ಬೆಂಗಳೂರು; ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ತಾಲೂಕು ಪಂಚಾಯ್ತಿಗಳ ಆರಂಭಿಕ ಶಿಲ್ಕು, ಖಜಾನೆ, ಬ್ಯಾಂಕ್ ಖಾತೆಯಲ್ಲಿನ ಬಾಕಿ ಮತ್ತು ನಿವ್ವಳ ಮೊತ್ತದ ಮಧ್ಯೆ ಸಾವಿರಾರು ಕೋಟಿ ರು. ಅಜಗಜಾಂತರ ವ್ಯತ್ಯಾಸವಿತ್ತು.
ಕೆಲವು ತಾಲೂಕು ಪಂಚಾಯ್ತಿಗಳಲ್ಲಿ 600 ಕೋಟಿ ರು. ಅಧಿಕ ಮೊತ್ತದಷ್ಟು ವ್ಯತ್ಯಯಗಳಿದ್ದರೂ ತಾಲೂಕು ಪಂಚಾಯ್ತಿಗಳು ಅದನ್ನು ವಾರ್ಷಿಕ ಲೆಕ್ಕಪತ್ರಗಳಲ್ಲಿ ಬಹಿರಂಗಪಡಿಸಿರಲಿಲ್ಲ. ಖರ್ಚಾಗದೆಯೇ ಉಳಿದಿದ್ದಂತಹ ಶಿಲ್ಕುಗಳ ಬಗ್ಗೆ ಖಚಿತಪಡಿಸಿರಲಿಲ್ಲ ಎಂದು ಸಿಎಜಿ ನಡೆಸಿರುವ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿಯು ಹಣಕಾಸಿನ ಅಶಿಸ್ತನ್ನು ತೆರೆದಿಟ್ಟಿದೆ.
ಸಿಎಜಿ ನಡೆಸಿದ್ದ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯು ಸರ್ಕಾರಕ್ಕೆ 2023ರ ಜೂನ್ 30ರಂದು ಸಲ್ಲಿಕೆಯಾಗಿದೆ. ಈ ವರದಿಯನ್ನು ವಿಧಾನಮಂಡಲಕ್ಕೆ ಮಂಡಿಸಲು ಸಲ್ಲಿಸಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್ ಕೆ ಪಾಟೀಲ್ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕೃಷ್ಣಬೈರೇಗೌಡ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದರು. ಈ ಅವಧಿಯಲ್ಲಿ ತಾಲೂಕು ಪಂಚಾಯ್ತಿಗಳಲ್ಲಿ ಹಣಕಾಸು ಅಶಿಸ್ತು ಹೇಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಕರ್ನಾಟಕ ಪಂಚಾಯತಿ ರಾಜ್ ಲೆಕ್ಕಪತ್ರಗಳ ನಮೂನೆಗಳ ಎಲ್ಲಾ ಪ್ರಮುಖ ಲೆಕ್ಕವನ್ನಿಡುವಿಕೆಯ ಕ್ಷೇತ್ರಗಳಲ್ಲಿ ಲೋಪದೋಷ, ಕೊರತೆಗಳು ವಿಷಾದನೀಯ ಅಂಶಗಳಾಗಿವೆ. ಹಾಗೂ ತಪ್ಪು ದಾರಿಗೆ ಆಸ್ಪದ ನೀಡುವ ಸ್ವರೂಪದ್ದಾಗಿರುತ್ತದೆ. ಮಾದರಿ ಪಂಚಾಯ್ತಿ ಲೆಕ್ಕವನ್ನಿಡುವಿಕೆ ಪದ್ಧತಿ ಅಡಿಯಲ್ಲಿನ ಲೆಕ್ಕಪತ್ರಗಳು ಬಹಳಷ್ಟು ಸಂಖ್ಯೆಯ ತಾಲೂಕು ಪಂಚಾಯ್ತಿಗಳಲ್ಲಿ ಅಪೂರ್ಣ ಸ್ಥಿತಿಯಲ್ಲಿವೆ. ಹಾಗೂ ತೋರಿಸಲಾಗಿದ್ದಂತಹ ಹಣಕಾಸು ವ್ಯವಹಾರಗಳ ವಿವರಗಳು ಲೆಕ್ಕಪತ್ರಗಳ ಕರ್ನಾಟಕ ಪಂಚಾಯತಿ ರಾಜ್ ನಮೂನೆಗಳೊಂದಿಗೆ ತಾಳೆ ಹೊಂದಿರುವುದಿಲ್ಲ,’ ಎಂದು ಪ್ರಧಾನ ಮಹಾಲೇಖಪಾಲರು 2023 ಜೂನ್ 30ರಂದೇ ವರದಿ ಸಲ್ಲಿಸಿದ್ದಾರೆ.
ಲೆಕ್ಕ ಪರಿಶೋಧನೆ ವರದಿ ಪ್ರಕಾರ ತಾಲೂಕು ಪಂಚಾಯ್ತಿಗಳ ಖಜಾನೆ, ಬ್ಯಾಂಕ್‌ಗಳಲ್ಲಿದ್ದ ಮೊತ್ತಕ್ಕೂ ಮತ್ತು ಅದರ ಆರಂಭಿಕ ಶಿಲ್ಕುಗಳಲ್ಲಿದ್ದ ಮೊತ್ತಕ್ಕೂ ವ್ಯತ್ಯಾಸವಿತ್ತು. ಕೆಲವೆಡೆ ಅಧಿಕ ಪ್ರಮಾಣ ಮತ್ತು ಇನ್ನು ಹಲವೆಡೆ ಕಡಿಮೆ ಪ್ರಮಾಣ ಮೊತ್ತವನ್ನು ತೋರಿಸಿರುವುದು ವರದಿಯಿಂದ ಗೊತ್ತಾಗಿದೆ.
2017-18ನೇ ಸಾಲಿನ ಪ್ರತ್ಯೇಕ ಲೆಕ್ಕ ಪರಿಶೋಧನೆ ವರದಿ ಅನುಸಾರ ಖಜಾನೆಯಲ್ಲಿನ ಹಾಗೂ ಬ್ಯಾಂಕ್ ಖಾತೆಗಳಲ್ಲಿನ ಶಿಲ್ಕುಗಳನ್ನು ಭಾಗ 1ರಿಂದ 3ರವರೆಗೆಗಿನ ಸಂಕ್ಷಿಪ್ತ ಘೋಷ್ವಾರೆಗಳಲ್ಲಿ ಹಲವು ಅಂಶಗಳನ್ನು ಪತ್ತೆ ಹಚ್ಚಿದೆ. ಪ್ರಸಕ್ತ/ಚಾಲ್ತಿ ಸಾಲಿಗೆ (2018-19) ಪ್ರಾರಂಭಿಕ ಶಿಲ್ಕುಗಳನ್ನಾಗಿ ಅಳವಡಿಸಿಕೊಂಡಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆ ವರದಿಯಲ್ಲಿ ಗಮನಿಸಿರುವುದು ತಿಳಿದು ಬಂದಿದೆ.
‘ಅದರಂತೆ 15 ತಾಲೂಕು ಪಂಚಾಯ್ತಿಗಳಲ್ಲಿ 1,091.65 ಕೋಟಿ ರು. ಗಳು ಪ್ರಾರಂಭಿಕ ಶಿಲ್ಕುಗಳಲ್ಲಿತ್ತು ಎಂದು ಅಧಿಕ ಪ್ರಮಾಣದಲ್ಲಿ ತಿಳಿಸಿತ್ತು. 41 ತಾಲೂಕು ಪಂಚಾಯ್ತಿಗಳಲ್ಲಿ 500.64 ಕೋಟಿ ರು.ಗಳು ಪ್ರಾರಂಭಿಕ ಶಿಲ್ಕುಗಳಲ್ಲಿ ಇತ್ತು ಎಂದು ಕಡಿಮೆ ಪ್ರಮಾಣದಲ್ಲಿ ತಿಳಿಸಿತ್ತು,’ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಖಜಾನೆಯಲ್ಲಿ 591.00 ಕೋಟಿ ರು. ಇದೆ ಎಂದು ಅಧಿಕ ಪ್ರಮಾಣದಲ್ಲಿ ತಿಳಿಸಿತ್ತು. 45 ತಾಲೂಕು ಪಂಚಾಯ್ತಿಗಳಲ್ಲಿ 14.69 ಕೋಟಿ ರು. ಅಧಿಕ ಪ್ರಮಾಣದಲ್ಲಿ ಪ್ರಾರಂಭಿಕ ಶಿಲ್ಕು ಇದೆ ಎಂದು ಹೇಳಿತ್ತು. 34 ತಾಲೂಕು ಪಂಚಾಯ್ತಿಗಳಲ್ಲಿ ಪ್ರಾರಂಭಿಕ ಶಿಲ್ಕುಗಳಲ್ಲಿ 5.69 ಕೋಟಿ ರು. ಇದೆ ಕಡಿಮೆ ಪ್ರಮಾಣದಲ್ಲಿ ತಿಳಿಸಿತ್ತು. ಬ್ಯಾಂಕ್‌ಗಳಲ್ಲಿ 8.99 ಕೋಟಿ ರು. ಇದೆ ಇತ್ತು ಎಂದು ಅಧಿಕ ಪ್ರಮಾಣದಲ್ಲಿದೆ ಎಂದು ಹೇಳಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ನಿವ್ವಳ ಮೊತ್ತಕ್ಕೆ ಸಂಬಂಧಿಸಿದಂತೆ ಅಧಿಕ ಪ್ರಮಾಣದಲ್ಲಿ ಅಂದರೆ 600.01 ಕೋಟಿ ರು ಎಂದು ತಿಳಿಸಲಾಗಿತ್ತು. ಖಜಾನೆ ಹಾಗೂ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ತಾಲೂಕು ಪಂಚಾಯ್ತಿವಾರು ವಿವರಗಳನ್ನು ಲೆಕ್ಕಪರಿಶೋಧನೆಯು ಪರಿಶೀಲಿಸಿ ಪ್ರಾರಂಭಿಕ ಶಿಲ್ಕುಗಳಲ್ಲಿನ ವ್ಯತ್ಯಾಸಗಳನ್ನು (ಶೇ.6.50ರಷ್ಟು) ಪತ್ತೆ ಹಚ್ಚಿದೆ.
ಅಂದರೆ 9,240.87 ಕೋಟಿ ರು. ಮೊತ್ತದಷ್ಟು ಪ್ರಾರಂಭಿಕ ಶಿಲ್ಕಿಗೆ ಹೋಲಿಸಿದಲ್ಲಿ 600.01 ಕೋಟಿ ರು ತಾಲೂಕು ಪಂಚಾಯ್ತಿಗಳಲ್ಲಿ ವ್ಯತ್ಯಾಸವಿದೆ. ಈ ವ್ಯತ್ಯಯಗಳಿಗೆ ಕಾರಣಗಳನ್ನು ತಾಲೂಕು ಪಂಚಾಯ್ತಿಗಳು ತಮ್ಮ ವಾರ್ಷಿಕ ಲೆಕ್ಕಪತ್ರಗಳಲ್ಲಿ ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
‘ಖಜಾನೆ ಸ್ವೀಕೃತಿಗಳಿಗೆ ಸಂಬಂಧಿಸಿದಂತೆ ಇದ್ದ ವ್ಯತ್ಯಯಗಳನ್ನು ಪತ್ತೆ ಹಚ್ಚಿದೆ. 17 ತಾಲೂಕು ಪಂಚಾಯ್ತಿಗಳಲ್ಲಿ ಸ್ವೀಕೃತಿಗಳಲ್ಲಿ 396.43 ಕೋಟಿ ರು.ಗಳು ವ್ಯತ್ಯಯವಿತ್ತು. ಇದೇ 17 ತಾಲೂಕು ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ 432.06 ಕೋಟಿ ರು. ಮೊತ್ತವನ್ನು ಅಧಿಕ ಪ್ರಮಾಣದಲ್ಲಿ ತಿಳಿಸಲಾಗಿತ್ತು. 5 ತಾಲೂಕು ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ 35.63 ಕೋಟಿ ರು. ಮೊತ್ತವನ್ನು ಕಡಿಮೆ ಪ್ರಮಾಣದಲ್ಲಿ ತಿಳಿಸಲಾಗಿತ್ತು,’ ಎಂದು ವಿವರಿಸಲಾಗಿದೆ.
2014-15ರಿಂದ 2018-19ರ ಅವಧಿಗೆ ಮಾತ್ರ ಖರ್ಚಾಗದೆಯೇ ಉಳಿದಿದ್ದ 1,397.04 ಕೋಟಿ ರು. ಮೊತ್ತದಷ್ಟು ಶಿಲ್ಕುಗಳನ್ನು ಮುಂದಿನ ಸಾಲಿಗೆ ತೆಗೆದುಕೊಂಡು ಹೋಗಲಾಗಿದ್ದು ಈ ಮುಂಚಿನ ಅವಧಿಗಳ ( 2014-15ಕ್ಕೆ ಮುಂಚಿನ) ಖರ್ಚಾಗದೆಯೇ ಉಳಿದಿದ್ದಂತಹ ಶಿಲ್ಕುಗಳ ಬಗ್ಗೆ ಖಚಿತಪಡಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ಅಲ್ಲದೇ ತಾಲೂಕು ಪಂಚಾಯ್ತಿ ನಿಧಿ ಅಡಿಯಲ್ಲಿ ಶಿಲ್ಕು ಹಣಕಾಸು ಲೆಕ್ಕಪತ್ರಗಳ ಅನುಸಾರ 10,332.15 ಕೋಟಿ ರು., ಇತ್ತು. 173 ತಾಲೂಕು ಪಂಚಾಯ್ತಿಗಳ ಲೆಕ್ಕಪತ್ರಗಳ ಅನುಸಾರ ಅಂತಿಮ ಶಿಲ್ಕಿನಲ್ಲಿ 10,385.57 ಕೋಟಿ ರು., ಇತ್ತು. ಜನವರಿ 2020 ಹಾಗೂ ನಂತರದ ಸರ್ಕಾರಿ ಆದೇಶಗಳ ಅನುಸಾರ 1,397.04 ಕೋಟಿ ರು. ಇತ್ತು. ಈ ಎಲ್ಲಾ ಮೊತ್ತವೂ ಖರ್ಚಾಗದೇ ಉಳಿದಿದ್ದಂತಹ ಶಿಲ್ಕುಗಳಾಗಿತ್ತು ಎಂದು ವರದಿಯಿಂದ ತಿಳಿದು ಬಂದಿದೆ.
ಜನವರಿ 2020 ಹಾಗೂ ನಂತರ ಸರ್ಕಾರವು ಹೊರಡಿಸಿದ್ದ ಆದೇಶಗಳ ಅನುಸಾರ ನಿಧಿ 1 ರಲ್ಲಿ 1,356.91 ಕೋಟಿ ರು., ನಿಧಿ 3ರಲ್ಲಿ 40.13 ಕೋಟಿ ರು. ಹಾಗೂ ನಿಧಿ 2ರಲ್ಲಿ ಸರ್ಕಾರವು ಹಿಂಪಡೆದುಕೊಳ್ಳಲು ಬಾಕಿ ಇರುವಂತಹ ಕ್ರೋಢೀಕೃತ ಮೊತ್ತಗಳಿಗಾಗಿ ವಿವರಗಳು ಲಭ್ಯವಿರಲಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.
ಲೆಕ್ಕ ಪರಿಶೋಧನೆಯು ಖಜಾನೆಯ ನಿಧಿವಾರು ಮತ್ತು ವರ್ಷವಾರು ವ್ಯವಹಾರಗಳ ವಿವರಗಳನ್ನು ಸರ್ಕಾರಕ್ಕೆ (ಪ್ರಾರಂಭಿಕ ಶಿಲ್ಕು/ಸ್ವೀಕೃತಿ/ವೆಚ್ಚಗಳು/ಅಂತಿಮ ಶಿಲ್ಕು, ಹಾಗೂ ಸರ್ಕಾರವು ಹಿಂಪಡೆದುಕೊಂಡಿರುವ ಶಿಲ್ಕುಗಳನ್ನು ಸರ್ಕಾರಕ್ಕೆ ಹಿಂಪಾವತಿ ಮಾಡಲು ಬಾಕಿಯಿರುವಂತಹ ಹಣಕಾಸಿನ ಪರಿಮಾಣ, ಇತ್ಯಾದಿ) ವಿವರಗಳನ್ನು ಕೋರಿತ್ತು.
ಜನವರಿ 2020ರಲ್ಲಿ ನೀಡಲಾಗಿದ್ದ ಸರ್ಕಾರಿ ಆದೇಶಗಳ ಪರಿಣಾಮವಾಗಿ 2014-15ರಿಂದ 2018-19ರ ಅವಧಿಗೆ ಮುಂದಿನ ಸಾಲಿಗೆ ತೆಗೆದುಕೊಂಡು ಹೋಗಲಾದಂತಹ ಶಿಲ್ಕುಗಳಿಗೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿರುವುದೇ ಎಂಬುದರ ಬಗ್ಗೆಯೂ ಸರ್ಕಾರದ ಅಭಿಪ್ರಾಯವನ್ನು ಕೋರಲಾಗಿತ್ತು. ಆದರೆ ಈ ಬಗ್ಗೆ ಸರ್ಕಾರವು ಯಾವುದೇ ಮಾಹಿತಿ ಒದಗಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
‘ಸರ್ಕಾರವು 2019ರ ಮಾರ್ಚ್ ಅಂತ್ಯದಲ್ಲಿದ್ದಂತೆ ನಿಧಿ 1, ನಿಧಿ 2, ನಿಧಿ 3 ಶಿಲ್ಕುಗಳನ್ನು ಪ್ರತ್ಯೇಕವಾಗಿ ಖಚಿತಪಡಿಸಲಿಲ್ಲ. ನಿಧಿವಾರು ಶಿಲ್ಕುಗಳ ಅನುಪಸ್ಥಿತಿಯಲ್ಲಿ ಹಾಗೂ ಸರ್ಕಾರದಿಂದ ಶಿಲ್ಕುಗಳ ಖಚಿತಪಡಿಸುವಿಕೆಯ ಅನುಪಸ್ಥಿತಿಯಲ್ಲಿ ನಿಧಿವಾರು ಶಿಲ್ಕುಗಳು, ತಾಲೂಕು ಪಂಚಾಯ್ತಿಗಳ ಲೆಕ್ಕಪತ್ರ ಪುಸ್ತಕಗಳಲ್ಲಿ ತೋರಿಸಿರುವಂತೆ ಜಿಲ್ಲಾ ಪಂಚಾಯ್ತಿಗಳಿಗೆ ಸರ್ಕಾರದ ಜವಾಬ್ದಾರಿ, ಇತ್ಯಾದಿಗಳನ್ನು ಖಚಿತಪಡಿಸಿಕೊಳ್ಳಲು ಲೆಕ್ಕ ಪರಿಶೋಧನೆಗೆ ಸಾಧ್ಯವಾಗಿರುವುದಿಲ್ಲ,’ ಎಂದು ವಿವರಿಸಿದೆ.
33 ತಾಲೂಕು ಪಂಚಾಯ್ತಿಗಳಲ್ಲಿ ತಪ್ಪುಗಳು, ಅಸಮಂಜತೆಗಳ ಲೆಕ್ಕಪತ್ರಗಳಲ್ಲಿ ಹಾಗೂ ಅಂಕಗಣಿತೀಯವಾಗಿ ಲೆಕ್ಕ ಹಾಕಲಾದಂತೆ ಅಂತಿಮ ಶಿಲ್ಕುಗಳಲ್ಲಿ ಖಜಾನೆ ಹಾಗೂ ಬ್ಯಾಂಕ್‌ಗಳ ಅಂತಿಮ ಶಿಲ್ಕುಗಳಿಗೆ ಸಂಬಂಧಿಸಿದಂತೆ ಅನುಕ್ರಮವಾತಿ 414.24 ಕೋಟಿ ರು. ಮೊತ್ತದಷ್ಟು ಹಾಗೂ 13.45 ಕೋಟಿ ರು. ಮೊತ್ತದಷ್ಟು ವ್ಯತ್ಯಾಶಗಳಿದ್ದವು ಎಂಬುದನ್ನು ಲೆಕ್ಕ ಪರಿಶೋಧನೆ ಸಮಯದಲ್ಲಿ ಗಮನಿಸಿರುವುದು ತಿಳಿದು ಬಂದಿದೆ.
ನಿಷ್ಕ್ರೀಯ ಯೋಜನೆಗಳೀಗೆ ಸಂಬಂಧಿಸಿದಂತೆ 2016ರ ಆಗಸ್ಟ್ 1, 2018ರ ಮಾರ್ಚ್ 1, 2019ರ ಆಗಸ್ಟ್ 27ರಂದು ಆದೇಶಗಳನ್ನು ಹೊರಡಿಸಿತ್ತು. ಈ ಯೋಜನೆಗಳಡಿಯಲ್ಲಿ ಖರ್ಚಾಗದೇ ಉಳಿದಿರುವಂತಹ ಮೊತ್ತ ಹಾಗೂ ಬಡ್ಡಿಯನ್ನು ಸರ್ಕಾರದ ಖಾತೆಗೆ ಪಾವತಿಸುವಂತೆ ನಿರ್ದೇಶನಗಳನ್ನು ನೀಡಲಾಗಿತ್ತು. ತಾಲೂಕು ಪಂಚಾಯ್ತಿಯೇ ಆಗಲಿ ಅಥವಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯೇ ಆಗಲಿ ನಿಷ್ಕ್ರೀಯಗೊಂಡಿದ್ದಂತಹ ಯೋಜನೆಗಳನ್ನು ವರ್ಗೀಕರಿಸಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.
2018-19ರಲ್ಲಿ 151 ತಾಲೂಕು ಪಂಚಾಯ್ತಿಗಳು ನಿರ್ವಹಿಸುತ್ತಿದ್ದಂತಹ ಒಂದು ಒಟ್ಟಾರೆ 620 ಬ್ಯಾಂಕ್ ಖಾತೆಗಳು ನಿಷ್ಕ್ರೀಯ ಖಾತೆಗಳಾಗಿ ಉಳಿದಿದ್ದವು.
(ಅಂದರೆ ಪ್ರಸಕ್ತ ಸಾಲಿನಲ್ಲಿ ಅಂತಹ ಖಾತೆಗಳಲ್ಲಿ ಬಡ್ಡಿ ಸ್ವೀಕೃತಿಗಳನ್ನು ಹೊರತುಪಡಿಸಿದಂತೆ ವೆಚ್ಚಗಳು ಹಾಗೂ ಸ್ವೀಕೃತಿಗಳು ಇರಲಿಲ್ಲ) ಇದು 24.03 ಕೋಟಿ ರು. ಮೊತ್ತದಷ್ಟು ಹಣಕಾಸನ್ನು ಬಂಧಿಸಿಟ್ಟಿರುವುದರಲ್ಲಿ ಪರಿಣಿಮಿಸಿತ್ತು ಎಂದು ವಿವರಿಸಿದೆ.