ಬೆಂಗಳೂರು; ಕೇಂದ್ರ ಸರ್ಕಾರದ ಎರಡನೇ ಹಂತದ ಫಾರೆಸ್ಟ್ ಕ್ಲಿಯರೆನ್ಸ್ ಪ್ರಸ್ತಾವನೆ ಪಡೆಯದೇ ಅರಣ್ಯ ಕಾಯ್ದೆ ಉಲ್ಲಂಘನೆ ಮತ್ತು ಅದಿರು ಸಾಗಾಣಿಕೆ ರಸ್ತೆಯನ್ನು ಬಳಸಲು ಸರ್ಕಾರದ ಅನುಮತಿ ಮುಕ್ತಾಯಗೊಂಡ ನಂತರವೂ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿದೆ ಎಂದು ದೇಶದ ಪ್ರತಿಷ್ಠಿತ ಉಕ್ಕು ಉದ್ಯಮವಾಗಿರುವ ಜೆಎಸ್‌ಡಬ್ಲ್ಯೂ ಗುರುತರವಾದ ಆರೋಪಕ್ಕೆ ಗುರಿಯಾಗಿದೆ.
ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿಯ ದಿಂಡದಹಳ್ಳಿ ಸರ್ವೆನಂಬರ್ 18ರಲ್ಲಿ ಜೆಎಸ್‌ಡಬ್ಲ್ಯೂ ಬೊಮ್ಮನಹಳ್ಳಿ ಮೈನ್ಸ್ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿದೆ ಮತ್ತು ಕೇಂದ್ರ ಸರ್ಕಾರದ ಎರಡನೇ ಹಂತದ ಫಾರೆಸ್ಟ್ ಕ್ಲಿಯರೆನ್ಸ್ ಪ್ರಸ್ತಾವನೆ ಪಡೆಯದೇ ಅರಣ್ಯ ಕಾಯ್ದ ಉಲ್ಲಂಘನೆ ಮಾಡಿದೆ ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಸಚಿವ ಈಶ್ವರ ಖಂಡ್ರೆ ವಾಸ್ತವ ವರದಿ ಕೇಳಿರುವುದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಪಡೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು 2023ರ ಜುಲೈ 11ರಂದು ವರದಿಯನ್ನು ನೀಡಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕೇಂದ್ರ ಸರ್ಕಾರದ ಎರಡನೇ ಹಂತದ ಮತ್ತು ಫಾರೆಸ್ಟ್ ಕ್ಲಿಯರೆನ್ಸ್ ಪ್ರಸ್ತಾವನೆ ಪಡೆಯದೇ ಅರಣ್ಯ ಕಾಯ್ದ ಉಲ್ಲಂಘನೆ ಮತ್ತು ಅದಿರು ಸಾಗಾಣಿಕೆ ರಸ್ತೆಯನ್ನು ಬಳಸಲು ಸರ್ಕಾರದ ಅನುಮತಿ ಮುಕ್ತಾಯಗೊಂಡ ನಂತರವೂ ಅಕ್ರಮವಾಗಿ ಅದಿರನ್ನು ಸಾಗಾಣಿಕೆ ಮಾಡುತ್ತಿರುತ್ತಾರೆ. ಕೇಂದ್ರ ಸರ್ಕಾರದ ಫಾರೆಸ್ಟ್ ಕ್ಲಿಯರೆನ್ಸ್ ಅನುಮೋದನೆ ದೊರೆಯುವ ತನಕ ಗಣಿಗಾರಿಕೆ ಚಟುವಟಿಕೆ ಮಾಡಲು ಅವಕಾಶ ನೀಡಬಾರದು,’ ಎಂದು ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರದಲ್ಲಿ ಕೋರಿದ್ದರು ಎಂಬುದು ತಿಳಿದು ಬಂದಿದೆ.
ಈ ಸಂಬಂಧ ಅರಣ್ಯ ಪಡೆಯ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2023ರ ಜುಲೈ 11ರಂದು ವರದಿ ಸಲ್ಲಿಸಿದ್ದಾರೆ.
ವರದಿಯಲ್ಲೇನಿದೆ?
ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗವಾಗಿವೆ. ಗಣಿಗಾರಿಕೆ ಗುತ್ತಿಗೆ ಪಡೆದಿರುವ ಜೆ ಎಸ್ ಡಬ್ಲ್ಯು ಸ್ಟೀಲ್ ಲಿ. ಕಂಪನಿ, ಇಲ್ಲಿಯವರೆಗೆ ಹಕ್ಕುಸ್ವಾಮ್ಯ ಆದೇಶ (Vesting Order) ಪಡೆದು ಎರಡು ವರ್ಷ ಕಾಲಾವಕಾಶದ ಅವಧಿಯಲ್ಲಿ ಎಲ್ಲಾ ಅನುಮತಿಗಳನ್ನು ಪಡೆದಿಲ್ಲ ಮತ್ತು ಪ್ರಮುಖವಾಗಿ ಎರಡನೇ ಹಂತದ ಅನುಮತಿ ಪಡೆಯುವಲ್ಲಿ ವಿಫಲವಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.
ಎರಡನೇ ಹಂತದ ಅನುಮತಿ ಪಡೆಯಲು, ಅರಣ್ಯೇತರ ಬಳಕೆಗಾಗಿ ಅರಣ್ಯ ಪ್ರದೇಶವನ್ನು ಬಳಸಲು, ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಸೂಕ್ತ ಭೂಮಿ ಒದಗಿಸಲು ವಿಫಲವಾಗಿತ್ತು. ಜೆ ಎಸ್ ಡಬ್ಲ್ಯೂ ಸ್ಟೀಲ್ಸ್ ಲಿ. ಕಂಪನಿಯು ಈಚೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಅರಣ್ಯೇತರ ಭೂಮಿಯನ್ನು ಗುರುತಿಸಿದೆ. ಅರಣ್ಯ ಅನುಮತಿಯ ವರ್ಗಾವಣೆಯ ಪ್ರಕ್ರಿಯೆಯು ಪ್ರಸ್ತುತ ಚಾಲ್ತಿಯಲ್ಲಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ.
ದೇಶದ ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿರುವ ಜೆ ಎಸ್ ಡಬ್ಲ್ಯೂ ಸ್ಟೀಲ್ಸ್ ಲಿ. ಕಂಪನಿಯು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ತಾನು ಗುತ್ತಿಗೆ ಪಡೆದಿದ್ದ ಗಣಿ ಪ್ರದೇಶದಿಂದ ಅದಿರನ್ನು ಅರಣ್ಯ ಪ್ರದೇಶದ ಮೂಲಕ ಸಾಗಾಟ ಮಾಡಲು ಕಾನೂನಾತ್ಮಕ ಅನುಮತಿ ಪಡೆದಿರಲಿಲ್ಲ. ಆದರೂ ನ್ಯಾಯಾಲಯ ಮತ್ತು ಅರೆ ನ್ಯಾಯ ಪ್ರಾಧಿಕಾರದ ತಡೆ ಪಡೆಯುವುದರ ಮೂಲಕ ಸಾಗಾಟ ಮಾಡಿತ್ತು ಎಂಬುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸುತ್ತಿದ್ದ ಮೆ. ಮಿನರಲ್ ಎಂಟರ್ ಪ್ರೈಸೆಸ್ ಲಿಮಿಟೆಡ್‌ಗೆ ನೀಡಿದ್ದ 20 ವರ್ಷಗಳ ಗುತ್ತಿಗೆ ಸಂಖ್ಯೆ ಎಂಎಲ್ 2346 ಮುಕ್ತಾಯವಾಗಿತ್ತು. ಹೀಗಾಗಿ 2020ರ ಮಾರ್ಚ್ 8ರಂದು ಇ-ಹರಾಜು ನಡೆಸಲಾಗಿತ್ತು. ಈ ಹರಾಜಿನಲ್ಲಿ ಜಿಂದಾಲ್ ಒಡೆತನದ ಜೆ ಎಸ್ ಡಬ್ಲ್ಯೂ ಸ್ಟೀಲ್ಸ್ ಲಿಮಿಟೆಡ್ ಕಂಪನಿಯು ಬೇಡರ ಬೊಮ್ಮನಹಳ್ಳಿಯ ಗಣಿಯನ್ನು ಹೆಚ್ಚಿನ ಮೊತ್ತ ನಮೂದಿಸುವ ಮೂಲಕ (ಹೊಸ ಗಣಿ ಗುತ್ತಿಗೆ ಸಂಖ್ಯೆ ಎಂಎಲ್ – 0014). ಪಡೆದುಕೊಂಡಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.
ಜೆ ಎಸ್ ಡಬ್ಲ್ಯೂ ಸ್ಟೀಲ್ಸ್ ಲಿಮಿಟೆಡ್ ಪರವಾಗಿ 2 ವರ್ಷಗಳ ಅವಧಿಗೆ “ಹಕ್ಕುಸ್ವಾಮ್ಯ ಆದೇಶ”ವನ್ನು (Vesting Order) 2020ರ ಜುಲೈ 1ರಂದು ಹೊರಡಿಸಲಾಗಿತ್ತು. ಈ ಹಕ್ಕುಸ್ವಾಮ್ಯ ಆದೇಶದ ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು 2020ರ ಜುಲೈ 4ರಂದು ಪತ್ರವನ್ನು ನೀಡಿದ್ದರು. ಈ ಸಂಬಂಧ 2020ರ ಜುಲೈ 7ರಂದು ಕರ್ನಾಟಕ ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಜೆಎಸ್‌ಡಬ್ಲ್ಯೂ ಕಂಪನಿಯು ಅದಿರು ಸಾಗಾಟ ಮಾಡಲು ಚಿತ್ರದುರ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು ಎಂಬುದು ವರದಿಯಿಂದ ಗೊತ್ತಾಗಿದೆ.
ಅಲ್ಲದೇ ಅರಣ್ಯ ಭೂಮಿಯನ್ನು ಅದಿರು ಸಾಗಾಟ ಮಾಡುವ ಅರಣ್ಯೇತರ ಬಳಕೆಗಾಗಿ ಒಟ್ಟು 93.60 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ 7.2 ಕೋಟಿ ರು.ಗಳನ್ನು 2020ರ ಜೂನ್ 26ರಂದೇ ಇಲಾಖೆಗೆ ಪಾವತಿಸಿತ್ತು.
ಈ ಒಪ್ಪಂದ ಮತ್ತು ವರ್ಗಾವಣೆ ಮಾಡಲ್ಪಟ್ಟ ಅನುಮತಿ ಮತ್ತು ಪರವಾನಿಗೆಗಳು ಎರಡು ವರ್ಷದ ಅವಧಿಗೆ ಅಥವಾ ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಅನ್ವಯ ಗುತ್ತಿಗೆದಾರರು ಹೊಸದಾಗಿ ಪಡೆಯುವ ಅನುಮತಿ ಮತ್ತು ಪರವಾನಿಗೆ ಪಡೆಯುವವರೆಗೆ, ಇದರಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಕಾರ ಯಾವುದೇ ಅರಣ್ಯ ಪ್ರದೇಶವನ್ನು ಅರಣ್ಯೇತರ ಬಳಕೆಗೆ ಬಳಸಬೇಕಾದಲ್ಲಿ ಬಳಕೆಗೆ ಒಳಪಡುವ ಸಮಾನಾಂತರ ಅರಣ್ಯೇತರ ಭೂ ಪ್ರದೇಶವನ್ನು ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಬೇಕು.
ಈ ಪ್ರಕರಣದಲ್ಲಿ 93.60 ಹೆಕ್ಟೇರ್ ಅರಣ್ಯೇತರ ಭೂಮಿಯನ್ನು ಜಿಂದಾಲ್ ಕಂಪನಿಯು ರಾಜ್ಯದ ಯಾವುದೇ ಭಾಗದಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಬೇಕಾಗಿತ್ತು. ಇದೇ ನಿಬಂಧನೆಯು ಸಮನ್ವಯಧಿಕಾರಿ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀಡಿರುವ ವೆಸ್ಟಿಂಗ್ ಆದೇಶದಲ್ಲಿ ಮೂರನೆಯ ನಿಬಂಧನೆಯಾಗಿತ್ತು. ಈ ಎಲ್ಲಾ ನಿಬಂಧನೆಗೆ ಒಳಪಟ್ಟ ಜಿಂದಾಲ್ ಕಂಪನಿಯು ಈ ಪ್ರದೇಶದಲ್ಲಿ ಗಣಿಗಾರಿಕೆ ಕೈಗೊಂಡು, ಅದಿರನ್ನು ಅರಣ್ಯ ಪ್ರದೇಶದ ಮೂಲಕ ಸಾಗಾಟ ಮಾಡುತ್ತಿದೆ ಎಂದು ಅರಣ್ಯ ಪಡೆಯ ಮುಖ್ಯಸ್ಥರು ವರದಿಯಲ್ಲಿ ವಿವರಿಸಿದ್ದಾರೆ.
ಆದರೆ, ಜಿಂದಾಲ್ ಒಡೆತನದ ಕಂಪನಿಯು ಹಕ್ಕುಸ್ವಾಮ್ಯ ಆದೇಶ ಪಡೆದ ದಿನದಿಂದ ಎರಡು ವರ್ಷದ ಅವಧಿಯೊಳಗೆ ನಿಗದಿತ ಅನುಮತಿಯನ್ನು ಪಡೆಯುವಲ್ಲಿ ವಿಫಲವಾಗಿತ್ತು. ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಬದಲಿ ಭೂಮಿಯನ್ನು ನೀಡದಿರುವುದು ಸಹ ಇದಕ್ಕೆ ಪ್ರಮುಖ ಕಾರಣವಾಗಿತ್ತು ಎಂಬುದು ಅರಣ್ಯ ಪಡೆಯ ಮುಖ್ಯಸ್ಥರು ನೀಡಿರುವ ಸ್ಪಷ್ಟೀಕರಣದಲ್ಲಿ ಕಂಡುಬಂದಿದೆ.
ಹಕ್ಕುಸ್ವಾಮ್ಯ ಆದೇಶದ ಅವಧಿಯು ಮುಕ್ತಾಯವಾದ ಕಾರಣ ಮತ್ತು ಸೂಕ್ತ ಅನುಮತಿಗಳನ್ನು ಪಡೆಯದಿರುವ ಕಾರಣ ಚಿತ್ರದುರ್ಗ ವಿಭಾಗದ ಡಿಸಿಎಫ್ ಅವರು 2022ರ ಜೂನ್ 30ರಂದು ಅರಣ್ಯ ಪ್ರದೇಶದಲ್ಲಿ ಅದಿರು ಸಾಗಾಟವನ್ನು ನಿಲ್ಲಿಸಬೇಕು ಎಂದು . (Stoppage Notice) ನೋಟಿಸ್ ನೀಡಿದ್ದರು ಎಂಬುದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಭಾರತ ಸರ್ಕಾರದ ಜೀವಿಶಾಸ್ತ್ರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2020ರ ಮಾರ್ಚ್ 31ರಂದು ಹೊರಡಿಸಿದ್ದ ಮಾರ್ಗಸೂಚಿಯ ನಿಬಂಧನೆ ’ಬಿ’ ಪ್ರಕಾರ ಅರಣ್ಯೇತರ ಬಳಕೆಗೆ ಅರಣ್ಯವನ್ನು ಬಳಸಲು ನಿಗದಿತ ಅನುಮತಿಗಳನ್ನು ಪಡೆಯದಿದ್ದರೆ, ಅನುಮತಿ ಪಡೆಯುವವರೆಗೆ ಅರಣ್ಯೇತರ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿತ್ತು.
ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ನೀಡಿದ್ದ ಪರಿಷ್ಕೃತ ಹಕ್ಕು ಸ್ವಾಮಯ್ಯ ಆದೇಶವನ್ನು ಮುಂದಿರಿಸಿ ಅದಿರು ಸಾಗಾಟ ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಎಂದು 2022 ರ ಜುಲೈ 12ರಂದು ಪಿಸಿಸಿಎಫ್‌ಗೆ ಜಿಂದಾಲ್ ಕಂಪನಿಗೆ ಪತ್ರ ಬರೆದಿತ್ತು.
ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜಿಂದಾಲ್ ಕಂಪನಿಯು 2022ರ ಜೂನ್ 3ರಂದೇ 03-06-2022 ರಂದೆ ಪರಿಷ್ಕೃತ ಹಕ್ಕುಸ್ವಾಮ್ಯ ಆದೇಶವನ್ನು ಪಡೆದುಕೊಂಡಿತ್ತು. ಅಲ್ಲದೆ ಚಿತ್ರದುರ್ಗದ ಡಿಸಿಎಫ್ ಅವರು ನಿಲುಗಡೆ ಆದೇಶ ನೀಡಿದ್ದ 12 ದಿನಗಳವರೆಗೆ, ಮತ್ತು ಪರಿಷ್ಕೃತ ಹಕ್ಕುಸ್ವಾಮ್ಯ ಆದೇಶ ಪಡೆದ ಸುಮಾರು 40 ದಿನಗಳವರೆಗೆ ಈ ಆದೇಶವನ್ನು ಸಲ್ಲಿಸಿ, ನಿಲುಗಡೆ ಅದೇಶ ಹೊರಡಿಸದಂತೆ ಮನವಿ ಮಾಡಿತ್ತು. ಇದು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
2022ರ ಜುಲೈ 12ರಂದು ಜಿಂದಾಲ್ ಕಂಪನಿಯು ನೀಡಿದ್ದ ಮನವಿ ಮತ್ತು ಭಾರತ ಸರ್ಕಾರವು 2021ರ ಜುಲೈ 7ರಂದು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪರಿಶೀಲಿಸಿ ಕಂಪನಿಯು ಮಾರ್ಗಸೂಚಿಗಳಲ್ಲಿ ತಿಳಿಸಿದಂತೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಬದಲಿ ಭೂಮಿಯನ್ನು ನೀಡದೆ ಇರುವುದರಿಂದ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಅರಣ್ಯ ಪಡೆಯ ಮುಖ್ಯಸ್ಥರು ತಿಳಿಸಿದ್ದರು ಎಂಬ ಮಾಹಿತಿಯು ವರದಿಯಲ್ಲಿದೆ.
ಈ ಬೆಳವಣಿಗೆಗಳ ನಡುವೆಯೇ ಜಿಂದಾಲ್ ಕಂಪನಿಯು ಭಾರತ ಸರ್ಕಾರದ ಗಣಿ ಸಚಿವಾಲಯದ ಕಾರ್ಯದರ್ಶಿ ಮತ್ತು ಪರಿಶೀಲನಾ ಪ್ರಾಧಿಕಾರದ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. (Revision Application 13/(04)/2022RC-1 of 2022). ಚಿತ್ರದುರ್ಗದ ಸಿಸಿಎಫ್ ಹೊರಡಿಸಿದ್ದ ನಿಲುಗಡೆ ನೋಟೀಸ್ ಅಕ್ರಮ ಎಂದು ಮತ್ತು ಅದು ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ರ ಸೆಕ್ಷನ್ 8 ಬಿ ಗೆ ವಿರುದ್ಧವಾಗಿದೆ ಎಂದು ಹೇಳಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಪರಿಶೀಲನಾ ಪ್ರಾಧಿಕಾರವು ಮೂರು ತಿಂಗಳವರೆಗೆ ಗಣಿಗಾರಿಕೆಗೆ ಅಡೆತಡೆ ಒಡ್ಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ಆದೇಶಿಸಿತ್ತು.
ಪರಿಶೀಲನಾ ಪ್ರಾಧಿಕಾರದ ಆದೇಶಕ್ಕೆ ಪ್ರತಿಯಾಗಿ ಪಿಸಿಸಿಎಫ್ ಕಛೇರಿಯು ರಾಜ್ಯ ಸರ್ಕಾರಕ್ಕೆ 2022ರ ಜುಲೈ 28ರಂದು ಪತ್ರ ಬರೆದಿತ್ತು. ‘ಪರಿಶೀಲಾನಾ ಪ್ರಾಧಿಕಾರಕ್ಕೆ ಈ ವಿಚಾರದಲ್ಲಿ ಯಾವುದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದಿಲ್ಲ. ಚಿತ್ರದುರ್ಗ ವಿಭಾಗದ ಡಿಸಿಎಫ್ ಅವರು ಗಣಿಗಾರಿಕೆಯನ್ನು ನಿಲ್ಲಿಸಲು ಮುಂದಾಗಬೇಕು ಎಂದು ನಿರ್ದೇಶನ ನೀಡಲಾಗಿತ್ತು.
ಡಿಸಿಎಫ್ ಅವರಿಗೆ ನಿರ್ದೇಶನ ನೀಡಿದ ನಾಲ್ಕು ದಿನಗಳ ಅವಧಿಯೊಳಗೆ ಜಿಂದಾಲ್ ಕಂಪನಿಯು 2022ರ ಆಗಸ್ಟ್ 1ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಒಂದೇ ದಿನದಲ್ಲಿ ವಿಚಾರಣೆಗೆ ತೆಗೆದುಕೊಂಡಿದ್ದ ನ್ಯಾಯಾಲಯವು, ಅಂದೇ ಜಿಂದಾಲ್ ಕಂಪನಿಯ ಗಣಿಗಾರಿಕೆಗೆ ಆಡೆತಡೆ ನೀಡಬಾರದು, ಪರಿಶೀಲನಾ ಪ್ರಾಧಿಕಾರದ ಆದೇಶವು ಡಿಸಿಎಫ್ ಅವರಿಗೆ ಅನ್ವಯವಾಗುತ್ತದೆ ಎಂದು ಆದೇಶ ಹೊರಡಿಸಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.
ನ್ಯಾಯಾಲಯದ ಆದೇಶದ ಅನ್ವಯ ಪತ್ರ ಮುಖೇನ ನಿರ್ದೇಶನ ನೀಡಿದ್ದ ಪಿಸಿಸಿಎಫ್ ಅವರು ಜಿಂದಾಲ್ ಕಂಪನಿಯ ಗಣೀಗಾರಿಕೆ ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಎಂದು ಚಿತ್ರದುರ್ಗ ವಿಭಾಗದ ಡಿಸಿಎಫ್ ಅವರಿಗೆ 2022ರ ಆಗಸ್ಟ್ 6ರಂದು ಸೂಚಿಸಿದ್ದರು. ಅಲ್ಲದೇ ಹಲವು ವಿಚಾರಣೆಗಳನ್ನು ನಡೆಸಿದ್ದ ಪರಿಶೀಲನಾ ಪ್ರಾಧಿಕಾರವು 2023ರ ಮಾರ್ಚ್ 31ರಂದು ಅಂತಿಮ ಅದೇಶ ಹೊರಡಿಸಿತ್ತಲ್ಲದೇ ಡಿಸಿಎಫ್ ಅವರ ನಿಲುಗಡೆ ಆದೇಶವನ್ನು ರದ್ದುಮಾಡಿತ್ತು.
ಅರ್ಜಿದಾರರಿಗೆ ಅನುಮತಿ ಮತ್ತು ಪರವಾನಿಗೆಗಳನ್ನು ಪಡೆಯಲು, ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಬದಲಿ ಭೂಮಿ ಒದಗಿಸಲು ಕನಿಷ್ಟ 6 ತಿಂಗಳ ಕಾಲಾವಕಾಶ ನೀಡಬೇಕೆಂದು ಮತ್ತು ಈ ಸಮಯದಲ್ಲಿ ಗಣಿಗಾರಿಕೆಗೆ ಅಡೆತಡೆ ಒಡ್ಡಬಾರದು ಎಂದು ನಿರ್ದೇಶಿಸಿತ್ತು.
ಹಾಗೆಯೇ ಒಂದು ವೇಳೆ ಈ ಅವಧಿಯಲ್ಲಿ ಅರ್ಜಿದಾರರು ಭೂಮಿ ಒದಗಿಸಲು ವಿಫಲರಾದರೆ ರಾಜ್ಯ ಸರ್ಕಾರವು ಗಣಿಗಾರಿಕೆ ಮುಂದುವರೆಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆದೇಶಿಸಿತ್ತು. ಆದರಂತೆ, ಈ ವಿಚಾರವನ್ನು ಚಿತ್ರದುರ್ಗ ವಿಭಾಗದ ಡಿಸಿಎಫ್ ಅವರಿಗೆ 2023ರ ಏಪ್ರಿಲ್ 1ರಂದು ಪತ್ರವನ್ನೂ ಬರೆದಿತ್ತು. ಜಿಂದಾಲ್ ಕಂಪನಿಯ 2023ರ ಸೆಪ್ಟಂಬರ್ 30ರವರೆಗೆ ಗಣಿಗಾರಿಕೆ ನಡೆಸಲು ಅಡೆತಡೆ ನೀಡಬಾರದು ಎಂದು ಸೂಚಿಸಿತ್ತು.
ಮತ್ತೊಂದು ವಿಶೇಷವೆಂದರೆ ರಾಜ್ಯ ಸರ್ಕಾರವು ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದಾಗಲಿ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿರುವುದು ಕಂಡು ಬಂದಿಲ್ಲ. ಮತ್ತು ಪರಿಶೀಲನಾ ಪ್ರಾಧಿಕಾರವು ತನ್ನ ವ್ಯಾಪ್ತಿಯನ್ನು ಮೀರಿದೆ ಎಂದು ಅರಣ್ಯ ಇಲಾಖೆಗೆ ಸ್ಪಷ್ಟವಾಗಿ ತಿಳಿದಿದ್ದರೂ ಮೇಲ್ಮನವಿಯನ್ನು ಏಕೆ ಸಲ್ಲಿಸಿಲ್ಲ ಎಂಬುದೂ ಸಹ ಹಲವು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.