ಸಫಾಯಿ ಕರ್ಮಚಾರಿಗಳಿಗೆ ಸಾಧನ, ಸಮವಸ್ತ್ರಕ್ಕೆಂದು ನೀಡಿದ್ದ 15 ಕೋಟಿ ಅನುದಾನ ಕಸಿದುಕೊಂಡ ಸರ್ಕಾರ

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18,500 ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಸಾಧನ ಮತ್ತು ಸಮವಸ್ತ್ರವನ್ನು ಒದಗಿಸಲು ಹಿಂದಿನ ಬಿಜೆಪಿ ಸರ್ಕಾರವು ಮಂಜೂರು ಮಾಡಿದ್ದ 15 ಕೋಟಿ ರು. ಸೇರಿದಂತೆ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಅನುಮೋದನೆಗೊಂಡಿದ್ದ ಒಟ್ಟಾರೆ 485 ಕೋಟಿ ರು. ಮೊತ್ತದ ಯೋಜನೆಗಳನ್ನೇ ಈಗಿನ ಕಾಂಗ್ರೆಸ್‌ ಸರ್ಕಾರವು ರದ್ದುಪಡಿಸಿದೆ.

 

ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ಮಂಜೂರಾಗಿದ್ದರೂ ಇನ್ನೂ ಕೈಗೆತ್ತಿಕೊಳ್ಳದಿರುವ, ಅನುಷ್ಠಾನಗೊಳ್ಳದ ಯೋಜನೆಗಳನ್ನು ರದ್ದುಪಡಿಸಿರುವ ನಗರಾಭಿವೃದ್ಧಿ ಇಲಾಖೆಯು ಹೆಬ್ಬಾಳ, ಪುಲಿಕೇಶಿ ನಗರ, ಸರ್ವಜ್ಞ ನಗರ, ಶಿವಾಜಿ ನಗರ, ಚಾಮರಾಜಪೇಟೆ, ಗಾಂಧಿನಗರ, ಗೋವಿಂದರಾಜನಗರ, ಬಿಟಿಎಂ ಲೇ ಔಟ್‌, ಆನೇಕಲ್‌, ವಿಜಯನಗರ, ಬ್ಯಾಟರಾಯನಪುರ, ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿನ ರಸ್ತೆ, ಒಳಚರಂಡಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 485 ಕೋಟಿ ರು.ಗಳನ್ನು ಹಂಚಿಕೆ ಮಾಡಿ 2023ರ ಅಕ್ಟೋಬರ್‍‌ 7ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಫಾಯಿ ಕರ್ಮಚಾರಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ, ಅವರ ಏಳಿಗೆಗೆ ಸಹಾಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದ ರಾಜ್ಯ ಸರ್ಕಾರವು ಇದೀಗ ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಸಾಧನ ಮತ್ತು ಸಮವಸ್ತ್ರ ನೀಡಲು ಮಂಜೂರಾಗಿದ್ದ 15 ಕೋಟಿ ರು.ಗಳನ್ನು ರಸ್ತೆ, ಒಳಚರಂಡಿ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಮಾರ್ಗಪಲ್ಲಟ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

 

ಸಫಾಯಿ ಕರ್ಮಚಾರಿಗಳು ಗೌರವಾನ್ವಿತ ಜೀವನ ನಡೆಸುವಂತೆ ಮಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತರಬೇಕಿದ್ದ ಸರ್ಕಾರವೇ ಇದೀಗ ಸುರಕ್ಷತಾ ಸಾಧನ ಮತ್ತು ಸಮವಸ್ತ್ರ ಒದಗಿಸಲು ಮಂಜೂರಾಗಿದ್ದ ಅನುದಾನವನ್ನೇ ಇತರೆ ಯೋಜನೆಗಳಿಗೆ ಹಂಚಿಕೆ ಮಾಡಿರುವುದು ಸಫಾಯಿ ಕರ್ಮಚಾರಿಗಳ ಆಕ್ರೋಶಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

18,500 ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಸಾಧನಗಳು ಮತ್ತು ಸಮವಸ್ತ್ರ ನೀಡಲು 2022ರ ಜೂನ್‌ 18ರಂದು ಆದೇಶ ಹೊರಡಿಸಲಾಗಿತ್ತು. ಈ ಸಂಬಂಧ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 4 ಹೆಚ್ ವಿನಾಯಿತಿ ನೀಡಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ಈ ಸಂಬಂಧ 2023ರ ಸೆ.14ರಂದು ಕೆಲ ಸ್ಪಷ್ಟೀಕರಣ ಕೋರಿ ಪ್ರಸ್ತಾವನೆಯನ್ನು ಹಿಂದಿರುಗಿಸಲಾಗಿತ್ತು. ಆದ್ದರಿಂದ ಈ ಕಾಮಗಾರಿಯನ್ನು ಕೈ ಬಿಡಬಹುದು. 15 ಕೋಟಿ ರು. ಅನುದಾನವನ್ನು ಪರಿಷ್ಕೃತ ಕ್ರಿಯಾ ಯೋಜನೆಗೆ ಪರಿಗಣಿಸಬಹುದು ಎಂದು ಬಿಬಿಎಂಪಿ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಅನುಮೋದಿಸಿದ್ದರು.

 

ಸಫಾಯಿ ಕರ್ಮಚಾರಿ ಸಮುದಾಯವನ್ನು ಸಾರ್ವತ್ರಿಕ ಆರೋಗ್ಯ ಯೋಜನೆಯಡಿಯಲ್ಲಿ ತರುವುದು ಹಾಗೂ ಕೈನಿಂದ ಶುಚಿಮಾಡುವ ಕ್ರಮವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಆಶಯವನ್ನು ಸರ್ಕಾರವು ವ್ಯಕ್ತಪಡಿಸಿತ್ತು.

 

ಸಬ್ಸಿಡಿ ದರದಲ್ಲಿ ಸ್ವಚ್ಚತಾ ಯಂತ್ರ, ಲೋಡ್ ಅನ್ ಲೋಡ್ ಮಾಡುವ ಕಾರ್ಮಿಕರು, ಚಾಲಕರು ಮತ್ತು ಸಪಾಯಿ ಕರ್ಮಚಾರಿಗಳುಗಳಿಗೆ ಕನಿಷ್ಠ ವೇತನ ಯೋಜನೆ ಮತ್ತು ಸಾಮಾಜಿಕ ಮತ್ತು ವಿತ್ತೀಯ ಸುರಕ್ಷತೆ ಯೋಜನೆಗಳಾದ ಭಾವಿಷ್ಯ ನಿಧಿ ಮತ್ತು ಇಎಸ್ಐ ಯೋಜನೆಗಳಿಗೆ ಇವರನ್ನು ಪರಿಗಣಿಸಲು ಹಲವು ಸಭೆಗಳಲ್ಲಿ ನಿರ್ಣಯ ಕೈಗೊಂಡಿತ್ತು.

 

“ರಕ್ಷಣಾತ್ಮಕ ಗೇರ್ ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಪೂರೈಸುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಈ ಸುರಕ್ಷತಾ ಲಭ್ಯವಾಗಿವಂತೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡುತ್ತಿದ್ದೇವೆ” ಮುಖ್ಯ ಕಾರ್ಯದರ್ಶಿಯವರ ಕಛೇರಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ 6,000 ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಗೆ 2021ರ ಆಗಸ್ಟ್‌ 15ರಂದು ಸರ್ಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು

 

ಈ ಯೋಜನೆಯಡಿ ಬೃಹತ್ ನೀರುಗಾಲುವೆ, ಆರೋಗ್ಯ, ಗ್ರೇಡ್‌ ಸಪರೇಟರ್‍‌, ಕೆರೆ ಅಭಿವೃದ್ಧಿ, ಶಾಲಾ ಕಾಲೇಜುಗಳ ಅಭಿವೃದ್ಧಿ, ಪೀಠೋಪಕರಣಗಳು, ಟೆಂಡರ್‍‌ ಶ್ಯೂರ್‍‌ ಮಾದರಿಯಲ್ಲಿ ರಸ್ತೆಗಳ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣೆ, ಹಾಲಿ ಪ್ರಗತಿಯಲ್ಲಿರುವ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಅಗತ್ಯವಿರುವ ಕಾಮಗಾರಿಗಳ 1,449.27 ಕೋಟಿ ರು. ಅಂದಾಜು ಮೊತ್ತದ ಕ್ರಿಯಾ ಯೋಜನೆ ಪಟ್ಟಿಗೆ ಹಾಗೂ ರಸ್ತೆ ಮೂಲಭೂತ ಸೌಕರ್ಯ ವಿಭಾಗದ 700 ಕೋಟಿ ರು. ಪರಿಷ್ಕೃತ ಅಂದಾಜು ಮೊತ್ತವನ್ನೂ ಒಳಗೊಂಡಂತೆ ಒಟ್ಟು 2,149.27 ಕೋಟಿ ರು. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಈ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಪ್ರಾರಂಭವಾಗದ ಕಾಮಗಾರಿಗಳ ಕುರಿತು 2023ರ ಆಗಸ್ಟ್ 8ರಂದು ಪರಿಶೀಲನೆ ನಡೆಸಿದ್ದರು. ಕೆಲವು ಕಾಮಗಾರಿಗಳನ್ನು ಅತ್ಯಂತ ಜರೂರಾಗಿ ಅನುಷ್ಠಾನಗೊಳಿಸವುದು ಅತ್ಯವಶ್ಯಕ ಹಾಗೂ ಪ್ರಾರಂಭವಾಗದ ಕಾಮಗಾರಿಗಳನ್ನು ಕಖೂಡಲೇ ರದ್ದುಗೊಳಿಸಬೇಕು. ಈ ಮೊತ್ತದಲ್ಲಿ ಪರಿಷ್ಕೃತ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವೆಂದು ಬಿಬಿಎಂಪಿ ಆಯುಕ್ತರು ಸಭೆಯಲ್ಲಿ ಕೋರಿದ್ದರು.

 

ಮಿನರ್ವ ವೃತ್ತದಲ್ಲಿನ ಎಲಿವೇಟೆಡ್‌ ಕಾರಿಡಾರ್‍‌ 213 ಕೋಟಿ ರು., ಬಿಎಂಆರ್‍‌ಸಿಎಲ್‌ನ ಕಾಮಗಾರಿಗೆ 46.50 ಕೋಟಿ ರು., ಶಿವರಾಮಕಾರಂತ ಬಡಾವಣೆ ಕಾಮಗಾರಿ 70 ಕೋಟಿ ರು., ಮುಖ್ಯಮಂತ್ರಿ ವಿವೇಚನಾ ಅಡಿಯಲ್ಲಿನ ಅನುದಾನ 11.50 ಕೋಟಿ ರು., ರಸ್ತೆ, ಚರಂಡಿ ಅಭಿವೃದ್ಧಿಗೆ 10 ಕೋಟಿ ರು., ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಸೌಂದರ್ಯಕರಣಕ್ಕೆ 1 ಕೋಟಿ ರು., ಸಿದ್ದಾಪುರ, ಹೊಂಬೆಗೌಡ ನಗರ, ಜಯನಗರ, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ 11 ಕೋಟಿ ರು., ಸದಾನಂದನಗರದಲ್ಲಿ ಸೇತುವೆ ನಿರ್ಮಾಣಕ್ಕೆ 7 ಕೋಟಿ ರು., ದೊಡ್ಡನೆಕ್ಕುಂದಿಯಲ್ಲಿ ಸೇತುವೆಗೆ 7 ಕೋಟಿ ರು., ಬಿಬಿಎಂಪಿ ವ್ಯಾಪ್ತಿಯಲ್ಲಿ ಫುಟ್‌ಪಾತ್‌ ನಿರ್ಮಾಣಕ್ಕೆ 10 ಕೋಟಿ ರು., ಕೂಡ ಸೇರಿತ್ತು.

SUPPORT THE FILE

Latest News

Related Posts