ಕಾಮಗಾರಿಗಳಲ್ಲಿ ಅಕ್ರಮ; ಮೊದಲ ಟಿಪ್ಪಣಿಯಲ್ಲಿದ್ದ ಖಡಕ್‌ ಅಧಿಕಾರಿಗಳ ಕೈಬಿಟ್ಟು ತನಿಖಾ ಸಮಿತಿ ರಚನೆ

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ಮಾಣ, ದುರಸ್ತಿ ಸೇರಿದಂತೆ ಇತರೆ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಅಕ್ರಮ, ಭ್ರಷ್ಟಾಚಾರ, ಅಧಿಕಾರ ಮತ್ತು ಹಣಕಾಸು ದುರುಪಯೋಗಳ ಕುರಿತು ತನಿಖೆ ನಡೆಸುವ ಸಂಬಂಧ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಮೊದಲು ಹೊರಡಿಸಿದ್ದ ಟಿಪ್ಪಣಿಯಲ್ಲಿ  ಹೆಸರಿಸಿದ್ದ ಖಡಕ್‌ ಅಧಿಕಾರಿಗಳನ್ನು  ಕೈಬಿಟ್ಟಿರುವುದು  ಇದೀಗ ಬಹಿರಂಗವಾಗಿದೆ.

 

ಐಎಎಸ್‌ ಅಧಿಕಾರಿಗಳಾದ ರಾಜೇಂದರ್‍‌ ಕುಮಾರ್‍‌ ಕಟಾರಿಯಾ, ಹರ್ಷ ಗುಪ್ತ, ಮುನೀಶ್‌ ಮೌದ್ಗಿಲ್‌, ರಶ್ಮಿ ಮಹೇಶ್‌ ಮತ್ತು ವಿಶಾಲ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರಿಗೆ ಡಿ ಕೆ ಶಿವಕುಮಾರ್‍‌ ಅವರು 2023ರ ಜೂನ್‌ 19ರಂದು ಟಿಪ್ಪಣಿ ಹೊರಡಿಸಿದ್ದರು.

 

ಆದರೀಗ ನಗರಾಭಿವೃದ್ಧಿ ಇಲಾಖೆಯು 2023ರ ಆಗಸ್ಟ್‌ 5ರಂದು ಹೊರಡಿಸಿರುವ ಆದೇಶದಲ್ಲಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ, ಹರ್ಷ ಗುಪ್ತ, ಮುನೀಶ್‌ ಮೌದ್ಗಿಲ್‌, ರಶ್ಮಿ ಮಹೇಶ್‌ ಅವರ ಹೆಸರನ್ನು ಕೈಬಿಡಲಾಗಿದೆ. ಬದಲಿಗೆ ಮೊದಲ ಟಿಪ್ಪಣಿಯಲ್ಲಿದ್ದ ಡಾ ವಿಶಾಲ್‌ ಅವರ ಹೆಸರು ಮಾತ್ರ ಇದೆ. ರಾಜೇಂದರ್‍‌ ಕುಮಾರ್‍‌ ಕಟಾರಿಯಾ, ಹರ್ಷ ಗುಪ್ತ, ಮುನೀಶ್‌, ರಶ್ಮಿ ಮಹೇಶ್‌ ಅವರ ಹೆಸರನ್ನು ಕೈಬಿಟ್ಟಿರುವುದರ ಹಿಂದೆ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಒತ್ತಡವಿತ್ತು ಎಂದು ಗೊತ್ತಾಗಿದೆ.

 

ಡಿ ಕೆ ಶಿವಕುಮಾರ್‍‌ ಮೊದಲು ಬರೆದಿದ್ದಾರೆ ಎನ್ನಲಾದ ಟಿಪ್ಪಣಿ ಪ್ರಕಾರ ಘನ ತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ಬಗ್ಗೆ ತನಿಖಾ ಸಮಿತಿಗೆ ವಿ ರಶ್ಮಿ ಮಹೇಶ್‌, ಐಎಎಸ್‌, ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸೂಚಿಸಲಾಗಿತ್ತು.

 

ಆದರೆ ಆಗಸ್ಟ್‌ 5ರಂದು ಹೊರಡಿಸಿರುವ ಆದೇಶದಲ್ಲಿ ಉಜ್ವಲ್‌ ಕುಮಾರ್‍‌ ಘೋಷ್‌ ಅವರನ್ನುಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

 

ಉಳಿದಂತೆ ಸಮಿತಿ ಸದಸ್ಯರ ಪಟ್ಟಿಯಲ್ಲಿ ಕ್ಯಾಪ್ಟನ್‌ ದೊಡ್ಡಿಹಾಳ್‌, ಲೋಕೋಪಯೋಗಿ ಇಲಾಖೆಯ ನಿವೃತ್ತ ಚೀಫ್‌ ಇಂಜಿನಿಯರ್‍‌., ಬಸವರಾಜ ಕೋಟಿ, ನಿವೃತ್ತ ಮುಖ್ಯ ಇಂಜಿನಿಯರ್‍‌ ಅವರನ್ನು ಉಳಿಸಿಕೊಂಡು ನಿವೃತ್ತ ಮುಖ್ಯ ಇಂಜಿನಿಯರ್‍‌ ಬೀಸೇಗೌಡ ಅವರನ್ನು ಕೈಬಿಡಲಾಗಿದೆ. ಅವರ ಜಾಗಕ್ಕೆ ಟಿ ಪ್ರಭಾಕರ್‍‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

 

ಅದೇ ರೀತಿ ರಸ್ತೆ, ಮೂಲಭೂತ ಸೌಕರ್ಯಗಳ ವಿಭಾಗದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತನಿಖಾ ಸಮಿತಿಗೆ ಹರ್ಷ ಗುಪ್ತ, ಐಎಎಸ್‌ ಅಧ್ಯಕ್ಷರನ್ನಾಗಿ ನೇಮಿಸಬೇಕು. ಅನಿಲ್‌ಕುಮಾರ್‍‌ ಮುಖ್ಯ ಇಂಜಿನಿಯರ್‍‌, ಪಿಡಬ್ಲ್ಯೂಡಿ, ಜ್ವಾಲೇಂದ್ರಕುಮಾರ್, ಮಾಜಿ ಜಿಎಂ, ಎನ್‌ಹೆಚ್‌ಎಐ, ನಿವೃತ್ತ ಮುಖ್ಯ ಅಭಿಯಂತರರಾದ ಕೆ ಮೋಹನ್‌ ಅವರನ್ನು ಸಮಿತಿ ಸದಸ್ಯರನ್ನಾಗಿಸಬೇಕು ಎಂದು ನಿರ್ದೇಶಿಸಲಾಗಿತ್ತು.

 

ಆದರೆ ಆಗಸ್ಟ್‌ 5ರಂದು ಹೊರಡಿಸಿರುವ ಆದೇಶದಲ್ಲಿ ಈ ಸಮಿತಿಗೆ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಗೆಯೇ ಪಿಡಬ್ಲ್ಯೂಡಿ, ಜ್ವಾಲೇಂದ್ರಕುಮಾರ್, ಮಾಜಿ ಜಿಎಂ, ಎನ್‌ಹೆಚ್‌ಎಐ, ನಿವೃತ್ತ ಮುಖ್ಯ ಅಭಿಯಂತರರಾದ ಕೆ ಮೋಹನ್‌ ಅವರನ್ನು ಸಮಿತಿಯಲ್ಲಿ ಉಳಿಸಿಕೊಂಡು ಅನಿಲ್‌ಕುಮಾರ್‍‌ ಅವರನ್ನು ಕೈಬಿಡಲಾಗಿದೆ. ಈ ಜಾಗಕ್ಕೆ ನಿವೃತ್ತ ಪ್ರಧಾನ ಇಂಜಿನಿಯರ್‍‌ ಪ್ರಭಾಕರ್ ಡಿ ಹಮ್ಮಿಗೆ, ಬಸವರಾಜ್‌ ಶಂಶಿಮಠ್‌ ಅವರನ್ನು ನೇಮಿಸಲಾಗಿದೆ.

 

ಬೃಹತ್‌ ನೀರುಗಾಲುವೆ ಕಾಮಗಾರಿಗಳ ಬಗ್ಗೆ ತನಿಖಾ ಸಮಿತಿಗೆ ಐಎಎಸ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌, ಅಧ್ಯಕ್ಷರನ್ನಾಗಿ ನೇಮಿಸಬೇಕು. ನಿವೃತ್ತ ಕಾರ್ಯದರ್ಶಿ, ಇಐಸಿಆರ್‍‌, ಹೆಚ್‌ ಎಚ್‌ ಬಿ ಸಿದ್ದಲಿಂಗಪ್ಪ, ಆರ್‍‌ ರಾಮಕೃಷ್ಣಗೌಡ, ನಿವೃತ್ತ ಚೀಫ್‌ ಇಂಜಿನಿಯರ್‍‌, ಮಲ್ಲೇಶ್‌, ನಿವೃತ್ತ ಕಾರ್ಯಪಾಲಕ ಅಭಿಯಂತರರರನ್ನು ಸದಸ್ಯರನ್ನಾಗಿ ನೇಮಿಸಲು ಸೂಚಿಸಲಾಗಿತ್ತು.

 

ಡಿ ಕೆ ಶಿವಕುಮಾರ್‍‌ ಅವರು ಬರೆದಿದ್ದ ಮೊದಲ ಟಿಪ್ಪಣಿಯಲ್ಲಿ ಹರ್ಷ ಗುಪ್ತ, ಮುನೀಶ್‌ ಹೆಸರಿರುವ ಪ್ರತಿ

 

ಆಗಸ್ಟ್‌ 5ರಂದು ಹೊರಡಿಸಿರುವ ಆದೇಶದಲ್ಲಿ ಈ ಸಮಿತಿಗೆ ಪಿ ಸಿ ಜಾಫರ್‍‌ ಅವರನ್ನು ಅಧ್ಯಕ್ಷರನ್ನಾಗಿಸಲಾಗಿದೆ. ಹಿಂದಿನ ಟಿಪ್ಪಣಿಯಲ್ಲಿ ಹೆಸರಿಸಿದ್ದ ಸದಸ್ಯರನ್ನೇ ಮುಂದುವರೆಸಲಾಗಿದೆ.

 

ಕೆರೆ ಅಭಿವೃದ್ಧಿ ಕಾಮಗಾರಿಗಳ/ಒಎಫ್‌ಸಿ ಅನುಮತಿ ಬಗ್ಗೆ ಐಎಎಸ್‌ ಅಧಿಕಾರಿ ಡಾ ವಿಶಾಲ್‌ ಆರ್‍‌, ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಬೇಕು. ಈ ಸಮಿತಿಗೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್‍‌ಗಳಾದ ನಂಜಯ್ಯ, , ಹೆಚ್‌ ಪ್ರಕಾಶ್‌ರನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂದು ಸೂಚಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ಆಗಸ್ಟ್‌ 5ರಂದು ಹೊರಡಿಸಿರುವ ಆದೇಶದ ಪ್ರಕಾರ ನಂಜಯ್ಯ ಅವರ ಹೆಸರನ್ನು ಕೈಬಿಡಲಾಗಿದೆ. ಉಳಿದಂತೆ ಬೀಸೇಗೌಡ, ಹೆಚ್‌ ಪಿ ಪ್ರಕಾಶ್‌, ಶ್ರೀಕಾಂತ್‌, ಹೆಚ್‌ ಕುಮಾರ್‍‌, ಜಿ ಎಸ್‌ ಗೋಪಿನಾಥ್‌ ಅವರ ಹೆಸರನ್ನು ಸೇರಿಸಲಾಗಿದೆ.

 

ವಾರ್ಡ್‌ ಮಟ್ಟದ ಕಾಮಗಾರಿಗಳ ಬಗ್ಗೆ ತನಿಖಾ ಸಮಿತಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾದ ರಾಜೇಂದರ್‍‌ ಕುಮಾರ್ ಕಟಾರಿಯಾ ಅವರನ್ನು ಅಧ್ಯಕ್ಷರನ್ನಾಗಿಸಬೇಕು. ಈ ಸಮಿತಿಗೆ ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಪಿ ಎಂ ಸುರೇಶ್‌, ಹೆಚ್‌ ಕುಮಾರ್‍‌ ಇವರನ್ನು ಸದಸ್ಯರನ್ನಾಗಿಸಬೇಕು ಎಂದು ಮೊದಲಿನ ಟಿಪ್ಪಣಿಯಲ್ಲಿ ಸೂಚಿಸಲಾಗಿತ್ತು.

 

 

ಆದರೆ ಆಗಸ್ಟ್‌ 5ರಂದು ಹೊರಡಿಸಿರುವ ಆದೇಶದಲ್ಲಿ ವಾರ್ಡ್‌ ಮಟ್ಟದ ಕಾಮಗಾರಿಗಳ ತನಿಖೆ ನಡೆಸುವ ಸಮಿತಿಗೆ  ಡಾ ಆರ್‍‌ ವಿಶಾಲ್‌ ಅವರನ್ನು ನೇಮಿಸಲಾಗಿದೆ.

 

 

2019-20ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಬಿಬಿಎಂಪಿಯಲ್ಲಿ ಕೈಗೊಂಡಿರುವ ಅಮೃತ ನಗರೋತ್ಥಾನ ಅನುದಾನದಡಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಾಗೂ ಪಾಲಿಕೆಯ ಅನುದಾನದಡಿಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಟೆಂಡರ್‍‌ ಪೂರ್ವದಲ್ಲಿ ಮತ್ತು ಟೆಂಡರ್‍‌ ಕರೆದ ನಂತರದ ಪ್ರಕ್ರಿಯೆಗಳು, ಬಿಲ್‌ ಪಾವತಿ ಮತ್ತು ಕಾಮಗಾರಿ ಗುಣಮಟ್ಟದ ಕಾಮಗಾರಿಯ ಅವಶ್ಯಕತೆ ಮತ್ತು ಕಾಮಗಾರಿ ಅನುಷ್ಠಾನದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ನಾಲ್ಕು ತನಿಖಾ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಬೇಕು. ತನಿಖಾ ಸಮಿತಿಗಳ ರಚನೆ ಮತ್ತು ಸಮಿತಿಗಳಿಗೆ ತನಿಖಾ ವ್ಯಾಪ್ತಿಯನ್ನೂ ಇದೇ ಟಿಪ್ಪಣಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರು ರಾಕೇಶ್‌ಸಿಂಗ್‌ ಅವರಿಗೆ ಸೂಚಿಸಿದ್ದರು ಎಂಬುದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

 

ಸಮಿತಿಯ ಕಾರ್ಯವ್ಯಾಪ್ತಿ

 

1. ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ಅಗತ್ಯ ಶಾಸನಬದ್ಧ ಅನುಮತಿಗಳನ್ನು (ಉದಾ: ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆ ಹಾಗೂ ಕೆರೆ ವ್ಯಾಪ್ತಿಯ ಕಾಮಗಾರಿಗಳಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ) ಪಡೆದ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವರದಿ

 

2. ನಡೆದಿರುವ ಸಂಗ್ರಹಣೆಗಳು (ಬಿಬಿಎಂಪಿ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸೇರಿದಂತೆ) ಕೆಟಿಪಿಪಿ ಕಾಯ್ದೆ ಮತ್ತು ನಿಯಮಾನುಸಾರ ಇವೆಯೇ ಹಾಗೂ ಸರ್ಕಾರದ ಅನುಮೋದನೆ ಪಡೆದಿರುವ ಬಗ್ಗೆ

 

3. ಟೆಂಡರ್‍‌ ಪ್ರಕ್ರಿಯೆಯಲ್ಲಿ ಟೆಂಡರ್‍‌ ನಿಯಮಗಳನ್ನು ತಿರುಚುವುದು ಅಥವಾ ಸಡಿಲಗೊಳಿಸುವುದು, ಮೌಲ್ಯಮಾಪನದಲ್ಲಿ ದುರ್ವವ್ಯವಹಾರ, ಅನರ್ಹರಿಗೆ ಟೆಂಡರ್‍‌ ನೀಡುವುದು ಮುಂತಾಗಿ ಅಕ್ರಮ ನಡೆದಿದಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ಮತ್ತು ವರದಿ

 

4. ಟೆಂಡರ್‍‌ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮಾವಳಿಗಳನ್ನು ತಿರುಚಿದಲ್ಲಿ ಅಥವಾ ಸಡಿಲಗೊಳಿಸಿದಲ್ಲಿ ಮೌಲ್ಯಮಾಪನದ ದುರ್ವ್ಯವಹಾರ, ಅನರ್ಹರಿಗೆ ಟೆಂಡರ್‍‌ ನೀಡಿರುವುದು ಮುಂತಾದ ಅಕ್ರಮಗಳನ್ನು ಪರೀಕ್ಷಿಸುವುದು.

 

5. ಟೆಂಡರ್‍‌ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಸಲ್ಲಿಸಿದ ಎಲ್ಲಾ ವಾರ್ಷಿಕ ವಹಿವಾಟು ಮತ್ತು ಪೂರ್ವಾನುಭವ ಪ್ರಮಾಣಪತ್ರಗಳ ಪರಿಶೀಲನೆ ಮತ್ತು ವರದಿ. ಸದರಿ ಪರಿಶೀಲನೆ ಸಂದರ್ಭದಲ್ಲಿ ಗುತ್ತಿಗೆದಾರರು ಇ-ಪ್ರೊಕ್ಯೂರ್‍‌ಮೆಂಟ್‌ ಮೂಲಕ ಭಾಗವಹಿಸಿರುವ ಹಲವಾರು ಟೆಂಡರ್‍‌ಗಳಲ್ಲಿ ಸಲ್ಲಿಸಿರುವ ಪೂರ್ವಾನುಭವ ಪ್ರಮಾಣ ಪತ್ರಗಳನ್ನು ತಾಳೆ ಮಾಡುವುದು.

 

6. ನಿರ್ದಿಷ್ಟ ಗುತ್ತಿಗೆದಾರರ ಹೆಸರಿನಲ್ಲಿ ಕಾರ್ಯಾದೇಶ ನೀಡಿದ್ದು ಆದರೆ ಅದೇ ಕಾಮಗಾರಿಯ ಹಣ ಪಾವತಿಯನ್ನು ಮಾತ್ರ ಬೇರೆಯವರಿಗೆ ಮಾಡಿರುವ ಬಗ್ಗೆ ಪರಿಶೀಲಿಸುವುದು.

 

7. ಸೇವೆಗಳ ಸಂಗ್ರಹಣೆಗೆ ಸಕಾಲದಲ್ಲಿ ಟೆಂಡರ್‍‌ ಮಾಡದೇ ಹಿಂದೆ ಜಾರಿಯಲ್ಲಿದ್ದ ನಿಗದಿತ ಅವಧಿಯ ಕಾರ್ಯಾದೇಶಗಳನ್ನು ವಿಸ್ತರಿಸುವ ಪ್ರಕರಣಗಳ ಬಗ್ಗೆ

 

8. ಅಗಾಧ ವೆಚ್ಚದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದಾಗ್ಯೂ ಸಹ ಅವುಗಳ ನಿರ್ವಹಣೆಗಾಗಿ ಪುನಃ ಅನಗತ್ಯ ವೆಚ್ಚ ಕೈಗೊಳ್ಳಲಾಗುತ್ತಿರುವ ಬಗ್ಗೆ

 

9. ಅನಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು/ಅನಗತ್ಯ ಬಾಬ್ತುಗಳನ್ನು ಅಳವಡಿಸಿರುವ ಬಗ್ಗೆ

 

10. ಕಾಮಗಾರಿ ಬದಲಾವಣೆ ಪ್ರಸ್ತಾವನೆಗಳಿದ್ದಲ್ಲಿ ಅನುದಾನದ ದುರುಪಯೋಗ ಕಾರಣಕ್ಕಾಗಿ ಸಲ್ಲಿಸಲಾಗಿದೆಯೇ ಎಂಬ ಬಗ್ಗೆ ಹಾಗೂ ಮೂಲ ಅಂದಾಜು ಪಟ್ಟಿಯಲ್ಲಿ ಅನುಮೋದನೆಗೊಂಡ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುವುದು

 

11. ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಗರ ಯೋಜನೆ( ವಲಯ ಮತ್ತು ಕೇಂದ್ರ) ವಿಭಾಗಕ್ಕೆ ಸಂಬಂಧಿಸಿದಂತೆ ವಸತಿ ಸಮುಚ್ಛಯ, ವಾಣಿಜ್ಯ ಹಾಗೂ ಕೈಗಾರಿಕೆ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡುವಾಗ ಮತ್ತು ಸ್ವಾಧೀನಾನುಭವ ಪತ್ರ ನೀಡುವಾಗ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗಿರುವ ಅಂಶಗಳ ಬಗ್ಗೆ

 

12. ಪಾಲಿಕೆಯಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ಓಎಫ್‌ಸಿ ಕೇಬಲ್‌ಗಳನ್ನು ಅಳವಡಿಸಿ ಪಾಲಿಕೆಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ, ರಸ್ತೆ ಅಗೆತಕ್ಕೆ ಅನುಮತಿ ಪಡೆಯುವಾಗ ಕಡಿಮೆ ಅಳತೆಗೆ ಪಡೆದು ಹೆಚ್ಚುವರಿ ಕೇಬಲ್‌ಗಳನ್ನು ಅಳವಡಿಸಿರುವ ಪ್ರಕರಣಗಳೂ, ಯಾವುದೋ ಓಎಫ್‌ಸಿ ಏಜೆನ್ಸಿ ಅನುಮತಿ ಪಡೆದು ಅದರಲ್ಲಿ ಅನಧಿಕೃತವಾಗಿ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೇ ಇರುವ ಇತರೆ ಏಜೆನ್ಸಿಗಳು ಅನುಮತಿ ಪೆದವರೊಂದಿಗೆ ಒಳ ಒಪ್ಪಂದ ಮಾಡಿಕೋಂಡು ತಮ್ಮ ಕಂಪನಿಯ ಕೇಬಲ್‌ಗಳನ್ನು ಅಳವಡಿಸಿ ಪಾಲಿಕೆಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ

 

13. ವಾಸ್ತವವಾಗಿ ಹೊರಡಿಸಲಾದ ಕಾರ್ಯಾದೇಶ, ಈ ಸಂಬಂಧ ಆಗಿರುವ ಟೆಂಡರ್‍‌ ವಿವರಗಳು ಮತ್ತು ಕಾಮಗಾರಿ ಅನುಷ್ಠಾನದಲ್ಲಿ ಎಷ್ಟು ಮೊಬಲಗು ಬಿಡುಗಡೆಯಾಗಿದೆ, ತತ್ಸಾಂಬಂಧ ಎಷ್ಟು ಮೊತ್ತ ವೆಚ್ಚವಾಗಿದೆ, ಬಿಡುಗಡೆಯ ಮೊತ್ತ ಮತ್ತು ವೆಚ್ಚ ಹಾಗೂ ಕಾಮಗಾರಿಯ ಅನುಷ್ಠಾನದ ಪ್ರಮಾಣ ಇವುಗಳನ್ನು ತಾಳೆ ಮಾಡಿ ಅನುಷ್ಠಾನದಲ್ಲಿ ಆಗಿರುವ ಲೋಪ ದೋಷಗಳನ್ನು ಪರಿಶೀಲಿಸುವುದು

 

14.ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯತೆ ಮತ್ತು ಅಗತ್ಯತೆ, ಅನಿವಾರ್ಯವಾಗಿದ್ದಲ್ಲಿ ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ

 

15. ಕಾಮಗಾರಿಗಳನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಗಳನ್ನು ನಿರ್ದಿಷ್ಟಪಡಿಸಿ ಅಧಿಕೃತ ಏಜೆನ್ಸಿಗಳಿಂದ ಮಾಡಿಸಿರುವ ಬಗ್ಗೆ ಪರಿಶೀಲನೆ
ಭಾರತದ ಸಿಲಿಕಾನ್‌ ವ್ಯಾಲಿ ಎಂಬ ಉಪಮೆಯಿಂದಲೇ ಜಾಗತಿಕವಾಗಿ ಹೆಸರುವಾಸಿಯಾಗಿತ್ತು. ತನ್ನ ವಿಶಾಲವಾದ ರಸ್ತೆಗಳು, ಪರಂಪರಾಗ ಕಟ್ಟಡಗಳು, ಸುಂದರ ಉದ್ಯಾನಗಳು, ಸರೋವರಗಳು ಮುಂತಾದವುಗಳಿಂದಾಗಿ ಉದ್ಯಾನ ನಗರಿಯಾಗಿ ರಾಜ್ಯದ ಮತ್ತು ದೇಶದ ಹೆಮ್ಮೆಯೆನಿಸಿದ್ದ ಬೆಂಗಳೂರನ್ನು ಕಳೆದ ನಾಲ್ಕು ವರ್ಷಗಳಲ್ಲಿ ಸುಲಭಕ್ಕೆ ಸರಿಪಡಿಸಲಾಗದ ಸಂಕೀರ್ಣತೆಗೆ ಹಿಂದಿನ ಆಡಳಿತ ಸರ್ಕಾರವು ದೂಡಿರುವುದು ಸರ್ವವಿಧಿತ ಎಂದು ಟಿಪ್ಪಣಿಯಲ್ಲಿ ವಿವರಿಸಿದ್ದರು.

 

ಈ ಹಿಂದೆ ಇದ್ದ ಸರ್ಕಾರದ ಆಡಳಿತಾವಧಿಯಲ್ಲಿ ತನ್ನ ಸ್ವ-ಪಕ್ಷದ ಕ್ಷೇತ್ರಗಳಿಗೆ ಅನಗತ್ಯ ಯೋಜನೆಗೆ ಅನುದಾನವನ್ನು ಮನಸೋ ಇಚ್ಛೆ ನೀಡಿ ತದನಂತ ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್‍‌ ನೀಡಿ ಟೆಂಡರ್‍‌ನಲ್ಲಿ ಅವ್ಯವಹಾರ ನಡೆಸಿ ಕಾಮಗಾರಿಗಳನ್ನೇ ಕೈಗೊಳ್ಳದೇ ಬಿಲ್‌ನ್ನು ಪಡೆದು ವ್ಯಾಪಕ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ.

 

ಇದರ ಫಲವಾಗಿ ಬೆಂಗಳೂರು ನಗರದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದಿನ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಸಾರ್ವಜನಿಕರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ರಸ್ತೆಗುಂಡಿಯಿರದ ರಸ್ತೆಗಳೇ ಇಲ್ಲವೆಂಬಂತಾಗಿದೆ. ಇಂದಿನ ಬೆಂಗಳೂರು ನಗರ ಅಕ್ಷರಶಃ ಕಸದಗುಡ್ಡೆಯಾಗಿದ್ದು ಘನತ್ಯಾಜ್ಯ ನಿರ್ವಹಣೆ, ಯೋಜನೆಗಳ ಅನುಷ್ಠಾನ, ಮಳೆನೀರುಗಾಲುವೆಗಳ ನಿರ್ಮಾಣ, ನಿರ್ವಹಣೆ ಹಾಗೂ ರಸ್ತೆ ನಿರ್ಮಾಣ, ನಿರ್ವಹಣೆ ಕಾಮಗಾರಿಗಳಲ್ಲೂ ಸಹ ಭಾರೀ ಭ್ರಷ್ಟಾಚಾರ ಎಸಗಿರುವುದು ಮೇಲುನೋಟಕ್ಕೆ ಸಾರ್ವಜನಿಕರ ದೂರುಗಳಿಂದ ತಿಳಿದು ಬಂದಿದೆ.

 

‘ಈ ಹಿನ್ನೆಲೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ರಾಜ್ಯ , ಕೇಂದ್ರ ಮತ್ತು ಬಿಬಿಎಂಪಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳನ್ನು ಪುನರುತ್ಥಾನಗೊಳಿಸುವ ಉದ್ದೇಶದಿಂದ ಸುವ್ಯವಸ್ಥೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಈಗಾಗಲೇ ಕಾರ್ಯತತ್ಪರವಾಗಿದೆ. ಆದರೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಯೋಜನೆ ಮತ್ತು ಕಾಮಗಾರಿಗಳಲ್ಲಿ ನಡೆಸಿರುವ ಅವ್ಯವಹಾರಗಳನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಹೊಣೆ ಈ ಸರ್ಕಾರಕ್ಕೆ ಇದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿತ್ತು.

SUPPORT THE FILE

Latest News

Related Posts