ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ; 60 ಎಕರೆ ಪ್ರದೇಶ ನೀಡಲು ಬಿಬಿಎಂಪಿ ಅಸಮ್ಮತಿ

ಬೆಂಗಳೂರು; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ನಗರದ ಯಲಹಂಕ ತಾಲೂಕಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯಕ್ಕೆ 60 ಎಕರೆ ಜಾಗ ನೀಡಲು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ನಿರಾಕರಿಸಿದೆ.

 

ನೂತನ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಅವರ ಸಮ್ಮುಖದಲ್ಲಿ ಕಂದಾಯ & ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿರುವ ಬೆನ್ನಲ್ಲೇ ಬಿಬಿಎಂಪಿಯು ವ್ಯಕ್ತಪಡಿಸಿರುವ ಆಕ್ಷೇಪವು ಮುನ್ನೆಲೆಗೆ ಬಂದಿದೆ.

 

ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಮಾವಳ್ಳಿ ಪುರ ಗ್ರಾಮದಲ್ಲಿ ಬಿಬಿಎಂಪಿಗೆ ನೀಡಿರುವ 60 ಎಕರೆ ಜಮೀನಿನ ಗುತ್ತಿಗೆ ರದ್ದುಪಡಿಸಿ ಅದನ್ನು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರು ಮಾಡಬೇಕು ಎಂಬ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಬಿಬಿಎಂಪಿಯು ಒಪ್ಪಿಕೊಂಡಿಲ್ಲ. ಈ ಸಂಬಂಧ ಬಿಬಿಎಂಪಿಯು ಬರೆದಿರುವ ಸ್ವಯಂ ವೇದ್ಯ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿ ಮಾವಳ್ಳಿಪುರ ಗ್ರಾಮದ ಸರ್ವೆ ನಂಬರ್‍‌ 8ರಲ್ಲಿ 100 ಎಕರೆ ಜಮೀನನ್ನು ಘನ ತ್ಯಾಜ್ಯ ವಿಲೇವಾರಿ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ 2003ರ ಮೇ 22ರಂದು (ಪತ್ರ ಸಂಖ್ಯೆ ; ಆರ್‍‌ಡಿ 252 ಎಲ್‌ಜಿಬಿ 2003) ಗುತ್ತಿಗೆ ನೀಡಲಾಗಿತ್ತು.

 

ಆದರೆ ಬಿಬಿಎಂಪಿಯು ಜಮೀನನ್ನು ಉದ್ಧೇಶಿತ ಯೋಜನೆಗೆ ಉಪಯೋಗಿಸಿಕೊಳ್ಳದೇ ಗುತ್ತಿಗೆ ಷರತ್ತು ಉಲ್ಲಂಘಿಸಿತ್ತು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವರದಿ ನೀಡಿತ್ತು. ಹೀಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 25(2) ಅನ್ವಯ ಕಾರಣ ಕೇಳುವ ನೋಟೀಸ್‌ ಜಾರಿಗೊಳಿಸಿ ಸಮಜಾಯಿಷಿ ಕೋರಿತ್ತು ಎಂಬುದು ಸ್ವಯಂ ವೇದ್ಯ ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಈ ಬೆಳವಣಿಗೆ ನಡುವೆಯೇ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆಯನ್ನೂ (ಭರವಸೆ ಸಂಖ್ಯೆ; 7018) ನೀಡಿತ್ತು. ಹೀಗಾಗಿ ಮಾವಳ್ಳಿಪುರದ ಸರ್ವೆ ನಂಬರ್‍‌ 8ರಲ್ಲಿನ ಒಟ್ಟು 100 ಎಕರೆ ಜಮೀನಿನ ಪೈಕಿ ನ್ಯಾಯಾಲಯದ ಪ್ರಕರಣ ದಾಖಲಾಗಿರುವ 40 ಎಕರೆ ಹೊರತುಪಡಿಸಿ ಉಳಿದ 60 ಎಕರೆ ಜಮೀನನ್ನು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಲು ಕಂದಾಯ ಇಲಾಖೆಯ ಅಭಿಪ್ರಾಯವನ್ನೂ ಕೋರಿತ್ತು ಎಂಬುದು ಗೊತ್ತಾಗಿದೆ.

 

ಬಿಬಿಎಂಪಿ ನೀಡಿರುವ ಸಮಜಾಯಿಷಿಯಲ್ಲೇನಿದೆ?

 

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ ಪ್ರತಿದಿನ 5500 ಮೆಟ್ರಿಕ್‌ ಟನ್‌ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನು ಘನ ತ್ಯಾಜ್ಯ ನಿರ್ವಹಣಾ ನಿಯಮ 2016ರಂತೆ ವೈಜ್ಞಾನಿಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕಿದೆ.

 

ಪ್ರಸ್ತಾಪಿತ ಮಾವಳ್ಳಿಪುರದ ಸರ್ವೆ ನಂಬರ್‍‌ 8ರಲ್ಲಿ ಮಂಜೂರಾದ 100 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 2005ನೇ ಸಾಲಿನಲ್ಲಿ ಪಾಲಿಕೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅಗತ್ಯವಿದ್ದ 40 ಎಕರೆ ಜಮೀನಿನಲ್ಲಿ ನಿರ್ವಹಿಸಲಾಗಿರುತ್ತದೆ. ಈ ಪ್ರದೇಶದಲ್ಲಿ ಹಸಿ ತ್ಯಾಜ್ಯ ಸಂಸ್ಕರಣೆ ಕಾರ್ಯ ನಿರ್ವಹಿಸಲು ಸ್ಥಳೀಯ ಗ್ರಾಮಸ್ಥರಿಂದ ತಡೆಯಾಜ್ಞೆ ಇದ್ದದ್ದರಿಂದ ಹಸಿ ತ್ಯಾಜ್ಯ ಸಂಸ್ಕರಣ ಘಟಕವನ್ನು ಸ್ಥಗಿತಗೊಳಿಸಲಾಗಿದೆ.

 

ಈ ಮಧ್ಯೆ ಪಾಲಿಕೆಕಯಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಸ್ತುತ ಪಾಲಿಕೆಗೆ ಘನ ತ್ಯಾಜ್ಯ ನಿರ್ವಹಣಾ ಉದ್ದೇಶಕ್ಕಾಗಿ ಹಸ್ತಾಂತರಿಸಲಾದ ನಿವೇಶನಗಳಲ್ಲಿ ನಿರ್ವಹಿಸಲಾಗುತ್ತಿದೆ. ಎನ್‌ ಇ ಜಿ ಮತ್ತು ಫರ್ಮ್ ಗ್ರೀನ್‌ ಸಂಸ್ಥೆಗಳಿಗೆ 15 ಎಕರೆ ಮತ್ತು13 ಎಕರೆ ಪ್ರದೇಶಗಳಂತೆ 25 ವರ್ಷಗಳ ಕಾಲ ಪರ್ಮಿಸಿವ್‌ ಯ್ಯೂಸ್‌ ಆಧಾರದ ಮೇಲೆ ಪ್ರದೇಶವನ್ನು ನೀಡುವ ಪ್ರಸ್ತಾವನೆಯೂ ಅನುಮೋದನೆಯಾಗಿದೆ.

 

ಇದಲ್ಲದೇ ಕೆಪಿಸಿಎಲ್‌ ಸಂಸ್ಥೆಯು ಬಿಡದಿ ಸಮೀಪದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನಾ ಘಟಕದೊಂದಿಗೆ (600 ಮೆಟ್ರಿಕ್‌ ಟನ್‌ ಪ್ರತಿ ದಿನ 11.5 ಮೆ ವ್ಯಾಟ್‌ ವಿದ್ಯುತ್‌ ಉತ್ಪಾದನೆ) ಹೆಚ್ಚುವರಿಯಾಗಿ ಇನ್ನೊಂದು ಘಟಕವನ್ನು ನಿರ್ಮಿಸುವ ಪ್ರಸ್ತಾವನೆಯೂ ಇದೆ. ಹೀಗಾಗಿ ಈ ಎಲ್ಲಾ ಯೋಜನೆಗಳಿಗೆ ಪಾಲಿಕೆಯಿಂದ 100 ಎಕರೆ ಪ್ರದೇಶವನ್ನು ಬಳಸಿಕೊಳ್ಳುವ ಅಗತ್ಯತೆ ಇದೆ ಎಂದು ಬಿಬಿಎಂಪಿ ತನ್ನ ಸ್ವಯಂ ವೇದ್ಯ ಟಿಪ್ಪಣಿಯಲ್ಲಿ ಪ್ರತಿಪಾದಿಸಿದೆ.

 

ಅದೇ ರೀತಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಘನ ತ್ಯಾಜ್ಯ ಉದ್ದೇಶಗಳಿಗಾಗಿ ಸ್ಥಳವಕಾಶದ ಕೊರತೆ ಇದೆ. ನಗರ ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ತ್ಯಾಜ್ಯವನ್ನು ಪಾಲಿಕೆಯ ಘಟಕಗಳಲ್ಲಿ ವಿಲೇವಾರಿ ಮಾಡಲು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳೂ ಕೋರಿದ್ದಾರೆ ಎಂದು ಟಿಪ್ಪಣಿಯಲ್ಲಿ ಕಂದಾಯ ಇಲಾಖೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

ಪಾಲಿಕೆಯ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದ್ದು 2030ನೇ ಸಾಲಿಗೆ ಪ್ರತಿ ನಿತ್ಯ ಸುಮಾರು 8,000 ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪತ್ತಿಯಾಗುವ ಸಂಭವವಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಜವಾಬ್ದಾರಿಯೂ ಬಿಬಿಎಂಪಿ ಮೇಲಿದೆ. ಬೆಂಗಳೂರು ನಗರದ ಪ್ರದೇಶವು ವ್ಯಾಪಕವಾಗಿ ಬೆಳೆಯುತ್ತಿದ್ದು ಘನ ತ್ಯಾಜ್ಯ ನಿರ್ವಹಣೆಗಾಗಿ ನಿವೇಶನಗಳ ಲಭ್ಯತೆ ಕಷ್ಟ ಸಾಧ್ಯವಾಗಿರುತ್ತದೆ ಎಂದು ಬಿಬಿಎಂಪಿ ತನ್ನ ಸಮಜಾಯಿಷಿಯಲ್ಲಿ ವಿವರಿಸಿದೆ.

 

‘ಈ ಪ್ರದೇಶದಲ್ಲಿ ಹಂತ ಹಂತವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಕರ್ನಾಟಕ ಭೂ ಸ್ವಾಧೀನ ಮಂಜೂರಾತಿ ನಿಯಮ ಉಲ್ಲಂಘನೆಯಾಗಿಲ್ಲ. ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ನಿರ್ವಹಣೆಗಾಗಿ ಮಾವಳ್ಳಿಪುರ ಸರ್ವೆ ನಂಬರ್‍‌ 8ರಲ್ಲಿ ಮಂಜೂರಾದ 100 ಎಕರೆ ಪ್ರದೇಶವು ಅತ್ಯಗತ್ಯವಾಗಿದೆ. ಈ ನಿವೇಶನವು ಘನ ತ್ಯಾಜ್ಯ ನಿರ್ವಹಣೆಗಾಗಿ ಪ್ರಸ್ತುತ ಹಾಗೂ ಮುಂದಿನ ದಿನಗಳಲ್ಲಿ ಅತ್ಯಗತ್ಯವಾಗಿರುವುದರಿಂದ ಬೇರೆ ಯಾವ ಉದ್ಧೇಶಗಳಿಗೆ ಮಂಜೂರು ಮಾಡದೆಯೇ ಘನ ತ್ಯಾಜ್ಯ ಉದ್ದೇಶಕ್ಕೇ ಮಂಜೂರಾತಿಯನ್ನು ಯಥಾವತ್ತಾಗಿ ಕಾಯ್ದಿರಿಸಬೇಕು,’ ಎಂದು ಬಿಬಿಎಂಪಿಯು ಕಂದಾಯ ಇಲಾಖೆಯನ್ನು ಕೋರಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts