ಬೆಂಗಳೂರು; ರಾಜ್ಯದ ಒಟ್ಟು ಗ್ರಾಮ ಪಂಚಾಯ್ತಿಗಳ ಪೈಕಿ 253 ಪಂಚಾಯ್ತಿಗಳು ಕಟ್ಟಡ ಮತ್ತು ಭೂಮಿಗೆ ಸಂಬಂಧಿಸಿದ ತೆರಿಗೆ ನಿರ್ಧರಣೆ ಪಟ್ಟಿ, ಆಸ್ತಿ ತೆರಿಗೆ ಪಟ್ಟಿಯ ಮ್ಯುಟೇಷನ್‌ನ್ನು ನಿರ್ವಹಿಸಿಲ್ಲ ಎಂಬುದು ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 246(1) ಮತ್ತು ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006ರ ನಿಯಮ 112(1) ಅನ್ವಯ ರಾಜ್ಯದ ಗ್ರಾಮ ಪಂಚಾಯ್ತಿಗಳ 2020-21ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆಸಿ ಈ ಸಂಬಂಧ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ತೆರಿಗೆ ನಿರ್ಧರಣಕ್ಕಾಗಿ ಯಾವುದೇ ಆಸ್ತಿಗಳನ್ನು ಒಳಪಡಿಸಿದಾಗ ಅಥವಾ ತೆರಿಗೆ ನಿರ್ಧರಣವನ್ನು ಹೆಚ್ಚಿಸಿದಾಗ ಅಥವಾ ತೆರಿಗೆ ನಿರ್ಧರಣ ಪಟ್ಟಿಯ ದೃಢೀಕರಣದ ನಂತರದಲ್ಲಿ ಬೇಡಿಕೆಯಲ್ಲಿ ಯಾವುದಾದರೂ ಬದಲಾವಣೆ ಮಾಡಿದಾಗ ನಮೂನೆ 10ರ ಮ್ಯುಟೇಷನ್ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಎಂಬ ನಿಯಮವಿದೆ. ಆದರೆ 335 ಪಂಚಾಯ್ತಿಗಳು ನಮೂನೆ 10ನ್ನು ನಿರ್ವಹಿಸಿಲ್ಲ. ‘ತೆರಿಗೆ ನಿರ್ಧರಣೆ ಪಟ್ಟಿ ಅನುಪಸ್ಥಿತಿಯಲ್ಲಿ ಮ್ಯುಟೇಷನ್ ರಿಜಿಸ್ಟರ್‌ನ ನಿಖರತೆಯನ್ನು ಸಮರ್ಥಿಸಲಾಗುವುದಿಲ್ಲ. ಇದರಿಂದಾಗಿ ಆಸ್ತಿ ತೆರಿಗೆ ಬೇಡಿಕೆಯ ಏರಿಕೆ/ಇಳಿಕೆಯು ನಿಖರವಾಗಿ ಆಗದೇ ಆದಾಯದಲ್ಲಿ ನಷ್ಟವುಂಟಾಗುವ ಸಂಭವನೀಯತೆ ಹೆಚ್ಚಿದೆ,’ ಎಂದು ವರದಿಯು ವಿವರಿಸಿದೆ.
ಭೂಮಿ ಮತ್ತು ಕಟ್ಟಡಗಳ ತೆರಿಗೆಗಳ ಬೇಡಿಕೆ, ವಸೂಲಾತಿ ಹಾಗೂ ಬಾಕಿ ರಿಜಿಸ್ಟರ್ (ನಮೂನೆ-11) ನಿರ್ವಹಿಸಬೇಕು. ಆದರೆ 139 ಪಂಚಾಯ್ತಿಗಳು ಇಂತಹ ನಮೂನೆಯನ್ನು ನಿರ್ವಹಿಸಿಲ್ಲ. ನಿಯಮ 34ರ ನಮೂನೆ 15ರಲ್ಲಿ ಆದಾಯ ತರುವ ಆಸ್ತಿಪಾಸ್ತಿಗಳ ವಿವರ ಮತ್ತು ಕಂದಾಯ ವಸೂಲಾತಿ ವಿವರದ ರಿಜಿಸ್ಟರ್‌ನ್ನು 428 ಪಂಚಾಯ್ತಿಗಳು ನಿರ್ವಹಿಸಿಲ್ಲ.
ಬೆಳಗಾವಿ ಜಿಲ್ಲೆಯ 50 ಪಂಚಾಯ್ತಿಗಳು ತೆರಿಗೆ ನಿರ್ಧರಣೆ ಪಟ್ಟಿಯನ್ನು ನಿರ್ವಹಿಸಿಲ್ಲ. ಅದೇ ರೀತಿ ಇದೇ ಜಿಲ್ಲೆಯಲ್ಲಿ ಮ್ಯುಟೇಷನ್ ರಿಜಸ್ಟರ್, ಡಿಸಿಬಿ ವಹಿ, ಮತ್ತು ಆದಾಯ ತರುವ ಆಸ್ತಿಪಾಸ್ತಿಗಳ ವಿವರ ಮತ್ತು ಕಂದಾಯ ವಸೂಲಿ ವಿವರದ ರಿಜಿಸ್ಟರ್‌ನ್ನು ನಿರ್ವಹಿಸಿಲ್ಲ. ಈ ಮೂರು ವಿಭಾಗಗಳಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ತಲಾ 50 ಪಂಚಾಯ್ತಿಗಳಿವೆ ಎಂದು ವರದಿಯಲ್ಲಿ ಪಟ್ಟಿ ಒದಗಿಸಿರುವುದು ತಿಳಿದು ಬಂದಿದೆ.
ನಮೂನೆ 29ರಲ್ಲಿಯೂ ಪೀಠೋಪಕರಣ, ಯಂತ್ರೋಪಕರಣ ಮತ್ತು ಇತರೆ ಸಾಮಗ್ರಿಗಳ ಚರಾಸ್ತಿ ರಿಜಿಸ್ಟರ್‌ನ್ನು 350 ಪಂಚಾಯ್ತಿಗಳು ನಿರ್ವಹಿಸಿಲ್ಲ. ಅದೇ ರೀತಿ 436 ಗ್ರಾಮ ಪಂಚಾಯ್ತಿಗಳು ಭೂ ದಾಖಲಾತಿ ರಿಜಿಸ್ಟರ್‌ನ್ನು ನಿರ್ವಹಿಸಿಲ್ಲ. 394 ಪಂಚಾಯ್ತಿಗಳು ಕಟ್ಟಡ, ರಸ್ತೆ, ಸೇತುವೆ, ಅಡಿಗಾಲುವೆ, ಚರಂಡಿ, ಬೀದಿದೀಪದ ಕಂಬಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಸ್ಥಿರಾಸ್ತಿಯ ರಿಜಿಸ್ಟರ್‌ನ್ನು ನಿರ್ವಹಿಸಿಲ್ಲ ಎಂದು ವರದಿಯು ಬಹಿರಂಗಗೊಳಿಸಿದೆ.
ಅದೇ ರೀತಿ 339 ಗ್ರಾಮ ಪಂಚಾಯ್ತಿಗಳು ಪ್ರಸಕ್ತ ಸಾಲಿನಲ್ಲಿ ತೆರಿಗೆ ಪರಿಷ್ಕರಣೆ ಮಾಡಿಲ್ಲ. ಆಂತರಿಕ ಆದಾಯಗಳ ಸಂಗ್ರಹಕ್ಕಾಗಿ 189 ಗ್ರಾಮ ಪಂಚಾಯ್ತಿಗಳು ಮಾತ್ರ ಆಸ್ತಿ ಮಾಲೀಕರಿಗೆ ನೋಟೀಸ್ ಜಾರಿ ಮತ್ತು ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಜನರಿಗೆ ತಿಳಿವಳಿಕೆ ನೀಡುವಂತಹ ಕ್ರಮಗಳನ್ನು ಕೈಗೊಂಡಿದೆ. ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಲು ಹೆಚ್ಚಿನ ಪಂಚಾಯ್ತಿಗಳು ಅಗತ್ಯ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ವರದಿಯಿಂದ ಗೊತ್ತಾಗಿದೆ.