ರೋಗಪತ್ತೆ ನಿರ್ಣಯ ಉಪಕರಣ ಖರೀದಿಯಲ್ಲಿ ಅಕ್ರಮ ಆರೋಪವಿದ್ದರೂ ಹೆಚ್ಚುವರಿ 42 ಕೋಟಿ ಬಿಡುಗಡೆ?

ಬೆಂಗಳೂರು; ರಾಷ್ಟೀಯ ಅರೋಗ್ಯ ಅಭಿಯಾನದಡಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮೋದನೆಗಿಂತಲೂ ಹೆಚ್ಚಿನ ಮೊತ್ತದಲ್ಲಿ ಉಪಕರಣಗಳ ಖರೀದಿ ಪ್ರಕ್ರಿಯೆ ಮತ್ತು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳೇ ಈಗಿನ ಕಾಂಗ್ರೆಸ್‌  ಸರ್ಕಾರದಲ್ಲೂ ಮುಂದುವರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕೋವಿಡ್‌  ಮೊದಲ ಮತ್ತು ಎರಡನೇ ಅಲೆ ವೇಳೆಯಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜುಗಳ ನಿಗಮ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆಸಿದ್ದ  ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಸದನದಲ್ಲಿ ಒತ್ತಾಯಿಸಿದ್ದ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿಯಾಗಿದ್ದರೂ ಹಿಂದಿನ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳೇ ಮುಂದುವರೆದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಡಾ ಕೆ ಸುಧಾಕರ್‍‌ ಅವರ ಅವಧಿಯಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಹುತೇಕ ಅಧಿಕಾರಿಗಳನ್ನೇ ಹಾಲಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮುಂದುವರೆಸಿರುವುದು ಸಂಶಯಗಳಿಗೆ ಕಾರಣವಾಗಿದೆ.

 

ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಬೇಕಿದ್ದ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸಂಬಂಧಿತ ಕಂಪನಿಗೆ ಹಣ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.

 

ಪ್ರಕರಣದ ಹಿನ್ನೆಲೆ

 

ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಅಶ್ವಥ್ ನಾರಾಯಣ್ ಅವರ ಅಧ್ಯಕ್ಷತೆಯ ಕಾರ್ಯಪಡೆಯು 35,39,35,100 ರು. ವೆಚ್ಚದಲ್ಲಿ Fully Automated 3 Part hematology analyser IND – 720, 13,28,25,000 ರು. ವೆಚ್ಚದಲ್ಲಿ Fully Automated 5 part hematology analyser – IND – 721, 16,92,90,000 ಕೋಟಿ ರು. ವೆಚ್ಚದಲ್ಲಿ Fully Automated Bio-chimistry Analyser ಖರೀದಿಸಲು ನಿರ್ಣಯ ಕೈಗೊಂಡಿತ್ತು.

 

 

ರಾಷ್ಟೀಯ ಅರೋಗ್ಯ ಅಭಿಯಾನದಡಿಯಲ್ಲಿ ಎನ್‌ಎಫ್‌ಡಿಎಸ್‌ ಕಾರ್ಯಕ್ರಮದ ಭಾಗವಾಗಿ ಕೋವಿಡ್‌ ಕಾರ್ಯಪಡೆ ಕೈಗೊಂಡಿದ್ದ ನಿರ್ಣಯದಂತೆ ರಾಜ್ಯದ ಕೋವಿಡ್‌ ಆಸ್ಪತ್ರೆಗಳಿಗೆ ರೋಗ ಪತ್ತೆ ನಿರ್ಣಯಕ್ಕಾಗಿ ಹಲವು ಉಪಕರಣಗಳನ್ನು ಖರೀದಿಸಲಾಗಿತ್ತು. ಇದಕ್ಕಾಗಿ ಕೋವಿಡ್‌ ಕಾರ್ಯಪಡೆಯು 33.69 ಕೋಟಿ ರು. ಅಂದಾಜು ವೆಚ್ಚವನ್ನು ಅನುಮೋದಿಸಿತ್ತು. ಆದರೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು, ಕಾರ್ಯಪಡೆಯು ಅನುಮೋದಿಸಿದ್ದ ಮೊತ್ತಕ್ಕೆ ಎದುರಾಗಿ 75 ಕೋಟಿ ರು. ವೆಚ್ಚದಲ್ಲಿ ಉಪಕರಣಗಳನ್ನು ಖರೀದಿ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಂದಾಜು 42 ಕೋಟಿಗೂ ಹೆಚ್ಚಿನ ದುರುಪಯೋಗವಾಗಿದೆ ಎಂದು ತಿಳಿದು ಬಂದಿದೆ.

 

ವಿಶೇಷವೆಂದರೇ ಈ ಸಂಬಂಧ ಖರೀದಿ ಆದೇಶವನ್ನು ಘಟನೋತ್ತರ ಅನುಮೋದನೆಯನ್ನು ಕಾಯ್ದಿರಿಸಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಮೋದನೆಗೆ ಕಡತ ಸಲ್ಲಿಸಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿನ ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಕಡತಕ್ಕೆ ಯಡಿಯೂರಪ್ಪ ಅವರು ಅನುಮೋದಿಸಿದ್ದರು. ಆ ನಂತರ ಇದೇ ಕಡತಕ್ಕೆ ಹಿಂದಿನ ಸಚಿವ ಡಾ ಕೆ ಸುಧಾಕರ್‍‌ ಕೂಡ ಅನುಮೋದಿಸಿದ್ದರು ಎಂದು ಗೊತ್ತಾಗಿದೆ.

 

ಅಚ್ಚರಿಯ ಸಂಗತಿ ಎಂದರೇ ಈ ಎಲ್ಲಾ ಅನುಮೋದನೆಯನ್ನು 2020ರ ಮೇ 1ರಂದು ಕಾರ್ಮಿಕ ದಿನಾಚರಣೆಯ ಸರ್ಕಾರಿ ರಜೆ ದಿನದಂದೇ ಪಡೆದಿದ್ದರೂ ಇದುವರೆಗೂ ಸಚಿವ ಸಂಪುಟದ ಅನುಮೋದನೆಯನ್ನೇ ಪಡೆದಿಲ್ಲ. ಅನುಮೋದನೆಗಿಂತಲೂ ಹೆಚ್ಚುವರಿ ಹಣ ಖರ್ಚು ಮಾಡಿರುವ ಎನ್‌ಎಫ್‌ಡಿಎಸ್‌, ಏಕ್‌ ಬಿಡ್‌ ಆಧಾರದಲ್ಲಿಯೇ ಉಪಕರಣಗಳನ್ನು ಖರೀದಿ ಮಾಡಿ ಅಕ್ರಮವೆಸಗಲಾಗಿದೆ ಎಂದು ತಿಳಿದು ಬಂದಿದೆ.

 

IND-722, IND-723 ಉಪಕರಣಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗಾಗಲೇ ಕೋವಿಡ್‌ ಒಂದನೇ ಆಲೆ ಮುಗಿದು ಎರಡನೇ ಅಲೆ ಕಾಲಿಟ್ಟಿತ್ತು. ಆದರೂ ಎನ್‌ಎಫ್‌ಡಿಎಸ್‌ 33.69 ಕೋಟಿ ಮೊತ್ತದಲ್ಲಿ ಉಪಕರಣಗಳನ್ನು ಖರೀದಿಸಿತ್ತು. ಈ ಉಪಕರಣಗಳನ್ನೂ ಅನುಮೋದನೆಗಿಂತ ಹೆಚ್ಚುವರಿ ಹಣ ಕೊಟ್ಟು ಖರೀದಿಸಲಾಗಿದೆ ಎಂದು ಗೊತ್ತಾಗಿದೆ. ಈ ಉಪಕರಣಗಳ ಖರೀದಿಗೆ ಅನುಮೋದನೆ ಇದ್ದಿದ್ದು ₹ 33.69 ಕೋಟಿಗಳಿಗೆ ಮಾತ್ರ. ಆದರೆ 65.60 ಕೋಟಿ ರು. ವೆಚ್ಚದಲ್ಲಿ ಖರೀದಿಸಲಾಗಿದೆ. ಹೆಚ್ಚುವರಿ ಹಣವನ್ನು ಉಪಕರಣಗಳ ಪರಿಕರ ಮತ್ತು ರಾಸಾಯನಿಕ (consumables & reagents ) ಎಂದು ಲೆಕ್ಕ ತೋರಿಸಲಾಗಿದೆ ಎಂದು ಗೊತ್ತಾಗಿದೆ.

 

IND – 722 ಮತ್ತು IND – 723 ಟೆಂಡರ್‍‌ ಪ್ರಕ್ರಿಯೆಯಲ್ಲಿ ಸ್ವಯಂ ಉಸ್ತುವಾರಿ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂದಿನ ಸಚಿವರ ಆಪ್ತ ಅಧಿಕಾರಿಯೊಬ್ಬರು ವಿವಾದದಲ್ಲಿ ಸಿಲುಕಿದ್ದರು. ಅಪೀಲು ಪ್ರಕ್ರಿಯೆ ಮತ್ತು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಆದೇಶವಿದೆ ಎಂದು ಸಾರ್ವತ್ರಿಕ ಚುನಾವಣೆ ಘೋಷಣೆಗೆ ಮುನ್ನ ಖರೀದಿ ಆದೇಶ ನೀಡಿದ್ದರು.

SUPPORT THE FILE

Latest News

Related Posts