ಬೆಂಗಳೂರು; ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 14, 15ನೇ ಹಣಕಾಸು ಆಯೋಗದ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ರಾಜ್ಯದ ಗ್ರಾಮ ಪಂಚಾಯ್ತಿಗಳ ಪೈಕಿ ಒಟ್ಟು 274 ಪಂಚಾಯ್ತಿಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ.
ಅಲ್ಲದೇ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿದ್ದ ಪಂಚಾಯ್ತಿಗಳ ಪೈಕಿ 169 ಪಂಚಾಯ್ತಿಗಳು ವರದಿಗಳನ್ನು ಸಲ್ಲಿಸಿಲ್ಲ. ಹಾಗೆಯೇ 246 ಪಂಚಾಯ್ತಿಗಳು ಆಯವ್ಯಯವನ್ನೇ ತಯಾರಿಸಿಲ್ಲ ಎಂದು ಕರ್ನಾಟಕ ರಾಜ್ಯಲೆಕ್ಕ ಪರಿಶೋಧಕರ ವರದಿಯು ಹೊರಗೆಡವಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 246(1) ಮತ್ತು ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006ರ ನಿಯಮ 112(1) ಅನ್ವಯ ರಾಜ್ಯದ ಗ್ರಾಮ ಪಂಚಾಯ್ತಿಗಳ 2020-21ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆಸಿ ಈ ಸಂಬಂಧ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನರೇಗಾ ಯೋಜನೆಯಡಿ ಬೆಂಗಳೂರು ವಿಭಾಗದ 21 ಮತ್ತು 14 ಹಾಗೂ 15ನೇ ಹಣಕಾಸು ಆಯೋಗದ ಯೋಜನೆಯಡಿ 33 ಪಂಚಾಯ್ತಿಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ನಡೆಸಿಲ್ಲ. ಅದೇ ರೀತಿ ಬೆಳಗಾವಿ ವಿಭಾಗದ 35 ಪಂಚಾಯ್ತಿಗಳು (ನರೇಗಾ) 76 ಪಂಚಾಯ್ತಿಗಳು (14/15 ಹಣಕಾಸು ಯೋಜನೆ), ಕಲ್ಬುರ್ಗಿ ವಿಭಾಗದ 20 (ನರೇಗಾ) 43 (14/15 ಹಣಕಾಸು ಯೋಜನೆ) 43 ಪಂಚಾಯ್ತಿಗಳು, ಮೈಸೂರು ವಿಭಾಗದ 15 (ನರೇಗಾ) 31 (14/15 ಹಣಕಾಸು ಯೋಜನೆ) ಪಂಚಾಯ್ತಿಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ನಡೆಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2021-22 ಮತ್ತು 2022-23ನೇ ಸಾಲಿಗೆ ಸಂಬಂಧಿಸಿದ ಸಾಮಗ್ರಿ ಬಿಲ್‌ಗಳ ಪಾವತಿ ಮತ್ತು ರಾಜ್ಯದ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿ ಮಾಡಲು ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಹಣ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ಪರವಾಗಿಯೇ 750 ಕೋಟಿ ರು.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.
ಲೆಕ್ಕ ಪರಿಶೋಧನೆಗೆ ಒಳಪಡಿಸಿದ್ದ 559 ಪಂಚಾಯ್ತಿಗಳ ಪೈಕಿ 246 ಗ್ರಾಮ ಪಂಚಾಯ್ತಿಗಳು ಆಯವ್ಯಯವನ್ನೇ ತಯಾರಿಸಿಲ್ಲ. ಗ್ರಾಮ ಪಂಚಾಯ್ತಿ ನಿಧಿಯಿಂದ ಯಾವುದೇ ವೆಚ್ಚವನ್ನು ಆಯವ್ಯಯದಲ್ಲಿ ಅನುದಾನದ ಹಂಚಿಕೆ ಇಲ್ಲದೇ ಮಾಡುವಂತಿಲ್ಲ. ಆದರೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಆಯವ್ಯಯವನ್ನೇ ತಯಾರಿಸದೇ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 241 ಮತ್ತು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಯಮಗಳು 2006ರ ನಿಯಮ 11ನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಅದೇ ರೀತಿ ಅನುಮೋದಿತ ಆಯವ್ಯಯವಿಲ್ಲದೇ ಗ್ರಾಮ ಪಂಚಾಯ್ತಿಯಿಂದ ಭರಿಸಲಾದ ವೆಚ್ಚಗಳ ನಿಯಮಗಳನ್ನೂ ಉಲ್ಲಂಘಿಸಿದಂತಾಗಿದೆ ಎಂದು ವರದಿ ಹೇಳಿದೆ. ಹಾಗೆಯೇ ನಿಯಮಗಳಿಗೆ ವ್ಯತಿರಿಕ್ತವಾಗಿ 93 ಗ್ರಾಮ ಪಂಚಾಯ್ತಿಗಳು ವಿಳಂಬವಾಗಿ ಆಯವ್ಯಯ ತಯಾರಿಸಿ ಅನುಮೋದನೆ ಪಡೆದಿದೆ. ಬೆಂಗಳೂರು ವಿಭಾಗದ 42, ಬೆಳಗಾವಿ ವಿಭಾಗದ 16, ಕಲ್ಬುರ್ಗಿ 09, ಮೈಸೂರು ವಿಭಾಗದ 26 ಪಂಚಾಯ್ತಿಗಳು ವಿಳಂಬವಾಗಿ ಆಯವ್ಯಯ ತಯಾರಿಸಿವೆ.
ಅಲ್ಲದೇ ಬೆಂಗಳೂರು ವಿಭಾಗದ 133, ಬೆಳಗಾವಿ ವಿಭಾಗದ 72, ಕಲ್ಬುರ್ಗಿ ವಿಭಾಗದ 72, ಮೈಸೂರು ವಿಭಾಗದ 95 ಸೇರಿದಂತೆ ಒಟ್ಟಾರೆ 372 ಪಂಚಾಯ್ತಿಗಳು ಆಯವ್ಯಯ ನಿಯಂತ್ರಣ ವಹಿಯನ್ನೇ ನಿರ್ವಹಿಸಿಲ್ಲ ಎಂದೂ ವರದಿ ಹೇಳಿದೆ. ಈ ಅವಧಿಯಲ್ಲಿ ಕೆ ಎಸ್ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದು.