ಬೆಂಗಳೂರು; ‘ನಾನಿದ್ದೀನಮ್ಮ, ನಿನಗೇಕೆ ಚಿಂತೆ, ನಾನು ಹೇಳಿದ ಹಾಗೆ ನೀನು ಕೇಳು. 20 ಸಾವಿರ ಹಣ ನನಗೆ ಕೊಡು. ರಾತ್ರಿ ಊಟಕ್ಕೆ ರೆಡಿ ಮಾಡು, ಕರೆ ಮಾಡು ಬಂದು ಎಲ್ಲವನ್ನೂ ಸರಿ ಮಾಡುತ್ತೇನೆ,’
‘ಕೊಠಡಿಯ ಒಳಗಡೆ ಎಡಭಾಗಕ್ಕೆ ಇರುವ ಇನ್ನೊಂದು ಇನ್ನೊಂದು ಕೊಠಡಿಯಲ್ಲಿ 20,000 ಹಣ ಇಡು ಎಂದು ಹೇಳಿದಂತೆ ನಾನು ಹಣ ಇಟ್ಟಿದ್ದೆ. ನನ್ನ ಸಮಸ್ಯೆಯನ್ನು ಅವರು ಬಗೆಹರಿಸುತ್ತಾರೆ ಎಂದು ತಿಳಿದುಕೊಂಡಿದ್ದೆ. ಆದರೆ ನಾನು ಅವರು ಹೇಳಿದ ಹಾಗೆ ಊಟಕ್ಕೆ ರೆಡಿ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಮತ್ತು ಅಂತಹ ಸಂಪ್ರದಾಯ ಕುಟುಂಬದಿಂದ ಬಂದವಳು ಅಲ್ಲ. ಈ ವಿಚಾರವಾಗಿ ಯಾವುದಕ್ಕೂ ಒಪ್ಪಿಕೊಳ್ಳದ ಕಾರಣ ನನ್ನ ಮೇಲೆ ದಿನನಿತ್ಯ ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ನೀಡಿದ್ದಾರೆ.,’
ಇವಿಷ್ಟು ಗ್ರಂಥಾಲಯ ಸಹಾಯಕಿಯೊಬ್ಬರು ಕಳೆದ ಎರಡು ವರ್ಷದಿಂದ ಅನುಭವಿಸಿರುವ ಯಾತನೆಯ ಮಾತುಗಳು.
ತನ್ನ ಮೇಲಾಧಿಕಾರಿಯಾದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಎಸ್ ಹೊಸಮನಿ ಮತ್ತು ಇಲಾಖೆಯ ಇನ್ನಿತರೆ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಗ್ರಂಥಾಲಯ ಸಹಾಯಕಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಲಿಖಿತವಾಗಿ 7 ಪುಟಗಳ ದೂರು ನೀಡಿದ್ದಾರೆ. ಈ ದೂರು, ಸಾರ್ವಜನಿಕ ಗ್ರಂಥಾಲಯದ ಇಲಾಖೆಯ ಮತ್ತೊಂದು ಮುಖವನ್ನು ತೆರೆದಿಟ್ಟಿದೆ.
ಗೌಪ್ಯತೆ ಕಾರಣಕ್ಕಾಗಿ ದೂರುದಾರಾರ ಹೆಸರನ್ನು ವರದಿಯಲ್ಲಿ ಬಹಿರಂಗಪಡಿಸುತ್ತಿಲ್ಲ.
ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಮತ್ತು ಇದನ್ನು ಸಚಿವರ ಗಮನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಶಾಲಾ ಶಿಕ್ಷಣ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿಗೆ ಟಿಪ್ಪಣಿ ಹಾಕಿದ್ದಾರೆ. ಈ ಟಿಪ್ಪಣಿಯ ಪ್ರತಿ ಮತ್ತು ಗ್ರಂಥಾಲಯ ಸಹಾಯಕಿ ನೀಡಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಿರ್ದೇಶಕ ಸತೀಶ್ ಕುಮಾರ್ ಎಸ್‌ಹೊಸಮನಿ, ಉಪ ನಿರ್ದೇಶಕ ಚಂದ್ರಶೇಖರ್ ಹೆಚ್, ಅಧೀಕ್ಷಕ ಆನಂದ ಶಿವಪ್ಪ ಹಡಪದ, ಗ್ರಂಥಾಲಯ ಸಹಾಯಕ ನಾರಾಯಣಮೂರ್ತಿ, ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಇವರು ಕೋವಿಡ್ ಸಂದರ್ಭದಿಂದಲೂ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಂಥಾಲಯ ಸಹಾಯಕಿ ಅವರು ದೂರಿನಲ್ಲಿ ವಿವರಿಸಿದ್ದಾರೆ.
ರಸೀದಿ ಪುಸ್ತಕಗಳ ಸಂಖ್ಯೆಗೆ ಸಂಬಂಧಿಸಿದಂತೆ ಅನಗತ್ಯವಾಗಿ ಅಧಿಕಾರಿಗಳು ದಿನನಿತ್ಯ ನೋಟೀಸ್ ನೀಡುತ್ತಿದ್ದಾರೆ ಎಂದು ದೂರಿರುವ ಗ್ರಂಥಾಲಯ ಸಹಾಯಕಿ, ತಮ್ಮ ವಿರುದ್ಧದ ಆರೋಪಗಳ ಸಂಬಂಧ ನಡೆದಿದ್ದ ತನಿಖೆಯಲ್ಲಿಯೂ ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದರೂ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವುದು ಗೊತ್ತಾಗಿದೆ.
ದೂರುದಾರರು ಈ ಸಂಗತಿಯನ್ನು ಇಲಾಖೆ ನಿರ್ದೇಶಕ ಸತೀಶ್ ಎಸ್ ಹೊಸಮನಿ ಅವರ ಗಮನಕ್ಕೂ ತಂದಿದ್ದಾರೆ. ಆ ವೇಳೆಯಲ್ಲಿ ಹೊಸಮನಿ ಅವರು ‘ನಾನಿದ್ದೀನಮ್ಮ, ನಿನಗೇಕೆ ಚಿಂತೆ, ನಾನು ಹೇಳಿದ ಹಾಗೆ ನೀನು ಕೇಳು. ನಾನು ಹೇಳಿದ ಹಾಗೆ ನೀನು ಕೇಳು. 20 ಸಾವಿರ ಹಣ ನನಗೆ ಕೊಡು. ರಾತ್ರಿ ಊಟಕ್ಕೆ ರೆಡಿ ಮಾಡು, ‘ಕರೆ ಮಾಡು ಬಂದು ಎಲ್ಲವನ್ನೂ ಸರಿ ಮಾಡುತ್ತೇನೆ,’ ಎಂದು ಹೇಳಿದ್ದರು ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಗ್ರಂಥಾಲಯ ಇಲಾಖೆ ನಿರ್ದೇಶಕರ ಸೂಚನೆಯಂತೆಯೇ ಗ್ರಂಥಾಲಯ ಸಹಾಯಕಿಯು 20 ಸಾವಿರ ರುಪಾಯಿಗಳನ್ನು ಹಣವನ್ನು ಇರಿಸಿದ್ದರು. ಆದರೆ ಸಮಸ್ಯೆಯನ್ನು ನಿರ್ದೇಶಕರು ಬಗೆಹರಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೇ ‘ನಾನು ಅವರು ಹೇಳಿದ ಹಾಗೆ ಹಣವನ್ನು ಇಟ್ಟಿದ್ದೆ. ನನ್ನ ಸಮಸ್ಯೆಯನ್ನು ಬಗೆಹರಿಸಲುತ್ತಾರೆ ಎಂದು ತಿಳಿದುಕೊಂಡಿರುತ್ತೇನೆ. ಆದರೆ ನಾನು ಅವರು ಹೇಳಿದ ಹಾಗೆ ಊಟಕ್ಕೆ ರೆಡಿ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಅಂತಹ ಸಂಪ್ರದಾಯ ಕುಟುಂಬದಿಂದ ಬಂದವಳು ಅಲ್ಲ. ಈ ವಿಚಾರವಾಗಿ ಯಾವುದಕ್ಕೂ ಒಪ್ಪಿದಕೊಳ್ಳದ ಕಾರಣ ನನ್ನ ಮೇಲೆ ದಿನನಿತ್ಯ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ,’ ಎಂದು ದೂರಿನಲ್ಲಿ ನೋವನ್ನು ತೋಡಿಕೊಂಡಿರುವುದು ಗೊತ್ತಾಗಿದೆ.
ಡಿಸಿಎಂಗಳಿಗೆ 5 ಕೋಟಿ ಸಂಗ್ರಹಿಸಲು ತಾಕೀತು; ಗ್ರಂಥಾಲಯ ನಿರ್ದೇಶಕರೇ ವಸೂಲಿಗಿಳಿದರೇ?
ಈ ಕುರಿತು ಯಾರಿಗಾದರೂ ಹೇಳಿದರೆ ಅಮಾನತುಗೊಳಿಸಲಾಗುವುದು ಇಲ್ಲವೇ ದೂರದ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ನಿರ್ದೇಶಕರು ಏರು ದನಿಯಲ್ಲಿ ಎಚ್ಚರಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಹೆಚ್ ಚಂದ್ರಶೇಖರ್ ಎಂಬುವರು ಗ್ರಂಥಾಲಯ ಸಹಾಯಕಿ ಮೇಲೆ ಕೈ ಹಾಕುವುದು, ಹಿಂದಿನಿಂದ ಬಂದು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.