ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಶಿಸ್ತು ಕ್ರಮ; ಸಚಿವರ ಪತ್ರಕ್ಕೂ ಕಿಮ್ಮತ್ತು ನೀಡದ ಅಧಿಕಾರಿಶಾಹಿ

ಬೆಂಗಳೂರು; ವಿಶೇಷ ಕೇಂದ್ರೀಯ ನೆರವಿನ ಅನುದಾನಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ನೀಡದಿರುವುದು ಮತ್ತು ಉಳಿಕೆ ಅನುದಾನ ಖರ್ಚು ಮಾಡದಿರುವುದು ಸೇರಿದಂತೆ ಹಲವು ಆರೋಪಗಳಿಗೆ ಗುರಿ ಅಮಾನತಾಗಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಗೆಜೆಟೆಡ್‌ ಮ್ಯಾನೇಜರ್‍‌ ವಿ ಸಿದ್ದಯ್ಯ ಎಂಬುವರ ವಿರುದ್ಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರಿಗೆ ದೂರು ಸಲ್ಲಿಕೆಯಾಗಿದೆ.

 

ಈ ದೂರಿನಲ್ಲಿ ಉಲ್ಲೇಖಿಸಿರುವ ಸತ್ಯಾಂಶಗಳನ್ನು ಪರಿಶೀಲಿಸಿ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಹದೇವಪ್ಪ ಅವರು 2023ರ ಜುಲೈ 14ರಂದು ಬರೆದಿದ್ದ ಪತ್ರವನ್ನಾಧರಿಸಿ ಇದುವರೆಗೂ ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂಬುದು ತಿಳಿದು ಬಂದಿದೆ.

 

ಕೋಲಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ ಸಿದ್ದಯ್ಯ ಅವರ ವಿರುದ್ಧ ಇಲಾಖೆ ವಿಚಾರಣೆಗಳ ಶಿಸ್ತು ಪ್ರಕರಣ, ಹಣ ದುರ್ಬಳಕೆ ಪ್ರಕರಣಗಳಲ್ಲಿ ವಿಚಾರಣೆ ಗುರಿಯಾಗಿದ್ದರು. ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೂ ಇವರ ವಿರುದ್ಧ ಗಂಭೀರ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಸಚಿವರಿಗೆ ದೂರು ಸಲ್ಲಿಕೆಯಾಗಿತ್ತು.

 

2014ರಲ್ಲಿ ಶಿಕ್ಷಣ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಶಾಶ್ವತ ವರ್ಗಾವಣೆ ಹೊಂದಿರುವ ವಿ ಸಿದ್ದಯ್ಯ ಎಂಬುವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತಾಗಿ ವಿಚಾರಣೆ ನಡೆಸಿದ್ದ ಅಂದಿನ ಆಯುಕ್ತರಾದ ಎಂ ವಿ ಸಾವಿತ್ರಿ ಅವರು 2015ರ ಜುಲೈ 11ರಂದು ಸಿದ್ದಯ್ಯ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

 

ಹೊರಗುತ್ತಿಗೆ ನೌಕರರಿಗೆ ಕಾಲಕಾಲಕ್ಕೆ ವೇತನ ನೀಡಲು ಕ್ರಮ ವಹಿಸಿರುವುದಿಲ್ಲ. ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲು ಕ್ರಮ ವಹಿಸಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ಅಗತ್ಯ ಕ್ರಮ ವಹಿಸಿಲ್ಲ. ಪ್ರತಿ ತಿಂಗಳು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಪ್ರಗತಿ ವರದಿ ಸಲ್ಲಿಸಿಲ್ಲ ಮತ್ತು ನಿಯಮಿತವಾಗಿ ತಪಾಸಣೆ ನಡೆಸಿಲ್ಲ ಎಂದು ಅಮಾನತು ಆದೇಶದಲ್ಲಿ ವಿವರಿಸಲಾಗಿತ್ತು.

 

ದೇವನಹಳ್ಳಿ ತಾಲೂಕಿನ ಹಳೇ ಕಟ್ಟಡದ ಮಾಲೀಕರಾದ ಚನ್ನನಾರಾಯಣ ಸ್ವಾಮಿ ಇವರ ಕಟ್ಟಡ ಬಾಡಿಗೆ ಪ್ರಕರಣದಲ್ಲಿ ಸೂಕ್ತ ಕ್ರಮ ವಹಿಸದೇ ಕರ್ತವ್ಯ ನಿರ್ಲಕ್ಷ್ಯ ವಹಿಸಲಾಘಿದೆ. ಡಾ ಬಾಬು ಜಗಜೀವನರಾಂ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳ ನಿರ್ಮಾಣ ಹಂತದ ಕಟ್ಟಡ ಪರಿಶೀಲನೆ ಮಾಡಿಲ್ಲ. ಮಂಜೂರಾದ ಭವನಗಳಿಗೆ ನಿವೇಶನ ಪಡೆಯಲು ಕ್ರಮವಹಿಸಿಲ್ಲ ಎಂಬುದು ಆದೇಶದಿಂದ ತಿಳಿದು ಬಂಧಿದೆ.

 

ಪಂಚಾಯ್ತಿಗಳ ಶೇ.25ರ ಅನುದಾನ ಪರಿಶೀಲನೆ ಮತ್ತು ಪುರಸಭೆಗಳಲ್ಲಿನ ಪರಿಶೀಲನೆ ನಡೆಸಿ ವರದಿ ಮಾಡಿಲ್ಲ. ಅಂಬೇಢ್ಕರ್‍‌ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಲಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿಲ್ಲ. ವಿಶೇಷ ಕೇಂದ್ರೀಯ ನೆರವಿನ ಅನುದಾನಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರ ನೀಡಿಲ್ಲ ಮತ್ತು ಉಳಿಕೆ ಅನುದಾನ ಖರ್ಚು ಮಾಡಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮದಲ್ಲಿ ನಡೆಯುತ್ತಿರುವ ಪರಿಶಿಷ್ಟ ವರ್ಗಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ ನಿರ್ವಹಣೆ ಅಸಮರ್ಪಕ. ಈ ವಿದ್ಯಾರ್ಥಿ ನಿಲಯದ ಶಾಲಾ ಮಕ್ಕಳು ದುಶ್ಚಟಗಳನ್ನು ಅಭ್ಯಾಸ ಮಾಡಿಕೊಂಡಿದ್ದರೂ ಈ ಬಗ್ಗೆ ಸರಿಪಡಿಸುವ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿ ನಿಲಯದ ಕ್ರಿಯಾ ಯೋಜನೆ ಅನ್ವಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

2018ರ ಅಕ್ಟೋಬರ್‍‌ನಿಂದ 2022ರ ಡಿಸೆಂಬರ್‍‌ ವರೆಗೂ ಯಾವುದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸದೇ ಅನಧಿಕೃತ ಗೈರು ಹಾಜರಾಗಿದ್ದಾರೆ ಎಂದು ದೂರಲಾಗಿದೆಯಲ್ಲದೇ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರೂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯ ಉನ್ನತ ಅಧಿಕಾರಿಗಳು ಇವರ ವಿರುದ್ಧ ಶಿಸ್ತು ಕ್ರಮ ವಹಿಸದೇ 2023ರ ಜನವರಿಯಲ್ಲಿ ಕೋಲಾರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಚೇರಿಯ ಗೆಜೆಟೆಡ್‌ ವ್ಯವಸ್ಥಾಪಕರನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

SUPPORT THE FILE

Latest News

Related Posts