2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ; ಸರ್ಕಾರಿ ಶಾಲೆಗಳ ದುಸ್ಥಿತಿ ಅನಾವರಣ

ಬೆಂಗಳೂರು; ರಾಜ್ಯದ ಒಟ್ಟು ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳಿಗಾಗಿ ವಿವೇಕ, ನರೇಗಾ ಸೇರಿದಂತೆ ಇನ್ನಿತರೆ ಯೋಜನೆಗಳಲ್ಲಿ ಕಳೆದ 5 ವರ್ಷದಲ್ಲಿ 1,306.05 ಕೋಟಿ ರು.ಗಳನ್ನು ಒದಗಿಸಿದ್ದರೂ 2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ.

 

464 ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ. 136 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. 830 ಶಾಲೆಗಳಲ್ಲಿ ವಿದ್ಯುತ್‌ ಸೌಕರ್ಯವೂ ಇಲ್ಲ. 4,876 ಶಾಲೆಗಳಿಗೆ ಕೌಂಪೌಂಡ್‌ಗಳಿಲ್ಲ. 2,732 ಶಾಲೆಗಳಲ್ಲಿ ಶೌಚಾಲಯ ರಹಿತ ಶಾಲೆಗಳ ಪೈಕಿ ಕೇವಲ 38 ಶಾಲೆಗಳಲ್ಲಿ ಮಾತ್ರ ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿದೆ.

 

ಸರ್ಕಾರಿ ಶಾಲೆಗಳು ಆಗಾಗ್ಗೆ ಮುಚ್ಚಲು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳ  ಕೊರತೆಯೂ ಒಂದು ಕಾರಣ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ರಾಜ್ಯದ ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳ ಕುರಿತಾದ ನಿಖರವಾದ ಅಂಕಿ ಸಂಖ್ಯೆಗಳು ಬಹಿರಂಗವಾಗಿವೆ.

 

ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆರ್ಥಿಕ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಅಧಿಕಾರಿಗಳೊಂದಿಗೆ ಕಳೆದ ಎರಡು ದಿನದ ಹಿಂದೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇಲಾಖೆಗಳು ಮಂಡಿಸಿದ್ದ ಅಂಕಿ ಸಂಖ್ಯೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. ಸಭೆಯ ನಂತರ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಮಾಹಿತಿ ಒದಗಿಸಿದ್ದಾರೆ ಎಂದು ಗೊತ್ತಾಗಿದೆ.

 

ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಮತ್ತು 87 ಕುಡಿಯುವ ನೀರಿನ ಸೌಲಭ್ಯದ ಕೊರತೆ ಕಂಡುಬಂದಿದೆ. ಸಮೀಕ್ಷೆಯ ನಂತರ, 87 ಶಾಲೆಗಳಲ್ಲಿ 55 ಶಾಲೆಗಳಲ್ಲಿ ಸಾಕಷ್ಟು ಕುಡಿಯುವ ನೀರು ಕಂಡುಬಂದಿದೆ, ಆದರೂ 32 ಶಾಲೆಗಳಲ್ಲಿ ಸಮಸ್ಯೆ ಉಳಿದಿತ್ತು.

 

ಆದರೀಗ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 746 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು 1986 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ ಎಂದು ಅಧಿಕಾರಿಗಳು ಅಂಕಿ ಸಂಖ್ಯೆಗಳನ್ನು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.

 

ರಾಜ್ಯದಲ್ಲಿ 20,174 ಕಿರಿಯ ಪ್ರಾಥಮಿಕ, 21,739 ಮಾಧ್ಯಮಿಕ, 4,844 ಪ್ರೌಢಶಾಲೆಗಳಿವೆ. ಈ ಶಾಲೆಗಳ ಪೈಕಿ 2,732 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂದು ಅಧಿಕಾರಿಗಳು ಮಂಡಿಸಿದ್ದ ಅಂಕಿ ಸಂಖ್ಯೆಗಳಿಂದ ತಿಳಿದು ಬಂದಿದೆ.

 

2,732 ಶಾಲೆಗಳ ಪೈಕಿ 1,986 ಗಂಡು ಮಕ್ಕಳ ಶಾಲೆ ಮತ್ತು 746 ಹೆಣ್ಣು ಮಕ್ಕಳ ಶಾಲೆಯೂ ಸೇರಿವೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಅಂಕಿ ಸಂಖ್ಯೆಗಳನ್ನು ಒದಗಿಸಿರುವ ಅಧಿಕಾರಿಗಳು 136 ಶಾಲೆಗಳಲ್ಲಿ ಕುಡಿಯುವ ನೀರು, 4,876 ಶಾಲೆಗಳಲ್ಲಿ ಕಾಂಪೌಂಡ್‌ ಸೌಲಭ್ಯವಿಲ್ಲ ಎಂದು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1,215 ಗಂಡು ಮಕ್ಕಳು, 466 ಹೆಣ್ಣು ಮಕ್ಕಳು, ಮಾಧ್ಯಮಿಕ ಶಾಲೆಗಳಲ್ಲಿ 654 ಗಂಡು ಮಕ್ಕಳು, 242 ಹೆಣ್ಣು ಮಕ್ಕಳು, ಪ್ರೌಢಶಾಲೆಗಳಲ್ಲಿ 117 ಗಂಡು ಮಕ್ಕಳು, 38 ಹೆಣ್ಣು ಮಕ್ಕಳ ಶೌಚಾಲಯಗಳಿಲ್ಲ ಎಂದು ವರದಿ ಸಲ್ಲಿಸಿರುವುದು ತಿಳಿದು ಬಂದಿದೆ.

 

40 ಗಂಡು ಮಕ್ಕಳಿಗೆ ಒಂದು ಶೌಚಾಲಯವೆಂಬಂತೆ ಒಟ್ಟು 18,090 ಶೌಚಾಲಯಗಳ ನಿರ್ಮಾಣ ಆಗಬೇಕಿದೆ. 35 ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯವೆಂಬಂತೆ 26,454 ಶೌಚಾಲಯ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದು ತಿಳಿದು ಬಂದಿದೆ.

 

ವಿವೇಕ, ವಿಶೇಷ ಅನುದಾನ, ಶಾಲೆಗಳ ಕೊಠಡಿಗಳ ದುರಸ್ತಿ, ನರೇಗಾ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 2022-23ರಿಂದ 2023-24ರವರೆಗೆ 1,306.05 ಕೋಟಿ ರು. ಅನುದಾನದ ಪೈಕಿ ಇದುವರೆಗೆ 755.12 ಕೋಟಿ ರು. ಬಿಡುಗಡೆಯಾಗಿದೆ.

 

ಅದೇ ರೀತಿ ಕುಡಿಯುವ ನೀರು ಒದಗಿಸುವ ಸಂಬಂಧ 120.33 ಕೋಟಿ ರು. ಬಿಡುಗಡೆ ಮಾಡಿದೆ. ಆದರೂ ಇನ್ನೂ ಹೆಚ್ಚುವರಿಯಾಗಿ ಅನುದಾನಕ್ಕೆ ಅಧಿಕಾರಿಗಳು ಬೇಡಿಕೆ ಇರಿಸಿರುವುದು ಗೊತ್ತಾಗಿದೆ.

 

ಕುಡಿಯುವ ನೀರು ಒದಗಿಸಲು 25 ಲಕ್ಷ, ಗಂಡು ಮಕ್ಕಳ ಶೌಚಾಲಯಕ್ಕೆ 3 ಲಕ್ಷ, ಹೆಣ್ಣು ಮಕ್ಕಳ ಶೌಚಾಲಯಕ್ಕೆ 3 ಲಕ್ಷ , ವಿದ್ಯುತ್‌ ಸೌಲಭ್ಯಕ್ಕೆ 10 ಲಕ್ಷ ರು., ಕಾಂಪೌಂಡ್‌ ನಿರ್ಮಾಣಕ್ಕೆ 5 ಲಕ್ಷ, ಸಣ್ಣ ಪುಟ್ಟ ರಿಪೇರಿಗಳಿಗೆ 1.5 ಲಕ್ಷ, ದೊಡ್ಡ ಮಟ್ಟದ ರಿಪೇರಿ ಮತ್ತು ದುರಸ್ತಿಗೆ 5 ಲಕ್ಷ, ಪ್ರೌಢಶಾಲೆಗಳ ಹೆಚ್ಚುವರಿ ಕೊಠಡಿಗಳಿಗೆ 16.4 ಲಕ್ಷ ರು., ಪ್ರಾಥಮಿಕ ಶಾಲೆಗಳಿಗೆ 13.9 ಲಕ್ಷ ರು. ಬೇಕಿದೆ ಎಂದು ಬೇಡಿಕೆ ಪಟ್ಟಿ ನೀಡಿರುವುದು ತಿಳಿದು ಬಂದಿದೆ.

 

 

ಕರ್ನಾಟಕದಲ್ಲಿ ಶಿಕ್ಷಣಕ್ಕಾಗಿ ಹಿಂದಿನ ಬಜೆಟ್‌ನಲ್ಲಿ ಮೀಸಲಿಟ್ಟಿದ್ದನ್ನು ಸರಿಯಾಗಿ ಬಳಸಲಾಗುತ್ತಿದೆಯೇ ಎಂಬುದನ್ನು ರಾಜ್ಯವು ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದು ಹೈಕೋರ್ಟ್‌ ಕಟುವಾಗಿ ಟೀಕಿಸಿತ್ತು.

 

“ಈ ದೇಶದಲ್ಲಿ ಏಕೆ ಹೀಗಾಗುತ್ತಿದೆ? ಶಿಕ್ಷಣದ ಹಕ್ಕು ಮೂಲಭೂತ ಹಕ್ಕು! ನೀವು ಶಿಕ್ಷಕರು, ಕುಡಿಯುವ ಸೌಲಭ್ಯಗಳನ್ನು ನೀಡಲು ಬಯಸುವುದಿಲ್ಲ – ನಾವು ಏನು ಮಾಡಲಿದ್ದೇವೆ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ವಿಶ್ವ ಯುದ್ಧದ ಸಮಯದಲ್ಲಿ, ಇಂಗ್ಲೆಂಡ್ ಒದಗಿಸಿದೆ. ಶಿಕ್ಷಣಕ್ಕೆ ಹೆಚ್ಚಿನ ಬಜೆಟ್ ಮತ್ತು ರಕ್ಷಣಾ ಪಡೆಗಳಿಗೆ ಕಡಿಮೆ ಬಜೆಟ್. ನಮಗೆ ಏನಾಗುತ್ತಿದೆ? ಶಿಕ್ಷಣವೊಂದೇ ದಾರಿ. ಅದಕ್ಕಾಗಿಯೇ ಡಾ. ಅಂಬೇಡ್ಕರ್ ಯಾವಾಗಲೂ ಪುಸ್ತಕವನ್ನು ಹಿಡಿದುಕೊಳ್ಳುತ್ತಾರೆ. ಏಕೆಂದರೆ ಶಿಕ್ಷಣವು ಮುಖ್ಯವಾಗಿದೆ. ಇದು ಅತ್ಯಗತ್ಯ. ನ್ಯಾಯಮೂರ್ತಿ ದೀಕ್ಷಿತ್ ಅವರು ಮುಖ್ಯ ನ್ಯಾಯಮೂರ್ತಿಯವರ ಕಳವಳವನ್ನು ಪ್ರತಿಧ್ವನಿಸಿದ್ದರಲ್ಲದೇ ಟೀಕಿಸಿದ್ದನ್ನು ಸ್ಮರಿಸಬಹುದು.

 

ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009 ರ ನಿಬಂಧನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ 2013 ರಲ್ಲಿಯೇ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ.

SUPPORT THE FILE

Latest News

Related Posts