ಬೆಂಗಳೂರು; ಕರ್ನಾಟಕ ವಿಧಾನಪರಿಷತ್ ಸಚಿವಾಲಯದ ಕೊಠಡಿಗಳ ನವೀಕರಣ ಕಾಮಗಾರಿಯನ್ನು ವಿಭಜಿಸಿ ನೀಡಿದ್ದರೂ ಕೆಟಿಪಿಪಿ ಕಾಯ್ದೆ ಪಾಲನೆ ಮಾಡಿಲ್ಲದಿರುವುದು ಸೇರಿದಂತೆ ಹಲವು ಲೋಪಗಳನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ವಿಧಾನಪರಿಷತ್ ಸಚಿವಾಲಯಕ್ಕೆ ಸಂಬಂಧಿಸಿದಂತೆ 2013-14ರಿಂದ 2014-15ರ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಿರುವ ಲೆಕ್ಕಪರಿಶೋದಕರು ಯುಪಿಎಸ್ ಖರೀದಿಯಲ್ಲಿನ ಲೋಪಗಳು, ಸರ್ಕಾರದ ಆದೇಶ ಪಡೆಯದೆ ಪೀಠೋಪಕರಣಗಳು ಮತ್ತು ಇತರೆ ಉಪಕರಣಗಳನ್ನು ಚಾರಿಟಬಲ್ ಸಂಸ್ಥೆಗಳಿಗೆ ನೀಡಿರುವುದು, ಬಳಕೆ ಪ್ರಮಾಣಪತ್ರವನ್ನು ಒದಗಿಸದಿರುವುದು ಸೇರಿದಂತೆ ಹಲವು ನ್ಯೂನತೆಗಳನ್ನು ಬಹಿರಂಗಗೊಳಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ವಿಧಾನಪರಿಷತ್ತಿನ ಕೊಠಡಿಗಳ ನವೀಕರಣದ ಕಾರ್ಯವನ್ನು ಕೆಆರ್‌ಐಡಿಎಲ್ ಸಂಸ್ಥೆಗೆ ವಿಭಜಿಸಿ ನೀಡಿರುವುದರಿಂದ ಕಾಮಗಾರಿಯ ಒಟ್ಟು ಮೊತ್ತ ರೂ.3,75,40,200 ರು. ವಾಗಿದ್ದರೂ ಕೆ.ಟಿ.ಪಿ.ಪಿ ಕಾಯ್ದೆಯನ್ನು ಪಾಲನೆ ಮಾಡಿರುವುದಿಲ್ಲ. ಎಸ್ ಆರ್ ರೇಟ್ ಬದಲಿಗೆ ADHOC ರೇಟ್ಸ್ ನ್ನು ಕಾಮಗಾರಿಗೆ ನಿಯಮಬಾಹಿರವಾಗಿ ಪಾವತಿಸಲಾಗಿದೆ. ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರು ಇನ್ನೂ ತನಿಖೆಗೆ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.
ಅಲ್ಲದೆ ಕೆ.ಆರ್.ಐ.ಡಿ.ಎಲ್ ನಿಂದ ಬಳಕೆ ಪ್ರಮಾಣ ಪತ್ರವನ್ನು ಪಡೆದಿರುವುದಿಲ್ಲ, ಕಾರ್ಯಾದೇಶದಲ್ಲಿ ಉಲ್ಲೇಖಿಸಲಾದ ದಾಸ್ತಾನು/ ಪೀಠೋಪಕರಣಗಳನ್ನು ಭೌತಿಕವಾಗಿ ದಾಸ್ತಾನಿಗೆ ತೆಗೆದುಕೊಂಡಿರುವುದಿಲ್ಲ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗಿದ್ದ ಹಲವು ಕೊಠಡಿಗಳ ನವೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ ಒಟ್ಟು 1.06 ಕೋಟಿ ರು.ಗಳಿಗೆ ಬಳಕೆ ಪ್ರಮಾಣಪತ್ರಗಳನ್ನು ಪಡೆದಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ಸ್ಥಿರಾಸ್ತಿಯನ್ನು ಬಾಡಿಗೆಗೆ ನೀಡಿದ ಸಂದರ್ಭದಲ್ಲಿ ಸೇವಾ ತೆರಿಗೆ ಪಾವತಿಸಿಲ್ಲ. ವಿಧಾನಪರಿಷತ್ ಸಚಿವಾಲಯವು ಕ್ಯಾಂಟೀನ್‌ಗಾಗಿ ನೀಡಿರುವ ಕೊಠಡಿಗೆ ಸಂಬಂಧಿಸಿದಂತೆ ಬಾಡಿಗೆ ಜೊತೆ ಸೇವಾ ತೆರಿಗೆ ಪಾವತಿಸದಿರುವುದು ಲೆಕ್ಕಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಯುಪಿಎಸ್ ಖರೀದಿಗೆ ಸಂಬಂಧಿಸಿದಂತೆ ಲೋಪಗಳನ್ನು ಪತ್ತೆ ಹಚ್ಚಿರುವ ಲೆಕ್ಕಪರಿಶೋಧಕರು, ವಿಧಾನಪರಿಷತ್ ಸಚಿವಾಲಯವು 2,03,191 ರು.ಗಳನ್ನು ಅಧಿಕವಾಗಿ ಪಾವತಿ ಮಾಡಿರುವುದನ್ನು ಆಕ್ಷೇಪಿಸಿದ್ದಾರೆ.
‘ಕೆಟಿಪಿಪಿ ಕಾಯ್ದೆಯನ್ವಯ ಯಾವುದೇ ಸಿವಿಲ್ ಕಾಮಗಾರಿಯನ್ನು ಹೊರತುಪಡಿಸಿ ಇತರೆ ಯಾವುದೇ ಖರೀದಿ, ಸೇವೆಗೆ ಸಂಬಂಧಿಸಿದ ಸಂಗ್ರಹಣೆಗಾಗಿ ರೂ.1ಲಕ್ಷಕ್ಕೆ ಮೀರಿದ ಯಾವುದೇ ಕೆಲಸಗಳನ್ನು ಟೆಂಡರ್ ಮುಖೇನ ನಿರ್ವಹಿಸಬೇಕಾಗಿರುತ್ತದೆ. ಆದರೆ ಯುಪಿಎಸ್ ಖರೀದಿಗೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ರೂ.4.60 ಲಕ್ಷದ ಯುಪಿಎಸ್ ಖರೀದಿಯಿಂದ ರೂ.2.03ಲಕ್ಷದ ಹೆಚ್ಚುವರಿ ವೆಚ್ಚವಾಗಿದೆ. ಯುಪಿಎಸ್ ಮತ್ತು ಬ್ಯಾಟರಿಗಳನ್ನು ಡುಬಾಸ್ ಇಂಜಿನಿಯರಿಂದ ಪ್ರೈ ಲಿ., ರವರಿಂದ ಖರೀದಿ ಮಾಡಿರುವ ವಿಧಾನಪರಿಷತ್ ಸಚಿವಾಲಯವು ಅವರಿಂದಲೇ ಬದಲಾಯಿಸುವುದಕ್ಕೆ ಕಾರ್ಯಾದೇಶ ನೀಡಲಾಗಿದೆ.
ಈ ಕಾರ್ಯಾದೇಶ ನೀಡುವ ಪೂರ್ವದಲ್ಲಿ ಯಾವುದೇ ಸಾರ್ವಜನಿಕ ಸಂಗ್ರಹಣೆಯಲ್ಲಿ ಮಿತವ್ಯಯ ಕಾಪಾಡುವ ದೃಷ್ಟಿಯಿಂದ Director General of Supplies and Disposal (DGSD) ರೇಟ್ ಕಾಂಟ್ರಾಕ್ಟ್ ದರದೊಂದಿಗೆ ತುಲನಾತ್ಮಕವಾಗಿ ಪರಿಶೀಲಿಸದೆ ಕಾಯಾದೇಶ ನೀಡಲಾಗಿದೆ ಎಂದು ವಿವರಿಸಿರುವ ಲೆಕ್ಕಪರಿಶೋಧಕರು ಈ ಕಂಡಿಕೆಯನ್ನು ಆಕ್ಷೇಪಣೆಯಲ್ಲಿರಿಸಿದ್ದಾರೆ.