ಗ್ಯಾರಂಟಿ ಬೆನ್ನಲ್ಲೇ ಅಬಕಾರಿ ರಾಜಸ್ವ 35,000 ಕೋಟಿಗೂ ಅಧಿಕ ಗುರಿ ನಿಗದಿ?; ಮದ್ಯ ಮಾರಾಟದಲ್ಲಿ ಹೆಚ್ಚಿನ ನಿರೀಕ್ಷೆ

ಬೆಂಗಳೂರು; ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಮತ್ತು ಶಕ್ತಿ ಉಚಿತ ಪ್ರಯಾಣ ಯೋಜನೆಯ ಗ್ಯಾರಂಟಿಗಳ ಅನುಷ್ಠಾನ ಮತ್ತು ಅದರಿಂದ ಎದುರಾಗಬಹುದಾದ ಆರ್ಥಿಕ ಪರಿಣಾಮಗಳನ್ನು ಸರಿದೂಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಭೆ ನಡೆಸುತ್ತಿರುವ ಬೆನ್ನಲ್ಲೇ ಅಬಕಾರಿ ಇಲಾಖೆಯು ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಮೂಲಕ ಹಿಂದಿನ ಬಿಜೆಪಿ ಸರ್ಕಾರವು ನಿಗದಿಪಡಿಸಿದ್ದ ಗುರಿಗಿಂತಲೂ ಹೆಚ್ಚಿನ ಗುರಿ ವಿಧಿಸಲು ಚಿಂತಿಸಿದೆ.

 

ಈ ಸಂಬಂಧ 2023ರ ಜೂನ್‌ 9ರಂದು ಅಬಕಾರಿ ಸಚಿವ ಆರ್‍‌ ಬಿ ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ. ಮುಖ್ಯವಾಗಿ 2023-24ನೇ ಆರ್ಥಿಕ ಸಾಲಿಗೆ 35,000 ಕೋಟಿ ರು.ಗಳ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿರೀಕ್ಷೆಗಳ ಕುರಿತೂ ಗಂಭೀರವಾಗಿ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ.

 

ವಿಶೇಷವೆಂದರೆ  ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಕೊನೆಯ ಬಜೆಟ್‌ನಲ್ಲಿಯೂ 35,000 ಕೋಟಿ ರು. ರಾಜಸ್ವವನ್ನು ಸಂಗ್ರಹಿಸಲಾಗುತ್ತದೆ ಎಂದು ಘೋಷಿಸಿದ್ದರು. ಈ ಘೋಷಣೆಯಾಗಿ 3 ತಿಂಗಳ  ನಂತರ ನೂತನ ಸಚಿವ ಆರ್‍‌ ಬಿ ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ 35,000 ಕೋಟಿ ಗೂ ಹೆಚ್ಚಿನ ಗುರಿ ನಿಗದಿಪಡಿಸಲಾಗಿದೆ ಎಂದು ಗೊತ್ತಾಗಿದೆ.

 

2022-23ನೇ ಆರ್ಥಿಕ ಸಾಲಿನ ಐಎಂಎಲ್‌ ಹಾಗೂ ಬಿಯರ್‍‌ ಮಾರಾಟದ ತುಲನಾತ್ಮಕ ವಿಶ್ಲೇಷಣೆ, 2023-24ನೇ ಆರ್ಥಿಕ ಸಾಲಿನ 35,000 ಕೋಟಿ ರು.ಗಳ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮದ್ಯ ಮಾರಾಟದ ನಿರೀಕ್ಷೆಗಳು, 2023-24ನೇ ಆರ್ಥಿಕ ಸಾಲಿನ 2023ರ ಏಪ್ರಿಲ್‌ 1ರಿಂದ ಮೇ 31ರವರೆಗಿನ ಐಎಂಎಲ್‌ ಹಾಗೂ ಬಿಯರ್‍‌ ಮಾರಾಟದ ತುಲನಾತ್ಮಕ ವಿಶ್ಲೇಷಣೆ ಕುರಿತೂ ಚರ್ಚೆ ನಡೆದಿರುವುದು ಸಭೆಯ ಕಾರ್ಯಸೂಚಿಯಿಂದ ತಿಳಿದು ಬಂದಿದೆ. ಸಭೆಯ ಕಾರ್ಯಸೂಚಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅದೇ ರೀತಿ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಅವಧಿಯಲ್ಲಿ 6 ಮಾನದಂಡಗಳ ಆಧಾರದ ಮೇಲೆ ಜಾರಿ ಮತ್ತು ತನಿಖಾ ಕಾರ್ಯಕ್ರಮವನ್ನು ವಿಧಾನಸಭೆ ಕ್ಷೇತ್ರವಾರು, ಜಿಲ್ಲಾವಾರು, ವಿಭಾಗವಾರು ಈ ಕಚೇರಿಯು ವಿಶ್ಲೇಷಿಸಿ ಶ್ರೇಯಾಂಕ ನೀಡಿ ಅತ್ಯುತ್ತಮ ಜಿಲ್ಲೆ, ವಿಭಾಗ, ಕ್ಷೇತ್ರಗಳನ್ನು ಗುರುತಿಸಿ ಪ್ರಶಂಸಾ ಪತ್ರ ನೀಡುವುದು ಮತ್ತು ಸಿಎಲ್‌ 11 ಸಿ ಸನ್ನದುಗಳ ಮಂಜೂರಾತಿಯಲ್ಲಿ ಜಿಲ್ಲೆಗಳಲ್ಲಿ ಪೂರ್ವಾನುಮತಿ ಬಾಕಿ ಇರುವ ಬಗ್ಗೆ (ಮೇ 2023ರ ಅಂತ್ಯಕ್ಕೆ)ಯೂ ಚರ್ಚಿಸಲಾಗಿದೆ.

 

2022-23ನೇ ಸಾಲಿನ ಆಯವ್ಯಯದಲ್ಲಿ ಅಬಕಾರಿ ಇಲಾಖೆಗೆ ಒಟ್ಟು 29,000 ಕೋಟಿ ರು.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿತ್ತು. ಅಬಕಾರಿ ಇಲಾಖೆಯು 2022-23ನೇ ಸಾಲಿನಲ್ಲಿ (ಏಪ್ರಿಲ್‌ 2022ರಿಂದ ಜನವರಿ 2023ರ ಅಂತ್ಯಕ್ಕೆ) ಎಲ್ಲಾ ಮೂಲಗಳಿಂದ ಒಟ್ಟು 24, 724.27 ಕೋಟಿಗಳಷ್ಟು ಅಬಕಾರಿ ರಾಜಸ್ವವನ್ನು ಸಂಗ್ರಹಿಸಿತ್ತು.

 

ಬೆಂಗಳೂರು ಉತ್ತರ ಮತ್ತು ದಕ್ಷಿಣ ವಿಭಾಗದಲ್ಲಿ ಒಟ್ಟು 10,615.32 ಕೋಟಿ ರು.ಗಳನ್ನು ಸಂಗ್ರಹಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,429.25 ಕೋಟಿ, ಬೆಂಗಳೂರು ಗ್ರಾಮಾಂತರದಲ್ಲಿ 3,809.91 ಕೋಟಿ ರು., ಚಿಕ್ಕಬಳ್ಳಾಪುರಲ್ಲಿ 589.54 ಕೋಟಿ, ಕೋಲಾರದಲ್ಲಿ 387.32 ಕೋಟಿ, ರಾಮನಗರದಲ್ಲಿ 1,021.39 ಕೋಟಿ, ತುಮಕೂರು ಜಿಲ್ಲೆಯಲ್ಲಿ 377.91 ಕೋಟಿ ರು. ಸಂಗ್ರಹಿಸಿದೆ.

 

ಬೆಳಗಾವಿ ವಿಭಾಗದಲ್ಲಿ ಒಟಟು 5,005.75 ಕೋಟಿ ರು. ಸಂಗ್ರಹಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 15.91 ಕೋಟಿ, ಬೆಳಗಾವಿ ಜಿಲ್ಲೆಯಲ್ಲಿ 3,464.07 ಕೋಟಿ, ವಿಜಯಪುರದಲ್ಲಿ 17.84 ಕೋಟಿ, ಧಾರವಾಡದಲ್ಲಿ 1,499.14 ಕೋಟಿ, ಹಾವೇರಿಯಲ್ಲಿ 8.78 ಕೋಟಿ ರು.ವಸೂಲಾಗಿದೆ.

 

ಕಲ್ಬುರ್ಗಿ ವಿಭಾಗದಲ್ಲಿ ಒಟ್ಟು 1,751.02 ಕೋಟಿ ರು. ಸಂಗ್ರಹವಾಗಿದೆ. ಬೀದರ್‍‌ನಲ್ಲಿ 9.42 ಕೋಟಿ, ಕಲ್ಬುರ್ಗಿಯಲ್ಲಿ 1,723.10 ಕೋಟಿ, ರಾಯಚೂರು ಜಿಲ್ಲೆಯಲ್ಲಿ 12.27 ಕೋಟಿ, ಯಾದಗಿರಿಯಲ್ಲಿ 6.23 ಕೋಟಿ ರು ಸಂಗ್ರಹವಾಗಿದೆ. ಹೊಸಪೇಟೆ ವಿಭಾಗದಲ್ಲಿ 1,895.93 ಕೋಟಿ ರು. ವಸೂಲಾಗಿದೆ. ಬಳ್ಳಾರಿಯಲ್ಲಿ 326.85 ಕೋಟಿ, ವಿಜಯನಗರದಲ್ಲಿ 999.01 ಕೋಟಿ, ಚಿತ್ರದುರ್ಗದಲ್ಲಿ 13.25 ಕೋಟಿ, ದಾವಣಗೆರೆಯಲ್ಲಿ 15.34 ಕೋಟಿ, ದಗ್‌ನಲ್ಲಿ 7.38 ಕೋಟಿ, ಕೊಪ್ಪಳದಲ್ಲಿ 534.10 ಕೋಟಿ ರು ಸಂಗ್ರಹವಾಗಿದೆ.

 

ಮಂಗಳೂರು ವಿಭಾಗದಲ್ಲಿ ಒಟ್ಟು 568.55 ಕೋಟಿ ರು. ವಸೂಲಾಗಿದೆ. ದಕ್ಷಿಣ ಕನ್ನಡದಲ್ಲಿ 316.01 ಕೋಟಿ, ಕೊಡಗು ಜಿಲ್ಲೆಯಲ್ಲಿ 11.26 ಕೋಟಿ, ಶಿವಮೊಗ್ಗದಲ್ಲಿ 15.20 ಕೋಟಿ, ಉಡುಪಿಯಲ್ಲಿ 217.99 ಕೋಟಿ, ಉತ್ತರ ಕನ್ನಡದಲ್ಲಿ 8.09 ಕೋಟಿ ರು. ಸಂಗ್ರಹವಾಗಿದೆ. ಮೈಸೂರು ವಿಭಾಗದ ಚಾಮರಾಜನಗರ ಜಿಲ್ಲೆಯಲ್ಲಿ 6.91 ಕೋಟಿ ರು., ಚಿಕ್ಕಮಗಳೂರು ಜಿಲ್ಲೆಯಲ್ಲಿ 11.91 ಕೋಟಿ, ಹಾಸನದಲ್ಲಿ 1,844.85 ಕೋಟಿ, ಮಂಡ್ಯದಲ್ಲಿ 14.72 ಕೋಟಿ ಮೈಸೂರು ಜಿಲ್ಲೆಯಲ್ಲಿ 3,009 ಕೋಟಿ ರು. ಸೇರಿ ಒಟ್ಟಾರೆ 4,887.69 ಕೋಟಿ ರು. ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

 

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಬಕಾರಿ ಇಲಾಖೆಗೆ ಗುರಿ ನಿಗದಿಪಡಿಸಿದ್ದರು. ಮುಂದಿನ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 35 ಸಾವಿರ ಕೋಟಿ ರೂಪಾಯಿ ಸಂಗ್ರಹ ಮಾಡಲೇಬೇಕು ಎಂದು ಅಬಕಾರಿ ಇಲಾಖೆಗೆ ಗುರಿ ನೀಡಿದ್ದರು.

 

2020-21ನೇ ಸಾಲಿಗೆ ಹೋಲಿಸಿದರೆ ಮದ್ಯದ ಆದಾಯದಲ್ಲಿ ಶೇ.12.62 ಹೆಚ್ಚಳವಾಗಿತ್ತು. 2021ರ ಏಪ್ರಿಲ್‌ನಿಂದ 22ರ ಮಾರ್ಚ್‌ವರೆಗೆ 660 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 268 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2021ರ ಏಪ್ರಿಲ್‌ನಲ್ಲಿ 2,202 ಕೋಟಿ ರೂ., ಮೇನಲ್ಲಿ 1,474 ಕೋಟಿ ರೂ., ಜೂನ್‌ನಲ್ಲಿ  2,231 ಕೋಟಿ ರೂ, ಜುಲೈನಲ್ಲಿ 2,223 ಕೋಟಿ ರೂ, ಆಗಸ್ಟ್‌ನಲ್ಲಿ 2,094 ಕೋಟಿ ರೂ., ಸೆಪ್ಟಂಬರ್‌ನಲ್ಲಿ 2,172 ಕೋಟಿ ರೂ., ಅಕ್ಟೋಬರ್‌ನಲ್ಲಿ 2,219 ಕೋಟಿ ರೂ., ನವೆಂಬರ್‌ನಲ್ಲಿ 2,221 ಕೋಟಿ ರೂ., ಡಿಸೆಂಬರ್‌ನಲ್ಲಿ 2,598 ಕೋಟಿ ರೂ., ಜನವರಿಯಲ್ಲಿ 2,116 ಕೋಟಿ ರೂ., ಫೆಬ್ರವರಿಯಲ್ಲಿ 2,175 ಕೋಟಿ ರೂ. ಹಾಗೂ ಮಾರ್ಚ್‌ನಲ್ಲಿ 2,552 ಕೋಟಿ ರೂ. ಆದಾಯ ಮದ್ಯ ವಹಿವಾಟುಗಳಿಂದ ಸಂಗ್ರಹವಾಗಿತ್ತು ಎಂದು ಗೊತ್ತಾಗಿದೆ.

SUPPORT THE FILE

Latest News

Related Posts