ಬೆಂಗಳೂರು; ಕೇಂದ್ರ ಸರ್ಕಾರವು 1968ರಲ್ಲಿ ರೂಪಿಸಿರುವ ಕೀಟನಾಶಕ ಕಾಯ್ದೆಯು 55 ವರ್ಷಗಳಾದರೂ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ. ಎಷ್ಟು ಕೀಟ ನಾಶಕ ಉತ್ಪಾದನೆಯಾಗುತ್ತಿದೆ ಮತ್ತು ಬಳಕೆಯಾಗುತ್ತಿದೆ ಎಂಬ ಕುರಿತು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಮಾಹಿತಿಯೇ ಇಲ್ಲ.
ಕೊಳಚೆ ನೀರು ಬಳಸಿ ಬಳಸಿ ಬೆಳೆಯುತ್ತಿರುವ ತರಕಾರಿಗಳಲ್ಲಿ ಭಾರ ಲೋಹ ಪತ್ತೆಯಾಗಿದೆ ಎಂದು ಎಂಪ್ರಿ ಅಧ್ಯಯನ ಸಂಸ್ಥೆಯು ನೀಡಿದ್ದ ವರದಿ ಕುರಿತು ಚರ್ಚೆಗಳಾಗುತ್ತಿರುವ ನಡುವೆಯೇ ಕೃಷಿ ಇಲಾಖೆಯು ಸರ್ಕಾರಕ್ಕೆ ಒದಗಿಸಿರುವ ವಿವರಣೆಯಲ್ಲಿ ಈ ಅಂಶವಿದೆ.
ಎಂಪ್ರಿ ಸಂಸ್ಥೆಯು ನೀಡಿರುವ ಅಧ್ಯಯನ ವರದಿ ಕುರಿತು ಸಚಿವ ಎನ್ ಚೆಲುವರಾಯಸ್ವಾಮಿ ಅವರು ಅಧಿಕಾರಿಗಳೊಂದಿಗೆ ಇನ್ನಷ್ಟೇ ಚರ್ಚೆ ನಡೆಸಬೇಕಿದೆ ಎಂದು ತಿಳಿದು ಬಂದಿದೆ.
ಎಂಪ್ರಿ ಸಂಸ್ಥೆಯು ನೀಡಿದ್ದ ಅಧ್ಯಯನ ವರದಿ ಕುರಿತು 2023ರ ನವೆಂಬರ್ 10ರಂದು ನಡೆದ ಸಭೆಯಲ್ಲಿ ಕೃಷಿ ಇಲಾಖೆಯು ಈ ಕುರಿತು ವಿವರಣೆ ನೀಡಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬೆಂಗಳೂರಿನ ಗ್ರಾಹಕರಿಗೆ ಮಾಲಿನ್ಯ ಮುಕ್ತ ತರಕಾರಿ ಹಾಗೂ ಸೊಪ್ಪುಗಳು ದೊರಕುವ ಕುರಿತು ಕೈಗೊಳ್ಳಬಹುದಾದ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ.
‘ಕೀಟನಾಶಕ ಕಾಯ್ದೆ 1968ನ್ನು ಕೇಂದ್ರ ಸರ್ಕಾರವು ರೂಪಿಸಿದೆ. ರಾಜ್ಯ ಸರ್ಕಾರಗಳು ಕೀಟನಾಶಕ ಕಾಯ್ದೆ 1968ನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ಆದರೆ 1968ರ ಕೀಟನಾಶಕ ಕಾಯ್ದೆಯು ನಮ್ಮ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗಿರುವುದಿಲ್ಲ,’ ಎಂದು ಕೃಷಿ ಇಲಾಖೆಯು ವಿವರಣೆ ನೀಡಿದೆ ಎಂದು ತಿಳಿದು ಬಂದಿದೆ.
ಕೀಟನಾಶಕ ತಯಾಋಇಕೆ, ದಾಸ್ತಾನು, ಸಾಗಾಣಿಕೆ, ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಅಧಿಕಾರವು ರಾಜ್ಯ ಸರ್ಕಾರಕ್ಕಿದೆ. ಈ ಅಧಿಕಾರದ ಅನ್ವಯ ಸಿಐಬಿ (CENTRAL INSECTICIDES BOARD) ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರವು ನಿರ್ದಿಷ್ಟ ಉತ್ಪನ್ನ ಪರವಾನಿಗೆ ನೀಡಬೇಕಿರುತ್ತದೆ.
‘ಆದರೆ ರಾಜ್ಯ ಸರ್ಕಾರದಲ್ಲಿ ಎಷ್ಟು ಕೀಟನಾಶಕ ಉತ್ಪಾದನೆಯಾಗುತ್ತಿದೆ ಮತ್ತು ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಮಾಹಿತಿ ಹಂಚಿಕೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಹಾನಿಕಾರಕವಾದ ಕೀಟನಾಶಕಗಳ ನಿಯಂತ್ರಣದ ಬಗ್ಗೆ ಕ್ರಮ ವಹಿಸಲು ಸಾಧ್ಯವಾಗುತ್ತಿಲ್ಲ,’ ಎಂದು ಇಲಾಖೆ ಹೇಳಿರುವುದು ಗೊತ್ತಾಗಿದೆ.
ಕಳೆದ ಐದು ವರ್ಷಗಳಲ್ಲಿ ಕೃಷಿ ಇಲಾಖೆಯ ಜಾಗೃತ ಕೋಶವು ದಾಳಿ ಮಾಡಿ ಒಟ್ಟು 11.02 ಕೋಟಿ ರು..ಮೊತ್ತದ 63,591 ಕೆ ಜಿ ಪೀಡೆನಾಶಕಗಳನ್ನು ಜಫ್ತಿ ಮಾಡಲಾಗಿದೆ.
ರಾಜ್ಯದಲ್ಲಿ ರಾಯಚೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಮಾತ್ರ ಕೀಟನಾಶಕ ಪ್ರಯೋಗಾಲಯಗಳು ಇವೆ. ಹೀಗಾಗಿ ಕಳಪೆ ಮತ್ತು ಗುಣಮಟ್ಟವಿಲ್ಲದ ಕೀಟನಾಶಕಗಳ ಪರಿಶೀಲನೆ ನಡೆಸುವುದು ಸಾಧ್ಯವಾಗಿರುವುದಿಲ್ಲ. ರೈತ ಸಂಪರ್ಕ ಕೇಂದ್ರಗಳು ರೈತರಿಗೆ ವರ್ಷಕ್ಕೆ ಒಂದು ಬಾರಿ ಮಾತ್ರ ಕೀಟನಾಶಕ ಬಳಕೆ ಸಂಬಂಧ ತರಬೇತಿ ಆಯೋಜಿಸುತ್ತಿದೆ. ಆದರೆ ಅದು ಪರಿಣಾಮಕಾರಿಯಾಗಿಲ್ಲ ಎಂಬುದು ತಿಳಿದು ಬಂದಿದೆ.
ರೈತರು ಬಳಸುವ ಕೀಟನಾಶಕಗಳಲ್ಲಿ ಶೇ.0.1ರಿಂದ ಶೇ.1ರಷ್ಟು ಮಾತ್ರ ಗಿಡಗಳು ಬಳಸಿಕಂಡು ಉಳಿದ ಕೀಟನಾಶಕ ಪರಿಸರಕ್ಕೆ ಸೇರುತ್ತದೆ. ಇದು ಬಯೋ ಮ್ಯಾಗ್ನಿಫಿಕೇಷನ್ ಮೂಲಕ ದೇಹವನ್ನು ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ತರಕಾರಿ ಮಾರಾಟ ಮಾಡುವ ಸೂಪರ್ ಮಾರ್ಕೇಟ್, ಅನ್‌ಲೈನ್ ತರಕಾರಿ ಮಾರಾಟಗಾರರು, ರೀಟೈಲ್ ತರಕಾರಿ ಮಾರಾಟಗಾರರು ಮಾರು ತರಕಾರಿಗಳ ಗುಣಮಟ್ಟವನ್ನು ಪರಿಶೀಲನೆಗೊಳಪಡಿಸಬೇಕು ಎಂದು ಸಭೆಯಲ್ಲಿ ವಿವರಿಸಲಾಗಿದೆ ಎಂದು ಗೊತ್ತಾಗಿದೆ.
‘ಸಿಐಬಿ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಮಾರಾಟ ಕೇಂದ್ರಗಳಲ್ಲಿ ನಿಯಂತ್ರಣವನ್ನು ಸಾಧಿಸಿ ಅನಿಯಂತ್ರಿತ ಮಾರಾಟ ಮತ್ತು ಕಾಳಸಂತೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕೀಟನಾಶಕ ಕಾಯ್ದೆ 1968ರ ಸೆಕ್ಷನ್ 19ರ ಅಡಿಯಲ್ಲಿ ಕೀಟನಾಶಕ ವಿಶ್ಲೇಷಕರು ಮತ್ತು ಸೆಕ್ಷನ್ 20ರ ಅಡಿಯಲ್ಲಿ ಕೀಟನಾಶಕ ಪರಿವೀಕ್ಷಕರುಗಳಿಗೆ ಅಧಿಕಾರ ಬಳಸಬೇಕು ಎಂದು ಸುತ್ತೋಲೆ ಹೊರಡಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
2018-19ರಿಂದ 2022-23ರವರೆಗೆ ರಾಜ್ಯದಲ್ಲಿ ಒಟ್ಟಾರೆಯಾಗಿ 25,786 ಪೀಡೆನಾಶಕಗಳ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಈ ಪೈಕಿ 236 ಮಾದರಿಗಳು ಕಳಪೆ ಎಂದು ವರದಿಯಾಗಿದೆ. ಮರುವಿಶ್ಲೇಣೆಯಲ್ಲಿ ಗುಣಮಟ್ಟದ ಮಾದರಿ ಎಂದು 112, ಮರು ವಿಶ್ಲೇಷಣೆಯಲ್ಲಿ ಕಳಪೆ ಎಂದು 82 ಪ್ರಕರಣಗಳು ವರದಿಯಾಗಿದೆ. ಈ ಸಂಬಂಧ 81 ಮೊಕದ್ದಮೆಗಳನ್ನು ಹೂಡಿದೆ. ಇನ್ನೂ 11 ಪ್ರಕರಣಗಳಲ್ಲಿ ಮೊಕದ್ದಮೆಗಳನ್ನು ಹೂಡಬೇಕಿದೆ ಎಂಬುದು ಗೊತ್ತಾಗಿದೆ.
ಅದೇ ರೀತಿ ಕಾಯ್ದೆಯಡಿ ನೋಂದಣಿಯಾಗದ ಪೀಡೆನಾಶಕಗಳ ಮಾದರಿಗಳಲ್ಲಿ ಪೀಡೆನಾಶಕ ಶೇಷಾಂಶ ಎಂದು 626 ಮಾದರಿಗಳಿವೆ. ಮರು ವಿಶ್ಲೇಷಣೆಯಲ್ಲಿ 75 ಮಾದರಿಗಳಿವೆ. ಈ ಪೈಕಿ 461 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿದು ಬಂದಿದೆ.
ಮಾರುಕಟ್ಟೆ, ಸೂಪರ್ ಮಾರುಕಟ್ಟೆ, ಮಳಿಗೆಗಳು, ಹಾಪ್‌ಕಾಮ್ಸ್, ಸಾವಯವ ಮಳಿಗೆಗಳಿಂದ 10 ತರಕಾರಿಗಳ ಮಾದರಿಗಳನ್ನು ಸಂಗ್ರಹಿಸಿ ಎಂಪ್ರಿ ಅಧ್ಯಯನ ನಡೆಸಿತ್ತ. ಇದರಲ್ಇ ಹಾರ ಮತ್ತು ಕೃಷಿ ಸಂಸ್ಥೆಯು ಹಾನಿಕರವಲ್ಲವೆಂದು ನಿಗದಿಪಡಿಸಿರುವ ಮಿತಿಗಳಿಗಿಂತ ಹೆಚ್ಚಿನ ಭಾರ ಲೋಹ ತರಕಾರಿಗಳಲ್ಲಿ ಕಂಡುಬಂದಿತ್ತು.