ಬೆಂಗಳೂರು; ರಾಜ್ಯದ ಎಲ್ಲಾ ಕುಟುಂಬಗಳಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡಿ ಗೃಹ ಜ್ಯೋತಿ ಹೆಸರಿನಲ್ಲಿ ಯೋಜನೆ ಅನುಷ್ಠಾನಗೊಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರವು ಇದೀಗ ಈ ಯೋಜನೆ ವ್ಯಾಪ್ತಿಗೆ ಕೇವಲ 2.14 ಕೋಟಿ ಕುಟುಂಬಗಳನ್ನಷ್ಟೇ ಒಳಪಡಿಸಲಿದೆ.
ಗೃಹ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ, ಆರ್ಥಿಕ, ವಿದ್ಯುತ್ ಸರಬರಾಜು ಕಂಪನಿಗಳ ಮುಖ್ಯಸ್ಥರುಗಳ ಜತೆ ನಡೆದ ಸಭೆಯಲ್ಲಿ ಯೋಜನೆ ಅನುಷ್ಠಾನದ ಸಾಧಕ-ಬಾಧಕ, ಆರ್ಥಿಕ ಹೊರೆ ಕುರಿತು ಚರ್ಚಿಸಲಾಗಿದೆ. ಈ ಸಭೆಯಲ್ಲಿ ಮಂಡಿಸಿರುವ ಪ್ರಸ್ತಾವನೆಯಲ್ಲಿನ ಅಂಕಿ ಅಂಶಗಳೇ ದೋಷಪೂರಿತವಾಗಿದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ.
ಅಧಿಕಾರಕ್ಕೆ ಬರುವ ಮುನ್ನ ಎಲ್ಲಾ ಕುಟುಂಬಗಳಿಗೂ 200 ಯನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್ ಇದೀಗ 2.14 ಕೋಟಿ ಕುಟುಂಬಗಳನ್ನಷ್ಟೇ ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಮುಂದಾಗಿರುವುದು ಯೋಜನೆ ವ್ಯಾಪ್ತಿಯಿಂದ ಹೊರಗುಳಿಯುವ ಕುಟುಂಬಗಳಲ್ಲಿ ಆಕ್ರೋಶ ಹೆಚ್ಚಲು ಕಾರಣವಾಗಲಿದೆ. ಯೋಜನೆಯಿಂದ ಹೊರಗುಳಿಯಬಹುದಾದ ಕುಟುಂಬಗಳ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ.
ಮಾರ್ಚ್ 2023ರ ವಿದ್ಯುತ್ ಬಿಲ್‌ಗಳಲ್ಲಿ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿದ ವಸತಿ ಸ್ಥಾವರಗಳ ಒಟ್ಟು ಸಂಖ್ಯೆ, ಮಾರ್ಚ್ 2023ರ ಬಳಕೆ ಆಧಾರದ ಮೇಲೆ ವಾರ್ಷಿಕ ಬಳಕೆ ಯುನಿಟ್/ವಿದ್ಯುತ್ ಬಳಕೆಯನ್ನ ಅಂದಾಜಿಸಿದೆ. ಅದರಂತೆ ಸಹಾಯ ಧನ ನೀಡಬೇಕಾಗ ಬಹುದಾದಂತಹ ವಿದ್ಯುತ್ ಬಿಲ್‌ಗಳನ್ನು ಅಂದಾಜಿಸಿದೆ ಎಂದು ಗೊತ್ತಾಗಿದೆ.
ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ಯೋಜನೆ, ಕರ್ನಾಟಕದಲ್ಲಿ ಯಶಸ್ವಿಯಾಗುವುದೇ?
ರಾಜ್ಯದ ಒಟ್ಟು ಕುಟುಂಬಗಳ ಪೈಕಿ ಕೇವಲ 2.14 ಕೋಟಿ ಕುಟುಂಬಗಳಷ್ಟೇ ಪ್ರಯೋಜನ ಪಡೆದುಕೊಳ್ಳಲಿದೆ. ಇಂಧನ ಶುಲ್ಕ 8008 ಕೋಟಿ ಎಂದು ಅಂದಾಜಿಸಿದೆ. ನಿಗದಿತ ಶುಲ್ಕ, ತೆರಿಗೆ ಇತ್ಯಾದಿ ಒಳಗೊಂಡಂತೆ ಸಹಾಯ ಧನಕ್ಕೆ ಅಗತ್ಯವಿರುವ ಬಿಲ್‌ಗಳು 12,038 ಕೋಟಿ ಎಂದು ಅಂದಾಜಿಸಿರುವುದು ಗೊತ್ತಾಗಿದೆ.
ಅದೇ ರೀತಿ ಸುಮಾರು 1.27 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವವ ಸಂಖ್ಯೆ ಕಳೆದ ಮಾರ್ಚ್ ತಿಂಗಳ ವಿದ್ಯುತ್ ಬಿಲ್‍ಗಳಲ್ಲಿ 200 ಯೂನಿಟ್‍ಗಳಿಗಿಂತ ಕಡಿಮೆ ವಿದ್ಯುತ್ ಬಳಸಿದ ವಸತಿ ಸ್ಥಾವರಗಳ ಒಟ್ಟು ಸಂಖ್ಯೆ, ವಾರ್ಷಿಕ ಬಳಕೆಗೆ ಅಗತ್ಯ ಇರುವ ವಿದ್ಯುತ್, ರಾಜ್ಯದಲ್ಲಿ ವಿದ್ಯುತ್ ಲಭ್ಯತೆ, ಖರೀದಿಸಬೇಕಾದ ವಿದ್ಯುತ್ ಪ್ರಮಾಣಗಳ ಕುರಿತು ಚರ್ಚೆಗಳನ್ನು ನಡೆಸಿದೆ.
ಗೃಹ ಜ್ಯೋತಿ ಯೋಜನೆಯನ್ನು ಅನುಷ್ಟಾನಗೊಳಿಸಿದರೆ ಆರ್ಥಿಕವಾಗಿ ಹೆಚ್ಚಿನ ಪರಿಣಾಮಗಳು ಉಂಟಾಗಲಿವೆ. ಮಾಸಿಕ 1200 ಕೋಟಿ ರೂಪಾಯಿ ಭರಿಸಬೇಕಾಗಬಹುದು ಎಂದು ಅಂದಾಜಿಸಿದರೆ ಒಟ್ಟಾರೆ ವಾರ್ಷಿಕ ಮೊತ್ತ 15 ಸಾವಿರ ಕೋಟಿ ರೂಪಾಯಿಗಳನ್ನು ದಾಟಲಿದೆ ಎಂದು ಹೇಳಲಾಗಿದೆ.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 17,91,64,759 ಹಾಗೂ ನಗರ ಪ್ರದೇಶಗಳಲ್ಲಿ 6,47,80,538 ಕುಟುಂಬಗಳಿವೆ. ಕರ್ನಾಟಕದಲ್ಲಿರುವ ಒಟ್ಟು 1,31,39,093 ಕುಟುಂಬಗಳ ಪೈಕಿ 80,48,694 ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ಉಳಿದ 50,90,399 ಕುಟುಂಬಗಳು ನಗರ ಪ್ರದೇಶದಲ್ಲಿ ವಾಸವಾಗಿವೆ. ಕರ್ನಾಟಕ ಸರ್ಕಾರ 2015ರಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆ 1,41,54,632 ಕ್ಕೆ ಏರಿತ್ತು.
2015ರಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿರುವ ಕುಟುಂಬಗಳ ಸಂಖ್ಯೆಯು 2023ರಲ್ಲಿ ಏರಿಕೆಯಾಗಿರುತ್ತದೆ. 2015ರ ನಂತರ ಅಂದಾಜು 30 ಲಕ್ಷ ಏರಿಕೆಯಾಗಿರಬಹುದು. ಹೀಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಿರುವ ಸಭೆಯಲ್ಲಿ ಮಂಡಿಸಿರುವ ಪ್ರಸ್ತಾವನೆ ಅಂಶಗಳನ್ನು ಒರೆಗೆ ಹಚ್ಚಿ ನೋಡಿದರೆ 2.14 ಕೋಟಿ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿವೆ ಎಂದು ಹೇಳಿರುವುದೇ ದೋಷಪೂರಿತವಾಗಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ ಎನ್ ದೀಪಕ್.
‘ರಾಜ್ಯ ಸರ್ಕಾರವು ಉಚಿತ ವಿದ್ಯುತ್ ಯೋಜನೆ ಕಾರ್ಯಗತ ಮಾಡುವ ಬದಲು ವಿದ್ಯುತ್ ವಲಯದಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಲ್ಲಾ ವರ್ಗದ ಜನರಿಗೂ ವಿದ್ಯುತ್ ದರದಲ್ಲಿ ಶೇ.30ರಷ್ಟು ಕಡಿತ ಮಾಡಬಹುದು. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಹಾಗೆಯೇ ಸರ್ಕಾರವು ಉಚಿತ ವಿದ್ಯುತ್ ಯೋಜನೆಗಾಗಿ ಪರಿಗಣಿಸುತ್ತಿರುವ ಅಥವಾ ಅಂದಾಜಿಸಿರುವ ಫಲಾನುಭವಿಗಳ ಕುಟುಂಬಗಳ ಸಂಖ್ಯೆಯು ದೋಷಪೂರಿತವಾಗಿದ್ದು ಮುಂದಿನ ದಿನಗಳಲ್ಲಿ ಈ ಯೋಜನೆ ಹಳ್ಳ ಹಿಡಿಯುವಂತಾಗುತ್ತದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ ಎನ್.