ವಿಐಎಸ್‌ಎಲ್‌;ನಿಯಂತ್ರಣ ಮೀರಿದೆ, ಮುಚ್ಚಲು ಬಿಡುವುದಿಲ್ಲ ಎಂದವರಲ್ಲಿ ಯಾರು ಕಳ್ಳರು, ಯಾರು ಸುಳ್ಳರು?

ಭದ್ರಾವತಿ; ಶಿವಮೊಗ್ಗಕ್ಕೆ ವಿಮಾನ ಎಳೆ ತರುವ ಕನಸಿನ ಯೋಜನೆಗೆ ಖುಷಿಯಾಗಿ ಇದೇ ಫೆಬ್ರವರಿ 27  ರಂದು ಬಿ.ಎಸ್. ಯಡಿಯೂರಪ್ಪ, ಮೋದಿಯರೊಂದಿಗೆ ನಿಂತು ಫೋಟೋ ತೆಗಿಸಿಗೊಂಡರು. ಹೆಚ್ಚು ಕಡಿಮೆ ಅದೇ ದಿನಗಳಲ್ಲಿ ಭದ್ರಾವತಿಯ ಒಂದು ಕಾಲದ ವೈಭವ ವಾಗಿದ್ದ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ಮಾತನ್ನು ಆಡಿ “ ಈಗ ನಮ್ಮ ನಿಯಂತ್ರಣ ಮೀರಿದೆ” ! ಎಂದುಬಿಟ್ಟರು.

 

ಸರಿ ಆಯ್ತಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ, ಸರ್ ಎಂ ವಿಶ್ವೇಶ್ವರಯ್ಯನವರ ಹೆಮ್ಮೆಯ ಉಕ್ಕಿನ ಕಾರ್ಖಾನೆ ಒಂದು ಶತಮಾನ ಬದುಕಿ ರಾಜ್ಯದ ಲಕ್ಷಾಂತರ ಜನರ ಬದುಕಿನ ಬೆಳಕಾಗಿ ಈಗ ಮಂಕಾಯಿತು.

 

ದಿ. ಗೋಪಾಲ ಗೌಡರ ಶತಮಾನೋತ್ಸವದಲ್ಲಿ ಅಬ್ಬರದ ವಿಮಾನ ಕುವೆಂಪು ಹೆಸರಿನಲ್ಲಿ, ಬಿಎಸ್‌ವೈ 80ರ ಹುಟ್ಟುಹಬ್ಬದಂದು ಪ್ರಥಮ ಬಾರಿಗೆ ಪ್ರಧಾನಿ ಮೋದಿಯವರನ್ನು ಹೊತ್ತು ತಂದು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಇಳಿಸಿತು. ಅಳುವಿನ ಹಿಂದೆ ನಗು! ಭದ್ರಾವತಿಯಲ್ಲಿ ನಿರಂತರ ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಮೋದೀಜಿಯವರನ್ನು ಭೇಟಿಯಾಗಲೇ ಬಾರದೆಂದು ಫೆಬ್ರವರಿ 26ರಂದು ಮಧ್ಯರಾತ್ರಿಯೇ ಅವರನ್ನು ಬಂಧಿಸಿಡಲಾಗಿತ್ತು !

 

ಶತಮಾನದ ಬೆಳಕಿಗೆ ಕತ್ತಲೆಯ ಪರದೆ. ಕೆಮ್ಮಣ್ಣುಗುಂಡಿಯ ಅದಿರು, ಭದ್ರೆಯ ನೀರು, ಮಲೆನಾಡಿನ ಕಾಡಿನ ಸೌದೆಯಿಂದ ಸಿಗುವ ಇದ್ದಲು, ಬಿಳಿಕಲ್ಲು ಬೆಟ್ಟದ ಬೆಣಚುಕಲ್ಲು ಹೀಗೆ 1921ರಲ್ಲಿ ಬೆಂಕಿಪುರದಲ್ಲಿ ಹುಟ್ಟುಕೊಂಡ ಕಬ್ಬಿಣದ ಕನಸು 1923 ರಲ್ಲಿ ಉತ್ಪಾದನೆ ಆರಂಭಿಸಲು 5 ವರ್ಷವೇ ಹಿಡಿಯಿತು. 1949ರಲ್ಲಿ ಶರಾವತಿಯಿಂದ ಲಭ್ಯವಾದ ವಿದ್ಯುತ್ ಸಿಗುವವರೆಗೆ ಕಾಡು ನಾಶವಾಗುತ್ತಿದ್ದರೂ, ಲಕ್ಷಾಂತರ ಜನ, ಕುಟುಂಬಗಳು, ಸರ್.ಎಂ.ವಿ ಕನಸಿನ ಕೂಸಿನ ಮುಗುಳು ನಗೆಯಿಂದ ಉಸಿರಾಡಿದವು. 1983ರ ವರೆಗೂ ಲಾಭದಾಯಕವಾಗಿಯೇ ಉಳಿಯಿತು. ಕೆಮ್ಮಣ್ಣುಗುಂಡಿಯ ಅದಿರು ಶೇ.60 ರಷ್ಟು ಕಬ್ಬಿಣ ಅಂಶ ಹೊಂದಿದ್ದರಿಂದ ಸಮಸ್ಯೆ ಹುಟ್ಟಲಿಲ್ಲ.

 

ಆಮೆರಿಕಾದ ಉಕ್ಕು ತಂತ್ರಜ್ಞರ ಸಲಹೆ ತೆಗೆದುಕೊಳ್ಳಲಾಯಿತು. ಪೆರಿನ್ ಮತ್ತು ಮಾರ್ಷಲ್‌ರ ಸಲಹೆಗಳು ಆರಂಭದಲ್ಲಿ ನಷ್ಟದ ಭಯ ಹುಟ್ಟಿಸಿದರೂ ಸರ್.ಎಂ.ವಿ. ಬೆದರದೆ, ಅಂಜದೆ ಹೆಗಲು ಕೊಟ್ಟರು. 1919-20ಕ್ಕೆ ಯೋಜನೆ ಪೂರ್ಣಗೊಳ್ಳಲಿಲ್ಲ. 1923 ಕ್ಕೆ ನಿರ್ಮಾಣ ಯೋಜನೆ ಪೂರ್ಣಗೊಂಡು ಉತ್ಪಾದನೆ ಪ್ರಾರಂಭವಾಯಿತು.  ಸರ್.ಎಂ.ವಿ. ಅಧ್ಯಕ್ಷರಾದರು. ಕೆ.ಪಿ.ಪುಟ್ಟಣ್ಣ ಚೆಟ್ಟಿ, ಜೆ.ಡಿ. ಚಾಂಡಿ, ಹಾಜಿ ಸರ್ ಇಸ್ಮಾಯಿಲ್ ಸೇಠ್ ಸದಸ್ಯರಾಗಿದ್ದರು. ಮುಂಬೈನಿಂದಲೇ ಸರ್.ಎಂ.ವಿ ಸಂಪರ್ಕ ಹೊಂದಿ ಅವರು ಇದ್ದಲು ಉತ್ಪಾದನೆ ಸಿದ್ದತೆ, ಕಬ್ಬಿಣ-ಉಕ್ಕುಧಾರಣೆಗೆ ವೇತನ ಕಡಿತ-ಸುಧಾರಣೆ, ಮಾಡುತ್ತ ಮಾರುತ್ತ ಮಾರಾಟ ಮಳಿಗೆಗಳನ್ನು ಮದ್ರಾಸ್, ಅಹಮದಬಾದ್, ಕರಾಚಿಗಳಲ್ಲಿ ತೆರೆದರು.

 

 

ಅವರು ಮುಂಬೈನಿಂದ ಬೀರೂರಿಗೆ ರೈಲಿನಲ್ಲಿ ರಾತ್ರಿ ಬಂದು ಕಾರಿನಲ್ಲಿ ರಾತ್ರಿಯೇ ಭದ್ರಾವತಿ ತಲುಪಿ ಸಲಹೆ ಸೂಚನೆ ನೀಡುತ್ತಿದ್ದರು. ವಿದೇಶಗಳಲ್ಲೂ ಜಾಹಿರಾತು ನೀಡಿ ಉಕ್ಕು ಮಾರಾಟ ಉತ್ತೇಜಿಸಿದರು. 1926ರಲ್ಲಿ ಅಧ್ಯಕ್ಷ ಸ್ಥಾನದಿಂದ ಇಳಿದರು. ಮಹಾತ್ಮಗಾಂಧಿ ಯಂಗ್ ಇಂಡಿಯಾದಲ್ಲಿ ಸೆಪ್ಟೆಂಬರ್ 1927ರಲ್ಲಿ ಪ್ರಶಂಸಿದರು. ಅನೇಕ ವಿಘ್ನಗಳನ್ನು ಎದುರಿಸಿ ಗೆದ್ದರು. ಇಷ್ಟಾದರೂ ಅವರು ಸಾಂಕೇತಿಕ ಮಾಸಿಕ ಒಂದು ರೂ ಮಾತ್ರ ಸಂಬಳ ಪಡೆದರು.

 

ಹೀಗೆ “ಮೈಸೂರು ಉಡ್ ಡಿಸ್ಟಿಲೇಶನ್ ಅಂಡ್ ಐರನ್ ವರ್ಕ್ಸ್” – ಭಾರತದ ಮೊದಲ ಯೋಜನೆಯಾಗಿತ್ತು. ಆಮೇರಿಕಾದಿಂದ ಯಂತ್ರ ತರಿಸಿ ಶ್ರಮವಹಿಸಿ ಬೆಂಕಿಪುರವನ್ನು ಭದ್ರಾವತಿ ಮಾಡಿದ ಸರ್‌ಎಂವಿ ಯವರ ಈ ಕಾರ್ಖಾನೆಯಲ್ಲಿ ಒಂದು ಹಂತದಲ್ಲಿ 16 ಸಾವಿರ ಖಾಯಂ, 5 ಸಾವಿರ ಗುತ್ತಿಗೆ ಕಾರ್ಮಿಕರು ಕೆಲಸ ಮಾಡಿದ್ದರು! ಇಡೀ ಕರ್ನಾಕದ ಎಲ್ಲಾ ಜಿಲ್ಲೆಗಳ ಜನ ಇಲ್ಲಿ ಕಾರ್ಮಿಕರು, ತಂತ್ರಜ್ಞರು, ಅಧಿಕಾರಿಗಳು ಆದರು, ನಿರಂತರ ನಾಟಕಗಳು ನಡೆಯುತ್ತಿದ್ದವು. ಎಸ್  ನಾರಾಯಣ್-(ನಟ, ನಿರ್ದೇಶಕ) ಕೆ.ಆರ್.ಶಾಂತಾರಾಂ (ನಟ,ನಿರ್ದೇಶಕ), ಎಸ್. ದೊಡ್ಡಣ್ಣ (ಖ್ಯಾತ ನಟ) ಎಸ್. ಶ್ಯಾಮಮೂರ್ತಿ(ನಾಟಕ ನಟ, ನಿರ್ದೇಶಕರ) ಶ್ರೀಲಲಿತ (ನಟಿ) ಈ ಕಲಾವಿದರು ರಾಜ್ಯ ಖ್ಯಾತಿ ಗಳಿಸಿದರು.  ಮೈಸೂರು ಕಬ್ಬಿಣ ಕಾರ್ಖಾನೆ 1975ರಲ್ಲಿ ವಿಐಎಸ್‌ಎಲ್ ಆಯಿತು. ರಾಜ್ಯಸರ್ಕಾರ ನಿಭಾಯಿಸುವಲ್ಲಿ ಸೋತಾಗ 1996ರಲ್ಲಿ  ಸೇಲ್‌ಗೆ (ಭಾರತ ಉಕ್ಕು ಪ್ರಾಧಿಕಾರ) ದೇವೇಗೌಡರು ಪ್ರಧಾನಿ ಆಗಿದ್ದಾಗ ಶ್ರಮಿಸಿ ಸೇರಿಸಿದರು. ಈಗ ಸೈಲ್‌ ವಿ.ಐ.ಎಸ್.ಎಲ್.ನ್ನು ಬದಿಗೆ ತಳ್ಳುತ್ತಿದೆ!

 

ಈ ಕಾರ್ಖಾನೆಯ ಅವನತಿಗೆ ಸರ್ಕಾರವೇ ಕಾರಣ. ಕೆಮ್ಮಣ್ಣುಗುಂಡಿ ಅದಿರಿನ ಪ್ರದೇಶವನ್ನು ಹುಲಿ ಸಂರಕ್ಷಣಾ ವಲಯಕ್ಕೆ ದೂಡಲಾಯಿತು. ಅದಿರಿನಲ್ಲಿ ಉಕ್ಕಿನ ಅಂಶ ಸಾಲದೆಂದು ಸುಳ್ಳು ವರದಿಗಳು ಸೃಷ್ಟಿಯಾದವು. ಪಿ.ವಿ.ನರಸಿಂಹರಾಯರ ಕಾಲದಲ್ಲಿ ಜಾರಿಯಾದ ಗ್ಯಾಟ್ ಒಪ್ಪಂದ ಬಂದ ನಂತರ ಸರ್ಕಾರಿ ವಲಯಗಳು ಹೆಸರಿಲ್ಲದಂತೆ ದಿವಾಳಿಯ ಅಂಚಿನತ್ತ ಚಲಿಸಿದವು.

 

ಖಾಸಗಿ ಉದ್ದಿಮೆ, ವ್ಯವಹಾರಗಳು ಬಾಗಿಲು ತೆರೆಯ ತೊಡಗಿದವು. ವಿ.ಐ.ಎಸ್.ಎಲ್ ಕಾರ್ಖಾನೆಯ ಕುಲುಮೆಗಳು ನಿಂತವು. ಸರ್ಕಾರ ‘ರಮಣ ದುರ್ಗ’ ಎಂಬ ಗಣಿ ಪ್ರದೇಶವನ್ನು ಹೊಸಪೇಟೆಯಲ್ಲಿ ನೀಡಿತು. ಅದಕ್ಕೂ ಅನೇಕ ವಿಘ್ನಗಳು. ತಡೆಯಾಜ್ಞೆಗಳು ಹುಟ್ಟಿದವು. ಸರ್ಕಾರ ಆಸಕ್ತಿ ವಹಿಸಲೇ ಇಲ್ಲ. ಹೀಗೆ ಸೊರಗತೊಡಗಿತು. ಅಲ್ಲಿಂದ ಅದಿರನ್ನು ತರುವ ಮಾತನ್ನು ಸರ್ಕಾರ ಆಡಲೇ ಇಲ್ಲ!   ಹಿಂದಿನ ಸರ್ಕಾರ –ಈಗಿನ ಸರ್ಕಾರ ಒಂದೇ ಗಾಡಿಯ ಕುದುರೆಗಳಂತೆ ವರ್ತಿಸಿ ಇಂತಹ ಹೀನ ದುರ್ಬಲ ಸ್ಥಿತಿಗೆ ತಂದು ನಿಲ್ಲಿಸಿ ಬಿಟ್ಟವು. ಎಲ್ಲರೂ ಗಳ ಹಿರಿದರೆ ಮನೆ ಉಳಿಯುವುದಾದರೂ ಹೇಗೆ? ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‌ಎಂವಿ ಕಟ್ಟಿದ ಭಾರತದ ಮೊದಲ ಶ್ರೇಷ್ಠ ಉಕ್ಕು ಉದ್ದಿಮೆ: ಎಂಪಿಎಂ(ಮೈಸೂರು ಕಾಗದ ಕಾರ್ಖಾನೆ) ಎರಡೂ ಸೊರಗಿದವು.

 

ಕಾಗದ ಕಾರ್ಖಾನೆ  ನಿಂತು ಬಿಟ್ಟಿತು. ವಿಐಎಸ್‌ಎಲ್ ನಿಂತಿಲ್ಲ ಆದರೆ ಒಳಗೆ ಏನೂ ಸೃಷ್ಟಿಯಾಗುತ್ತಿಲ್ಲ! ಒಂದು ಕಾಲದಲ್ಲಿದ್ದ ಹತ್ತಾರು ಕುಲುಮೆಗಳು, ಘಟಕಗಳು ಈಗ ಇಲ್ಲ. ಬ್ಲಾಸ್ಟ್ ಫರ್ನೆಸ್- ಚಾಲೂ ಆಗಲಿಲ್ಲ. ಮೆಟಲ್ ಬ್ರಿಕ್ ಲೈನ್ ಚಾಲೂ ಆಗಲಿಲ್ಲ. ನ್ಯೂರೋಲಿಂಗ್ ಮಿಲ್ ಇಂಗಾಟ್ಸ್, ಸಿಬಿ ಮತ್ತು ಆರ್‌ಎಂ ಯೂನಿಟ್‌ಗಳು ಕುಂಟುತ್ತ ನಡೆಯುತ್ತಿವೆ. ಸೇಲ್ ಈಗ ಬೃಹತ್ ಪ್ರಮಾಣದ್ದಲ್ಲಿದ್ದರೂ ವಿಐಎಸ್‌ಎಲ್ ಬೇಡ!  ಭಿಲಾಯ್ ರೂರ್ಕೆಲಾ, ದುರ್ಗಾಪುರ, ಬೊಕಾರೋ, ಅಸನ್ಸೋಲ್ ಎಲ್ಲಾ ಸೇರಿ 1 ಲಕ್ಷ 35  ಸಾವಿರ ಕಾರ್ಮಿಕರು, 48, 682   ಕೋಟಿ ವಹಿವಾಟು, ಜಗತ್ತಿನ 16 ನೇ ಸ್ಥಾನದ ಉಕ್ಕು ಉತ್ಪಾದನೆ ಹೊಂದಿದೆ. ಎಲ್ಲವೂ ಬೃಹತ್ ಮಹತ್- ಮಹತ್! ವಿಐಎಸ್‌ಎಲ್ ಲಾಭ ನಷ್ಟವನ್ನು ಸೇಲ್ ಪ್ರತ್ಯೇಕವಾಗಿ ಇಡುತ್ತಿತ್ತು, ಅಲ್ಲಿಯೂ ಅಸ್ಪಶ್ಯತೆ!

 

ಆಗ ಬೇಕಾಗಿದ್ದದ್ದು ಕೇವಲ 650  ಕೋಟಿ ಬಂಡವಾಳ- ಜೀರ್ಣೊದ್ದಾರಕ್ಕೆ ! ಈ ಸರ್ಕಾರ ಮತ್ತು ಕೇಂದ್ರ ಎರಡನ್ನು ಡಬಲ್ ಇಂಜಿನ್ ಎನ್ನುತ್ತಾರೆ. ಈ ಕಾರ್ಖಾನೆಯ ಹಳಿಗಳನ್ನು ಕಿತ್ತು ಗುಜರಿಗೆ ಮಾರಿಕೊಂಡರು. ಈಗ ಚುನಾವಣೆ ಹೊಸ್ತಿಲಲ್ಲಿ ರಾಜ್ಯದ ಇಂಜಿನ್ ಡ್ರೆವರ್ ಮುಚ್ಚಲು ಬಿಡುವುದಿಲ್ಲ ಎಂದು ಕೂಗಾಡುತ್ತಾರೆ. ಆದರೆ,  ಬಿಎಸ್‌ವೈ ಕಥೆ ಮುಗಿದಿದೆ ಎನ್ನುತ್ತಾರೆ.

 

ಬಿಎಸ್‌ವೈ “ಈಗ ನಮ್ಮ ನಿಯಂತ್ರಣ ಮೀರಿದೆ!” ಎಂದರೆ ಬೊಮ್ಮಾಯಿ “ಯಾವ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ!” ಎನ್ನುತ್ತಾರೆ. ಯಾರು ಕಳ್ಳರು ? ಯಾರು ಸುಳ್ಳರು ? ಯಾರು ಮಳ್ಳರು!  ಈ ಕಾರ್ಖಾನೆಯನ್ನು ಕೊಳ್ಳಲು ಯಾರೂ ಮುಂದೆ ಬರುತಿಲ್ಲ. ಇಂತಹ ದುರ್ಗತಿಗೆ ತರುವ ಮೊದಲು ಯಾರೂ ಎಚ್ಚೆತ್ತೂ ಕೊಳ್ಳಲಿಲ್ಲ. ಕೆಜಿಎಫ್ ಮುಚ್ಚಿದ ಮೇಲೆ ಚಿನ್ನದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ವಿಐಎಸ್‌ಎಲ್ ಕೆಮ್ಮಣ್ಣುಗುಂಡಿ ಅದಿರು ನಿಲ್ಲಿಸಿದ ಮೇಲೆ ಉಕ್ಕಿನ ಬೆಲೆಯು ಮೂರು ಪಟ್ಟು ಹೆಚ್ಚಾಗಿದೆ! ಅಂದರೆ ಇವೆರಡು ಈಗ ಅಷ್ಟೇ ಉತ್ಪಾದನೆಯಲ್ಲಿದ್ದರೆ ಸಾಕಾಗಿತ್ತು. ಲಾಭದಲ್ಲಿರುತ್ತಿದ್ದವು! ಕಾಲಾಯ ತಸ್ಮೈ   ನಮಃ!

 

ಕಾರ್ಖಾನೆ ಉಳಿಸಿಕೊಳ್ಳಲು ಕಾರ್ಮಿಕರು 3  ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಸರ್ ಎಂವಿ ಯವರ ಕನಸಿನ ಕೂಸು ಸಾಯುವುದನ್ನು ಸರ್ಕಾರಗಳು ಕಾಯುತ್ತದೆ. ವಿಮಾನ ಬಂದಿಳಿದಿದೆ. ಕಾರ್ಖಾನೆ ಮುಚ್ಚಿಕೊಳ್ಳುತ್ತಿದೆ. ಜನಪರ ಅಭಿವೃದ್ದಿಗಳಿಗೆ ವೆಚ್ಚವಾಗದೆ ಉಳಿದಿರುವ ರೂ. 41,942 ಕೋಟಿ ಹಣ ಕೊಳೆಯುತ್ತಾ ಬಿದ್ದಿದೆ ಮತ್ತು   ವಿವಿಧ ಇಲಾಖೆಗಳಲ್ಲಿ  79, 255 ಕೋಟಿ  ರು ಹಣ ಉಳಿದಿದೆ ಎಂದು  ವಾರ್ತಾಭಾರತಿ ಮತ್ತು ದಿ ಫೈಲ್‌ ವರದಿ ಹೇಳುತ್ತದೆ.

 

ಚುನಾವಣೆಯ ಭರದಲ್ಲಿ ಖ್ಯಾತಿ, ಕೀರ್ತಿ, ಮಹತ್ವ ದುಡಿದ ಬೆವರಿನ ನೆನಪು ಯಾವುದೂ ಸರ್ಕಾರಕ್ಕೆ ಬೇಕಿಲ್ಲ. ಅದಕ್ಕೆ ವಿಮಾನ ಸಿಕ್ಕಿದೆ. ಅದೀಗ ಹಾರಬೇಕು. ಅದಾನಿ, ಅಂಬಾನಿಗಳು ಸೊಕ್ಕಿ ಬೆಳೆಯಬೇಕು. ಜಿಂದಾಲ್ ಸ್ಟೀಲ್‌ನಂತಹ ಖಾಸಗಿ ಉಕ್ಕಿನ ಕಾರ್ಖಾನೆಗಳು ಕರ್ನಾಟಕ, ಮಹಾರಾಷ್ಟ, ಒರಿಸ್ಸಾಗಳಲ್ಲಿ ಸಮೃದ್ದವಾಗಿ ಲಾಭ ಮಾಡುತ್ತಿದೆ. ವಿಐಎಸ್‌ಎಲ್ ಬೇಡ!  ಊರು ತಣ್ಣಗೆ ಮಲಗಿದೆ. ಸಾರ್ವಜನಿಕ ಉದ್ದಿಮೆಗಳು ಎಲ್ಲಿಯೂ ಉಳಿಯಲು ಸರ್ಕಾರ ಬಿಡುತ್ತಿಲ್ಲ, ಬಂದರು, ವಿಮಾನ ನಿಲ್ದಾಣಗಳನ್ನು ಅದಾನಿಗೆ ಮಾರಿರುವ ಮೋದೀಜಿಗೆ ಈ ವಿಐಎಸ್‌ಎಲ್ ಕಸವೇ ಹೌದು ಅವರ ದೃಷ್ಟಿಯಲ್ಲಿ.

SUPPORT THE FILE

Latest News

Related Posts