ಅವ್ಯವಹಾರ; 6 ವರ್ಷದಲ್ಲಿ 28.35 ಕೋಟಿ, 2 ವರ್ಷದಲ್ಲಿ 14.75 ಕೋಟಿ ದುರುಪಯೋಗ

photo credit; govindkarjola official twitter page
ಬೆಂಗಳೂರು; ಕರ್ನಾಟಕ ನೀರಾವರಿ ನಿಗಮದ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲೇ ಕಳೆದ 2 ವರ್ಷಗಳಲ್ಲಿ 14.75 ಕೋಟಿ ರು. ದುರುಪಯೋಗವಾಗಿರುವುದು ಇದೀಗ ಬಹಿರಂಗವಾಗಿದೆ.

 

ನಿಗಮದ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಕಳೆದ 6 ವರ್ಷಗಳಲ್ಲಿ ದುರುಪಯೋಗವಾಗಿದೆ ಎಂದು ಹೇಳಿರುವ ಒಟ್ಟಾರೆಯಾಗಿ 28.35 ಕೋಟಿ ರು. ಪೈಕಿ ಪ್ರಾತಮಿಕ ತನಿಖಾ ವರದಿಯಲ್ಲಿ 16.61 ಕೋಟಿ ರು. ಮಾತ್ರ ಅವ್ಯವಹಾರವಾಗಿದೆ ಎಂದು ಗುರುತಿಸಿದೆ. ಈ ಸಂಬಂಧ ‘ದಿ ಫೈಲ್‌’ಗೆ ಮಹತ್ವದ ದಾಖಲೆ ಲಭ್ಯವಾಗಿದೆ.

 

ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಅನುಮೋದನೆಯಿಲ್ಲದೆಯೇ 702 ಕೋಟಿ ರು. ಹೆಚ್ಚುವರಿಯಾಗಿ ಖರ್ಚು ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಚಿವ ಗೋವಿಂದ ಕಾರಜೋಳ ಅವರು ಆಡಳಿತಾತ್ಮಕ ಅನುಮೋದನೆ ನೀಡಿರುವ ಬೆನ್ನಲ್ಲೇ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿಯೇ ಅವ್ಯವಹಾರ ಆಗಿರುವ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

 

‘ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಒಟ್ಟಾರೆಯಾಗಿ ದುರುಪಯೋಗಗೊಂಡ ಸರ್ಕಾರದ ಹಣ 28,35,20,786 ರು.ಗಳಾಗಿದ್ದು ಇದರಲ್ಲಿ ಪ್ರಾಥಮಿಕ ತನಿಖಾ ವರದಿಯಲ್ಲಿ 16,61,90,101.00 ರು.ಗಳ ಅವ್ಯವಹಾರವನ್ನು ಗುರುತಿಸಲಾಗಿದೆ. ಇದಕ್ಕೆ ನಿಗಮದ ಅಧಿಕಾರಿ, ನೌಕರರು, ಹಾಗೂ ಗುತ್ತಿಗೆದಾರರು ಜವಾಬ್ದಾರರೆಂದು ತನಿಖಾ ವರದಿಯಲ್ಲಿ ಕಂಡುಬಂದಿರುತ್ತದೆ,’ ಎಂದು ಕರ್ನಾಟಕ ಸರ್ಕಾರದ ನಡವಳಿಗಳಿಂದ ತಿಳಿದು ಬಂದಿದೆ.

 

ಹಿಪ್ಪರಗಿ ಬ್ಯಾರೇಜ್‌, ತುಂಗಾಭದ್ರಾ ಎಡದಂಡೆ ಕಾಲುವೆ ವಿಭಾಗ, ಕಲ್ಬುರ್ಗಿ ವಲಯ, ಸಿರವಾರ (ಮುನಿರಾಬಾದ್‌) ಕಚೇರಿಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಸಂಬಂಧ ಈಗಾಗಲೇ 26ಕ್ಕೂ ಹೆಚ್ಚು ಅಧಿಕಾರಿ ನೌಕರರ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಲಾಗಿತ್ತು. ಅಲ್ಲದೇ 8 ಮಂದಿ ಅಧಿಕಾರಿ ನೌಕರರು, ಇಬ್ಬರು ಗುತ್ತಿಗೆದಾರರಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿರುವುದರ ಜೊತೆಗೆ ಇವರುಗಳ ಹಾಗೂ ಇವರ ವಾರಸುದಾರರ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ಪರಭಾರೆ ಮಾಡದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು.

 

ಹಾಗೆಯೇ ನೋಂದಣಿ ಮುದ್ರಾಂಕ ಇಲಾಖೆಗೆ ಹಾಗೂ ಇವರು ಹೊಂದಿರುವ ಬ್ಯಾಂಕ್‌ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು ಎಂಬುದು ನಡವಳಿಯಿಂದ ಗೊತ್ತಾಗಿದೆ.

 

ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ 2015-16ರಲ್ಲಿ 1.47 ಕೋಟಿ, 2-16-17ರಲ್ಲಿ 3.70 ಕೋಟಿ, 2017-18ರಲ್ಲಿ 6.54 ಕೋಟಿ, 2018-19ರಲ್ಲಿ 1.86 ಕೋಟಿ, 2019-20ರಲ್ಲಿ 5.11 ಕೋಟಿ, 2020-21ರಲ್ಲಿ 9.63 ಕೋಟಿ ರು. ದುರುಪಯೋಗವಾಗಿತ್ತು. ಈ ಪೈಕಿ ಕಳೆದ 2 ವರ್ಷದಲ್ಲಿ 14.75 ಕೋಟಿ ರು. ದುರುಪಯೋಗವಾಗಿತ್ತು ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

 

ಪ್ರಾಥಮಿಕ ತನಿಖಾ ತಂಡವು ಎರಡನೇ ಹೆಚ್ಚುವರಿ ವರದಿಯನ್ನೂ ನೀಡಿತ್ತು. ‘ಈ ಪ್ರಕರಣದಲ್ಲಿ ಅಧಿಕ ಮೊತ್ತದ ಹಣ ದುರುಪಯೋಗವಾಗಿರುವುದನ್ನು ಗಮನಿಸಿ ಈ ಕುರಿತು ಧಾರವಾಡದ ಕೇಂದ್ರ ಕಚೇರಿಯಲ್ಲಿ ಕಾಮಗಾರಿಗಳ ಬಿಲ್‌ಗಳ ಪಾವತಿ ವಿಷಯದಲ್ಲಿ ನಿರ್ಲಕ್ಷ್ಯ ಮತ್ತು ಲೋಪವಾಗಿರುವುದನ್ನು ಸ್ಪಷ್ಟವಾಗಿ ಗಮನಿಸಲಾಗಿದೆ, ‘ ಎಂದು ನಡವಳಿಯಲ್ಲಿ ಉಲ್ಲೇಖಿಸಿದೆ.

 

ನಿಯಮಾನುಸಾರ ಯಾವುದೇ ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ ಪಿಡಬ್ಲ್ಯೂಡಿ ನೀತಿ ಸಂಹಿತೆ ಮತ್ತು River Valley Accounting Code, Compaines Act 1956 ಕೆಟಿಪಿಪಿ ಕಾಯ್ದೆ, ಕರ್ನಾಟಕ ಆರ್ಥಿಕ ಸಂಹಿತೆ ಮತ್ತು ಇನ್ನಿತರೆ ಕಾಯ್ದೆಗಳು, ಸರ್ಕಾರದಿಂದ ಹೊರಡಿಸಿರುವ ಸ್ಥಾಯಿ ಆದೇಶಗಳನ್ವಯ ಕಾರ್ಯನಿರ್ವಹಿಸಬೇಕು. ಆದರೆ ಹಿಪ್ಪರಗಿ ಬ್ಯಾರೇಜ್‌, ತುಂಗಾಭದ್ರಾ ಎಡದಂಡೆ ಕಾಲುವೆ ವಿಭಾಗ, ಕಲ್ಬುರ್ಗಿ ವಲಯಿ, ಸಿರವಾರ (ಮುನಿರಾಬಾದ್‌) ಕಚೇರಿಗಳಲ್ಲಿ ಈ ಯಾವ ನಿಯಮಗಳು, ಆದೇಶಗಳು ಪಾಲನೆಯಾಗಿಲ್ಲ ಎಂದು ನಡವಳಿಯಿಂದ ತಿಳಿದು ಬಂದಿದೆ.

 

‘ಆದೇಶದ ಕಂಡಿಕೆ-6ರಲ್ಲಿ ವಿವರಿಸಿರುವ ಕರ್ತವ್ಯ ಲೋಪಗಳು ಹಾಗೂ ಕಾರ್ಯವಿಧಾನದಲ್ಲಿನ ವ್ಯತ್ಯಾಸಗಳು ಈ ಪ್ರಕರಣದಲ್ಲಿಯೂ ಸಹ ಆಗಿರುತ್ತದೆಯಲ್ಲದೇ ಪ್ರಕರಣದಲ್ಲಿ ಅಕ್ರಮವಾಗಿ ಹಣ ಸೆಳೆಯುವ ಸಂದರ್ಭಗಳು ಉಂಟಾಗಿರುವುದು ಕಂಡು ಬಂದಿರುತ್ತದೆ,’ ಎಂದು ನಡವಳಿಯಲ್ಲಿ ವಿವರಿಸಲಾಗಿದೆ.

 

ಹಿಪ್ಪರಗಿ ಬ್ಯಾರೇಜ್‌ ಯೋಜನೆ ವಿಭಾಗ, ಕಲ್ಬುರ್ಗಿ ವಲಯದ ನೀರಾವರಿ ಯೋಜನೆ ವಿಭಾಗ, ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ, ಸಿರವಾರ (ಮುನಿರಾಬಾದ್‌ ವಲಯ)ವಿಭಾಗಗಳಲ್ಲಿ ಯಾವುದೇ ಟೆಂಡರ್‌ ಕರೆಯದೇ ಹಾಗೂ ಯಾವುದೇ ಕಾಮಗಾರಿ ನಿರ್ವಹಿಸದೇ 20 ನಕಲಿ ಬಿಲ್ ಹಾಗೂ ಇತರೆ ಪೂರಕ ದಾಖಲೆ ಸೃಷ್ಟಿಸಿ 11.73 ಕೋಟಿ ರು.ಗಳ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದನ್ನಾಧರಿಸಿ ಐವರು ಅಧಿಕಾರಿ, ನೌಕರರನ್ನು ಅಮಾನತುಗೊಳಿಸಲಾಗಿದೆ.

the fil favicon

SUPPORT THE FILE

Latest News

Related Posts