ಕಂಪ್ಯೂಟರ್‍‌ ಹಗರಣದ ತನಿಖಾ ವರದಿಗೆ ಅಸಮ್ಮತಿ; ಜಂಟಿ ಇಲಾಖೆ ವಿಚಾರಣೆ ಪ್ರಕರಣ ಕೈಬಿಡಲು ಪ್ರಸ್ತಾಪ

ಬೆಂಗಳೂರು; ಕಳಪೆ ಕಂಪ್ಯೂಟರ್‌, ಝೆರಾಕ್ಸ್‌, ಸಿ ಸಿ ಕ್ಯಾಮರಾ ಸೇರಿದಂತೆ ವಿದ್ಯುನ್ಮಾನಕ್ಕೆ ಸಂಬಂಧಿಸಿದ ಹಲವು ಉಪಕರಣಗಳ ಖರೀದಿ  ಪ್ರಕರಣದಲ್ಲಿ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ ಮತ್ತು ಈ ಪ್ರಕರಣದಲ್ಲಿ  ಕರ್ತವ್ಯಲೋಪವೆಸಗಿದ್ದಾರೆ  ಎನ್ನಲಾದ 15 ಮಂದಿ ಅಧಿಕಾರಿ, ನೌಕರರ ವಿರುದ್ಧ ಜಂಟಿ ಇಲಾಖೆ ವಿಚಾರಣೆ ಕೈ ಬಿಡಬಹುದು ಎಂದು ರಾಜ್ಯ ಕೇಂದ್ರ ಗ್ರಂಥಾಲಯದ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯು ಬಹಿರಂಗವಾಗಿದೆ.

 

ಈ ಪ್ರಕರಣದ ಕುರಿತು ರಾಜ್ಯಾದ್ಯಂತ ಸಮಗ್ರ ತನಿಖೆ ನಡೆಸಿ ವರದಿ ಪಡೆಯುವುದು ಸೂಕ್ತ ಎಂದು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕರು ವರದಿ ನೀಡಿದ್ದರ ಬೆನ್ನಲ್ಲೇ ಯಾವುದೇ ಆರ್ಥಿಕ ನಷ್ಟವಾಗಿಲ್ಲ ಮತ್ತು  ಈ ಪ್ರಕರಣದಲ್ಲಿ ಭಾಗಿ ಆಗಿದ್ದ ಅಧಿಕಾರಿ, ನೌಕರರ ಪಟ್ಟಿಯನ್ನು ಒದಗಿಸಿದ ನಂತರ ಅವರ ವಿರುದ್ಧದ ಜಂಟಿ ಇಲಾಖೆ ವಿಚಾರಣೆಯನ್ನು ಕೈ ಬಿಡಬಹುದು ಎಂದು ನಿರ್ದೇಶಕರು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

‘ಎಲೆಕ್ಟ್ರಾನಿಕ್‌ ಉಪಕರಣಗಳ ಖರೀದಿಯಲ್ಲಿ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ. ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತಾಂತ್ರಿಕವಾಗಿ ಉನ್ನತ ಮಟ್ಟದ Specification ಪ್ರಕಾರ ಸುಸ್ಥಿತಿಯಲ್ಲಿದೆ. ಖರೀದಿ ಆದೇಶದ ಹಾಗೂ ಹಣ ಪಾವತಿಗಾಗಿ ಸಲ್ಲಿಸಲಾದ ಬಿಲ್ಲುಗಳ ಅನುಗುಣವಾಗಿ ಪಡೆದು ನಿಯಮಾನುಸಾರ ದಾಸ್ತಾನು ವಹಿಯಲ್ಲಿ ದಾಸ್ತಾನು ತೆಗೆದುಕೊಂಡು ಕಚೇರಿಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಅಳವಡಿಸಿ ಕಚೇರಿ ಉಪಯೋಗಕ್ಕಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಉಪಯೋಗಿಸಿಕೊಳ್ಳಲಾಗುತ್ತಿದೆ.

 

ಕಳಪೆ ಗುಣಮಟ್ಟದ ಉಪಕರಣಗಳನ್ನು ಖರೀದಿಸಲಾಗಿರುವ ಬಗ್ಗೆ ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ನಿರ್ದೇಶಕರು ಅವರು ನೀಡಿರುವ ವರದಿಯಲ್ಲಿ ಸಾಬೀತಾಗಿಲ್ಲ. ಈಗಾಗಲೇ ಇಲಾಖೆಯಲ್ಲಿರುವ ಕೆಲವು ಅಧಿಕಾರಿ, ಸಿಬ್ಬಂದಿಗಳು ನಿವೃತ್ತರಾಗಿರುವುದರಿಂದ ಹಾಗೂ ನಿಧನರಾಗಿರುವುದರಿಂದ ಜಂಟಿ ಇಲಾಖೆ ವಿಚಾರಣೆ ಕೈಗೊಳ್ಳುವುದು  ಕಷ್ಟಸಾಧ್ಯವಾಗಿರುವುದರಿಂದ ಸದರಿ ವಿಷಯವನ್ನು ಕೈಬಿಡಬಹುದು,’ ಎಂದು ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

 

ಅದೇ ರೀತಿ ‘ಎನ್‌ಪಿ ಎಸ್‌ಜಿ , ರಾಜ್ಯ ಶಿಕ್ಷಣ ಸಂಶೋಧನೆ ಮ್ತು ತರಬೇತಿ ನಿರ್ದೇಶನಾಲಯದ ತಂತ್ರಜ್ಞರು ತನಿಖಾ ತಂಡದೊಂದಿಗೆ 2020 ನವೆಂರ್‍‌ 20 ಮತ್ತು 21ರಂದು ಬೆಂಗಳೂರು ನಗರದ ಎಲ್ಲಾ ವಲಯಗಳಿಗೆ ಭೇಟಿ ನೀಡಿ ಸಂಕ್ಷಿಪ್ತ ವರದಿಯಲ್ಲಿ ನೀಡಿದ್ದಾರೆ.

 

ಆದರೆ ಖರೀದಿಸಲಾದ ಸಾಮಗ್ರಿಗಳು ಬೆಂಗಳೂರಿನ ವಲಯ ಕಚೇರಿಗಳಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಲ್ಲಿ ಅಳವಡಿಸಿ ಸಾರ್ವಜನಿಕ ಓದುಗರಿಗೆ ಉಪಯೋಗಕ್ಕೆ ನೀಡಲಾಗಿದೆ. ಸಾಮಗ್ರಿಗಳಿರುವ ಸದರಿ ಗ್ರಂಥಾಲಯಗಳಿಗೆ ತನಿಖಾ ತಂಡವು ಭೇಟಿ ನೀಡಿರುವುದಿಲ್ಲ. ಕಾರಣ ತಂತ್ರಜ್ಞರ ವರದಿಯನ್ನು ಒಪ್ಪಲಾಗಿರುವುದಿಲ್ಲ.

 

ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ವಾರಂಟಿ ಅವಧಿ ಇರುವುದರಿಂದ ವಾರ್ಷಿಕ ನಿರ್ವಹಣೆ ಒಪ್ಪಂದಕ್ಕೆ ಅವಕಾಶವಿರುವುದಿಲ್ಲ. ಬದಲಾಗಿ ವಾರಂಟಿ ಅವಧಿಯ ನಂತರ ಅರ್ಹ ಸಂಸ್ಥೆಗಳಿಂದ ಉಪಕರಣಗಳ ವಾರ್ಷಿಕ ನಿರ್ವಹಣೆ ಕ್ರಮ ಕೈಗೊಳ್ಳಲಾಗಿರುತ್ತದೆ,’ ಎಂದು ವರದಿ ನೀಡಿರುವುದು ತಿಳಿದು ಬಂದಿದೆ.

 

ಹಾಗೆಯೇ ಡಿಜಿಎಸ್‌ ಮತ್ತು  ಮತ್ತು ಜೆಮ್‌ ದರ ಒಪ್ಪಂದದ ಅಧಿಕೃತ ಪೋರ್ಟಲ್‌ನಲ್ಲಿ ನಿಗದಿಪಡಿಸಿ ಪಟ್ಟಿ ಮಾಡಲಾದ ಸಂಸ್ಥೆಯಿಂದಲೇ ಉಪಕರಣಗಳನ್ನು ಖರೀದಿಸಲಾಗಿದೆ. ಸಂಸ್ಥೆಗೆ ಖರೀದಿ ಮೊತ್ತವನ್ನು ನಿಯಮಾನುಸಾರ ಬಿಲ್‌ನಲ್ಲಿ ಆದಾಯ ತೆರಿಗೆ, ಜಿಎಸ್‌ಟಿ ಮೊತ್ರಗಳ ಕಟಾವಣೆಗಳ ನಂತರ ಚೆಕ್‌ ಮೂಲಕ ಪಾವತಿಯಾಗಿದೆ. ಜೆಮ್‌ ದರ ಒಪ್ಪಂದದ ಇಲಾಖೆಗಳಿಂದ ಆಫ್‌ ಲೈನ್‌ನಲ್ಲಿ ಕಾರ್ಯಾದೇಶ ನೀಡಿರುವ ಬಗ್ಗೆ ಇದುವರೆಗೂ ಆಕ್ಷೇಪಣೆ ಇರುವುದಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

 

ಕಳಪೆ ಕಂಪ್ಯೂಟರ್‌ಗಳನ್ನು ಖರೀದಿಸಿರುವ ಸಂಬಂಧ ಇಡೀ ರಾಜ್ಯಾದ್ಯಂತ ಸಮಗ್ರ ತನಿಖೆ ನಡೆಸಿ ವರದಿ ಪಡೆಯಬೇಕು ಎಂದು ಕರ್ನಾಟಕ ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು ಸಲ್ಲಿಸಿದ್ದ ವರದಿಯನ್ನೇ ಗ್ರಂಥಾಲಯ ಇಲಾಖೆಯ ಹಾಲಿ ನಿರ್ದೇಶಕ ಸತೀಶ್‌ ಕುಮಾರ್‌ ಹೊಸಮನಿ ಅವರು ಬದಿಗೆ ಸರಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಈ ಪತ್ರವನ್ನಾಧರಿಸಿ ಪ್ರಾಥಮಿಕ ತನಿಖೆ ನಡೆಸಲು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕ ಹೆಚ್‌ ಎನ್‌ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಿತ್ತು. ಈ ತಂಡವು 2020ರ ನವೆಂಬರ್‌ 20 ಮತ್ತು 21, 2021ರ ಫೆ.9ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ 2010-11ರಿಂದ 2019-20ರವರೆಗೂ ಕಡತಗಳ ತಪಾಸಣೆ ನಡೆಸಿತ್ತು ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

 

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ಕಂಪ್ಯೂಟರ್‌, ಯುಪಿಎಸ್‌, ಸರ್ವರ್‌, ಸ್ಕ್ಯಾನರ್‌, ಪ್ರಿಂಟರ್‌, ಬಯೋ ಮೆಟ್ರಿಕ್‌, ಸಿಸಿಟಿವಿ ಕ್ಯಾಮರಾ, ಜೆರಾಕ್ಸ್‌ ಯಂತ್ರ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಸಂಬಂಧಪಟ್ಟ ಉಪಕರಣಗಳ ಪರಿಕರಗಳ ಖರೀದಿ ವಿವರ, ಖರೀದಿ ವಿಧಾನ, ಖರೀದಿ ಮೊಬಲು, ಖರೀದಿ ದಿನಾಂಕ, ಕಡತಗಳ ನಿರ್ವಹಣೆ, ದಾಸ್ತಾನು ವಹಿ ಇತ್ಯಾದಿಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿತ್ತು. ಈ ಸಂಬಂಧ 2021ರ ಅಕ್ಟೋಬರ್‌ 24ರಂದು ತನಿಖಾ ವರದಿ ಸಲ್ಲಿಸಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts