ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ; ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರಸ್ತಾವನೆ ತಿರಸ್ಕೃತ

ಬೆಂಗಳೂರು; ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡುವ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ  ತಿರಸ್ಕರಿಸಿದೆ.

 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಅಸ್ಸಾಂ ರಾಜ್ಯದಲ್ಲಿ ನೀಡಲಾಗಿರುವ ಶಿಶುಪಾಲನಾ ರಜೆ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ನೌಕರರ ಸಂಘವು ಇಟ್ಟಿದ್ದ ಬೇಡಿಕೆಯನ್ನು ಹಿಂದಿನ  ಸಚಿವ ಸುಧಾಕರ್‌ ಅಧ್ಯಕ್ಷತೆಯ ಸಭೆಯು ಇದನ್ನು ಒಪ್ಪದೇ ಪ್ರಸ್ತಾವನೆಯನ್ನು ತಳ್ಳಿ ಹಾಕಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರವೂ ಸಹ ಈ ಪ್ರಸ್ತಾವನೆಗೆ ತನ್ನ ಅಸಮ್ಮತಿ ವ್ಯಕ್ತಪಡಿಸಿದೆ.

 

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಿಗೆ ತನ್ನ ಅಭಿಪ್ರಾಯವನ್ನು (ಆಕುಕ 53 ಎಫ್‌ ಪಿ ಎಸ್‌ 2022 ದಿನಾಂಕ 26.09.2023)  2023ರ ಸೆ.26ರಂದು ತಿಳಿಸಿದೆ. ಇದರ ಪ್ರತಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ. ಇಲಾಖೆಯು ತಳೆದಿರುವ ನಿರ್ಧಾರವನ್ನು ಸಚಿವ ದಿನೇಶ್‌ ಗುಂಡೂರಾವ್‌ ಅವರೂ ಸಹ ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಇಲಾಖೆಯ ಅಭಿಪ್ರಾಯದಲ್ಲೇನಿದೆ?

 

ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಸಿಎಒ ಎನ್‌ಹೆಚ್‌ಎಂ ಹೊರಡಿಸಿದ 2016ರ ಅಕ್ಟೋಬರ್‍‌ 3ರ ಸುತ್ತೋಲೆಯಂತೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ವರ್ಷದಲ್ಲಿ 15 ದಿನಗಳ ಸಾಂದರ್ಭಿಕ ರಜೆ ಮತ್ತು ವೈದ್ಯಕೀಯ ಆಧಾರದ ಮೇಲೆ 10 ದಿನಗಳ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.

 

ಗುತ್ತಿಗೆ ಆಧಾರದ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ಮತ್ತು ಪುರುಷ ಉದ್ಯೋಗಿಗಳಿಗೆ 15 ದಿನಗಳ ಪಿತೃತ್ವ ರಜೆ ಒದಗಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮತ್ತು ಇವರ ನೇಮಕಾತಿಯ ಷರತ್ತು ಮತ್ತು ನಿಬಂಧನೆಗಳನ್ವಯ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಈ ಉದ್ಯೋಗಿಗಳಿಗೆ ಶಿಶುಪಾಲನಾ ರಜೆ ವಿಸ್ತರಿಸುವುದು ಇವರನ್ನು ನಿರ್ದಿಷ್ಟ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸುವ ಉದ್ದೇಶಕ್ಕೆ ಪೂರಕವಾಗಿರುವುದಿಲ್ಲ.

 

ಮತ್ತು ರಾಜ್ಯದ ಅಡಿಯಲ್ಲಿ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಂದ ಇದೇ ರೀತಿಯ ಬೇಡಿಕೆಗಳು ಒದಗಿ ಬರುವ ಸಾಧ್ಯತೆಗಳಿರುವುದರಿಂದ ಶಿಶುಪಾಲನಾ ರಜೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಹಮತಿಸಿರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಅವರು ಎನ್‌ಎಚ್‌ಎಂನ ನಿರ್ದೇಶಕರಿಗೆ ತಿಳಿಸಿದ್ದಾರೆ.

 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಇಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡುವ ಮೂಲಕ ನೆಮ್ಮದಿ ನೀಡುವಂತಹ ಅಸ್ಸಾಂ ಮಾದರಿಯನ್ನು ಅಳವಡಿಸಿಕೊಳ್ಳಲು ಈಗಿನ ರಾಜ್ಯ ಕಾಂಗ್ರೆಸ್‌ ಸರ್ಕಾರವೂ  ಮುಂದಾಗುತ್ತಿಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಬೇಡಿಕೆಗಳ ಕುರಿತು 2022ರ ಫೆ.24ರಂದು ನಡೆದಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿತ್ತು.

 

 

‘2021ರ ಸೆ.3ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಗುತ್ತಿಗೆ ನೌಕರರಾಗಿದ್ದು ಹಾಗೂ ಗುತ್ತಿಗೆ ಅವಧಿಯು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುವ  ಹಿನ್ನೆಲೆಯಲ್ಲಿ ಶಿಶುಪಾಲನಾ ರಜೆಯನ್ನು ಅಳವಡಿಸಿಕೊಳ್ಳಲು ಅವಕಾಶವಿರುವುದಿಲ್ಲ,’ ಎಂದು ಸಭೆಯಲ್ಲಿ ನಿರ್ಣಯ ಗೊಂಡಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

 

 

 

 

ಹೆರಿಗೆ ರಜೆ ನೀಡುವಾಗ ಗುತ್ತಿಗೆ ಆಧಾರದಲ್ಲಿ ದುಡಿಯುವವರು ಹಾಗೂ ಕಾಯಂ ನೌಕರರು ಎಂಬ ತಾರತಮ್ಯ ತೋರುವಂತಿಲ್ಲ. ಕಾಯಂ ನೌಕರರಿಗೆ ನೀಡುವಷ್ಟೇ ಹೆರಿಗೆ ರಜೆಯನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರಿಗೂ ನೀಡಬೇಕು’ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗಷ್ಟೇ ಆದೇಶಿಸಿತ್ತು.

 

‘ಆರ್ಥಿಕವಾಗಿ ಸಬಲರಾಗಲು ಮತ್ತು ಸಶಕ್ತ ಜೀವನ ರೂಪಿಸಿಕೊಳ್ಳಲು ಇಂದು ಮಹಿಳೆಯರೂ ವಿವಿಧ ಕ್ಷೇತ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರಿಗೆಲ್ಲಾ ಹೆರಿಗೆ ರಜೆ ನಿರಾಕರಿಸಿದರೆ ಅದು ಸಾಮಾಜಿಕ ನ್ಯಾಯಕ್ಕೆ ಎಸಗುವ ಅಪಚಾರವಾಗುತ್ತದೆ’ ಎಂದು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಅಸ್ಸಾಂ ಮಾದರಿ ಒಪ್ಪದ ಸರ್ಕಾರ; ಎನ್ಎಚ್‌ಎಂ ಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡಲು ನಿರಾಕರಣೆ

 

ಈ ಆದೇಶವನ್ನು 2013ರಲ್ಲಿ ಪ್ರಶ್ನಿಸಲಾಗಿತ್ತು. ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಪೀಠ, ‘ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಬಹಳಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದಿಂದ ಬಂದವರಾಗಿರುತ್ತಾರೆ. ಇವರಲ್ಲಿ, ದಿನಗೂಲಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರೇ ಹೆಚ್ಚಿದ್ದಾರೆ. ಇಂಥವರ ಸಾಂವಿಧಾನಿಕ ಹಕ್ಕುಗಳನ್ನು ಯಾರೂ ಕಸಿಯುವಂತಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿತ್ತು.

 

ಇದೇ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ದಿನ ಭತ್ಯೆ ಮತ್ತು ಪ್ರಯಾಣ ಭತ್ಯೆಯನ್ನು 2008-09ರಿಂದಲೂ ಪರಿಷ್ಕರಣೆಗೊಂಡಿಲ್ಲ. ಈ ಸಂಬಂಧ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಂಘವು ಇರಿಸಿದ್ದ ಬೇಡಿಕೆಯನ್ನೂ ತಳ್ಳಿ ಹಾಕಿರುವ ಸರ್ಕಾರವು ‘ದಿನಭತ್ಯೆ ಹಾಗೂ ಪ್ರಯಾಣಭತ್ಯೆಯು ಪಿಐಪಿಯ ಮಿತಿ ಮೀರು ಹಿನ್ನೆಲೆಯಲ್ಲಿ ಸದರಿ ವರ್ಷದಲ್ಲಿ ಸೌಲಭ್ಯವನ್ನು ನೀಡಲು ಅವಕಾಶವಿರುವುದಿಲ್ಲ,’ ಎಂಬ ನಿರ್ಣಯ ಕೈಗೊಂಡಿತ್ತು.

 

ಹಾಗೆಯೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಯಾರು ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್, ಇತ್ಯಾದಿ ಧರಿಸಿ ಆರೈಕೆ ಮಾಡಿರುವವರಿಗೆ ಮಾತ್ರ ಕೋವಿಡ್‌ ಪ್ರೋತ್ಸಾಹ ಧನ ನೀಡಲಾಗಿದೆ. ಆದರೆ ಪಿಪಿಇ ಕಿಟ್‌ ಧರಿಸದೇ ಆರೈಕೆ ಮಾಡಿರುವವರಿಗೆ ಪ್ರೋತ್ಸಾಹ ಧನನೀಡಲು ಅವಕಾಶವಿಲ್ಲ ಎಂದು ಸಂಘದ ಈ ಬೇಡಿಕೆಯನ್ನೂ ತಳ್ಳಿ ಹಾಕಿತ್ತು.

 

ಸಮಾನ ವೇತನಕ್ಕೆ ಸಂಬಂಧಿಸಿದಂತೆ ಶ್ರೀನಿವಾಸಚಾರಿ ಅವರು ನೀಡಿದ್ದ ವರದಿಯಂತೆ 2021-22ನೇ ಸಾಲಿಗೆ ಪಡೆಯುತ್ತಿರುವ ವೇತನಕ್ಕೆ ಶೇ.15ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆ ಆಧರಿಸಿ 38 ವೃಂದಗಳ 17,033 ಸಿಬ್ಬಂದಿಗಳಿಗೆ 71.26 ಕೋಟಿ ರು. ಅನುದಾನ ಬಿಡುಗಡೆಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts