ಬೆಂಗಳೂರು; ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಅಧಿಕಾರಿಗಳ ವರ್ಗಾವಣೆಯಲ್ಲಿ ನಿರತವಾಗಿರುವುದು ಪ್ರತಿಪಕ್ಷಗಳ ಕೈಗೆ ಅಸ್ತ್ರ ನೀಡಿರುವ ಬೆನ್ನಲ್ಲೇ ಇದೀಗ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ ನೇರವಾಗಿ ಕಾಂಗ್ರೆಸ್ ಶಾಸಕ ಜಿ ಟಿ ಪಾಟೀಲ್ ಅವರ ಆಪ್ತ ಸಹಾಯಕನ ವಿರುದ್ಧವೇ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರು ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.
‘ವರ್ಗಾವಣೆಗಳಿಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ,’ ಎಂದು ಶಾಸಕರ ಆಪ್ತ ಸಹಾಯಕನ ವಿರುದ್ಧ ದೂರಿರುವ ಸಚಿವರ ಆಪ್ತ ಕಾರ್ಯದರ್ಶಿ ಕೆ ಎ ಹಿದಾಯತ್ ಉಲ್ಲಾ ಅವರು ನೀಡಿರುವ ದೂರು, ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಮಾಡಿದ್ದ ಆರೋಪಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.
ಹಾಗೆಯೇ ಕಾಂಗ್ರೆಸ್ ಶಾಸಕರ ಹೆಸರಿನಲ್ಲಿ ಅವರ ಆಪ್ತ ಸಹಾಯಕರು ಅಧಿಕಾರಿಶಾಹಿ ಮೇಲೆ ವರ್ಗಾವಣೆ, ನಿಯೋಜನೆ, ವಿವಿಧ ಖಾಸಗಿ ಕಾಲೇಜುಗಳ ಪರವಾನಿಗೆ ಅನುಮತಿ, ನವೀಕರಣಕ್ಕೆ ಒತ್ತಡ ಹೇರುತ್ತಿರುವುದು ಸಹ ಮೇಲ್ನೋಟಕ್ಕೆ ಕಂಡು ಬಂದಿದೆ.
ಅಲ್ಲದೇ ಸಿದ್ದರಾಮಯ್ಯ ಅವರ ವಿರುದ್ಧ ಲಿಂಗಾಯತ ಸಮುದಾಯದ ಶಾಸಕರು ಅಸಮಾಧಾನದಿಂದ ಕುದಿಯುತ್ತಿರುವ ಹೊತ್ತಿನಲ್ಲಿಯೇ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕ ಜಿ ಟಿ ಪಾಟೀಲ್ ಆಪ್ತ ಸಹಾಯಕನ ವಿರುದ್ಧ ಸಲ್ಲಿಕೆಯಾಗಿರುವ ದೂರು ಮಹತ್ವ ಪಡೆದುಕೊಂಡಿದೆ. ಅಲ್ಲದೇ ಅವರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ದೂರಿನಲ್ಲೇನಿದೆ?
ನಾನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಬೀಳಿಗಿ ಕ್ಷೇತ್ರದ ಶಾಸಕರ ಆಪ್ತ ಸಹಾಯಕ ಪ್ರಕಾಶ ಬಿ ಎಂಬುವರು ಬೀಳಗಿ ಕ್ಷೇತ್ರದ ಶಾಸಕರ ಕ್ಷೇತ್ರವಲ್ಲದ ವರ್ಗಾವಣೆ ಪ್ರಸ್ತಾವನೆಗಳು, ಕಾಲೇಜು ಅನುಮತಿಗಾಗಿ ಎನ್‌ಒಸಿ ಪತ್ರಗಳನ್ನು ನೀಡುವ ಬಗ್ಗೆ ಆಪ್ತ ಶಾಖೆಗೆ ಕಡತ ಸ್ವೀಕೃತಗೊಳ್ಳದಿದ್ದರೂ ಪದೇ ಪದೇ ಅನಾವಶ್ಯಕ ಒತ್ತಡ ಹೇರಿ ಸಚಿವಾಲಯದ ಹಂತದಲ್ಲಿ ಸರಿಯಾಗಿ ಪ್ರಸ್ತಾವನೆಯನ್ನು ಪರಿಶೀಲಿಸಲು ಬಿಡದೇ ಅನುಮತಿ ನೀಡುವಂತೆ ಒತ್ತಾಯಿಸುತ್ತಿದ್ದರು.
ಈ ಬಗ್ಗೆ ತಮ್ಮ ಮೊಬೈಲ್ ನಂಬರ್ 9448085005 ರಿಂದ ದಾಖಲೆಗಳನ್ನು ಕಳಿಸಿದ್ದು 2023ರ ಅಕ್ಟೋಬರ್ 7ರಂದು ನನ್ನ ವಿರುದ್ಧ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಿಗೆ ಶಾಸಕರೇ ದೂರು ಸಲ್ಲಿಸಿರುವುದಾಗಿ ದೂರಿನ ಪತ್ರವನ್ನು ನನಗೆ ವ್ಯಾಟ್ಸ್ ಆಪ್ ಮುಖಾಂತರ ರವಾನಿಸಿ ವರ್ಗಾವಣೆಗಳನ್ನು ಮಾಡಿಕೊಡದಿದ್ದಲ್ಲಿ ತೊಂದರೆ ಅನುಭವಿಸಬೇಕಾದೀತು ಎಂದು ಬೆದರಿಕೆ ಹಾಕಿರುತ್ತಾರೆ.
ಇದೇ ರೀತಿ 09-10-2023ರಂದು ಪ್ರಕಾಶ ಬಿ ಅವರು ನಾನು ಇಲ್ಲದ ಸಮಯದಲ್ಲಿ ನಮ್ಮ ಕಚೇರಿಗೆ ಬಂದು ನನ್ನ ವಿರುದ್ಧ ದಾಖಲಿಸಿರುವ ದೂರಿನ ಬಗ್ಗೆ ಪ್ರಸ್ತಾಪ ಮಾಡಿ ಕಛೇರಿಯಲ್ಲಿದ್ದ ಸಿಬ್ಬಂದಿಗಳ ಹಾಗೂ ಸಾವ್ಜನಿಕರ ಎದುರು ನನ್ನ ಬಗ್ಗೆ ಗೌರವವಾದಿ ಅವಾಛ್ಯ ಶಬ್ದಗಳಿಂದ ನಿಂದಿಸಿ ನಾಳೆ ದಿನಪತ್ರಿಕೆಗಳಲ್ಲಿ ಯಾವ ರೀತಿ ಸುದ್ದಿ ಬರುತ್ತದೆ ಕಾದು ನೋಡಿ ಎಂದು ಹೇಳಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸ್ವತಃ ಶಾಸಕರಿಗೆ ದಾರಿ ತಪ್ಪಿಸಿ ಸ್ಪೀಕರ್ ಗೆ ನನ್ನ ವಿರುದ್ಧ ಪತ್ರ ಬರೆಸಿದ್ದರು ಎಂದು ಹಿದಾಯತ್ ಆರೋಪಿಸಿದ್ದಾರೆ. ಅವರ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನ ಸಚಿವರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಆದರೆ ಬೇರೆ ಬೇರೆ ಇಲಾಖೆಯ ಸಚಿವರ ಪತ್ರ ಹಿಡಿದು ವರ್ಗಾವಣೆಗೆ ಪ್ರಕಾಶ್ ಬೀಳಗಿ ಪಟ್ಟು ಹಿಡಿಯುತ್ತಿದ್ದರು.
ಚಿತ್ರದುರ್ಗದಲ್ಲಿ ಮೈಲಾರಲಿಂಗೇಶ್ವರ ಫಾರ್ಮಸಿ ಕಾಲೇಜಿಗೆ ಅನುಮತಿ ಕೇಳಿ ಪ್ರಕಾಶ್ ಬೀಳಗಿ ಪತ್ರ ಸಲ್ಲಿಸಿದ್ದಾರೆ. ಫಾರ್ಮಸಿ ಕಾಲೇಜಿಗೂ, ಶಾಸಕ ಜೆ.ಟಿ ಪಾಟೀಲ್ ಅವರಿಗೆ ಸಂಬಂಧವೇ ಇಲ್ಲ. ಇದೇ ರೀತಿ ಶಾಸಕರಿಗೆ ಸಂಬಂಧವಿಲ್ಲದ ವರ್ಗಾವಣೆ ಕೋರಿಕಾ ಪತ್ರಗಳನ್ನ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಶಾಸಕರ ಪಿ.ಎ ಎಂದು ಹೇಳಿಕೊಂಡು ವರ್ಗಾವಣೆ ದಂಧೆಯಲ್ಲಿ ಪ್ರಕಾಶ್ ಬೀಳಗಿ ಅವರು ತೊಡಗಿದಂತಿದೆ. ಈ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ನೀಡಿದ ವರ್ಗಾವಣೆ ಕೋರಿಕೆಗಳನ್ನ ಪರಿಶೀಲನೆಯಲ್ಲಿರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ ಶಾಸಕ ಜಿ ಟಿ ಪಾಟೀಲ್ ಅವರು ಸಹಿ ಮಾಡಿದ್ದ ಲೆಟರ್ ಹೆಡ್‌ನಲ್ಲಿ ಹಿದಾಯತ್ ಉಲ್ಲಾ ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರವೊಂದನ್ನು ಬರೆಯಲಾಗಿತ್ತು.