ದೇಗುಲ, ಮಠಗಳಿಗೆ 3.99 ಕೋಟಿ ರು. ಅನುದಾನ; ಸಿಂಹಪಾಲು ಪಡೆದ ವರುಣ ಕ್ಷೇತ್ರ

ಬೆಂಗಳೂರು; ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ ಖರೀದಿಸಲು ದಾನಿಗಳ ಮುಂದೆ ಕೈಯೊಡ್ಡಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಆರಂಭಿಕ ಹಂತದಲ್ಲಿ ಮಠ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 3.99 ಕೋಟಿ ರು. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

 

ಬೀದರ್‌, ದಾವಣಗೆರೆ, ವರುಣ, ವಿಜಯಪುರ, ಹಾಸನ ಜಿಲ್ಲೆಯ ಹಲವು ದೇವಸ್ಥಾನ ಮತ್ತು ಮಠಗಳಿಗೆ ಬಿಡುಗಡೆ ಮಾಡಿರುವ ಒಟ್ಟು 3.99 ಕೋಟಿ ರು. ಅನುದಾನದ ಪೈಕಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ  ಮೈಸೂರಿನ ವರುಣ ವಿಧಾನಸಭೆ ಕ್ಷೇತ್ರಕ್ಕೆ ಆರಂಂಭದಲ್ಲೇ  ಸಿಂಹಪಾಲು ದಕ್ಕಿದೆ.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದು 6 ತಿಂಗಳು ಪೂರೈಸುತ್ತಿರುವ ಹೊತ್ತಿನಲ್ಲೇ ಇದೇ ಮೊದಲ ಬಾರಿಗೆ ದೇಗುಲ, ಮಠಗಳಿಗೆ ಅನುದಾನ ನೀಡಿರುವುದು ಮುನ್ನೆಲೆಗೆ ಬಂದಿದೆ. ವರುಣ ವಿಧಾನಸಭೆಯ ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಕ್ಷೇತ್ರವನ್ನು ಮುನ್ನಡೆಸುತ್ತಿರುವ ಬಗ್ಗೆ ಪ್ರತಿಪಕ್ಷಗಳಿಂದ ಟೀಕೆಗೆ ಒಳಗಾಗಿರುವ ಬೆನ್ನಲ್ಲೇ ವರುಣ ವಿಧಾನಸಭೆ ಕ್ಷೇತ್ರಕ್ಕೆ ಆರಂಭದಲ್ಲೇ 1.50 ಕೋಟಿ ರು. ಅನುದಾನ ಬಿಡುಗಡೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ವರುಣ ವಿಧಾನಸಭೆ ಕ್ಷೇತ್ರಕ್ಕೆ 1.50 ಕೋಟಿ ರು. ಅನುದಾನ ನೀಡಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿದೆ.

 

ವಿಶೇಷವೆಂದರೆ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಅವರು ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿಯೂ ಹಿಂದಿನ ಬಿಜೆಪಿ ಸರ್ಕಾರವು 2022ರ ನವೆಂಬರ್‌ 5ರಂದು ವರುಣ ವಿಧಾನಸಭೆ ಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ದಾರಕ್ಕಾಗಿ 150 ಲಕ್ಷ ರು. ಅನುದಾನದ ಪೈಕಿ ಶೇ.50ರಷ್ಟು ಅಂದರೆ 75.00 ಲಕ್ಷ ರು. ಅನುದಾನ ಬಿಡುಗಡೆ ಮಾಡಿ ಆದೇಶಿಸಲಾಗಿತ್ತು.

 

ಇದೀಗ 2023ರ ನವೆಂಬರ್ 2ರಂದು ಆರ್ಥಿಕ ಇಲಾಖೆಯ ಸಹಮತಿಯಂತೆ ವಿವಿಧ ಮಠಗಳು ಹಾಗೂ ದೇವಾಲಯಗಳೀಗೆ ಮುಖ್ಯಮಂತ್ರಿಗಳ ವಿಶೇಷ ಸಹಾಯಧನ-ಸಾಮಾನ್ಯ ಅಡಿಯಲ್ಲಿ ಒದಗಿಸಿರುವ 2000.00 ಲಕ್ಷ ರು. ಅನುದಾನದಿಂದ ವರುಣ ವಿಧಾನಸಭೆ ಕ್ಷೇತ್ರದ 28 ದೇವಾಲಯಗಳ ಕಾಮಗಾರಿಗಳನ್ನು ಕೈಗೊಳ್ಳಲು 150.00 ಲಕ್ಷ ರು. ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.

 

ವರುಣ ವಿಧಾನಸಭೆ ಕ್ಷೇತ್ರದ ದೇವಸ್ಥಾನಗಳ ಜೀರ್ಣೋದ್ದಾರಕ್ಕಾಗಿ 75 ಲಕ್ಷ ರು.ಗಳ ಅನುದಾನವನ್ನು ನೀಡಿತ್ತು. ಇದೀಗ ವರ್ಷ ಕಳೆಯುವುದರಲ್ಲಿಯೇ ವರುಣ ವಿಧಾನಸಭೆ ಕ್ಷೇತ್ರಕ್ಕೆ 1.50 ಕೋಟಿ ರು. ಅನುದಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಬೀದರ್ ಜಿಲ್ಲೆಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಜೀರ್ಣೋದ್ದಾರಕ್ಕೆ 50 ಲಕ್ಷ ರು. ಕಲ್ಬುರ್ಗಿ ನಗರದ ಬುದ್ಧ ವಿಹಾರದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು 67.50 ಲಕ್ಷ ರು. ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾ ಯೋಗಿ ವೇಮನ ದೇವಾಲಯ ಸೇಡಂ ಕಲ್ಬುರ್ಗಿ ಜಿಲ್ಲೆ ಈ ಸಂಸ್ಥೆಗೆ 1.00 ಕೋಟಿ, ವಿಜಯಪುರ ಜಿಲ್ಲೆ ತಾಳಿ ಕೋಟೆಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಮತ್ತು ಸಮುದಾಯ ಭವನ ಜೀರ್ಣೋದ್ಧಾರಕ್ಕೆ 25 ಲಕ್ಷ ರು. ನೀಡಿ ಆದೇಶ ಹೊರಡಿಸಿದೆ.

 

ಮಕ್ಕಳಿಗೆ ನೂರು ದಿನ ಮೊಟ್ಟೆ, ಗುಣಮಟ್ಟದ ಶೂ ನೀಡದ ಸರ್ಕಾರದಿಂದ ದೇಗುಲಗಳ ಅಭಿವೃದ್ಧಿಗೆ 116 ಕೋಟಿ

 

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶ್ರೀ ರಾಘವೇಂದ್ರ ಮಠಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಸ್ನಾನದ ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆ ಕಾಮಗಾರಿಗಳಿಗೆ 35 ಲಕ್ಷ ರು. ಅನುದಾನ ಒದಗಿಸಿದೆ.

 

ಬೀದರ್‌ನ ಶಿವಾನಂದಸ್ವಾಮಿ ಶಾಂತ ಆಶ್ರಮ ಬ್ಯಾಲಹಳ್ಳಿಗೆ 5 ಲಕ್ಷ ರು., ಕೋಲಾರ ತಾಲೂಕಿನ ಚೌಡದೇನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನಕ್ಕೆ 12 ಲಕ್ಷ ರು., ಹಾಸನ ತಾಲೂಕಿನ ಮಲ್ಲಿಗೆವಾಳು ಗ್ರಾಮದ ಮಲ್ಲೆಶ್ವರ ಸ್ವಾಮಿ ದೇವಸ್ಥಾನಕ್ಕೆ 5 ಲಕ್ಷ ರು. ಸೇರಿ ಒಟ್ಟಾರೆ 22 ಲಕ್ಷ ರು. ಗಳನ್ನು ಒದಗಿಸಲಾಗಿದೆ.

the fil favicon

SUPPORT THE FILE

Latest News

Related Posts