ಕಂಪ್ಯೂಟರ್‌, ಟ್ಯಾಬ್‌ ಖರೀದಿಯಲ್ಲಿ ಅವ್ಯವಹಾರ; ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು; ಕಿರಿಯ ಹಾಗೂ ಹಿರಿಯ ಆರೋಗ್ಯ ಸಹಾಯಕರಿಗೆ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ 7,737 ಕಂಪ್ಯೂಟರ್‌ ಟ್ಯಾಬ್‌ಗಳ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಭಾರತ ಸರ್ಕಾರದ ನಿಯಮಾವಳಿಗಳ ಅನ್ವಯ ಆಡಳಿತಾತ್ಮಕ ಅನುಮೋದನೆ ಪಡೆಯದೇ ಅಕ್ರಮವಾಗಿ ಖರೀದಿ ಪ್ರಕ್ರಿಯೆ ನಡೆಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ.

 

ಸರಬರಾಜುದಾರರಿಗೆ ಗುತ್ತಿಗೆ ನೀಡಿದ್ದಲ್ಲದೇ ಕೆಟಿಪಿಪಿ ನಿಯಮಗಳ ಉಲ್ಲಂಘಿಸಿ ಅಕ್ರಮ ಸಂಗ್ರಹಣೆಗೆ ಹೊಣೆಗಾರರಾಗಿದ್ದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕ್ರಮ ಕೈಗೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ನೀಡಿದ್ದ ನಿರ್ದೇಶನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಸದ ಬುಟ್ಟಿಗೆ ಎಸೆದಿದೆ.

 

ಅಲ್ಲದೇ ಕಂಪ್ಯೂಟರ್‌ ಟ್ಯಾಬ್ಲೇಟ್‌ಗಳನ್ನು ಪೂರೈಕೆ ಮಾಡಿದ್ದ ಕಂಪನಿಗೆ ನ್ಯಾಯಾಲಯದ ಆದೇಶದಂತೆ 8.19 ಕೋಟಿ ರು.ಗಳನ್ನು ಪಾವತಿಸಲು 2019ರ ನವೆಂಬರ್‌ 25ರಂದೇ ಆದೇಶ ಹೊರಡಿಸಿದೆ. ಆದರೆ ಅಕ್ರಮ ಸಂಗ್ರಹಣೆ ಮಾಡಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಂಡಿಲ್ಲ. ಈ ಕುರಿತು ಸಚಿವ ಡಾ ಕೆ ಸುಧಾಕರ್‌ ಅವರೂ ಸಹ ಆಸಕ್ತಿ ವಹಿಸಿಲ್ಲ ಎಂದು ತಿಳಿದು ಬಂದಿದೆ.

 

ಕಂಪ್ಯೂಟರ್‌ ಟ್ಯಾಬ್‌ಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ‘ದಿ ಫೈಲ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

 

ತಾಯಂದಿರು ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ 16,500 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಅನುಷ್ಕರಣಾ ವ್ಯವಸ್ಥೆಯಡಿ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ ಕಂಪ್ಯೂಟರ್ ಟ್ಯಾಬ್ಲೆಟ್‌ಗಳನ್ನು ಸರಬರಾಜು ಮಾಡಲು ಹಿಂದಿನ ಕಾಂಗ್ರೆಸ್‌ ಸರ್ಕಾರ 2017-18ನೇ ಸಾಲಿನಲ್ಲಿ ಘೋಷಿಸಿಸಿತ್ತು.

 

ಅದರಂತೆ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯವಿರುವ 12.37 ಕೋಟಿ ಅನುದಾನವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪಡೆಯಲು ಆಡಳಿತಾತ್ಮಕ ಅನುಮೋದನೆಯನ್ನು 2017ರ ಜೂನ್‌ 30ರಂದು ಆದೇಶ ಹೊರಡಿಸಿತ್ತು. ಯೋಜನೆ ಅನುಷ್ಠಾನಕ್ಕೆ ಅವಶ್ಯವಿದ್ದ ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳನ್ನು ಆಡಳಿತಾತ್ಮಕ ಅನುಮೋದನೆ ಉಲ್ಲಂಘಿಸಿದ್ದಲ್ಲದೇ ಅಗತ್ಯವಿದ್ದ ಹಣವನ್ನು ಕ್ರೋಢೀಕರಿಸಿಕೊಳ್ಳದೇ ನಿಯಮಬಾಹಿರವಾಗಿ ಸಂಗ್ರಹಣೆ ಮಾಡಿತ್ತು.

 

ತೆಜಸ್ಕೋ ಟೆಕ್‌ ಸಾಫ್ಟ್‌ ಕಂಪನಿಯು ಒಟ್ಟು 7,737 ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳನ್ನು 8,19,99, 959 ರು. ಮೊತ್ತದಲ್ಲಿ ಸರಬರಾಜು ಮಾಡಿತ್ತು. ಈ ಹಣವನ್ನು ಎನ್‌ಎಚ್‌ಎಂ ಹಾಗೂ ರಾಜ್ಯಮಟ್ಟದ ಅನುದಾನದಿಂದ ಪಾವತಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

 

ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು ಎಂದು ಪತ್ತೆ ಹಚ್ಚಿತ್ತು. ಈ ಕುರಿತು ಆಡಳಿತ ಇಲಾಖೆಗೆ ಅಭಿಪ್ರಾಯವನ್ನೂ ತಿಳಿಸಿತ್ತು.

 

ಇಲಾಖೆಯಿಂದಲೇ ಅಕ್ರಮ ಸಂಗ್ರಹಣೆ

 

ಕೆಟಿಪಿಪಿ ಕಾಯ್ದೆ ಅವಕಾಶಗಳಿಗೆ ಅನುಸಾರವಾಗಿ ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳ ಸಂಗ್ರಹಣೆಯನ್ನು ಕೈಗೊಂಡಿರುವುದಿಲ್ಲ. ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರದ (ಎನ್‌ಎಚ್‌ಎಂ) ನಿಯಮಾವಳಿಗಳನ್ವಯ ಆಡಳಿತಾತ್ಮಕ ಅನುಮೋದನೆ ಪಡೆಯದೇ ಸಂಗ್ರಹಣೆ ಕೈಗೊಳ್ಳಲಾಗಿದೆ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯ ನೀಡಿತ್ತು.

 

‘ಈ ಸಂಗ್ರಹಣೆಯು ನಿಯಮಬದ್ಧವಾಗಿಲ್ಲದಿರುವ ಹಿನ್ನೆಲೆಯಲ್ಲಿ ಈ ರೀತಿ ಅಗತ್ಯ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ ಕೆಟಿಪಿಪಿ ನಿಯಮಗಳನ್ನು ಅನುಸರಿಸದೇ ಕೈಗೊಂಡಿರುವ ಅಕ್ರಮ ಸಂಗ್ರಹಣೆಗೆ ಹೊಣೆಗಾರರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ವಯ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂದೂ ಆರ್ಥಿಕ ಇಲಾಖೆಯು ನಿರ್ದೇಶಿಸಿತ್ತು.

 

ಅಲ್ಲದೇ ಸರಬರಾಜುದಾರರಿಗೆ   ಗುತ್ತಿಗೆ ನೀಡಿದ್ದಲ್ಲದೇ ಅವರಿಂದ ಸಾಮಾಗ್ರಿಗಳನ್ನು ಸ್ವೀಕರಿಸಿತ್ತು. ಹೀಗಾಗಿ ಈ ಗುತ್ತಿಗೆಯ ಒಪ್ಪಂದವನ್ನು ರದ್ದುಪಡಿಸಬಹುದೇ ಮತ್ತು ಸಾಮಗ್ರಿಗಳನ್ನು ಹಿಂದಿರುಗಿಸಬಹುದೇ ಎಂದು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ಆರ್ಥಿಕ ಇಲಾಖೆಯು ಸೂಚಿಸಿತ್ತು ಎಂಬುದು ಗೊತ್ತಾಗಿದೆ.

 

ಕಾನೂನು ಇಲಾಖೆ ಅಭಿಪ್ರಾಯದಲ್ಲೇನಿದೆ?

 

ತೆಜಸ್ಕೋ ಟೆಕ್‌ ಸಾಫ್ಟ್‌ ಪ್ರೈವೈಟ್‌ ಲಿಮಿಟೆಡ್‌ ಕಂಪ್ಯೂಟರ್‌ ಟ್ಯಾಬ್ಲೆಟ್‌ಗಳನ್ನು ಸರಬರಾಜು ಮಾಡಲು ಅರ್ಹತೆ ಹೊಂದಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ಮಾಡಲು ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರಕ್ಕೆ ನಿಯಮಾನುಸಾರ ಅಧಿಕಾರಗಳಿದ್ದರೂ ಅದನ್ನು ಸೂಕ್ತ ಸಮಯದಲ್ಲಿ ಚಲಾಯಿಸಿಲ್ಲ ಎಂಬ ಅಂಶವನ್ನು ಎತ್ತಿ ಹಿಡಿದಿದೆ.

 

ಹಾಗೆಯೇ ಈ ಕಂಪನಿಯು ಸಲ್ಲಿಸಿದ್ದ ಟೆಂಡರ್‌ನ್ನು ಅಂಗೀಕರಿಸುವುದಕ್ಕೂ ಮುನ್ನ ತಿರಸ್ಕರಿಸುವಂತಹ ಅಧಿಕಾರವನ್ನೂ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ ಕಲಂ 14ರ ಅಡಿಯಲ್ಲಿ ಟೆಂಡರ್‌ ಅಂಗೀಕರಿಸುವ ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೂ ಈ ಪ್ರಾಧಿಕಾರವು ಸೂಕ್ತ ಸಮಯದಲ್ಲಿ ಈ ಅಧಿಕಾರವನ್ನು ಚಲಾಯಿಸಿಲ್ಲ ಎಂಬುದು ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದಿಂದ ತಿಳಿದು ಬಂದಿದೆ.

 

‘ತೇಜಸ್ಕೋ ಟೆಕ್‌ ಸಾಫ್ಟ್‌ ಪ್ರೈ ಲಿ, ಸಲ್ಲಿಸಿದ್ದ ಟೆಂಡರ್‌ನ್ನು ಅಂಗೀಕರಿಸಿ ಆ ನಂತರ ಸರಕುಗಳನ್ನು ಸರಬರಾಜು ಮಾಡಲು ಕಾರ್ಯಾದೇಶ ನೀಡಿತ್ತು. ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ ಕಲಂ 14ರಡಿಯಲ್ಲಿನ ಅಧಿಕಾರವನ್ನು ಟೆಂಡರ್‌ ಅಂಗೀಕಾರ ಪ್ರಾಧಿಕಾರವು ಸರಿಯಾಗಿ ಚಲಾಯಿಸದೇ ಟೆಂಡರ್‌ನ್ನು ಅಂಗೀಕರಿಸುವುದರಿಂದ ಆ ಲೋಪಕ್ಕೆ ತೇಜಸ್ಕೋ ಟೆಕ್‌ ಸಾಫ್ಟ್‌ ಪ್ರೈ ಲಿಮಿಟೆಡ್‌ನ್ನು ಹೊಣೆಗಾರರನ್ನಾಗಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಬದಲಾಗಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮದಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ,’ ಎಂದು ಕಾನೂನು ಇಲಾಖೆಯು ಅಭಿಪ್ರಾಯದಲ್ಲಿ ವಿವರಿಸಿದೆ.

 

ಇದನ್ನು ಪ್ರಶ್ನಿಸಿ ದಾಖಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಕಂಪನಿಯ ಪರವಾಗಿ 2019ರ ಜುಲೈ 1ರಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶವನ್ನು ಪಾಲಿಸದ ಕಾರಣ ಅರ್ಜಿದಾರ ಕಂಪನಿಯು 2019ರಲ್ಲೇ ನಿಂದನಾ ಅರ್ಜಿಯನ್ನು ದಾಖಲಿಸಿದ್ದರು. ಇದನ್ನು 2019ರ ಅಕ್ಟೋಬರ್‌ 31 ಮತ್ತು ನವೆಂಬರ್‌ 11ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸಂಸ್ಥೆಗೆ ಪಾವತಿಸಬೇಕಾದ ಮೊತ್ತವನ್ನು 2019ರ ನವೆಂಬರ್‌ 27ರೊಳಗಾಗಿ ಪಾವತಿಸಲು ಗಡುವು ನೀಡಿತ್ತು.

 

ಆದರೆ ಈ ಆದೇಶವನ್ನು ಪಾಲನೆ ಮಾಡುವ ಸಂಬಂಧ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗಿತ್ತು. ನ್ಯಾಯಾಲಯ ವಿಧಿಸಿದ್ದ ಗಡುವಿನ ದಿನಾಂಕದೊಳಗೆ ಸಚಿವ ಸಂಪುಟ ಸಭೆ ನಡೆಯದ ಕಾರಣ ಕಂಪನಿಗೆ ಮೊದಲು ಹಣ ಪಾವತಿ ಮಾಡಿ ನಂತರ ಘಟನೋತ್ತರ ಅನುಮೋದನೆ ಪಡೆಯಲು ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ ಮುಖ್ಯಮಂತ್ರಿ ಮತ್ತು ಇಲಾಖೆ ಸಚಿವರು ಅನುಮೋದನೆ ನೀಡಿದ್ದರು.

SUPPORT THE FILE

Latest News

Related Posts