ಬೆಂಗಳೂರು; ಅಲ್ಪಸಂಖ್ಯಾತರಿಗಾಗಿ ವಸತಿನಿಲಯ, ವಸತಿ ಶಾಲೆ ಕಟ್ಟಡಗಳ ನಿರ್ಮಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ, ಅಭ್ಯುದಯ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ನವೋದಯ ಮಾದರಿ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ಆಯವ್ಯಯದಲ್ಲಿ ಒದಗಿಸಿದ್ದ ಒಟ್ಟು 1,247 ಕೋಟಿ ರು.ನಲ್ಲಿ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 6 ತಿಂಗಳ ಸಾಧನೆಗಳ ಪಟ್ಟಿಯನ್ನು ಒದಗಿಸಿರುವ ಬೆನ್ನಲ್ಲೇ ಮಹತ್ವಾಕಾಂಕ್ಷೆ ತಾಲೂಕುಗಳಲ್ಲಿ ಹಲವು ಕಾರ್ಯಕ್ರಮಗಳಿಗೆ ಆಯವ್ಯಯದಲ್ಲಿ ಒದಗಿಸಿದ್ದ ಅನುದಾನದಲ್ಲಿ ಶೂನ್ಯ ಸಂಪಾದನೆ ಆಗಿರುವುದು ಮುನ್ನೆಲೆಗೆ ಬಂದಿದೆ.
2023-24ನೇ ಸಾಲಿನ ಮಹತ್ವಾಕಾಂಕ್ಷೆ ತಾಲೂಕುಗಳಿಗೆ ಇಲಾಖಾವಾರು ಆಯವ್ಯಯದಲ್ಲಿ ಒಟ್ಟಾರೆ 3,046.18 ಕೋಟಿ ರು. ಬಿಡುಗಡೆ ಮಾಡಿತ್ತು. ಈ ಪೈಕಿ 6 ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಿಗೆ ಶೂನ್ಯ ಬಿಡುಗಡೆ ಮಾಡಿದೆ.
ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2023ರ ನವೆಂಬರ್ 18 ನವಂಬರ್‍ನಲ್ಲಿ ನಡೆದಿದ್ದ (ಅಕ್ಟೋಬರ್ ಅಂತ್ಯಕ್ಕೆ ) ಸಭೆಯಲ್ಲಿ ಸರ್ಕಾರದ ಅಹಿಂದ ಮುಖವಾಡವು ಕಳಚಿಬಿದ್ದಿದೆ.
ಇಲಾಖೆಗಳ ಆರ್ಥಿಕ ಪ್ರಗತಿಯ ಸಮಗ್ರ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
1,247 ಕೋಟಿಯಲ್ಲಿ ಶೂನ್ಯ ಬಿಡುಗಡೆ
ಅಲ್ಪಸಂಖ್ಯಾತರಿಗಾಗಿ ವಸತಿ ನಿಲಯ, ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣಕ್ಕೆ 75 ಕೋಟಿ ರು., ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೆ 50 ಕೋಟಿ, ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ಆರೋಗ್ಯ ಅಭಿಯಾನಕ್ಕೆ 100 ಕೋಟಿ , ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗ ಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳಿಗಾಗಿ 10 ಕೋಟಿ ರು., ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಕಟ್ಟಡಗಳಿಗೆ 75 ಕೋಟಿ, ಸ್ಪೂರ್ತಿ ಹರೆಯದ ಹೆಣ್ಣು ಮಕ್ಕಳಿಗೆ ಜೀವನ ಕೌಶಲ್ಯ ಆಧಾರಿತ ಕಾರ್ಯಕ್ರಮಕ್ಕೆ 8 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಲಾಗಿತ್ತು.
ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ಕೈಗಾರಿಕೆ ತರಬೇತಿ ಸಂಸ್ಥೆಗಳ ಉನ್ನತೀಕರಣಕ್ಕೆ 100 ಕೋಟಿ, ಅಂಗನವಾಡಿ ಕಟ್ಟಡಗಳ (ಐಸಿಡಿಎಸ್ ಎನ್‌ಆರ್‍ಜಿಎ) ನಿರ್ಮಾಣಕ್ಕೆ 50 ಕೋಟಿ, ನಗರ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 34.99 ಕೋಟಿ, ಕೇಂದ್ರ ಪುರಸ್ಕೃತ ಯೋಜನೆಯ (ಕೇಂದ್ರದ ಪಾಲು) ರಾಷ್ಟ್ರೀಯ ಪೌಷ್ಠಿಕಾಂಶ ಅಭಿಯಾನಕ್ಕೆ 0.93 ಕೋಟಿ, ರಾಷ್ಟ್ರೀಯ ಪೋಷಣ ಅಭಿಯಾನಕ್ಕೆ (ರಾಜ್ಯದ ಪಾಲು) 0.98 ಕೋಟಿ, ಪೌಷ್ಠಿಕ ಆಹಾರ ಕಾರ್ಯಕ್ರಮ ರಾಜ್ಯ ಸರ್ಕಾರದ ಹೆಚ್ಚುವರಿ ಸಹಾಯ ಧನ (ಕ್ಷೀರಭಾಗ್ಯ, ಸೃಷ್ಟಿ ಮಾತೃಪೂರ್ಣ)ಕ್ಕೆ 60 ಕೋಟಿ, ವಾಜಪೇಯಿ ನಗರ ವಸತಿ ಯೋಜನೆಗೆ 50 ಕೋಟಿ ರು. ನೀಡಲಾಗಿತ್ತು.
ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ಅಭ್ಯುದಯ ಯೋಜನೆಗೆ 4 ಕೋಟಿ, ನವೋದಯ ಮಾದರಿಯಲ್ಲಿ ವಸತಿ ಶಾಲೆಗಳ ನಿರ್ಮಾಣಕ್ಕೆ (ಕ್ರೈಸ್) 75 ಕೋಟಿ ರು., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕೆ 75 ಕೋಟಿ ರು. ಒದಗಿಸಲಾಗಿತ್ತು. ಕೇಂದ್ರ ಪುರಸ್ಕೃತ ಯೋಜನೆಯ ಜಲ ಜೀವನ್ ಮಿಷನ್ (ಗ್ರಾಮೀಣ)ಗೆ 423.76 ಕೋಟಿ ರು. ಬಿಡುಗಡೆ ಆಗಿತ್ತು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಒಟ್ಟಾರೆಯಾಗಿ 1,247 ಕೋಟಿ ರು.ಗಳನ್ನು ನೀಡಿದ್ದರೂ ಸಹ ಅಕ್ಟೋಬರ್ ಅಂತ್ಯಕ್ಕೆ ಒಂದೇ ಒಂದು ಬಿಡಿಗಾಸನ್ನೂ ನೀಡಿಲ್ಲ. ಹೀಗಾಗಿ ವೆಚ್ಚವೂ ಶೂನ್ಯವಾಗಿದೆ ಎಂಬುದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಮಹತ್ವಾಂಕ್ಷೆ ತಾಲೂಕುಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳೀಗಾಗಿ 478.47 ಕೋಟಿ ರು. ಪೈಕಿ 77.22 ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ ಅಕ್ಟೋಬರ್ ಅಂತ್ಯಕ್ಕೆ ಕೇವಲ 5.38 ಕೋಟಿಯಷ್ಟೇ ವೆಚ್ಚವಾಗಿದೆ. ಇದು ಒಟ್ಟು ಬಿಡುಗಡೆಗೆ ಶೇ.6.97ರಷ್ಟಿದೆ.
ಆಸ್ಪತ್ರೆಗಳ ನಿರ್ಮಾಣ ಮತ್ತು ಉನ್ನತೀಕರಣಕ್ಕೆ 375 ಕೋಟಿ ರು. ಪೈಕಿ 125 ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ 92.71 ಕೋಟಿ ರು. ಖರ್ಚಾಗಿದೆ. ಡಾ ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆಗೆ 300 ಕೋಟಿ ರು.ನಲ್ಲಿ 93.75 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ 72.90 ಕೋಟಿ ರು. ವೆಚ್ಚವಾಗಿದೆ. ಆಶ್ರಯ,ಬಸವ, ವಸತಿ ಯೋಜನೆಗೆ 150 ಕೋಟಿ ರು. ನಲ್ಲಿ 75 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 64.98 ಕೋಟಿ ರು. ಖರ್ಚಾಗಿರುವುದು ಗೊತ್ತಾಗಿದೆ.
ನಿವಾಸಿ ಶಾಲೆಗಳ ನಿರ್ಮಾಣಕ್ಕೆ 100 ಕೋಟಿ ರು. ನಲ್ಲಿ 50 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 50 ಕೋಟಿಯೂ ಖರ್ಚಾಗಿದೆ. ವಸತಿ ನಿಲಯ ಕಟ್ಟಡಗಳ ನಿರ್ಮಾಣ (ರಾಜ್ಯ ಯೋಜನೆ-ಆಯುಕ್ತಾಲಯ) 150 ಕೋಟಿ ರು. ನಲ್ಲಿ 100 ಕೋಟಿ ರು. ಬಿಡುಗಡೆಯಾಗಿದ್ದು ಇದರಲ್ಲಿ 100 ಕೋಟಿಯೂ ಖರ್ಚಾಗಿದೆ. ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣ (ರಾಜ್ಯ ಯೋಜನೆ-ಕ್ರೈಸ್)ಗೆ 250 ಕೋಟಿ ರು. ಪೈಕಿ 166.67 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 166.67 ಕೋಟಿಯೂ ಖರ್ಚಾಗಿ ಶೇ.100ರಷ್ಟು ಸಾಧನೆ ಆಗಿರುವುದು ಕಂಡು ಬಂದಿದೆ.