ಮೈಷುಗರ್‌ ಆಧುನೀಕರಣ; 74 ಕೋಟಿ ಹೂಡಿಕೆ ಮಾಡಿದ್ದರೂ ಕಾರ್ಯಾಚರಿಸದ ಕೋ-ಜನರೇಷನ್ ಘಟಕ

ಬೆಂಗಳೂರು; ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿನ ಕೋ-ಜನರೇಷನ್‌ ಘಟಕದ ಆಧುನೀಕರಣಕ್ಕೆ ಎಪ್ಪತ್ತನಾಲ್ಕು ಕೋಟಿ ರು. ವೆಚ್ಚ ಮಾಡಿದ್ದರೂ ಕಾರ್ಯಾರಂಭಗೊಂಡ ನಂತರವೂ ಅದು ನಿಷ್ಪ್ರಯೋಜಕವಾಗಿತ್ತು. ಹೀಗಾಗಿ 74 ಕೋಟಿಯಷ್ಟು ಹೂಡಿಕೆ ವ್ಯರ್ಥವಾಗಿತ್ತು ಎಂಬುದನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.

 

ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುಚ್ಛಕ್ತಿ ಕೋ ಜನರೇಷನ್‌ ಘಟಕವನ್ನು 30 ಮೆಗಾ ವ್ಯಾಟ್‌ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಗಿತ್ತು. ಅದಕ್ಕಾಗಿ ಪ್ರಾಯೋಗಿಕ/ಪರೀಕ್ಷಾರ್ಥ ಕಾರ್ಯಾಚರಣೆಯನ್ನು 2007ರಲ್ಲಿ ನಡೆಸಲಾಗಿತ್ತು. ಇದಕ್ಕಾಗಿ ಕಂಪನಿಯು 74.78 ಕೋಟಿಯಷ್ಟು ವೆಚ್ಚ ಮಾಡಿತ್ತು. ಆದರೆ ಈ ಘಟಕವು ಕಾರ್ಯಾಚರಣೆಯನ್ನೇ ಮಾಡಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಈ ಘಟಕವು 5,000 ಟಿಸಿಡಿ ದರದಲ್ಲಿ ಕಚ್ಛಾ ಸಾಮಾಗ್ರಿಯ ಲಭ್ಯತೆ ಇರದ ಕಾರಣ ಅದನ್ನು ಕಾರ್ಯಾರಂಭಗೊಳಿಸಿದ ದಿನದಿಂದಲೂ ನಿಷ್ಪ್ರಯೋಜಕವಾಗಿಯೇ ಇತ್ತು. ಬಿ-ಮಿಲ್‌ ಕಾರ್ಯ ಸ್ಥಗಿತಗೊಂಡಿದ್ದು ಮತ್ತು ಎ-ಮಿಲ್‌ ಅದರ ಆಧುನೀಕರಣದ ನಂತರ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಎಂದಿಗೂ ಕಾರ್ಯನಿರ್ವಹಿಸಿರಲಿಲ್ಲ. ಕೋ ಜನರೇಷನ್‌ ಘಟಕ ನಡೆಸಲು ಅಗತ್ಯ ಕಚ್ಛಾ ಸಾಮಗ್ರಿಯಯು ಲಭ್ಯವಿರಲಿಲ್ಲ.

 

‘ಸಹ-ಉತ್ಪಾದನಾ ಸ್ಥಾವರ ಹಾಗೂ ಎ-ಮಿಲ್‌ನ ಆಧುನೀಕರಣಕ್ಕಾಗಿ 123.88 ( ಎ-ಮಿಲ್‌ನ ಆಧುನೀಕರಣಕ್ಕಾಗಿ 49.10 ಕೋಟಿ) ವೆಚ್ಚ ಮಾಡಿತ್ತು. ಅಲ್ಲದೆಯೇ ಕೋ ಜನರೇಷನ್‌ ಘಟಕ ಸ್ಥಾಪನೆಗೆ ಹುಡ್ಕೋದಿಂದ ಪಡೆದುಕೊಂಡಿದ್ದ ಸಾಲದ ಮೇಲೆ 59.04 ಕೋಟಿ ಮೊತ್ತದಷ್ಟು ಬಡ್ಡಿ ಹೊರೆಯನ್ನು ಕರ್ನಾಟಕ ಸರ್ಕಾರದ ಹೆಗಲಿಗೆ ಬಿದ್ದಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವ ಕಡೆಗೆ ರಾಜ್ಯ ಸರ್ಕಾರವು ಕ್ರಮಕೈಗೊಂಡಿದತ್ತು. 2021-22ನೇ ಸಾಲಿಗೆ ಕಬ್ಬು ಅರೆಯುವ ಸೀಸನ್‌ನಿಂದ 40 ವರ್ಷಗಳ ಅವಧಿಗೆ ಎಲ್‌ಆರ್‌ಒಟಿ (ಗುತ್ತಿಗೆ, ಪುನರ್ವಸತಿ, ಕಾರ್ಯಾಚರಣೆ ಹಾಗೂ ವರ್ಗಾವಣೆ) ಆಧಾರದ ಮೇಲೆ ತೀರ್ಮಾನ ಕೈಗೊಂಡಿತ್ತು. ಈ ನಿಟ್ಟಿನಲ್ಲಿ 2022ರ ಮೇ ವರೆಗೂ ಹೆಚ್ಚಿನ ಪ್ರಗತಿಯನ್ನೂ ಸಾಧಿಸಿರಲಿಲ್ಲ.

 

2006-07ರಿಂದಲೂ ಈ ಕಂಪನಿಯನ್ನು ರೋಗಗ್ರಸ್ತ ಎಂದು ಘೋಷಿಸಿದ ನಂತರ 2020-21ರವರೆಗೂ ಈಕ್ವಿಟಿ, ಸಾಲ ಹಾಗೂ ಅನುದಾನಗಳ ರೂಪದಲ್ಲಿ 526.51 ಕೋಟಿ ಮೊತ್ತದಷ್ಟು ಹಣಕಾಸನ್ನು ಹೂಡಿಕೆ ಮಾಡಿತ್ತು. 2006-07ರಿಂದ 2020-21ರವರೆಗೆ ಕಂಪನಿಯು 31.47 ಲಕ್ಷ ಮೆಟ್ರಿಕ್‌ ಟನ್‌ ಕಬ್ಬನ್ನು ಅರೆದಿತ್ತು. ಇದೇ ಅವಧಿಲ್ಲಿ ತನ್ನ ಕಾರ್ಯಾಚರಣೆಗಳಿಂದ 418.13 ಕೋಟಿ ಮೊತ್ತದಷ್ಟು ನಷ್ಟ ಅನುಭವಿಸಿತ್ತು.

SUPPORT THE FILE

Latest News

Related Posts