ಬೆಂಗಳೂರು; ಕೌಶಲ್ಯ ಅಭಿವೃದ್ಧಿಯ ತರಬೇತಿ ನೀಡಿ ಗಾರ್ಮೆಂಟ್ಸ್‌ಗಳಲ್ಲಿ 37,000 ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಅಂಕಿ ಅಂಶಗಳ ಮಾಹಿತಿ ಒದಗಿಸಿರುವ ಕೈ ಮಗ್ಗ ಮತ್ತು ಜವಳಿ ಇಲಾಖೆಯು ಸರ್ಕಾರವನ್ನೇ ದಾರಿತಪ್ಪಿಸಿರುವ ಸಂಗತಿ ಇದೀಗ ಬಹಿರಂಗವಾಗಿದೆ.
ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಅಸ್ತಿತ್ವದಲ್ಲಿದ್ದರೂ ಸಹ ಕೈಮಗ್ಗ ಮತ್ತು ಜವಳಿ ಇಲಾಖೆಯು ಸ್ವತಂತ್ರವಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿ 18.31 ಕೋಟಿ ರು. ಖರ್ಚು ಮಾಡಿರುವುದು, ಕೌಶಲ್ಯ ತರಬೇತಿ ಪಡೆದಿರುವ ಸಂಖ್ಯೆ, ಉದ್ಯೋಗ ಪಡೆದಿರುವ ಸಂಖ್ಯೆಗೂ ಮತ್ತು ವೇತನ ಸಬ್ಸಿಡಿ ಮೊತ್ತದ ದತ್ತಾಂಶಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂಬುದನ್ನು ಹೊರಗೆಡವಿರುವ ಆರ್ಥಿಕ ಇಲಾಖೆಯು, ಕೈಮಗ್ಗ ಮತ್ತು ಜವಳಿ ಇಲಾಖೆಯ ಮುಖವಾಡವನ್ನು ಕಳಚಿದೆ.
37,000ಕ್ಕೂ ಹೆಚ್ಚು ಅಭ್ಯರ್ಥಿಗಳು ಕೌಶಲ್ಯ ತರಬೇತಿ ಪಡೆದಿದ್ದಾರೆ ಎಂದು ನೀಡಿರುವ ದತ್ತಾಂಶಕ್ಕೂ ಮತ್ತು ವೇತನ ಸಬ್ಸಿಡಿ ಮೊತ್ತಕ್ಕೂ ತಾಳೆಯಾಗುತ್ತಿಲ್ಲ. ಅಲ್ಲದೇ ಈ ಸಂಬಂಧ ಕೈಮಗ್ಗ ಮತ್ತು ಜವಳಿ ಇಲಾಖೆಯು ನೀಡಿರುವ ಸಮರ್ಥನೆಯನ್ನು ಆರ್ಥಿಕ ಇಲಾಖೆಯು (ಕಡತ ಸಂಖ್ಯೆ ; FD/292/EXP1/2023-EXP-1) ಒಪ್ಪಿಕೊಂಡಿಲ್ಲ ಎಂಬುದೂ ಸಹ ಗೊತ್ತಾಗಿದೆ.
ಕೌಶಲ್ಯಾಭಿವೃದ್ಧಿ ಪಡೆದಿದ್ದಾರೆ ಎನ್ನಲಾಗಿರುವ 37,000 ಅಭ್ಯರ್ಥಿಗಳಿಗೂ ಗಾರ್ಮೆಂಟ್ಸ್‌ಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯು ಹೇಳುತ್ತಿದೆಯಾದರೂ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ನಿತೀಶ್ ಕೆ ಅವರು ಇದೊಂದು ಅಸಮಂಜಸ ಉತ್ತರ ಎಂದು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿದ್ದಾರೆ ಎಂದು ಗೊತ್ತಾಗಿದೆ.
ಕೌಶಲ್ಯಾಭಿವೃದ್ಧಿಗಾಗಿ 30 ಕೋಟಿ ರು. ಅನುದಾನಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ಆರ್ಥಿಕ ಇಲಾಖೆಯು ಗಂಭೀರವಾಗಿ ಚರ್ಚೆ ನಡೆಸಿರುವ ಹೊತ್ತಿನಲ್ಲಿಯೇ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳು, ಬಳಕೆಯಾಗಿರುವ ಅನುದಾನ ಮತ್ತು ಉದ್ಯೋಗ ಅವಕಾಶ ಕಲ್ಪಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯು ನೀಡಿರುವ ಅಂಕಿ ಅಂಶಗಳು ತಾಳೆಯಾಗದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಜವಳಿ ಇಲಾಖೆಯು 30,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು 30 ಕೋಟಿ ರು. ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಕುರಿತು ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಹಣದ ಬೇಡಿಕೆ ಕುರಿತು ಅವಲೋಕಿಸಿದೆ. ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಗೆ ಸಚಿವ ಶಿವಾನಂದ ಪಾಟೀಲ್ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
‘ಇದುವರೆಗೆ ಜವಳಿ ಇಲಾಖೆ ಕೌಶಲ್ಯ ತರಬೇತಿಗಾಗಿ 18.31 ಕೋಟಿ ಖರ್ಚು ಮಾಡಿದೆ. ಸುಮಾರು 37,000 ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ ಮತ್ತು ಉದ್ಯೋಗವನ್ನು ಪಡೆದಿದ್ದಾರೆ ಎಂದು ಇಲಾಖೆ ಹೇಳುತ್ತಿದೆ. ಇದು ಅಸಾಧ್ಯ, ಆದಾಗ್ಯೂ ಆಡಳಿತ ಇಲಾಖೆಯ ಈ ಅಂಕಿ ಅಂಶವು ವೇತನ ಸಬ್ಸಿಡಿಗೆ ಸಂಬಂಧಿಸಿದ ದತ್ತಾಂಶದೊಂದಿಗೆ ತಾಳೆಯಾಗುವುದಿಲ್ಲ. ಜವಳಿ ನೀತಿಯ ಪ್ರಕಾರ ಕಳೆದ 4 ವರ್ಷಗಳಲ್ಲಿ ವೇತನ ಸಬ್ಸಿಡಿ ಅಡಿಯಲ್ಲಿ ಸಬ್ಸಿಡಿ ಕ್ಲೈಮ್‌ಗಳು ಶೂನ್ಯವಾಗಿದ್ದು, ಈ ತರಬೇತಿ ಪಡೆದ ಯಾವುದೇ ವ್ಯಕ್ತಿಗಳು ಗಾರ್ಮೆಂಟ್ ವಲಯದಲ್ಲಿ ಉದ್ಯೋಗವನ್ನು ಪಡೆದಿಲ್ಲ ಎಂದು ತೋರಿಸಿದೆ,’ ಎಂದು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
200 ವ್ಯಕ್ತಿಗಳಿಗಿಂತ ಕಡಿಮೆ ಅಥವಾ 500 ಯುನಿಟ್‌ಗಳಿಗಿಂತ ಕಡಿಮೆ ಇರುವ ಗಾರ್ಮೆಂಟ್ ಘಟಕಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ ಎಂದು ಆಡಳಿತ ಇಲಾಖೆಯು ನೀಡಿರುವ ಉತ್ತರವು ಅಸಮಂಜಸವಾಗಿದೆ ಎಂದು ಹೇಳಿರುವುದು ಗೊತ್ತಾಗಿದೆ.
ಪ್ರತ್ಯೇಕ ಕೌಶಲ್ಯ ಅಭಿವೃದ್ಧಿ ನಿರ್ವಹಣಾ ವ್ಯವಸ್ಥೆಯು ಅಸ್ತಿತ್ವದಲ್ಲಿದ್ದಾಗ ಪ್ರತಿಯೊಂದು ಇಲಾಖೆಯು ತನ್ನದೇ ಆದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆಯು ಕೌಶಲ್ಯ ಅಭಿವೃದ್ಧಿಯನ್ನು ಕೈಗೊಳ್ಳಲು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಜವಳಿ ಇಲಾಖೆಗೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
ಅದೇ ರೀತಿ ಬಜೆಟ್ ಕೊರತೆ ಇರುವ ಜವಳಿ ಮತ್ತು ಕೈಮಗ್ಗ ಇಲಾಖೆಯಲ್ಲಿ ಮತ್ತಷ್ಟು ದೊಡ್ಡ ಬದ್ಧತೆಗಳನ್ನು ಅನುಮೋದಿಸಿರುವುದಕ್ಕೂ ಆರ್ಥಿಕ ಇಲಾಖೆಯು ಆಕ್ಷೇಪಿಸಿದೆ. 2,000/- ಗಳ ಆರ್ಥಿಕ ನೆರವನ್ನು ವಾರ್ಷಿಕವಾಗಿ ನೇರ ನಗದು ವರ್ಗಾವಣೆ ಮುಖಾಂತರ ನೀಡುವ ಯೋಜನೆಯನ್ನು 2022-23 ನೇ ಸಾಲಿಗೆ ರೂ. 5,000/- ಗಳಿಗೆ ಹೆಚ್ಚಿಸಲಾಗಿದೆ.
ನೇಕಾರ ಸಮ್ಮಾನ ಯೋಜನೆಯಡಿ ಕೈಮಗ್ಗ ಮತ್ತು ಜವಳಿ ಇಲಾಖೆಯು 75 ಕೋಟಿ ರು. ಅನುದಾನ ಕೇಳಿದೆ. 10 ಹೆಚ್‌ಪಿ ವಿದ್ಯುತ್ ಸಾಮರ್ಥ್ಯದ ಪವರ್ ಲೂಮ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು ಎಂದೂ ಪ್ರಸ್ತಾವಿಸಿರುವುದು ಗೊತ್ತಾಗಿದೆ.