ಸಬ್ಸಿಡಿ; ಕೃಷಿ, ಹಾಲು, ಸ.ಕಲ್ಯಾಣಕ್ಕೆ 1,425 ಕೋಟಿ ಕಡಿತ , ಮಹಿಳಾ, ಆಹಾರ, ಇಂಧನಕ್ಕೆ 15,566 ಕೋಟಿ ಹೆಚ್ಚಳ

ಬೆಂಗಳೂರು; ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ತಿಣುಕಾಡುತ್ತಿರುವ ಕಾಂಗ್ರೆಸ್‌ ಸರ್ಕಾರವು ಇದೀಗ ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ವಲಯಗಳಿಗೆ ನೀಡುತ್ತಿದ್ದ ಸಹಾಯಧನವನ್ನೂ ಕಡಿತಗೊಳಿಸಿದೆ. ಅಲ್ಲದೇ ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಇಂಧನ ವಲಯಕ್ಕೆ ಹೆಚ್ಚಿನ ಸಹಾಯಧನವನ್ನು ಹಂಚಿಕೆ ಮಾಡಿದೆ.

 

ಐದು ಗ್ಯಾರಂಟಿಗಳಿಗೆ ಕಾಂಗ್ರೆಸ್‌ ಸರ್ಕಾರವು ಹಣಕಾಸನ್ನು ಹೇಗೆ ಹೊಂದಿಸಲಿದೆ ಎಂಬ ಕುತೂಹಲಗಳನ್ನು ಹುಟ್ಟಿಸಿದ್ದ ಈ ಬಜೆಟ್‌, ಹಿಂದಿನ ಸರ್ಕಾರಗಳು ಘೋಷಿಸಿದ್ದ ಜನಪ್ರಿಯ ಕಾರ್ಯಕ್ರಮಗಳನ್ನೂ ಕೈಬಿಟ್ಟಿದೆ.
ಕೃಷಿ, ತೋಟಗಾರಿಕೆ, ಹಾಲು, ಅರಣ್ಯ, ಸಹಕಾರ, ಸಮಾಜ ಕಲ್ಯಾಣ, ವಾರ್ತೆ, ಪ್ರವಾಸೋದ್ಯಮ ಮತ್ತು ವಸತಿ ವಲಯಗಳಿಗೆ ಒಟ್ಟಾರೆ 1,425.13 ಕೋಟಿ ರು. ಸಹಾಯಧನ ಕಡಿತಗೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ, ಇಂಧನ ವಲಯಕ್ಕೆ 15,566 ಕೋಟಿ ರು. ಹೆಚ್ಚಿನ ಸಹಾಯ ಧನ ಘೋಷಿಸಲಾಗಿದೆ.

 

2022-23ನೇ ಸಾಲಿನಲ್ಲಿ ಕೃಷಿ ತೋಟಗಾರಿಕೆಗೆ 3,498.99 ಕೋಟಿ ರು. ಹಂಚಿಕೆಯಾಗಿತ್ತು. 2023-24ರಲ್ಲಿ 2,607.00 ಕೋಟಿ ರು. ಪ್ರಸ್ತಾವಿಸಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಕೃಷಿ ಮತ್ತು ತೋಟಗಾರಿಕೆ ವಲಯಕ್ಕೆ 891.99 ಕೋಟಿ ರು. ಕಡಿತಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಹಾಲಿಗೆ ಹಿಂದಿನ ಸಾಲಿನಲ್ಲಿ 1,207.00 ಕೋಟಿ ರು. ಇದ್ದರೇ 2023-24ರಲ್ಲಿ 1,180.00 ಕೋಟಿ ರು. ನೀಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ 26.3 ಕೋಟಿ ರು ಕಡಿತಗೊಂಡಿದೆ. ಅರಣ್ಯಕ್ಕೆ ಕಳೆದ ಬಾರಿ 3.00 ಕೋಟಿ ರು. ಸಹಾಯಧನ ನೀಡಿದ್ದರೇ ಈ ಬಾರಿ 2 ಕೋಟಿ ನೀಡಿ 1 ಕೋಟಿ ಕಡಿತಗೊಳಿಸಿದೆ.

 

ಹಾಗೆಯೇ ಸಹಕಾರ ವಲಯಕ್ಕೆ ಕಳೆದ ಬಾರಿ 2,307.55 ಕೋಟಿ ರು. ನೀಡಿದ್ದು, ಈ ಬಾರಿ 1,949.72 ಕೋಟಿ ರು. ನೀಡಿರುವ ಸಿದ್ದರಾಮಯ್ಯ ಅವರು ಸಹಕಾರ ವಲಯಕ್ಕೆ 357.83 ಕೋಟಿ ರು.ಗಳನ್ನು ಕಡಿತಗೊಳಿಸಿದೆ. ಅದೇ ರೀತಿ ಸಮಾಜ ಕಲ್ಯಾಣಕ್ಕೆ ಕಳೆದ ಸಾಲಿನಲ್ಲಿ 312.50 ಕೋಟಿ ರು. ಸಹಾಯಧನ ನೀಡಿದ್ದರೇ ಈ ಬಾರಿ 182.00 ಕೋಟಿ ರು. ನೀಡಿದೆ. ಕಳೆದ ಸಾಲಿಗೆ ಹೋಲಿಸಿದರೆ 130.00 ಕೋಟಿ ಕಡಿತಗೊಳಿಸಿದಂತಾಗಿದೆ.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳೆದ ಬಾರಿ ಕಳೆದ ಬಾರಿ 187.04 ಕೋಟಿ ರು. ನೀಡಿದ್ದರೇ ಈ ಬಾರಿ 232.00 ಕೋಟಿ ರು. ನೀಡಿದೆ. ಕಳೆದ ಸಾಲಿಗೆ ಹೋಲಿಸಿದರೆ 45 ಕೋಟಿ ರು. ಹೆಚ್ಚಿಗೆ ನೀಡಿರುವುದು ಕಂಡು ಬಂದಿದೆ. ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 2,810.00 ಕೋಟಿ ರು. ನೀಡಿದ್ದರೇ ಈ ಬಾರಿ 10,275 ಕೋಟಿ ರು. ಸಹಾಯಧನ ಒದಗಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ 7,465 ಕೋಟಿ ರು. ಹೆಚ್ಚಿಗೆ ನೀಡಿದೆ. ಇಂಧನ ವಲಯಕ್ಕೆ ಕಳೆದ ಬಾರಿ 14,012.61 ಕೋಟಿ ರು. ನೀಡಿದ್ದರೇ ಈ ಬಾರಿ 22,158.00 ಕೋಟಿ ರು. ನೀಡುವ ಮೂಲಕ ಇಂಧನಕ್ಕೆ 8,056 ಕೋಟಿ ರು. ಹೆಚ್ಚಿನ ಸಹಾಯಧನ ನೀಡಿದೆ.

 

ರೈತ ವಿದ್ಯಾನಿಧಿ ಯೋಜನೆ (ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ), ವಿವೇಕ ಶಾಲೆ ಅಭಿವೃದ್ಧಿ ಯೋಜನೆ, ಹೆಣ್ಣುಮಕ್ಕಳ ಭಾಗ್ಯಲಕ್ಷ್ಮೀ ಬಾಂಡ್‌ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆ, ಎಪಿಎಂಸಿ ಕಾಯ್ದೆ ರದ್ದು, ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಮ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ (ಮಹಿಳೆಯರ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ ಸಹಾಯಧನ)ಮ ಭೂಸಿರಿ ಯೋಜನೆ (ರೈತರಿಗೆ 10 ಸಾವಿರ ರೂ. ಸಹಾಯಧನ), ಶ್ರಮಶಕ್ತಿ ಯೋಜನೆ (ಕೃಷಿಕ ಮಹಿಳೆಯರಿಗೆ ಮಾಸಿಕ 500 ರೂ.)ಮ ಅಗ್ನಿವೀರ್‌ ಯೋಜನೆಗೆ ಸೇರುವ ಎಸ್‌ಸಿ / ಎಸ್‌ಟಿ ಯುವಕರಿಗೆ ತರಬೇತಿ ನೀಡುವ ಯೋಜನೆ, ಮಕ್ಕಳ‌ ಬಸ್ – ಉಚಿತ ಬಸ್ ಯೋಜನೆ, ಅಂತರ್ಜಲ ಹೆಚ್ಚಿಸುವ ಜಲನಿಧಿ ಯೋಜನೆಯನ್ನು ಕೈಬಿಟ್ಟಿದೆ.

 

ಸರ್ಕಾರ ಶಕ್ತಿ ಯೋಜನೆಗೆ ವಾರ್ಷಿಕ 4000 ಕೋಟಿ ರೂ., ಗೃಹ ಜ್ಯೋತಿ ಯೋಜನೆಗೆ 13,900 ಕೋಟಿ ರೂ. ಸೇರಿ ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಆದಾಯ ಕ್ರೋಢಿಕರಿಸಲು ಹೆಚ್ಚಿನ ಆದ್ಯತೆ ನೀಡಿದೆ.

 

ಮೂರು ಪ್ರಮುಖ ಇಲಾಖೆಯಿಂದ ರಾಜಸ್ವ ಸಂಗ್ರಹದ ಗುರಿ ಹೊಂದಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ ರೂ., ಅಬಕಾರಿ ಇಲಾಖೆಯಿಂದ ರಾಜಸ್ವ 36,000 ಕೋಟಿ ರೂ. ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 25,000 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಇನ್ನು, ಹೊಸ ವಾಹನ ನೋಂದಣಿಯಿಂದ 11,500 ಕೋಟಿ ರೂ., ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 9 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿದೆ.

the fil favicon

SUPPORT THE FILE

Latest News

Related Posts