕಳಚಿ ಹಾಕಿ ತನ್ನದೇ ಅಸ್ಮಿತೆ ಕಂಡುಕೊಳ್ಳುವ ದೆಸೆಯಿಂದ ಹೆಸರು ಬದಲಾವಣೆ ಮಾಡಲು ಚಿಂತನೆಗಳು ನಡೆದಿದ್ದವು.

 

1986ರ ಆ.15ರಂದು ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿ ರೂಪುಗೊಂಡಿದೆ. ಆರಂಭದಲ್ಲಿ ರಾಮನಗರ ಜಿಲ್ಲೆ ಕೂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇರಿಕೊಂಡಿತ್ತು. ಆದರೆ 2007ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಿದ ಬಳಿಕ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳು ಗ್ರಾಮಾಂತರ ಜಿಲ್ಲೆಯಲ್ಲಿ ಉಳಿದುಕೊಂಡಿವೆ.

 

ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಆಡಳಿತ ಶುರು ಮಾಡಿದ್ದ ಕೆಲವೇ ದಿನಗಳಲ್ಲೇ ಜಿಲ್ಲಾ ಕೇಂದ್ರಕ್ಕೆ ನೂತನ ಹೆಸರಿಡುವ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಜಿಲ್ಲಾ ಪಂಚಾಯತ್‌ ನಿರ್ಧರಿಸಿತ್ತು.
ಬೆಂಗಳೂರು ಎಂಬ ಹೆಸರನ್ನು ತೆಗೆದು ಸ್ಥಳೀಯ ಐತಿಹಾಸಿಕ ಹಿನ್ನೆಲೆಯಿರುವ ನಾಲ್ಕೈದು ಹೆಸರುಗಳನ್ನು ಸೂಚಿಸಿ ಸರಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾ ಪಂಚಾಯತ್‌ ಚಿಂತನೆ ನಡೆಸಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ ಜಿಲ್ಲೆ ಎಂದು ನಾಮಕರಣಗೊಳಿಸಲು ಒತ್ತಾಯ ಕೇಳಿ ಬಂದಿತ್ತು.

 

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಡಾ.ಕೆ.ವಿ.ಪುಟ್ಟಪ್ಪ (ಕುವೆಂಪು) ಹಾಗೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ಹೆಸರಿಸಲು ನಿರ್ಧರಿಸಲಾಗಿದೆ.

 

 

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌  ಅವರು ಈ ನಿರ್ಣಯ  ಮಂಡಿಸಿದ್ದರು. ಈ  ನಿರ್ಣಯಕ್ಕೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಒಮ್ಮತದಿಂದ ಅಂಗೀಕಾರ ನೀಡಿದರು. ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್‌ ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ.

 

 

ಬಿಜೆಪಿಯ ವಿ.ಸುನೀಲ್‌ ಕುಮಾರ್‌, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್‌, ”ಮಂಗಳೂರು, ಮೈಸೂರು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಗಣ್ಯರ ಹೆಸರಿಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದ್ದಾರೆ.

 

 

ಈ ನಡುವೆ ಅಬ್ಬಯ್ಯ ಪ್ರಸಾದ್‌, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದ್ದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ- ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ವಾಕ್ಸಮರ, ವಾಗ್ವಾದ ನಡೆದಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts