5,000 ಕೋಟಿ ವೆಚ್ಚದ  ಪಂಪ್ಡ್‌ ಸ್ಟೋರೇಜ್‌ ಘಟಕ; ವರ್ಷವಾದರೂ ಕಡತ ಬಹಿರಂಗಗೊಳಿಸದ ಸರ್ಕಾರ

ಬೆಂಗಳೂರು; ಖಾಸಗಿ ಸಹಭಾಗಿತ್ವದಲ್ಲಿ 1000 ಮೆಗಾ ವ್ಯಾಟ್‌ ಸಾಮರ್ಥ್ಯದ ಮತ್ತೊಂದು 5,000 ಕೋಟಿ ವೆಚ್ಚದ  ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂಧನ ಇಲಾಖೆಗೆ ನೀಡಿದ್ದ ಅಭಿಪ್ರಾಯದ ಕಡತವನ್ನು ಆರ್‍‌ ಟಿ ಐ ಅಡಿಯಲ್ಲಿ ಕೋರಿದ್ದರೂ ಆರ್ಥಿಕ ಇಲಾಖೆಯು  ವರ್ಷ ಕಳೆದರೂ ಕಡತವನ್ನು ಒದಗಿಸಿಲ್ಲ.

 

ಈ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆಯು ಈಗಾಗಲೇ ಸಂಬಂಧಿತ ಯೋಜನೆಗೆ ಕಾರ್ಯಾದೇಶ ಹೊರಡಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೂ ಆರ್ಥಿಕ ಇಲಾಖೆಯು ತನ್ನ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಬಹಿರಂಗಗೊಳಿಸಲು ಮೀನಮೇಷ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

ಈ ಯೋಜನೆಯನ್ನು ಕೈಗೆತ್ತಿಕೊಂಡರೆ ಎಸ್ಕಾಂಗಳ ನಷ್ಟಕ್ಕೂ ಇದು ದಾರಿಮಾಡಿಕೊಡಲಿದೆ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ಅಭಿಪ್ರಾಯ ನೀಡಿತ್ತು. ಆದರೂ ಕರ್ನಾಟಕ ವಿದ್ಯುತ್‌ ನಿಗಮವು ಈ ಯೋಜನೆಯಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಯೋಜನೆಯನ್ನು ಸಮರ್ಥಿಸಿಕೊಂಡಿತ್ತು.

 

ಈ ಕುರಿತು ‘ದಿ ಫೈಲ್‌’ 2022ರ ಆಗಸ್ಟ್‌ 10ರಂದೇ ಆರ್‍‌ಟಿಐ ಅಡಿಯಲ್ಲಿ ಕಡತಕ್ಕಾಗಿ ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಗೆ  ‘ಕಡತವು ಚಲನೆಯಲ್ಲಿರುವುದರಿಂದ ಕೋರಿರುವ ಮಾಹಿತಿಯು ಶಾಖೆಯಲ್ಲಿ ಲಭ್ಯವಿರುವುದಿಲ್ಲ,’ ಎಂದು 2022ರ ಸೆಪ್ಟಂಬರ್‍‌ 14ರಂದು ಹಿಂಬರಹ ನೀಡಿತ್ತು.

 

ಹಿಂಬರಹ ನೀಡಿ ಹತ್ತಿರತ್ತಿರ ಒಂದು ವರ್ಷ ಕಳೆದರೂ ಕಡತವನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ ಒದಗಿಸದೇ ತನ್ನ ಬಳಿ ಇಟ್ಟುಕೊಂಡಿರುವುದು ಇಡೀ ಕಡತವನ್ನು ಮುಚ್ಚಿಡಲು ಹವಣಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲೂ ಈ ಯೋಜನೆ ಸಂಬಂಧ ಕಣ್ಣೆತ್ತಿಯೂ ನೋಡಿರಲಿಲ್ಲ. ಸದ್ಯ  ಹಣಕಾಸು ಇಲಾಖೆಗೆ ಸಿದ್ದರಾಮಯ್ಯ ಅವರೇ ಸಚಿವರಾಗಿದ್ದರೂ ಸಹ ಇದೇ ಇಲಾಖೆಯು ಕಡತವನ್ನು ಮುಚ್ಚಿಟ್ಟುಕೊಳ್ಳುತ್ತಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

 

ಆರ್ಥಿಕ ಇಲಾಖೆ ತಕರಾರೇನಿತ್ತು?

 

ಇಂಧನ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಗೆ (FD 491 Exp-1/2021, EN 27 PPT 2021-DATE-21-07-2022)ಆರ್ಥಿಕ ಇಲಾಖೆಯು ತಕರಾರು ಎತ್ತಿತ್ತು. ‘ಕೆಪಿಸಿಎಲ್‌ ಈಗಾಗಲೇ 2000 ಮೆಗಾವ್ಯಾಟ್‌ ಸಾಮರ್ಥ್ಯದ ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕರ್ನಾಟಕದಲ್ಲಿ ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯಾಗಿದ್ದರೂ ತಕ್ಷಣವೇ 1000 ಮೆಗಾ ವ್ಯಾಟ್‌ ಸಾಮರ್ಥ್ಯದ ಮತ್ತೊಂದು ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಯೋಜನೆಯನ್ನು ಖಾಸಗಿ ಸಹಭಾಗಿತ್ವದಡಿಯಲ್ಲಿ ಕೈಗೆತ್ತಿಕೊಳ್ಳುವುದು ಅಗತ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯು 2022ರ ಜುಲೈ 21ರಂದು ತನ್ನ ಅಭಿಪ್ರಾಯ ನೀಡಿತ್ತು.

 

ಖಾಸಗಿ ವಲಯವು 5000 ಕೋಟಿ ರು. ವೆಚ್ಚದಲ್ಲಿ ಪಂಪ್ಡ್ ಸ್ಟೋರೇಜ್‌ ಘಟಕವನ್ನು ಸ್ಥಾಪಿಸುತ್ತಿದ್ದರೂ ರಾಜ್ಯ ಸರ್ಕಾರವು ಸಂಬಂಧಪಟ್ಟ ಖಾಸಗಿ ಪಾಲುದಾರರೊಂದಿಗೆ 25 ವರ್ಷಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿರಬೇಕಾಗುತ್ತದೆ. ಖಾಸಗಿ ಪಾಲುದಾರರು ಮಾಡಿದ ಹೂಡಿಕೆಯ ಸುಮಾರು 50 ಪ್ರತಿಶತವನ್ನು ಕರ್ನಾಟಕ ಸರ್ಕಾರ/ ಎಸ್ಕಾಂಗಳು ಮೊದಲ ವರ್ಷದಲ್ಲಿಯೇ ಪಾವತಿಸಬೇಕಾಗುತ್ತದೆ ಎಂದೂ ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿತ್ತು.

 

 

ವಿಶೇಷವಾಗಿ ಈ ಘಟಕದ ಮೂಲಕ ಸೌರ ಮತ್ತು ಗಾಳಿ ವಿದ್ಯುತ್‌ನ್ನು ಗರಿಷ್ಟ ಸಮಯವಲ್ಲದವರೆಗೆ ಸಂಗ್ರಹಿಸುವುದು ಮತ್ತು ಈ ಸಂಗ್ರಹವಾಗಿರುವ ವಿದ್ಯುತ್‌ನ್ನು ಗರಿಷ್ಠ ಅವಧಿಯಲ್ಲಿ ಬಳಸುವ ಮೂಲ ಉದ್ದೇಶ ಹೊಂದಿದೆ. ಆದರೂ ಕರ್ನಾಟಕದಲ್ಲಿ 2021ರಲ್ಲೇ 14,367 ಮೆಗಾ ವ್ಯಾಟ್‌ ಸಾಮರ್ಥ್ಯದ ಗರಿಷ್ಠ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ. ಅಲ್ಲದೆ ಪಿಆರ್‌ಡಿಸಿಎಲ್‌ನ ಅಧ್ಯಯನದ ಪ್ರಕಾರ 2024ರವರೆಗೂ ಗರಿಷ್ಠ ಬೇಡಿಕೆಯನ್ನು ಪೂರೈಸಲಿದೆ ಎಂದು ಅಭಿಪ್ರಾಯದಲ್ಲಿ ಆರ್ಥಿಕ ಇಲಾಖೆಯು ವಿವರಿಸಿತ್ತು.

ಪಂಪ್ಡ್‌ ಸ್ಟೋರೇಜ್‌ ಘಟಕ; ಎಸ್ಕಾಂಗಳಿಗೆ ನಷ್ಟ ಎಂದಿದ್ದರೂ 5,000 ಕೋಟಿ ವೆಚ್ಚದ ಯೋಜನೆಗೆ ಸಮರ್ಥನೆ

 

ವಿದ್ಯುತ್ ಶೇಖರಣಾ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ಮತ್ತು ಇಂಧನ ವಲಯದಲ್ಲಿ ದಕ್ಷತೆ ಜೊತೆಗೆ ಕೈಗಾರಿಕೆಗಳು ಮುಕ್ತ ಮಾರುಕಟ್ಟೆಯಿಂದ ನೇರವಾಗಿ ವಿದ್ಯುತ್ ಪಡೆಯುವ ಪ್ರವೃತ್ತಿಯನ್ನು ರೂಢಿಸಿಕೊಂಡಿವೆ. ಹೀಗಾಗಿ ಎಸ್ಕಾಂಗಳು ಸರಬರಾಜು ಮಾಡುವ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೂ ಖಾಸಗಿ ಸಹಭಾಗಿತ್ವದಲ್ಲಿ ಮತ್ತೊಂದು ಪಂಪ್ಡ್‌ ಸ್ಟೋರೇಜ್‌ ಘಟಕ ನಿರ್ಮಾಣ ಕೈಗೆತ್ತಿಕೊಂಡರೆ ಎಸ್ಕಾಂಗಳ ನಷ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದೂ ಆರ್ಥಿಕ ಇಲಾಖೆಯು ಹೇಳಿತ್ತು.

 

ಉದ್ದೇಶಿತ ಯೋಜನೆ ಅನುಷ್ಠಾನದ ಬಗ್ಗೆ ಆರ್ಥಿಕ ಇಲಾಖೆಯು ನೀಡಿದ್ದ ಒಟ್ಟಾರೆ ಅಭಿಪ್ರಾಯದ ಕುರಿತು ಇಂಧನ ಇಲಾಖೆಯು ನೀಡಿರುವ ಸ್ಪಷ್ಟನೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಯೂ ಇಲ್ಲ, ಪ್ರಸ್ತಾಪಿಸಿಯೂ ಇಲ್ಲ.
ಕರ್ನಾಟಕ ವಿದ್ಯುತ್‌ ನಿಗಮವು 2000 ಮೆಗಾ ವ್ಯಾಟ್‌ ಸಾಮರ್ಥ್ಯದ ಪಂಪ್ಡ್‌ ಸ್ಟೋರೇಜ್‌ ಘಟಕವನ್ನು ಸ್ಥಾಪಿಸಲು ಯೋಜನೆಯ ಡಿಪಿಆರ್ ಅನ್ನು ಈಗಾಗಲೇ M/s.WAPCOS ಮೂಲಕ ತಯಾರಿಸಿದೆ. ಅಂದಾಜು ವೆಚ್ಚ ಸುಮಾರು ರೂ.7,500 ಕೋಟಿಯಷ್ಟು ಹೂಡಿಕೆ ಮಾಡಬೇಕಿದೆ ಎಂದು ಇಂಧನ ಇಲಾಖೆಯು  ಸ್ಪಷ್ಟನೆಯಲ್ಲಿ ವಿವರಿಸಿತ್ತು.

 

 

‘2000 ಮೆಗಾ ವ್ಯಾಟ್‌ನ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯನ್ನು ಕೆಪಿಸಿಎಲ್‌ ಕೈಗೆತ್ತಿಕೊಂಡಿರುವುದರಿಂದ ಹೆಚ್ಚುವರಿ ಹಣದ ಹೂಡಿಕೆ ಮಾಡಲು ನಿಗಮಕ್ಕೆ ಆರ್ಥಿಕವಾಗಿ ಹೊರೆಯಾಗಲಿದೆ. ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ 1000 ಮೆ.ವ್ಯಾ ಪಂಪ್ಡ್‌ ಸ್ಟೋರೇಜ್ ಯೋಜನೆಯನ್ನು ಜಾರಿಗೊಳಿಸಲು 2021-22ನೇ ಸಾಲಿನ ಮುಂಗಡ ಪತ್ರದಲ್ಲಿ ಘೋಷಿಸಿರುತ್ತದೆ. ಪ್ರಸ್ತುತ ಯೋಜನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಇರುವುದಿಲ್ಲ,’ ಎಂದು   ಸ್ಪಷ್ಟನೆ ನೀಡಿತ್ತು.

 

ಅಲ್ಲದೆ 2021ರಲ್ಲೇ 14,367 ಮೆಗಾ ವ್ಯಾಟ್‌ ಸಾಮರ್ಥ್ಯದ ಗರಿಷ್ಠ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ. ಅಲ್ಲದೆ ಪಿಆರ್‌ಡಿಸಿಎಲ್‌ನ ಅಧ್ಯಯನದ ಪ್ರಕಾರ 2024ರವರೆಗೂ ಗರಿಷ್ಠ ಬೇಡಿಕೆಯನ್ನು ಪೂರೈಸಲಿದೆ ಎಂದು ಅಭಿಪ್ರಾಯದಲ್ಲಿ ಆರ್ಥಿಕ ಇಲಾಖೆಯು ವಿವರಿಸಿತ್ತು. ಇಂಧನ ಇಲಾಖೆಯ ಸ್ಪಷ್ಟನೆಯಲ್ಲಿ ಪಿಆರ್‌ಡಿಸಿಎಲ್‌ ಅಧ್ಯಯನ ಕುರಿತು ಪ್ರಸ್ತಾಪವಾಗಿದೆಯಾದರೂ ಬೇಡಿಕೆಯನ್ನು ಪೂರೈಸಲು ನವೀಕರಿಸಬಹುದಾದ ಇಂಧನ ಮೂಲದಿಂದ 6396 ಮೆ.ವ್ಯಾ, ಸ್ಟೋರೇಜ್‌ ಸಾಮರ್ಥ್ಯ 3000 ಮೆ.ವ್ಯಾ ಹಾಗೂ ನಿರಂತರ ಸಾಮರ್ಥ್ಯ 1950 ಮೆ.ವ್ಯಾ ನಷ್ಟು ಹೆಚ್ಚುವರಿ ವಿದ್ಯುತ್ ಸಾಮರ್ಥ್ಯದ ಅವಶ್ಯಕತೆ ಇರುತ್ತದೆಯೆಂದು ಅಂದಾಜಿಸಿದೆ ಎಂದು ಹೇಳಿತ್ತು.

SUPPORT THE FILE

Latest News

Related Posts