ಬೊಕ್ಕಸಕ್ಕೆ ಹೊರೆಯಾದ ‘ಗೃಹಜ್ಯೋತಿ’; ಗೃಹ ಬಳಕೆದಾರ, ಸರ್ಕಾರಿ ಇಲಾಖೆಗಳಿಂದಲೇ 11,757.07 ಕೋಟಿ ರು ಬಾಕಿ

ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಅಧಿಕೃತವಾಗಿ ಒಪ್ಪಿಕೊಂಡಿದೆ.

 

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಮಧು ಮಾದೇಗೌಡ ಮತ್ತು ಎಂ ನಾಗರಾಜು, ಕೇಶವ ಪ್ರಸಾದ್‌ ಅವರು ಕೇಳಿದ್ದ ಪ್ರಶ್ನೆಗಳಿಗೆ ಸಚಿವ ಕೆ ಜೆ ಜಾರ್ಜ್‌ ಅವರು ನೀಡಿರುವ ಉತ್ತರದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ಮಾಹಿತಿ ಒದಗಿಸಿದ್ದಾರೆ.

 

ಅದೇ ರೀತಿ ಗೃಹ ಜ್ಯೋತಿ ಯೋಜನೆ ಜಾರಿಯಾದ ನಂತರ ಗ್ರಾಹಕರು ಸಂಪೂರ್ಣ ಬಾಕಿ ವಿದ್ಯುತ್‌ ಮೊತ್ತವನ್ನು ಪಾವತಿಸಿಲ್ಲ. ಗೃಹ ಬಳಕೆ ಗ್ರಾಹಕರು, ಸರ್ಕಾರಿ ಇಲಾಖೆಗಳು, ಕಚೇರಿಗಳು ಸಹ ಸೆಪ್ಟಂಬರ್‍‌ ಮತ್ತು ಅಕ್ಟೋಬರ್‍‌ ಅಂತ್ಯಕ್ಕೆ 11,757.07 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿವೆ ಎಂದು ಮಾಹಿತಿ ಒದಗಿಸಿದ್ದಾರೆ.

 

ಬೊಕ್ಕಸಕ್ಕೆ ಹೊರೆ

 

ಗೃಹ ಜ್ಯೋತಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರವು 2023-24ನೇ ಸಾಲಿಗೆ ಅಂದಾಜು 13,910 ಕೋಟಿ ರು.ಗಳ ಸಹಾಯಧನದ ಅವಶ್ಯಕತೆ ಇದೆ ಎಂದು ಅಂದಾಜಿಸಿದೆ. ಜಲೈ 2023ರ ಆಯವ್ಯಯದಲ್ಲಿ 9,000 ಕೋಟಿ ರು. ಗಳನ್ನು ಹಂಚಿಕೆ ಮಾಡಿ ಒದಗಿಸಿದೆ. ಈ ಮೊತ್ತವು ಸರ್ಕಾರದ ಬೊಕ್ಕಸಕ್ಕೆ ಹೊರೆಯಾದರೂ ಸಹ ಸರ್ಕಾರವು ಈ ಮೊತ್ತವನ್ನು ಸಹಾಯಧನದ ರೂಪದಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಒದಗಿಸುತ್ತಿದೆ ಎಂದು ಉತ್ತರದಲ್ಲಿ ಸಚಿವ ಜಾರ್ಜ್‌ ಅವರು ಉತ್ತರ ಒದಗಿಸಿದ್ದಾರೆ.

 

2023ರ ನವೆಂಬರ್‍‌ 18ರ ಅಂತ್ಯಕ್ಕೆ 1.63 ಕೋಟಿ ರು ಗ್ರಾಹಕರು ನೋಂದಣಿಯಾಗಿದೆ. ಇದರಲ್ಲಿ 1.50 ಕೋಟಿ ಗ್ರಾಹಕರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆ ಜಾರಿಯಾದ ನಂತರ ಗ್ರಾಹಕರು ಸಂಪೂರ್ಣ ಬಾಕಿ ವಿದ್ಯುತ್‌ ಮೊತ್ತವನ್ನು ಪಾವತಿಸಿರುವುದಿಲ್ಲ. ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು 2023ರ ಜೂನ್‌ 30ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್‌ ಶುಲ್ಕದ ಬಾಕಿ ಮೊತ್ತವನ್ನು ಪಾವತಿಸಲು 2023ರ ಸೆ.30ರವರೆಗೆ ಕಾಲಾವಕಾಶ ನೀಡಲಾಗಿತ್ತು ಎಂದು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

ಗೃಹ ಬಳಕೆದಾರರಿಂದ 1,471.47 ಕೋಟಿ ರು. ಬಾಕಿ

 

ಬೆಸ್ಕಾಂ ವ್ಯಾಪ್ತಿಯಲ್ಲಿ 2023ರ ಅಕ್ಟೋಬರ್‍‌ ಅಂತ್ಯಕ್ಕೆ 14,66,017 ಗ್ರಾಹಕರಿದ್ದಾರೆ. ಇದೇ ಅವಧಿಗೆ 397.89 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಇದೆ. ಮೆಸ್ಕಾಂನಲ್ಲಿ 4,39,887 ಗ್ರಾಹಕರು ಇದ್ದಾರೆ. ಇವರಿಂದ 62.88 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಇದೆ. ಸೆಸ್ಕ್‌ನಲ್ಲಿ 12,57,675 ಗ್ರಾಹಕರಿದ್ದಾರೆ. ಇವರಿಂದ 306.93 ಕೋಟಿ ರು. ಬಾಕಿ ಇದೆ. ಹೆಸ್ಕಾಂ (ಸೆಪ್ಟಂಬರ್‍‌ 23 ಅಂತ್ಯಕ್ಕೆ 10,52,675 ಗ್ರಾಹಕರಿದ್ದಾರೆ. ಇವರಿಂದ 196.09 ಕೋಟಿ ರು. ಬಾಕಿ ಇದೆ. ಜೆಸ್ಕಾಂನಲ್ಲಿ 26,80,139 ಗ್ರಾಹಕರಿದ್ದಾರೆ. ಇವರಿಂದ 507.68ಕೋಟಿ ರು. ಬಾಕಿ ಸೇರಿ ಒಟ್ಟಾರೆ 68,95,910 ಗ್ರಾಹಕರಿದ್ದು ಇವರಿಂದ 1,471.47 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.

 

ಇಲಾಖೆಗಳಿಂದ 10,285.60 ಕೋಟಿ ರು. ಬಾಕಿ

 

ಅದೇ ರೀತಿ ಸರ್ಕಾರಿ ಇಲಾಖೆಗಳು, ಕಚೇರಿಗಳು ಸಹ ಬಾಕಿ ಉಳಿಸಿಕೊಂಡಿವೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಸೆಪ್ಟಂಬರ್‍‌ 2023 ಅಂತ್ಯಕ್ಕೆ 6,036.11 ಕೋಟಿ ರು., ಮೆಸ್ಕಾಂ ವ್ಯಾಪ್ತಿಯಲ್ಲಿ 465.01 ಕೋಟಿ ರು., ಸೆಸ್ಕ್‌ನಲ್ಲಿ 736.38 ಕೋಟಿ ರು., ಹೆಸ್ಕಾಂನಲ್ಲಿ 999.53 ಕೋಟಿ ರು., ಜೆಸ್ಕಾಂನಲ್ಲಿ 2,036.62 ಕೋಟಿ ರು., ಹುಕ್ಕೇರಿಯಲ್ಲಿ 11.95 ಕೋಟಿ ರು. ಸೇರಿ ಒಟ್ಟಾರೆ 10,285.60 ಕೋಟಿ ರು. ಬಾಕಿ ಇದೆ ಎಂದು ಮಾಹಿತಿ ಒದಗಿಸಿದ್ದಾರೆ.

 

ರಾಜ್ಯದ ಜನತೆಗೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದರಿಂದ ಉಳಿತಾಯವಾಗುವ ಹಣದಿಂದ ಸಾಮಾನ್ಯ ಜನರ ಖರೀದಿ ಶಕ್ತಿ ಜತೆಗೆ ನಾಗರಿಕರಲ್ಲಿ ಹಣ ಉಳಿತಾಯವಾಗಲಿದೆ. ಇದರಿಂದ ಉತ್ಪಾದನಾ ವವಲಯಕ್ಕೆ ಹೆಚ್ಚು ಪ್ರೋತ್ಸಾಹಧನ ನೀಡಿದಂತಾಗುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗುತ್ತದೆ. ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ ಎಂದು ಸರ್ಕಾರವು ಗೃಹ ಜ್ಯೋತಿ ಯೋಜನೆಯನ್ನು ಸಮರ್ಥಿಸಿಕೊಂಡಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts