ಜೆಜೆಎಂನಲ್ಲಿ ಕಳಪೆ ಕಾಮಗಾರಿ ಬಹಿರಂಗ; ಮನೆಮನೆಗೆ ಗಂಗೆ ಯೋಜನೆಯಲ್ಲಿ ಭ್ರಷ್ಟಾಚಾರ ಸಾಬೀತು

ಬೆಂಗಳೂರು; ಮನೆಮನೆಗೆ ಗಂಗೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿದ್ದ ಜಲಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನಲ್ಲಿ ಶೇ.90ರಷ್ಟು ನಲ್ಲಿಗಳನ್ನು ಅಳವಡಿಸಿದ್ದರೂ ನೀರು ಸರಬರಾಜಾಗುತ್ತಿಲ್ಲ. ಕೆಲವು ಮನೆಗಳಿಗೆ ಕಳಪೆ ಪ್ಲಾಸ್ಟಿಕ್‌ ಪೈಪ್‌ಗಳನ್ನು ಅಳವಡಿಸಿದೆ. ಓವರ್‌ ಹೆಡ್‌ ಟ್ಯಾಂಕ್‌ಗಳು ಶಿಥಿಲಾವಸ್ಥೆಯಲ್ಲಿರುವುದು ಬಹಿರಂಗವಾಗಿದೆ.

 

ಜಲಜೀವನ್‌ ಮಿಷನ್‌ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವೇ ನಂ 1 ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರ್ಜರಿ ಜಾಹೀರಾತು ನೀಡಿದ್ದರು. ಜಲ್ ಜೀವನ್ ಮಿಷನ್ – ಕರ್ನಾಟಕವೇ ನಂ.1ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಮನೆಮನೆಗೆ ಗಂಗೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.  18,00,000 ಗ್ರಾಮಗಳಲ್ಲಿ ಯೋಜನೆ ಜಾರಿಯಾಗಿದೆ ಎಂದು ಹೆಮ್ಮೆಯಿಂದ ಬೀಗಿದ್ದರು.  ಇದರ ಬೆನ್ನಲ್ಲೇ ಇದೀಗ ಜಲಜೀವನ್‌ ಮಿಷನ್‌ ಯೋಜನೆಯಡಿಯಲ್ಲಿಯೇ ಸಾಕಷ್ಟು ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ, ಕಳಪೆ ಕಾಮಗಾರಿ ನಡೆದಿದೆ ಎಂದು ಸಾಬೀತುಪಡಿಸಿದ ತನಿಖಾ ವರದಿಗಳು ಮುನ್ನೆಲೆಗೆ ಬಂದಿವೆ.

 

ಕುಷ್ಟಗಿ ತಾಲ್ಲೂಕಿನಲ್ಲಿ ಅನುಷ್ಠಾನ ಮಾಡಲಾಗುತ್ತಿರುವ ಜಲಜೀವನ್‌ ಮಿಷನ್‌ (ಜೆಜೆಎಂ) ಅಡಿ ಕೈಗೆತ್ತಿಕೊಂಡಿರುವ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬ ಆರೋಪ ಕುರಿತು ಕೊಪ್ಪಳ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಮತ್ತು ಸಹಾಯಕ ಇಂಜನಿಯರ್‌ ಇಬ್ಬರನ್ನು ಸೇವೆಯಿಂದ ಅಮಾನತು ಆದೇಶ (ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 14 ಇನ್‌ಕ್ಯೂ 2023) ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ 2020-21ನೇ ಸಾಲಿನಲ್ಲಿ ಜೆಜೆಎಂ ಅಡಿಯಲ್ಲಿ ಮಂಜೂರಾಗಿದ್ದ 173 ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೂ ಸಹ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಅನುಷ್ಟಾನದಲ್ಲಿ ಇಂಜಿನಿಯರ್‌ಗಳು ವಿಫಲರಾಗಿದ್ದರು. ಈ ಸಂಬಂಧ ಬಸನಗೌಡ ಮೇಟಿ ಪಾಟೀಲ್‌, ವಿಲಾಸ್‌ ಭೋಸ್ಲೆ ಎಂಬ ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಜೆಜೆಎಂ ಯೋಜನೆಯಡಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಗುಣಮಟ್ಟ ಮತ್ತು ಅನುಷ್ಠಾನ ಕುರಿತು ಒಟ್ಟು 11 ತಂಡಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದವು. ಈ ತನಿಖಾ ತಂಡಗಳು ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿ ಅನುಷ್ಠಾನಗೊಂಡಿರುವ ಜೆಜೆಎಂ ಕಾಮಗಾರಿಗಳ ಅಸಲಿ ಮುಖವಾಡವನ್ನು ತೆರೆದಿಟ್ಟಿವೆ.

 

ಕಾಮಗಾರಿಗಳಲ್ಲಿನ ಲೋಪಗಳ ಪಟ್ಟಿ

 

 

14 ಕಾಮಗಾರಿಗಳ ಗುಣಮಟ್ಟ ತೃಪ್ತಿಕರವಾಗಿಲ್ಲ

 

ಕೆಲವು ಕಾಮಗಾರಿಗಳಲ್ಲಿ ಶೇ.90ರಷ್ಟು ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ನೀರು ಸರಬರಾಜು ಸಂಪೂರ್ಣವಾಗಿಲ್ಲ.

 

ಶೇ.50ರಷ್ಟು ಮನೆಗಳಿಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ಇನ್ನೂ ಕೆಲವು ಮನೆಗಳಿಗೆ ಪ್ಲಾಸ್ಟಿಕ್‌ ಪೈಪ್‌ಗಳನ್ನು ಬಳಸಿದ್ದು ಗುಣಮಟ್ಟದ್ದಾಗಿಲ್ಲ.

 

ಕೆಲವು ಕಾಮಗಾರಿಗಳ ನೀರು ಸರಬರಾಜು ಪೈಪುಗಳಲ್ಲಿ ಸೋರಿಕೆಯಾಗಿದ್ದವು. ಸಿಸಿ ರಸ್ತೆ ರೆಸ್ಪೋರೇಷನ್‌ ಸರಿಯಾಗಿರುವುದಿಲ್ಲ.

 

ಬಹಳಷ್ಟು ಕಾಮಗಾರಿಗಳಲ್ಲಿ ಮೀಟರ್‌ ಅಳವಡಿಸುವುದು ಬಾಕಿ ಇದೆ

 

ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ಸೋರಿಕೆ ಕಾರಣದಿಂದ ನೀರು ಸರಬರಾಜಾಗುತ್ತಿಲ್ಲ

 

ಕುಡಿಯುವ ನೀರು ಅಳವಡಿಕೆ, ಪೈಪುಗಳ ಆಳ ಬಹಳಷ್ಟು ಕಡೆ ಒಂದರಿಂದ ಎರಡು ಅಡಿ ಮಾತ್ರ ಇದೆ.

 

ಜಲೋತ್ಸವ ಲೋಗೋ ಬಹಳಷ್ಟು ಕಡೆ ಅಳವಡಿಸಿಲ್ಲ

 

ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ಇರುವ ಓವರ್‌ ಹೆಡ್‌ ಟ್ಯಾಂಕ್‌ ಶಿಥಿಲಾವಸ್ಥೆಯಲ್ಲಿರುವುದರಿಂದ ಕೆಲವು ಕಡೆ ಕಾಮಗಾರಿಗಳು ಆರಂಭವಾಗಿಲ್ಲ.

 

ಬಹಳಷ್ಟು ಕಾಮಗಾರಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸ್ಟ್ಯಾಂಡ್‌ ಪೋಸ್ಟ್‌ಗಳು ಮುರಿದು ಹೋಗಿವೆ.
173 ಕಾಮಗಾರಿಗಳು ಮಂಜೂರಾದ ಅಂದಾಜಿನ ಅನುಸಾರ ಅನುಷ್ಠಾನಗೊಂಡಿಲ್ಲ. ಕಳಪೆ ಗುಣಮಟ್ಟ, ಕಲಸಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ವಹಿಸಿಲ್ಲ. ಬಹಳಷ್ಟು ಕಾಮಗಾರಿಗಳ ಪೈಪ್‌ ಹಾಗೂ ನಳಗಳ ಮರು ಜೋಡಣೆ ಕಾರ್ಯವನ್ನು ಕೈಗೊಂಡಿಲ್ಲ ಎಂಬುದು ತನಿಖಾ ವರದಿಯಿಂದ ತಿಳಿದು ಬಂದಿದೆ.

 

‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲಜೀವನ್‌ ಮಿಷನ್‌ ಯೋಜನೆಯಡಿ ಮತ್ತು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋಷಿಸಿರುವ ಮನೆ ಮನೆಗೆ ಗಂಗೆ ಯೋಜನೆಯಲ್ಲಿ ಪರಿಗಣಿಸಿರುವ ಎಲ್ಲಾ ಮನೆಗಳಿಗೂ ಕಾರ್ಯಾತ್ಮಕ ನಳ ಸಂಪರ್ಕ ನೀಡಬೇಕಿತ್ತು. ಆದರೆ ‘ ಬಸನಗೌಡ ಮೇಟಿ ಪಾಟೀಲ್‌ ಮತ್ತು ವಿಲಾಸ್‌ ಬೋಸ್ಲೆ ಅವರುಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 3(1)ನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ದಿವ್ಯ ನಿರ್ಲಕ್ಷ್ಯ ತೋರಿ ಗಂಭೀರ ಸ್ವರೂಪದ ದುರ್ನಡತೆ ಎಸಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದನ್ನು ಬಾಕಿ ಇಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಪಡಿಸಲು ಸರ್ಕಾರವು ನಿರ್ಧರಿಸಿದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಜೆಜೆಎಂ ಕಾಮಗಾರಿ ಕಳಪೆಯಾಗಿದೆ. ನಿಯಮಬದ್ಧವಾಗಿ ಮಾಡಿಲ್ಲ ಎಂದು ಜನಪ್ರತಿನಿಧಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್‌ ‘ನಿಯಮಬದ್ಧವಾಗಿ ಕೆಲಸ ಮಾಡಲಾಗಿದೆಯೇ‘? ಎನ್ನುವುದರ ಬಗ್ಗೆ ಪರಿಶೀಲನೆ ಮಾಡಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತಂಡ ರಚಿಸಿದ್ದರು.

 

ಕುಷ್ಟಗಿ ತಾಲ್ಲೂಕಿನ 173 ಹಳ್ಳಿಗಳಿಗೆ ತಲಾ ಇಬ್ಬರು ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಯೋಜನೆ ಅನುಷ್ಠಾನದಲ್ಲಿ ಆಗಿರುವ ಲೋಪ, ಅರೆಬರೆ ಕಾಮಗಾರಿ, ಕಳಪೆ ಕೆಲಸ, ಬೇಕಾಬಿಟ್ಟಿಯಾಗಿ ಮುಖ್ಯಕೊಳವೆ, ನಲ್ಲಿಗಳ ಜೋಡಣೆ, ಗುಂಡಿ ತೆಗೆದರೂ ಮುಚ್ಚದಿರುವ ಕುರಿತು ಅನೇಕ ಗ್ರಾಮಗಳ ಜನರು ಅಧಿಕಾರಿಗಳ ಬಳಿ ಅತೃಪ್ತಿ ಹೊರಹಾಕಿದ್ದರು.

 

ಎಲ್‌ ಅಂಡ್‌ ಟಿ ಕಂಪನಿ ನಿರ್ವಹಿಸಿದ ಡಿಬಿಒಟಿ ಯೋಜನೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ಓವರ್‌ ಹೆಡ್‌ ಟ್ಯಾಂಕ್‌ವರೆಗೆ ನೀರು ಪೂರೈಕೆಯಾಗುತ್ತಿರುವುದು ಕಂಡುಬಂದಿತ್ತು. ಆದರೆ ಅನೇಕ ಹಳ್ಳಿಗಳಲ್ಲಿ ಟ್ಯಾಂಕ್‌ನಿಂದ ಮನೆಗಳಿಗೆ ಜೋಡಿಸಿರುವ ನಲ್ಲಿಗಳಲ್ಲಿ ಮಾತ್ರ ನೀರು ಪೂರೈಕೆಯಾಗದ ಸ್ಥಿತಿಯಿತ್ತು ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts