ಅಕ್ರಮ ಆಸ್ತಿ ಗಳಿಕೆ ಆರೋಪ; ವಿಚಾರಣೆಗೆ ಅನುಮತಿ ಸಿಗುವ ಮುನ್ನವೇ ಐಎಎಸ್‌ ಅಧಿಕಾರಿ ನಿವೃತ್ತಿ

ಬೆಂಗಳೂರು; ಆದಾಯ ಮೂಲಕ್ಕಿಂತಲೂ ಹೆಚ್ಚಿನ ಆಸ್ತಿಯನ್ನು ತನ್ನ ಮತ್ತು ತನ್ನ ಕುಟುಂಬದವರ ಹೆಸರಿನಲ್ಲಿ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಐಎಎಸ್‌ ಅಧಿಕಾರಿಯಾಗಿದ್ದ ಚಂದ್ರಶೇಖರ್‌ ವಿ ಅವರ ಅವರನ್ನು ವಿಚಾರಣೆಗೊಳಪಡಿಸಲು ಸರ್ಕಾರದಿಂದ ಮಂಜೂರಾತಿ ಪಡೆಯುವ ಹೊತ್ತಿಗೇ ಆಪಾದಿತ ಐಎಎಸ್‌ ಅಧಿಕಾರಿ ಸರ್ಕಾರಿ ನೌಕರಿಯಿಂದಲೇ ನಿವೃತ್ತರಾಗಿದ್ದರು. ವಿಚಾರಣೆಗೆ ಸರ್ಕಾರದಿಂದ ಮಂಜೂರಾತಿ ಪಡೆದಿಲ್ಲ ಎಂಬ ಕಾರಣವನ್ನು ಮುಂದಿರಿಸಿಕೊಂಡು ಆರೋಪಗಳಿಂದಲೇ ವಿಮುಕ್ತಿಗೊಂಡಿದ್ದರು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಸರ್ವೋಚ್ಛ ನ್ಯಾಯಾಲಯದಲ್ಲ ಸಲ್ಲಿಸಬೇಕಾಗಿರುವ ಮತ್ತು ಈಗಾಗಲೇ ಸಲ್ಲಿಸಲಾಗಿರುವ ಎಸ್‌ಎಲ್‌ಪಿಗಳನ್ನು ಪರಿಶೀಲಿಸಲು 2022ರ ಸೆ.17ರಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಚಂದ್ರಶೇಖರ್ ಮೇಲಿನ ಪ್ರಕರಣ

 

ಪ್ರಕರಣದ ಪ್ರತಿವಾದಿಯಾದ ಐಎಎಸ್‌ ಅಧಿಕಾರಿ ವಿ ಚಂದ್ರಶೇಖರ್‌ ಅವರು 1977ರ ಫೆ.7ರಿಂದ 2007ರ ಡಿಸೆಂಬರ್‌ 19ರ ಅವಧಿಯಲ್ಲಿ ತಮ್ಮ ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ಹೊಂದಿರುವ ಬಗ್ಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 13(1)(ಇ) ರೆ/ವಿ ಕಲಂ 13(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಕರಣ ಸಂಖ್ಯೆ 44/2014ರಲ್ಲಿ ತನ್ನನ್ನು ಆರೋಪಗಳಿಂದ ವಿಮುಕ್ತಿಗೊಳಿಸಬೇಕು ಕೋರಿ ಆರೋಪಿತ ಅಧಿಕಾರಿಯು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಸತ್ರ ನ್ಯಾಯಾಧೀಶರರು ಪುರಸ್ಕರಿಸಿದ್ದರಲ್ಲದೆ ಅಭಿಯೋಜನಾ ಮಂಜೂರಾತಿಯ ಅವಶ್ಯಕತೆ ಇದೆ ಎಂದು ಆರೋಪಗಳಿಂದ ವಿಮುಕ್ತಿಗೊಳಿಸಿದ್ದರು. ಲೋಕಾಯುಕ್ತ ಕಚೇರಿಯು ಅಭಿಯೋಜನಾ ಮಂಜೂರಾತಿಯನ್ನು ಪಡೆಯಲು ಪ್ರಯತ್ನಿಸುವ ವೇಳೆಗೆ ಪ್ರತಿವಾದಿ ಆರೋಪಿತ ಅಧಿಕಾರಿಯು ಸರ್ಕಾರಿ ನೌಕರಿಯಿಂದಲೇ ನಿವೃತ್ತರಾಗಿದ್ದರು. ಇದರ ವಿರುದ್ಧ ರಾಜ್ಯ ಸರ್ಕಾರವು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕ್ರಿಮಿನಲ್‌ ರಿವಿಷನ್ ಪಿಟಿಷನ್‌ ಅರ್ಜಿಯೂ ವಜಾಗೊಂಡಿತ್ತು.

 

ಈ ಪ್ರಕರಣದಲ್ಲಿ ಸ್ಟೇಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌-2 ಅವರು ಹಾಗೂ ಒಂದನೇ ಅಪರ ವಾದೇಕ್ಷಕರು ಪ್ರಕರಣವು ಮೇಲ್ಮನವಿ ಸಲ್ಲಿಸಲು ಅರ್ಹವಿದೆ ಎಂದು ಅಭಿಪ್ರಾಯಪಟ್ಟಿದ್ದರು. ‘ರಾಜ್ಯ ಸರ್ಕಾರವು ಅಭಿಯೋಜನಾ ಮಂಜೂರಾತಿಯ ಅವಶ್ಯಕತೆ ಇಲ್ಲವೆಂದು ಹಿಂಬರಹ ನೀಡಿತ್ತು. ಪ್ರಕರಣದಲ್ಲಿನ ವಿಷಯದ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಭಿಪ್ರಾಯ ಪಡೆಯಬೇಕುಕ,’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ರಜನೀಶ್‌ ಗೋಯಲ್‌ ಅವರು ಸೂಚಿಸಿರುವುದು ನಡವಳಗಳಿಂದ ತಿಳಿದು ಬಂದಿದೆ.

 

ಐಎಎಸ್ ಸೇವೆ ಪಡೆದುಕೊಳ್ಳುವ ವೇಳೆಯೇ ಬೆಂಗಳೂರು ಗ್ರಾ.ಜಿಲ್ಲಾ ಲೋಕಾಯುಕ್ತ ಪೊಲೀಸರು 2007ರಲ್ಲಿ ಚಂದ್ರಶೇಖರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದ್ದರು. ಲೋಕಾಯುಕ್ತ ತನಿಖೆಯಲ್ಲಿ ಶೇ. 47 ರಷ್ಟು ಅಕ್ರಮ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿತ್ತು. 4 ಸಾವಿರ ಚದರಡಿ ಪ್ರದೇಶದಲ್ಲಿ 28 ಲಕ್ಷ ರೂ. ಮೊತ್ತದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿದ್ದ ಚಂದ್ರಶೇಖರ್, 8 ಸಾವಿರ ಚದರಡಿ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದರು ಎಂಬ ಆರೋಪವಿತ್ತು.

 

ಲೋಕಾಯುಕ್ತ ಪೊಲೀಸರು ಅನೇಕ ಬಾರಿ ಪತ್ರ ಬರೆದು, ಅಭಿಯೋಜನಾ ಮಂಜೂರು ಆದೇಶ ನೀಡುವಂತೆ ಕೋರಿದ್ದರು. ಐಎಎಸ್ ಅಧಿಕಾರಿಯಾಗಿದ್ದ ಜೈರಾಜ್ ನೇತೃತ್ವದ ಉನ್ನತ ಅಧಿಕಾರಿಗಳ ಸಮಿತಿ ಚಂದ್ರಶೇಖರ್ ನೀಡಿದ ಹೇಳಿಕೆ ಆಧರಿಸಿ ಕೇಂದ್ರದ ನಿಯಮಗಳನ್ನು ಬದಿಗೊತ್ತಿ ಅಭಿಯೋಜನಾ ಮಂಜೂರು ಆದೇಶ ತಿರಸ್ಕರಿಸಿತ್ತು. ಅಚ್ಚರಿಯ ವಿಷಯ ಏನೆಂದರೆ, ಆರೋಪಿಯ ಹೇಳಿಕೆ ಕುರಿತು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಿಲ್ಲ ಎಂಬ ಆಪಾದನೆಯೂ ಇತ್ತು.

 

ಇದನ್ನೇ ಮುಂದಿಟ್ಟುಕೊಂಡು ಚಂದ್ರಶೇಖರ್, ಲೋಕಾಯುಕ್ತ ಪೊಲೀಸರ ಮೇಲೆಯೇ ರಿಟ್ ಅರ್ಜಿ ಸಲ್ಲಿಸಿದ್ದರು. ‘ನನ್ನ ಮೇಲಿನ ಪ್ರಕರಣದಲ್ಲಿ ಅಭಿಯೋಜನಾ ಮಂಜೂರು ನೀಡದಿದ್ದರೂ, ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸದೆ ಲೋಪ ಎಸಗುತ್ತಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸರ ಮೇಲೆ ಕಾನೂನು ಸಮರ ಆರಂಭಿಸಿದ್ದರು.

the fil favicon

SUPPORT THE FILE

Latest News

Related Posts